Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇ ಬೇಕಾದ ಸುದ್ದಿಗಳಿವು

Seema.R | news18
Updated:April 11, 2019, 5:56 PM IST
Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು
ಸಾಂದರ್ಭಿಕ ಚಿತ್ರ
  • News18
  • Last Updated: April 11, 2019, 5:56 PM IST
  • Share this:
1. ಇಂದು ಮೊದಲ ಹಂತದ ಮತದಾನ

ಬಹು ಜಿದ್ದಾಜಿದ್ದಿ ಕಾಣುತ್ತಿರುವ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಇಂದು ನಡೆಯುತ್ತಿದೆ. ಒಟ್ಟು 543 ಲೋಕಸಭಾ ಸ್ಥಾನಗಳ ಪೈಕಿ 20 ರಾಜ್ಯಗಳಲ್ಲಿನ 91 ಕ್ಷೇತ್ರಗಳಲ್ಲಿ ಜನರು ಮತ ಚಲಾಯಿಸುತ್ತಿದ್ಧಾರೆ. ಇದರ ಜೊತೆಗೆ ನಾಲ್ಕು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳೂ ನಡೆಯುತ್ತಿವೆ. ಆಂಧ್ರಪ್ರದೇಶ, ಛತ್ತೀಸ್​ಗಢ್​ ಸೇರಿದಂತೆ ಹಲವು ಕಡೆ ಮತಯಂತ್ರದಲ್ಲಿ ದೋಷಗಳು ಕಂಡು ಬಂದವು. ಇನ್ನು ಆಂಧ್ರಪ್ರದೇಶದ  ಪುತ್ತಲಪಟ್ಟು ಮೀಸಲು ಕ್ಷೇತ್ರದ ತೊಡಿಪತ್ರಿಯಲ್ಲಿ ಮತದಾನದ ವೇಳೆ ಟಿಡಿಪಿ ಮತ್ತು ವೈಎಸ್​ಆರ್​ ಕಾಂಗ್ರೆಸ್​ ಕಾರ್ಯಕರ್ತರ ನಡುವೆ ಮತದಾನದ ವಿಷಯವಾಗಿ ಹೊಡೆದಾಟ ಆರಂಭವಾಗಿ, ಎರಡು ಪಕ್ಷದ ತಲಾ ಓರ್ವ ಕಾರ್ಯಕರ್ತರು ಸೇರಿ ಇಬ್ಬರು ಮೃತಪಟ್ಟಿದ್ದಾರೆ. ಇನ್ನು ಮತಯಂತ್ರ ದೋಷ ಕಂಡು ಬಂದ ಹಿನ್ನೆಲೆ ಜನಾಸೇನಾ ಅಭ್ಯರ್ಥಿಗಳು ಇವಿಎಂ ಅನ್ನು ನೆಲಕ್ಕೆಸೆದು ಹಾನಿಗೊಳಿಸಿರುವ ಘಟನೆ ಕೂಡ ನಡೆದಿದೆ.

2. ರಾಹುಲ್​ಗಾಂಧಿ ಹತ್ಯೆಗೆ ಸಂಚು

ಚುನಾವಣಾ ಪ್ರಚಾರಕ್ಕೆಂದು ಎಲ್ಲ ರಾಜ್ಯಗಳಿಗೂ ಪ್ರವಾಸ ಮಾಡುತ್ತಿರುವ ಕಾಂಗ್ರೆಸ್​ ಅಧ್ಯಕ್ಷ ರಾಹುಲ್ ಗಾಂಧಿಯ ಕೊಲೆಗೆ ಸಂಚು ರೂಪಿಸಲಾಗಿದೆಯಾ? ಈ ರೀತಿಯ ಗಂಭೀರ ಸ್ವರೂಪದ ಆರೋಪ ಮತ್ತು ಆತಂಕದ ಮಾತುಗಳು ಕಾಂಗ್ರೆಸ್​​ ಪಕ್ಷದಿಂದ ಕೇಳಿ ಬಂದಿದ್ದು, ಇಂದಿರಾ ಗಾಂಧಿ ಮತ್ತು ರಾಜೀವ್​ ಗಾಂಧಿಯವರ ಹತ್ಯೆಯ ಘಟನೆ ಮತ್ತೆ ಮರುಕಳಿಸಲಿದೆಯಾ ಎಂಬ ಭಯದ ವಾತಾವರಣ ನಿರ್ಮಾಣವಾಗಿದೆ. ಈ ಬಗ್ಗೆ ಸ್ವತಃ ಕಾಂಗ್ರೆಸ್​ ನಾಯಕರೇ ಕೇಂದ್ರ ಗೃಹ ಸಚಿವ ರಾಜನಾಥ್​ ಸಿಂಗ್​ ಅವರಿಗೆ ಪತ್ರ ಬರೆದು ಕಾಂಗ್ರೆಸ್​ ರಾಷ್ಟ್ರಾಧ್ಯಕ್ಷ ರಾಹುಲ್​ ಗಾಂಧಿಯವರ ಭದ್ರತೆ ಹೆಚ್ಚಿಸುವಂತೆ ಮನವಿ ಮಾಡಿದ್ದಾರೆ. ಜತೆಗೆ ರಾಹುಲ್​ ಗಾಂಧಿ ಹಣೆಯ ಮೇಲೆ ಲೇಸರ್​ ಕಿರಣಗಳು ಏಳು ಬಾರಿ ಕಾಣಿಸಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಲೇಸರ್​ ಕಿರಣಗಳನ್ನು ಸ್ನೈಪರ್​ಗಳಲ್ಲಿ ಬಳಕೆ ಮಾಡುತ್ತಾರೆ. ಇದರಿಂದ ನಿಗದಿತ ಗುರಿಯನ್ನು ದೂರದಿಂದ ತಲುಪಲು ಸಾಧ್ಯವಾಗುತ್ತದೆ. ಎಐಸಿಸಿ ಫೋಟೋಗ್ರಾಫರ್ ಮೊಬೈಲ್ ಫೋನ್​ನಿಂದ ಹೊರಬಿದ್ದ ರೇಸರ್​ ಅದಾಗಿದೆ. ಅಮೇಥಿಯ ರೋಡ್​ ಶೋ ವೇಳೆ ರಾಹುಲ್ ಹಣೆಯ ಮೇಲೆ ಬಿದ್ದ ಬೆಳಕು ಸ್ನೈಪರ್ ಗನ್​ನಿಂದ ಹೊರಟ ಲೇಸರ್ ಬೆಳಕಲ್ಲ ಎಂದು ಕೇಂದ್ರ ಗೃಹ ಇಲಾಖೆ ಸ್ಪಷ್ಟಪಡಿಸಿದೆ

3. ವಿಕಿಲಿಕ್ಸ್​ ಸಂಸ್ಥಾಪಕ ಜೂಲಿಯನ್​ ಅಸ್ಸಾಂಜೆ ಬಂಧನ

ಅಮೆರಿಕದ ಸ್ಫೋಟಕ ಮಾಹಿತಿಗಳನ್ನು ಬಹಿರಂಗಪಡಿಸುವ ಮೂಲಕ ವಿಶ್ವದ ಗಮನ ಸೆಳೆದಿದ್ದ ವಿಕಿಲಿಕ್ಸ್​ ಸಂಸ್ಥಾಪಕ ಜೂಲಿಯನ್ ಅಸಾಂಜೆ ಅವರನ್ನು ಗುರುವಾರ ಬ್ರಿಟಿಷ್​ ಪೊಲೀಸರು ಬಂಧಿಸಿದ್ದಾರೆ. ಈಕ್ವೇಡಾರ್ ರಾಯಭಾರಿ ಕಚೇರಿಯಲ್ಲಿ ಅಸಾಂಜೆ 2012ರಿಂದ ಆಶ್ರಯ ಪಡೆದಿದ್ದರು. ಜೂಲಿಯನ್ ಅಸಾಂಜೆ (47)ಯನ್ನು  ಇಂದು ಈಕ್ವೇಡಾರ್ ರಾಯಭಾರಿ ಕಚೇರಿಯ ಆಹ್ವಾನದ ಮೇರೆಗೆ ಮೆಟ್ರೋಪೊಲಿಟನ್​ ಪೊಲೀಸ್​ ಸರ್ವಿಸ್​ (ಎಂಪಿಎಸ್​) ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈಕ್ವೇಡಾರ್ ಸರ್ಕಾರ ಅಸಾಂಜೆಗೆ ನೀಡಿದ್ದ ಆಶ್ರಯವನ್ನು ಹಿಂಪಡೆದುಕೊಂಡಿತ್ತು. ಹೀಗಾಗಿ ಇಲ್ಲಿನ ರಾಯಭಾರಿ ಕಚೇರಿಯ ಅಧಿಕಾರಿಗಳ ಆಹ್ವಾನದ ಮೇರೆಗೆ ಅಸಾಂಜೆ ಅವರನ್ನು ಲಂಡನ್ ಪೊಲೀಸರು ಬಂಧಿಸಿದ್ದಾರೆ

4. 2004ರ ಫಲಿತಾಂಶ ಮರೆಯಬೇಡಿಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್​ಡಿಎ ಸರ್ಕಾರ  2004ರಲ್ಲೂ ತಾವೇ ಅಧಿಕಾರ ಹಿಡಿಯುತ್ತೇವೆ ಎಂದು ಅತಿಯಾದ ಆತ್ಮವಿಶ್ವಾದಿಂದ ಬೀಗಿತ್ತು. ಆದರೆ, ಸರ್ಕಾರ ರಚಿಸಿದ್ದು ನಾವು ಆ ಚುನಾವಣಾ ಫಲಿತಾಂಶವನ್ನು ಮರೆಯಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿಗೆ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಟಾಂಗ್ ನೀಡಿದ್ದಾರೆ. ಇಂದು ಉತ್ತರಪ್ರದೇಶದ ರಾಯ್​ ಬರೇಲಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಸೋನಿಯಾ, ಮೋದಿ ಓರ್ವ ದುರಹಂಕಾರಿ. ಭಾರತದ ಇತಿಹಾಸದಲ್ಲಿ ಅನೇಕ ಜನರು ಭಾರತೀಯರಿಗಿಂತ ತಾವೇ ದೊಡ್ಡವರು ಹಾಗೂ ನಾವೇ ಗೆಲ್ಲುತ್ತೇವೆ ಎಂಬ ನಂಬಿಕೆಯಿಂದ ಬೀಗಿದವರು ಇದ್ದಾರೆ ಆದರೆ, ಭಾರತ ಜನ ಎಂದಿಗೂ ಇಂತವರ ಬೆನ್ನಿಗೆ ನಿಲ್ಲಲಿಲ್ಲ" ಎಂದು ಮೋದಿ ವಿರುದ್ಧ ಹೌಹಾರಿದರು. ಇದಕ್ಕೂ ಮುನ್ನ ಅವರು ಐದನೇ ಬಾರಿ ಚುನಾವಣೆಗೆ ಸ್ಪರ್ಧಿಸಲಿರುವ ಅವರು, ಬೃಹತ್​ ರೋಡ್​ ಶೋ ನಡೆಸಿ ನಾಮಪತ್ರ ಸಲ್ಲಿಸಿದರು.

5. ಎ.ಮಂಜು ಕಳ್ಳೆತ್ತು; ಸಿದ್ದರಾಮಯ್ಯ

ಕಾಂಗ್ರೆಸ್​ನಿಂದ ಎ. ಮಂಜು ಶಾಸಕರಾಗಿ, ಮಂತ್ರಿಯಾಗಿ ಅಧಿಕಾರ ಅನುಭವಿಸಿದರು. ಬಿಜೆಪಿ ಸೇರುವ ಮೂರು ದಿನಗಳ ಹಿಂದೆ ಕೂಡ ನಾನು ಪಕ್ಷ ತೊರೆಯುವುದಿಲ್ಲ ಎಂದು ನನ್ನ ಬಳಿ ಹೇಳಿದ್ದ. ಕೊನೆಗೆ ಪಕ್ಷ ದ್ರೋಹ ಮಾಡಿದ ಎಂದು ಬಿಜೆಪಿ ಅಭ್ಯರ್ಥಿ ವಿರುದ್ಧ ವಾಗ್ದಾಳಿ ನಡೆಸಿದರು. ದೇವೇಗೌಡರೊಂದಿಗೆ ಪ್ರಜ್ವಲ್​ ರೇವಣ್ಣ ಪರ ಪ್ರಚಾರ ನಡೆಸಿದ ಅವರು, ಎ,ಮಂಜುವನ್ನು ನಾನೇ ಎಂಎಲ್​ಎ ಮಾಡಿದ್ದೆ,  ನಾನೇ ಮಿನಿಸ್ಟರ್ ಮಾಡಿದ್ದೆ, ಯಡಿಯೂರಪ್ಪನ ಮನೆಗೆ ಹೋಗಿ ಬಂದಿದ್ದ. ಆಗ ಫೋನ್ ಮಾಡಿದ್ದೆ. ಫೋನ್​ಗೆ ಸಿಗಲಿಲ್ಲಾ. ನಿನ್ನನ್ನು ಎಂಎಲ್​ಎ ಮತ್ತು ಮಂತ್ರಿ ಮಾಡಿದ್ದು ನಾನು ಮಿಸ್ಟರ್ ಎ,ಮಂಜು ಎಂದು ವಾಗ್ದಾಳಿ ನಡೆಸಿದರು. ಕಳೆದ  ಬಾರಿ ಈ ಬಿಜೆಪಿ ಅಭ್ಯರ್ಥಿ ನಮ್ಮ ಜೊತೆಯೇ ಇದ್ದ. ಆತ ಕಳ್ಳೆತ್ತು ಎಂಬುದು ನಮಗೆ ಗೊತ್ತಾಗಲಿಲ್ಲ. ಅವ್ನು ಪಕ್ಷದ್ರೋಹ ಮಾಡಿದ್ದಾನೆ. ಕಳೆದ ಬಾರಿ ಆತನಿಗೆ ನಾವು ಟಿಕೆಟ್​ ಕೊಟ್ಟಿದ್ದೇವು. ಆಗ ಲೀಡ್​ ಬಂದಿತ್ತು. ಆದರೆ, ಈ ಬಾರಿ ದಯಮಾಡಿ ಬಿಜೆಪಿ ಅಭ್ಯರ್ಥಿಗೆ ಒಂದೇ ಒಂದು ಮತ ಹಾಕಬೇಡಿ ಎಂದು ಮನವಿ ಮಾಡಿದರು.

6. ಏ.16ರಂದು ಸುಮಲತಾ ಕಡೆಯವರಿಂದ ನಡೆಯಲಿದೆ ದೊಡ್ಡ ನಾಟಕ; ಸಿಎಂ

ಮತದಾನಕ್ಕೆ ಇನ್ನೇರಡು ದಿನಗಳು ಬಾಕಿ ಇರುವಾಗ ಸುಮಲತಾ ಅವರು ತಾವೇ ಕಲ್ಲಲ್ಲಿ ಹೊಡೆಸಿಕೊಂಡು ತಲೆಗೆ ಪೆಟ್ಟು ಮಾಡಿಕೊಂಡು ದೊಡ್ಡ ನಾಟಕ ಮಾಡಲು ಸಿದ್ದರಾಗಿದ್ದಾರೆ. ಇದಕ್ಕಾಗಿ ಪಕ್ಷೇತರ ಅಭ್ಯರ್ಥಿ ಒಂದು ತಂತ್ರ ಮಾಡಿದ್ದಾರೆ ಎಂದು ಸುಮಲತಾ ವಿರುದ್ಧ ಸಿಎಂ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಗಜ್ಜಲಗೆರೆಯಲ್ಲಿ ನಿಖಿಲ್​ ಕುಮಾರಸ್ವಾಮಿ ಪರ ಪ್ರಚಾರ ನಡೆಸಿದ ಅವರು, ಏ.16ರಂದು ಪ್ರಚಾರದ ಕೊನೆಯ ದಿನದ ವೇಳೆ ಪಕ್ಷೇತರ ಅಭ್ಯರ್ಥಿ ತಮ್ಮ ಕಡೆಯವರಿಂದಲೇ ಕಲ್ಲು ಹೊಡೆಸಿಕೊಂಡು ಆಸ್ಪತ್ರೆಗೆ ದಾಖಲಾಗುತ್ತಾರೆ. ಈ ಮೂಲಕ ಅನುಕಂಪ ಗಿಟ್ಟಿಸಿಕೊಳ್ಳಲು ಮುಂದಾಗುತ್ತಾರೆ. ಇದಕ್ಕಾಗಿ ಸುಮಲತಾ ಕಡೆಯವರೆ ನಾಟಕವಾಡಲು ಯತ್ನಿಸಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ. ನಿಖಿಲ್​ ಸೋಲಿಸಲು ಎಲ್ಲ ಪಕ್ಷಗಳು ಒಂದಾಗಿವೆ. ನನಗೆ ಕುತಂತ್ರ ರಾಜಕಾರಣ ಮಾಡುವ ಅಗತ್ಯವಿಲ್ಲ. ಪಕ್ಷೇತರ ಅಭ್ಯರ್ಥಿ ಇನ್ನೊಂದು ಮುಖ ನೋಡಿಲ್ಲ ಅಂತಾರೆ. ಅವರು ಬಂದಾಗ ಇನ್ನೊಂದು ಮುಖ ತೋರಿಸಿ ಎಂದು ಕೇಳಿ. ಅವರ ಬಗ್ಗೆ ನಮಗೆಲ್ಲ ಗೊತ್ತಿದೆ, ಈಗ ಆ ಚರ್ಚೆ ಬೇಡ ಎಂದು ಸಿಎಂ ಹರಿಹಾಯ್ದರು.

7.ತೇಜಸ್ವಿನಿ ಟಿಕೆಟ್​ ಕೈ ತಪ್ಪಿದರ ಬಗ್ಗೆ ಮೊದಲ ಬಾರಿ ಬಾಯ್ಬಿಟ್ಟ ಬಿಎಲ್​ ಸಂತೋಷ್​

ಅನಂತ ಕುಮಾರ್​ಗೆ ಪಕ್ಷ ಎಲ್ಲವನ್ನು ಕೊಟ್ಟಿದೆ. ಕೇಂದ್ರ ಸಚಿವ ಸ್ಥಾನದಿಂದ ಎಲ್ಲ ಹುದ್ದೆಗಳನ್ನು ಅವರು ಅಲಂಕರಿಸಿದ್ದಾರೆ. ಅದನ್ನೇ ಅವರ ಹೆಂಡತಿಗೂ ನೀಡಬೇಕೆಂದರೆ ಹೇಗೆ ಎಂದು ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿಎಲ್​ ಸಂತೋಷ್​ ಪ್ರಶ್ನಿಸಿದ್ದಾರೆ. ತೇಜಸ್ವಿನಿ ಅನಂತ ಕುಮಾರ್​ ಅವರಿಗೆ ಟಿಕೆಟ್​ ಕೈ ತಪ್ಪಿದ ಕುರಿತು ಇದೇ ಮೊದಲ ಬಾರಿ ಅನಂತ ಕುಮಾರ್​ ಅಭಿಮಾನಿಗಳ ಪ್ರಶ್ನೆಗೆ ಅವರು ಉತ್ತರಿಸಿದರು.ತೇಜಸ್ವಿನಿ ಅವರಿಗೆ ನಾನು ಟಿಕೆಟ್ ತಪ್ಪಿಸಿದ್ದು ಎನ್ನುವುದು ಸುಳ್ಳು. ಅವರ ಬಗ್ಗೆ ಗೌರವವಿದೆ. ಅವರ ಸಾಮರ್ಥ್ಯವನ್ನು ಲೆಕ್ಕಹಾಕಿ ರಾಜ್ಯದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿದೆ ಎಂದು ತೇಜಸ್ವಿ ಸೂರ್ಯಗೆ ಟಿಕೆಟ್​ ನೀಡಿದ್ದನ್ನು ಸಮರ್ಥಿಸಿಕೊಂಡರು.

8. 22,6,8 ನಮಗೆ ಲಕ್ಕಿ ರೀ ; ರೇವಣ್ಣ

ವಾಸ್ತು, ಜ್ಯೋತಿಷ್ಯವನ್ನು ರಾಜಕಾರಣಿಗಳು ಹೆಚ್ಚು ನಂಬುತ್ತಾರೆ. ಅದರಲ್ಲೂ ಸಚಿವ ಎಚ್.ಡಿ.ರೇವಣ್ಣ ಅವರು ಎಲ್ಲರಿಗಿಂತ ಒಂದು ಕೈ ಹೆಚ್ಚೆ ಎನಿಸುವಷ್ಟು ಜ್ಯೋತಿಷ್ಯದ ಮೇಲೆ ನಂಬಿಕೆ ಇಟ್ಟುಕೊಂಡಿದ್ದಾರೆ. ಮತ್ತು ವಾಸ್ತು ಪ್ರಕಾರ ನಡೆದುಕೊಳ್ಳುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಇದೀಗ ಲೋಕಸಭಾ ಚುನಾವಣೆ ತಮಗೆ ಹೇಗೆ ಅದೃಷ್ಟವಾಗಲಿದೆ ಎಂದು ಸಂಖ್ಯಾಶಾಸ್ತ್ರದ ಪ್ರಕಾರ ವಿವರಿಸಿದ್ದಾರೆ. ನಗರದಲ್ಲಿ ಮೈತ್ರಿಅಭ್ಯರ್ಥಿ ಪರ ಪ್ರಚಾರಕ್ಕೆ ಆಗಮಿಸಿರುವ ರೇವಣ್ಣ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, "22, 6, 8 ನಮಗೆ ಲಕ್ಕಿ ರೀ. ನಾವು 22 ಸೀಟು  ಗೆಲ್ಲುತ್ತೇವೆ. ಆ 22 ನಂಬರ್ ನಮಗೆ ಲಕ್ಕಿ. ಅದು ಯಡ್ಯೂರಪ್ಪನವರಿಗೆ ಲಕ್ಕಿ ಆಗಲ್ಲ. 18 ನಂಬರ್ ಸಹ ನಮಗೆ ಲಕ್ಕಿಯೇ. 2018 ಇತ್ತು 8+1=9 ಅದಕ್ಕೆ ಕುಮಾರಸ್ವಾಮಿ ಸಿಎಂ ಆಗಿದ್ದು. ಈಗಲೂ 18 ರಂದು ಚುನಾವಣೆ ಇದೆ. 1+8 ಈಗಲೂ ಯುಪಿಎ ಅಧಿಕಾರಕ್ಕೆ ಬರಲಿದೆ. ನೋಡ್ಕೋಳಿ ಬೇಕಾದ್ರೆ ನಾವೇ ಅಧಿಕಾರಕ್ಕೆ ಬರೋದು. ಮೋದಿ ಇನ್ನೊಮ್ಮೆ ಪ್ರಧಾನಿ ಆಗೋಲ್ಲ. ಮೋದಿ ಪ್ರಧಾನಿ ಆದ್ರೆ ನಾನು ರಾಜಕೀಯ ನಿವೃತ್ತಿ ತಗೋತಿನಿ ಎಂದು ಸವಾಲು ಹಾಕಿದರು

9. ಮೋದಿಗಾಗಿ ಇಬ್ಬಾಗವಾಗಿದೆ ಬಾಲಿವುಡ್​

ಬಿಟೌನ್‍ನಲ್ಲೂ ಮೋದಿ ಸರ್ಕಾರದ ಪರ ವಿರೋಧಗಳು ಹುಟ್ಟಿಕೊಂಡಿವೆ. ಕೆಲವು ತಾರೆಯರು ಬಹಿರಂಗವಾಗಿ ರಾಜಕೀಯ ಪ್ರಚಾರದಲ್ಲಿ ಪಾಲ್ಗೊಂಡಿದ್ದರೆ, ಮತ್ತೆ ಕೆಲವರು ಈ ಮೂಲಕ ಪರೋಕ್ಷ ಪರ ವಿರೋಧ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ 600ಕ್ಕೂ ಹೆಚ್ಚು ಸಿನಿಮಾ ತಾರೆಯರು ಮತ್ತು ರಂಗಭೂಮಿಯ ನಟರು ಬಿಜೆಪಿ ವಿರೋಧಿಸಿ ಅಭಿಯಾನಕ್ಕೆ ಸಹಿ ಹಾಕಿದ್ದರು. ನಾಸಿರುದ್ದೀನ್ ಶಾ. ಕೊಂಕಣಾ ಸೇನ್ ಶರ್ಮಾ, ನಿರ್ದೇಶಕ ಅನುರಾಗ್ ಕಶ್ಯಪ್, ಗಿರೀಶ್ ಕಾರ್ನಾಡ್ ಇವರಲ್ಲಿ ಪ್ರಮುಖರು. ಇದಾದ ಕೆಲವೇ ದಿನದಲ್ಲಿ ಸೇರಿಗೆ ಸವಾ ಸೇರು ಎನ್ನುವಂತೆ ಬಿಟೌನ್‍ನ 900ಕ್ಕೂ ಹೆಚ್ಚು ನಟ ನಟಿಯರು ಬಿಜೆಪಿ ಸರ್ಕಾರದ ಪರ ಸಹಿ ಮಾಡಿ. ಬಲಿಷ್ಠ ಸರ್ಕಾರ ಬೇಕು, ದುರ್ಬಲ ಸರ್ಕಾರವಲ್ಲ ಅನ್ನೋ ಮೂಲಕ ಬಿಜೆಪಿ ಪರ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಅನುಪಮ್ ಖೇರ್, ವಿವೇಕ್ ಓಬೆರಾಯ್, ಕೊಯ್ನಾ ಮಿತ್ರಾ, ಪಾಯಲ್ ರೋಹಟ್ಗಿ, ಶಂಕರ್ ಮಹಾದೇವನ್, ಅನುರಾಧಾ ಪೌಡ್ವಾಲ್ ಇವರಲ್ಲಿ ಪ್ರಮುಖರು.

10. 25ನೇ ಪಂದ್ಯದಲ್ಲಿ ಚೆನ್ನೈಗೆ ಸೋಲುಣಿಸಲಿದೆಯೇ ರಾಜಸ್ಥಾನ

ವಿಜಯ ರಥವನ್ನು ಮುನ್ನಡೆಸುತ್ತಿರುವ ಮಹೇಂದ್ರ ಸಿಂಗ್​ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್​ ಇಂದು ಜೈಪುರದ ಸವಾಯ್​ಮಾನ್ ಸಿಂಗ್ ಸ್ಟೇಡಿಯಂನಲ್ಲಿ ರಾಜಸ್ಥಾನ್ ರಾಯಲ್ಸ್​ ತಂಡವನ್ನು ಎದುರಿಸಲಿದೆ. ಕೊನೆಯ ಪಂದ್ಯದಲ್ಲಿ ಸೂಪರ್​ ಕಿಂಗ್ಸ್​, ಕೆಕೆಆರ್​ ವಿರುದ್ಧ ಭರ್ಜರಿ ಜಯ ಸಾಧಿಸಿದ್ರೆ, ಅತ್ತ ರಾಜಸ್ಥಾನ ನೈಟ್​ ರೈಡರ್ಸ್​ ವಿರುದ್ಧ ಮುಗ್ಗರಿಸಿತ್ತು. ಆದರೆ ಚೆನ್ನೈ ವಿರುದ್ಧದ ಕಳೆದ ಪಂದ್ಯದಲ್ಲಿ ಅತ್ಯುತ್ತಮ ಹೋರಾಟ ನಡೆಸಿದ್ದ ರಹಾನೆ ಪಡೆ, ಸೂಪರ್​ ಕಿಂಗ್ಸ್ ತಂಡಕ್ಕೆ ಸಂಪೂರ್ಣ ಟಕ್ಕರ್ ನೀಡುವಲ್ಲಿ ಯಶಸ್ವಿಯಾಗಿದ್ದರು. ಆದರೆ ಅಂತಿಮ ಓವರ್​ಗಳಲ್ಲಿ ಧೋನಿಯ ಚಾಣಾಕ್ಷ ನಾಯಕತ್ವಕ್ಕೆ ತಲೆಬಾಗಲೇ ಬೇಕಾಯಿತು. ಇದರ ಪರಿಣಾಮ ರಾಜಸ್ಥಾನ ರಾಯಲ್ಸ್ ಕೇವಲ 8 ರನ್​ಗಳಿಂದ ಸೋಲೊಪ್ಪಿಕೊಳ್ಳುವಂತಾಗಿತ್ತು.ಇದೀಗ ತವರಿನಲ್ಲಿ ಪಿಂಕ್​ ಹುಡುಗರಿಗೆ ಹಳದಿ ಪಡೆ ಎದುರಾಗುತ್ತಿರುವುದು ಕ್ರಿಕೆಟ್​ ಪ್ರಿಯರ ಕುತೂಹಲಕ್ಕೆ ಕಾರಣವಾಗಿದೆ. ಚೆನ್ನೈನ ತವರಿನಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಅಜಿಂಕ್ಯ ರಹಾನೆ ಟೀಂ ಈ ಬಾರಿ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.
First published: April 11, 2019, 5:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading