Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇ ಬೇಕಾದ ಸುದ್ದಿಗಳಿವು

Seema.R | news18
Updated:April 10, 2019, 6:09 PM IST
Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು
ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇ ಬೇಕಾದ ಸುದ್ದಿಗಳಿವು
  • News18
  • Last Updated: April 10, 2019, 6:09 PM IST
  • Share this:
1.  ಅಮೇಥಿಯಿಂದ ನಾಮಪತ್ರ ಸಲ್ಲಿಸಿದ ರಾಹುಲ್​ ಗಾಂಧಿ

ಲೋಕಸಭಾ ಚುನಾವಣೆಗೆ ಅಮೇಥಿ ಕ್ಷೇತ್ರದಿಂದ ಸ್ಪರ್ಧಿಸಲಿರುವ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಇಂದು ತಮ್ಮ ಕ್ಷೇತ್ರದಲ್ಲಿ ಅದ್ದೂರಿ ರೋಡ್ ಶೋ ನಡೆಸುವ ಮೂಲಕ ನಾಮಪತ್ರ ಸಲ್ಲಿಸಿದ್ದಾರೆ.ಅಮೇಥಿ ಕ್ಷೇತ್ರದ ಮುನ್ಶಿಗನ್ ನಿಂದ ಬೆಳಗ್ಗೆ 12 ಗಂಟೆ ಸುಮಾರಿಗೆ ರೋಡ್​ ಶೋ ಆರಂಭಿಸಿದ್ದ ರಾಹುಲ್ ಗಾಂಧಿ ದರ್ಪಿಪುರ್, ಗೌರಿಗಂಜ್ ಮಾರ್ಗವಾಗಿ ಸುಮಾರು 3 ಕಿಮೀ ರೋಡ್ ಶೋ ನಡೆಸಿದ ನಂತರ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ರಾಹುಲ್ ಗಾಂಧಿ ತೆರೆದ ವಾಹನದಲ್ಲಿ ರೋಡ್ ಶೋ ನಡೆಸುತ್ತಿದ್ದು ಅಪಾರ ಸಂಖ್ಯೆಯ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಜನ ಸಾಮಾನ್ಯರು ಈ ರೋಡ್ ಶೋನಲ್ಲಿ ಭಾಗಿಯಾಗಿದ್ದಾರೆ. ಅಲ್ಲದೆ ಸಾವಿರಾರು ಸಂಖ್ಯೆಯ ಕಾಂಗ್ರೆಸ್ ಕಾರ್ಯಕರ್ತರು ಕೈನಲ್ಲಿ ಕಾಂಗ್ರೆಸ್ ಬಾವುಟವನ್ನು ಹಿಡಿದಿದ್ದ ಪಕ್ಷದ ಪರ ಘೋಷಣೆ ಕೂಗುವ ಮೂಲಕ ರಾಹುಲ್ ಗಾಂಧಿಗೆ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ.

2. ಮೈಸೂರಿನಲ್ಲಿ ಮಾಯಾವತಿ ಗುಡುಗು

ಸ್ವಾತಂತ್ರ್ಯಾ ನಂತರ ತುಂಬಾ ವರ್ಷಗಳ ಕಾಲ ಕಾಂಗ್ರೆಸ್, ಬಿಜೆಪಿ ಹಾಗೂ ಇತರೆ ಪಕ್ಷಗಳ ಕೈಯಲ್ಲೇ ಅಧಿಕಾರ ಇತ್ತು. ಆದರೆ ಬಡತನ ತೊಲಗಿಸಲು ಸಾಧ್ಯವಾಗಲಿಲ್ಲ. ಈಗ ಕಾಂಗ್ರೆಸ್​ನವರ ನಾಟಕಗಳು, ಪ್ರಚಾರಗಳು ಮುಗಿಯಲಿವೆ. ಚೌಕಿದಾರ್ ಕಥೆಯೂ ಈ ಚುನಾವಣೆಯಲ್ಲಿ ಮುಗಿಯಲಿದೆ ಎಂದು ಬಿಎಸ್​ಪಿ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಹೇಳಿದ್ದಾರೆ. ಬಿಜೆಪಿಯವರ ಹೊಸ ಚೌಕಿದಾರ್ ನಾಟಕ ಈ‌ ಚುನಾವಣೆಯಲ್ಲಿ ನಡೆಯೋದಿಲ್ಲ. ಇವರ ನಾಟಕಗಳು ಎಲ್ಲವೂ ಈ‌ ಲೋಕಸಭೆಯಲ್ಲಿ ಮುಗಿಯುತ್ತೆ. ರೈತರಿಂದ ಹಿಡಿದು ಅನೇಕ ವರ್ಗದವರಿಗೆ ಪ್ರಧಾನಿ ಮೋದಿ ಕೊಟ್ಟಂತಹ ಭರವಸೆಗಳೆಲ್ಲವು ಹುಸಿಯಾಗಿದೆ. ಮೋದಿ ಸರ್ಕಾರ ಪ್ರಚಾರಕ್ಕಾಗಿಯೇ ನೀರಿನ ರೀತಿ ಸಾವಿರಾರು ಕೋಟಿ ನಷ್ಟ ಮಾಡಿದೆ. ನರೇಂದ್ರ ಮೋದಿ ಚುನಾವಣೆ ವೇಳೆ ಮಾತ್ರ ಏನೇನೋ ಘೋಷಣೆ ಮಾಡ್ತಾರೆ. ಇದನ್ನೆಲ್ಲ ಚುನಾವಣೆ ಘೋಷಣೆ ಮುನ್ನವೇ ಮಾಡಬಹುದಿತ್ತು. ರೈತರಿಗೆ ವಿದ್ಯುತ್ ಸೇರಿ ಎಲ್ಲ ರೀತಿಯ ಸಮಸ್ಯೆ ಹೆಚ್ಚಾಗಿದೆ. ಬಿಜೆಪಿ ಸರ್ಕಾರ ಕಾಂಗ್ರೆಸ್​ನಂತೆ ಏನೂ ಮಾಡದೆ ಜನರನ್ನ ವಂಚಿಸಿದೆ ಎಂದು  ಬಿಎಸ್‌ಪಿ ಸಮಾವೇಶದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳ ವಿರುದ್ದ ಮಾಯಾವತಿ ಕಿಡಿ ಕಾರಿದರು.

3. ಕಾಂಗ್ರೆಸ್​ ಸೇರಿದ ಅಲ್ಪೇಶ್​ ಠಾಕೂರ್​

ಗುಜರಾತ್​ನ ಪ್ರಬಲ ಹಿಂದುಳಿದ ವರ್ಗಗಳ ಯುವ ನೇತಾರ ಅಲ್ಪೇಶ್ ಠಾಕೂರ್ ಅವರು ಕಾಂಗ್ರೆಸ್ ಪಕ್ಷಕ್ಕೆ ತಿಲಾಂಜಲಿ ಹೇಳಿದ್ದಾರೆ. ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಒಂದು ದಿನ ಮುಂಚೆ ನಡೆದಿರುವ ಈ ಬೆಳವಣಿಗೆಯು ತನಗೆ ಲಾಭವಾಗಬಹುದಾ ಎಂಬ ನಿರೀಕ್ಷೆಯಲ್ಲಿ ಬಿಜೆಪಿ ಇದೆ. ಆದರೆ, ಅಲ್ಪೇಶ್ ಠಾಕೂರ್ ಅವರು ಬೇರೆ ಪಕ್ಷ ಸೇರಲಿದ್ದಾರಾ ಎಂಬುದು ಇನ್ನೂ ಗೊತ್ತಾಗಿಲ್ಲ. ಅವರೂ ಕೂಡ ಈ ಬಗ್ಗೆ ವಿವರ ನೀಡಿಲ್ಲ. ಕೋಲಿ ಠಾಕೂರ್ ಸಮುದಾಯಕ್ಕೆ ಸೇರಿದ ಅಲ್ಪೇಶ್ ಠಾಕೂರ್ ಅವರು 2017ರ ಅಕ್ಟೋಬರ್ ತಿಂಗಳಲ್ಲಿ ಕಾಂಗ್ರೆಸ್ ಪಕ್ಷ ಸೇರಿದ್ದರು. ಇತ್ತೀಚೆಗೆ ಆ ಪಕ್ಷದೊಂದಿಗಿನ ಅವರ ಸಂಬಂಧ ಹಳಸಿತ್ತು. ಕೆಲ ವರ್ಷಗಳ ಹಿಂದಿನಿಂದಲೂ ಬಿಜೆಪಿಗೆ ತಲೆನೋವು ತಂದಿದ್ದ ತ್ರಿವಳಿ ಯುವ ಮುಖಂಡರಲ್ಲಿ ಅಲ್ಪೇಶ್ ಠಾಕೂರ್ ಕೂಡ ಒಬ್ಬರು. ಹಾರ್ದಿಕ್ ಪಟೇಲ್, ಜಿಗ್ನೇಶ್ ಮೇವಾನಿ ಮತ್ತು ಅಲ್ಪೇಶ್ ಠಾಕೂರ್ ಅವರು ಬಿಜೆಪಿ ವಿರುದ್ಧ ಪ್ರಬಲ ಹೋರಾಟ ನಡೆಸಿ ಕಂಗೆಡಿಸಿದ್ದರು.

4. ರಫೇಲ್​ ಒಪ್ಪಂದ; ಕೇಂದ್ರ ಸರ್ಕಾರಕ್ಕೆ ಹಿನ್ನೆಡೆರಫೇಲ್​ ವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್​ನಲ್ಲಿ ಇಂದು ಕೇಂದ್ರ ಸರ್ಕಾರಕ್ಕೆ ಭಾರೀ ಹಿನ್ನಡೆಯಾಗಿದೆ. ರಫೇಲ್​ ಒಪ್ಪಂದ ಕುರಿತು ಸುಪ್ರೀಂಕೋರ್ಟ್​ನಲ್ಲಿ ಸಲ್ಲಿಕೆಯಾಗಿರುವ ಮರುಪರಿಶೀಲನಾ ಅರ್ಜಿಗಳನ್ನು ವಜಾಗೊಳಿಸುವಂತೆ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಇಂದು ಸುಪ್ರೀಂ ವಜಾಗೊಳಿಸಿದೆ. ಸುಪ್ರೀಂಕೋರ್ಟ್​ ಮುಖ್ಯನ್ಯಾಯಮೂರ್ತಿ ರಂಜನ್​ ಗೊಗೋಯ್​ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ, ಕೇಂದ್ರ ಸರ್ಕಾರದ ಅರ್ಜಿಯನ್ನು ವಜಾಗೊಳಿಸಿ, ರಫೇಲ್​ ಒಪ್ಪಂದದ ರಹಸ್ಯ ಕಡತಗಳ ಪರಿಶೀಲನೆ ನಡೆಸುವಂತೆ ಆದೇಶ ನೀಡಿದೆ. ಲೋಕಸಭಾ ಚುನಾವಣೆಗೆ ಒಂದು ದಿನ ಬಾಕಿ ಇರುವಂತೆ ಈ ತೀರ್ಪು ಹೊರಬಂದಿರುವುದು ವಿವಾದ ಬೇರೊಂದು ಸ್ವರೂಪ ಪಡೆದುಕೊಳ್ಳಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

5. ಲಾಲೂ ಪ್ರಸಾದ್​ ಯಾದವ್​ ಜಾಮೀನು ತಿರಸ್ಕರ

ಬಿಹಾರ ಮಾಜಿ ಸಿಎಂ ಲಾಲೂ ಪ್ರಸಾದ್​ ಯಾದವ್​​ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸುಪ್ರೀಂಕೋರ್ಟ್​​ ತಿರಸ್ಕರಿಸಿದೆ. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ನ್ಯಾಯಪೀಠ ಆರ್​​ಜೆಡಿ ಮುಖ್ಯಸ್ಥನಿಗೆ ಜಾಮೀನು ನೀಡಲು ನಿರಾಕರಿಸಿದೆ. ಬಹುಕೋಟಿ ಮೇವು ಹಗರಣದಲ್ಲಿ ಜೈಲು ಪಾಲಾಗಿರುವ ಲಾಲು ಪ್ರಸಾದ್ ಯಾದವ್ ಅವರಿಗೆ ಜಾಮೀನು ನೀಡಬೇಡಿ ಎಂದು ಸಿಬಿಐ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಈ ಆಧಾರದ ಮೇಲೆ ಸುಪ್ರೀಂಕೋರ್ಟ್​​ ಜಾಮೀನು ನಿರಾಕರಿಸಿ, ಅರ್ಜಾ ವಜಾಗೊಳಿಸಿದೆ

6. ಮೋದಿ ಸಿನಿಮಾ ಬಿಡುಗಡೆಗೆ ಚುನಾವಣಾ ಆಯೋಗ ತಡೆ

ಪ್ರಧಾನಿ ನರೇಂದ್ರ ಮೋದಿ ಅವರ ಬಯೋಪಿಕ್​ ಬಿಡುಗಡೆಗೆ ಚುನಾವಣಾ ಆಯೋಗ ತಡೆ ನೀಡಿದೆ. ಲೋಕಸಭೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ರಾಜಕೀಯ ವ್ಯಕ್ತಿಗಳಿಗೆ ಸಂಬಂಧಿಸಿದ ಯಾವುದೇ ಬಯೋಪಿಕ್​ಗಳು ಬಿಡುಗಡೆ ಆಗುವಂತಿಲ್ಲ ಎಂದು ಚುನಾವಣಾ ಆಯೋಗ ಆದೇಶಿಸಿದೆ.
ಚುನಾವಣಾ ಸಮಯದಲ್ಲೇ ‘ಪಿಎಂ ನರೇಂದ್ರ ಮೋದಿ’ ಬಯೋಪಿಕ್​ ಬಿಡುಗಡೆ ಆಗುತ್ತಿರುವುದಕ್ಕೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದವು. ಈ ಚಿತ್ರ ರಿಲೀಸ್​ ಆದರೆ, ನೀತಿ ಸಂಹಿತೆ ಉಲ್ಲಂಘನೆ ಆದಂತಾಗುತ್ತದೆ ಎಂದು ವಿಪಕ್ಷಗಳು ವಾದಿಸಿದ್ದವು. ಈ ಪ್ರಕರಣ ಚುನಾವಣಾ ಆಯೋಗದ ಅಂಗಳದಲ್ಲಿತ್ತು

7. ಕೈ ಬಂಡಾಯ ನಾಯಕರ ವಿರುದ್ಧ ಸಿಎಂ ಆಕ್ರೋಶ

ನಮ್ಮ ಜೊತೆಯಲ್ಲಿದ್ದು, ನಮ್ಮೊಟ್ಟಿಗೆ ಬೆಳೆದವರು ಈಗ ಅವರೊಂದಿಗೆ ಸೇರಿಕೊಂಡು ನನ್ನನ್ನು ಮುಗಿಸಲು ಹೊರಟಿದ್ದಾರೆ. ಇಲ್ಲಿ ನಮ್ಮನ್ನು ಸೋಲಿಸಿ, ಸರ್ಕಾರ ಬೀಳಿಸಲು ಹೊರಟಿದ್ದಾರೆ ಎಂದು ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಗೆ ಬೆಂಬಲಿಸದ ಕಾಂಗ್ರೆಸ್​ ರೆಬೆಲ್​ ನಾಯಕರ ವಿರುದ್ದ ಸಿಎಂ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. ಶ್ರೀರಂಗಪಟ್ಟಣದಲ್ಲಿ ರೋಡ್​ ಶೋದಲ್ಲಿ ಭಾಗಿಯಾದ ಅವರು, ಕಾಂಗ್ರೆಸ್​ ಮುಖಂಡರಾದ ರಮೇಶ್ ಬಂಡಿಸಿದ್ದೇಗೌಡ, ಚಲುವರಾಯಸ್ವಾಮಿ, ನರೇಂದ್ರ ಸ್ವಾಮಿ ಹೆಸರೆಳದೆ ಅವರ ವಿರುದ್ಧ ಕಿಡಿಕಾರಿದರು.

8. ಹುಡುಗಿ ನೋಡಿ ಅಲ್ಲ ಅಮ್ಮನನ್ನು ನೋಡಿ ಗಂಡು ಕೊಡಿ

"ಹುಡುಗಿ ನೋಡಬೇಡಿ ಅವರ ಅಮ್ಮನನ್ನು ನೋಡಿ ಹುಡುಗನನ್ನು ಕೊಡಿ ಅಂತಿದ್ದಾರೆ ಬಿಜೆಪಿ ಅಭ್ಯರ್ಥಿಗಳು," ಹೀಗೊಂದು ವ್ಯಂಗ್ಯಭರಿತ ಹೇಳಿಕೆ ನೀಡಿರುವುದು ಕಾಂಗ್ರೆಸ್​ನ ಸಿಎಂ ಇಬ್ರಾಹಿಂ. ಚುನಾವಣಾ ಪ್ರಚಾರದ ವೇಳೆ ರಾಜ್ಯಾದ್ಯಂತ ಬಿಜೆಪಿ ಅಭ್ಯರ್ಥಿಗಳು ಪ್ರಧಾನಿ ಮೋದಿ ಅವರ ಮುಖವನ್ನು ನೋಡಿ ನಮಗೆ ಮತ ನೀಡಿ ಎಂದು ಪ್ರಚಾರ ಮಾಡುತ್ತಿರುವುದನ್ನು ಉಲ್ಲೇಖಿಸಿ ಇಬ್ರಾಹಿಂ ವ್ಯಂಗ್ಯ ಮಾಡಿದ್ಧಾರೆ. ದೇವೇಗೌಡರ ಪರ ಪ್ರಚಾರ ನಡೆಸಿದ ಅವರು, ಬಿಜೆಪಿ ಅಭ್ಯರ್ಥಿಗಳು ತಮ್ಮ ಅಭಿವೃದ್ಧಿ ಹಾಗೂ ಸಾಧನೆ ಬಗ್ಗೆ ಹೇಳಿ ಮತ ಕೇಳುವುದನ್ನು ಬಿಟ್ಟು, ಅವರ ಹೆಸರನ್ನು ಹೇಳಿಕೊಂಡು ಮತಯಾಚಿಸುತ್ತಿದ್ದಾರೆ. ಮೋದಿ ಎಲ್ಲಿ ದೇವೇಗೌಡರು ಎಲ್ಲಿ?  ಮೋದಿ ಎಲ್ಲಾದರೂ ದೇವೇಗೌಡರಿಗೆ ಸಮಾನರಾಗುತ್ತಾರಾ ಎಂದು ಪ್ರಶ್ನಿಸಿದ್ದಾರೆ.

9. ತಮಿಳಿಗೆ ಕನ್ನಡ ಪ್ರತಿಭೆ

ಕಿರುತೆರೆಯಲ್ಲಿ ಜೆಕೆ ಎಂದೇ ಖ್ಯಾತರಾಗಿರು ಜಯರಾಮ್​ ಕಾರ್ತಿಕ್​ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ನಟ. ಕನ್ನಡದಲ್ಲಿ ಹಲವಾರು ಸಿನಿಮಾಗಳನ್ನು ಮಾಡಿರುವ ಜೆಕೆ ಸದ್ಯ ಕಾಲಿವುಡ್​ನತ್ತ ಪಯಣ ಬೆಳೆಸಿದ್ದಾರೆ. ಜೆಕೆ ಹಿಂದಿ ಕಿರುತೆರೆಯಲ್ಲಿ ರಾವಣನಾಗಿ ಮಿಂಚಿದ್ದು, ಮನೆ ಮಾತಾಗಿದ್ದಾರೆ. ಹೀಗಿರುವಾಗಲೇ ಅವರಿಗೆ ಕಾಲಿವುಡ್​ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದ್ದು, ಸದ್ಯ ಈ ಚಿತ್ರದ ಟೈಟಲ್​ ಹಾಗೂ ಟೀಸರ್​ ಬಿಡುಗಡೆಯಾಗಿದೆ. ಮಾಳಿಗೈ' ಹೆಸರಿನ ಚಿತ್ರದಲ್ಲಿ ಆ್ಯಂಡ್ರಿಯಾ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು, ಅವರಿಗೆ ಜೆಕೆ ಜೊತೆಯಾಗಿದ್ದಾರೆ.

10. ಸೇಡು ತೀರಿಸಿಕೊಳ್ಳಲು ರೋಹಿತ್ ಪಡೆ ರೆಡಿ!

ಐಪಿಎಲ್​​ನಲ್ಲಿಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಹಾಗೂ ಅಶ್ವಿನ್ ನೇತೃತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಮುಖಾಮುಖಿ ಆಗುತ್ತಿದೆ. ಮುಂಬೈಗಿದು ಸೇಡಿನ ಪಂದ್ಯವಾಗಿದ್ದು, ಮೊಹಾಲಿಯಲ್ಲಿ ನಡೆದ ಮೊದಲ ಸೆಣೆಸಾಟದಲ್ಲಿ ರೋಹಿತ್ ಪಡೆ ಹೀನಾಯ ಸೋಲು ಕಂಡಿತ್ತು. ಹೀಗಾಗಿ ಇಂದಿನ ಪಂದ್ಯದಲ್ಲಿ ಗೆಲ್ಲಲೇ ಬೇಕೆಂದು ಪಣತೊಟ್ಟು ನಿಂತಿದೆ. ಈ ಮಧ್ಯೆ ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ಫಾರ್ಮ್​​​ನಲ್ಲಿ ಇಲ್ಲದಿರುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದರ ಜೊತೆಗೆ ರೋಹಿತ್ ಇಂಜುರಿಗೆ ತುತ್ತಾಗಿದ್ದು, ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುತ್ತಾರ ಎಂಬುದು ಕುತೂಹಲ ಕೆರಳಿಸಿದೆ.
First published:April 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ