ಕೋವಿಡ್ 2 ನೇ ಅಲೆ ಅಬ್ಬರ: ಖಾಸಗಿ ಆಸ್ಪತ್ರೆಗಳ ಮೇಲೆ ನಿಗಾಕ್ಕೆ ನೋಡಲ್ ಅಧಿಕಾರಿಗಳ ನೇಮಕ

ಖಾಸಗಿ ಆಸ್ಪತ್ರೆಗಳಲ್ಲಿನ ಕೋವಿಡ್ ಚಿಕಿತ್ಸೆ ಮೇಲೆ ನಿಗಾ ಇಡಲು ನೋಡಲ್ ಅಧಿಕಾರಿಗಳ ನೇಮಕ ಮಾಡಲಾಗಿದೆ. ಜಿಲ್ಲಾ ವಿಪತ್ತು ನಿರ್ವಹಣೆ ಕಾಯ್ದೆ ಅಡಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ.

ಜಿಲ್ಲಾಧಿಕಾರಿ ನಿತೇಶ್ ಪಾಟೀಲ

ಜಿಲ್ಲಾಧಿಕಾರಿ ನಿತೇಶ್ ಪಾಟೀಲ

  • Share this:
ಹುಬ್ಬಳ್ಳಿ (ಏ. 20): ಕೋವಿಡ್ ನ ಎರಡನೇ ಅಲೆ ದಿನೇ ದಿನೇ ವ್ಯಾಪಕಗೊಳ್ತಿದ್ದು, ರಾಜ್ಯದ ಹಲವೆಡೆ ಆಸ್ಪತ್ರೆಗಳಲ್ಲಿ ಬೆಡ್ ಗಳ ಕೊರತೆ ಎದುರಾಗಿದೆ. ಅನಿವಾರ್ಯವಾಗಿ ರೋಗಿಗಳು ಖಾಸಗಿ ಆಸ್ಪತ್ರೆಗಳ ಕಡೆ ಮುಖಮಾಡಿದ್ದಾರೆ. ಖಾಸಗಿ ಆಸ್ಪತ್ರೆಗಳು ಇದನ್ನೇ ಬಂಡವಾಳ ಮಾಡಿಕೊಂಡು, ರೋಗಿಗಳನ್ನು ಶೋಷಣೆಗೆ ಗುರಿ ಮಾಡೋ ಆತಂಕವೂ ಎದುರಾಗಿದೆ. ಧಾರವಾಡ ಜಿಲ್ಲೆಯಲ್ಲಿಯೂ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದೆ. ಸದ್ಯಕ್ಕೆ ಜಿಲ್ಲೆಯಲ್ಲಿ ಬೆಡ್ ಗಳು ಮತ್ತು ವೆಂಟಿಲೇಟರ್ ಗಳ ಕೊರತೆ ಇಲ್ಲದಿದ್ದರೂ ಜಿಲ್ಲಾಡಳಿತ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಲು ಮುಂದಾಗಿದೆ. ರೋಗಿಗಳ ಮೇಲಿನ ಸುಲಿಗೆ ತಪ್ಪಿಸಲು, ಖಾಸಗಿ ಆಸ್ಪತ್ರೆಗಳಲ್ಲಿನ ಕೊವಿಡ್ ಚಿಕಿತ್ಸೆ ಮೇಲೆ ನಿಗಾ ಇಡಲು ನೋಡಲ್ ಅಧಿಕಾರಿಗಳ ನೇಮಕ ಮಾಡಲಾಗಿದೆ. ಜಿಲ್ಲಾ ವಿಪತ್ತು ನಿರ್ವಹಣೆ ಕಾಯ್ದೆ ಅಡಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ.

ಕೋವಿಡ್ ಚಿಕಿತ್ಸೆ ನೀಡುವ ಖಾಸಗಿ ಆಸ್ಪತ್ರೆಗಳಿಗೆ ನೋಡಲ್ ಅಧಿಕಾರಿಗಳ ನೇಮಕ ಮಾಡಲಾಗಿದೆ. ಹುಬ್ಬಳ್ಳಿಯ 16 ಆಸ್ಪತ್ರೆ ಹಾಗೂ ಧಾರವಾಡದ ಎರಡು ಆಸ್ಪತ್ರೆಗಳಿಗೆ ನೋಡಲ್ ಅಧಿಕಾರಿಳ ನೇಮಕ ಮಾಡಲಾಗಿದೆ. ಖಾಸಗಿ ಆಸ್ಪತ್ರೆಗಳ ಶೇ. 50 ರಷ್ಟು ಬೆಡ್ ಕೋವಿಡ್ ರೋಗಿಗಳಿಗೆ ಮೀಸಲಿಡಲು ಸರ್ಕಾರ ಆದೇಶ ನೀಡಿದೆ.ಇದನ್ನು ಖಾಸಗಿ ಆಸ್ಪತ್ರೆಗಳು ಪಾಲಿಸ್ತಿವೆಯಾ ಇಲ್ಲವಾ ಎಂಬುದರ ಪರಿಶೀಲನೆ ಮಾಡಲಾಗ್ತಿದೆ.

ಸರ್ಕಾರ ನಿಗದಿಗೊಳಿಸಿದ ದರ ವಿಧಿಸುತ್ತಿವೆಯಾ ಅಥವಾ ಅಧಿಕ ಹಣ ವಸೂಲಿ ಮಾಡುತ್ತಿವೆಯಾ ಎಂಬುದನ್ನು ನೋಡಲ್ ಅಧಿಕಾರಿಗಳು ಗಮನಿಸಲಿದ್ದಾರೆ. ಕೋವಿಡ್ ನಿಯಂತ್ರಣಕ್ಕೆ ಖಾಸಗಿ ಆಸ್ಪತ್ರೆಗಳ ಸಹಕಾರ ಇತ್ಯಾದಿಗಳ ಮೇಲೆ ಗಮನ ಹರಿಸಲಿರೊ ನೋಡಲ್ ಅಧಿಕಾರಿಳು, ಕಾಲ ಕಾಲಕ್ಕೆ ತಕ್ಕಂತೆ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಿದ್ದಾರೆ. ಆಯಾ ಪೊಲೀಸ್ ಠಾಣೆಗಳ ಇನ್ಸ್ಪೆಕ್ಟರ್ ಗಳು ಸದಸ್ಯರಾಗಿ ನೇಮಕ ಮಾಡಲಾಗಿದೆ. 18 ನೋಡಲ್ ಅಧಿಕಾರಿಗಳನ್ನು ಮತ್ತು ಅವರ ಮೇಲುಸ್ತುವಾರಿಯಾಗಿ ಇಬ್ಬರು ಜಿಲ್ಲಾ ಮಟ್ಟದ ಅಧಿಕಾರಿಗಳನ್ನು  ನೇಮಿಸಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಆದೇಶ ಹೊರಡಿಸಿದ್ದಾರೆ.

ಇದನ್ನು ಓದಿ: ನಾಳೆಯಿಂದ 14 ದಿನ ರಾಜ್ಯಾದ್ಯಂತ 144 ಸೆಕ್ಷನ್ ಜಾರಿ, ವೀಕೆಂಡ್ ಕರ್ಫ್ಯೂ; ರಾಜ್ಯ ಸರ್ಕಾರದ ಹೊಸ ನಿಯಮಗಳು

ಎಚ್ಚೆತ್ತುಕೊಳ್ಳದ ಜನ:

ದಿನೇ ದಿನೇ ಕೋವಿಡ್ ವ್ಯಾಪಕಗೊಳ್ಳುತ್ತಿದ್ದು, ಧಾರವಾಡ ಜಿಲ್ಲೆಯಲ್ಲಿಯೂ ಕೊರೋನಾ ಗಗನಮುಖಿಯಾಗಿದೆ. ಧಾರವಾಡ ಜಿಲ್ಲೆಯಲ್ಲಿ ಹುಬ್ಬಳ್ಳಿಯಲ್ಲಿ ಅತಿಹೆಚ್ಚು ಕೋವಿಡ್ ಪ್ರಕರಣ ಬೆಳಕಿಗೆ ಬರಲಾರಂಭಿಸಿವೆ. ಇಷ್ಟಾದ್ರೂ ಜನ ಮಾತ್ರ ಎಚ್ಚೆತ್ತುಕೊಳ್ತಿಲ್ಲ. ಮಾಸ್ಕ್ ಹಾದೆ ಜನರ ಬೇಕಾಬಿಟ್ಟಿ ಅಡ್ಡಾಟ ನಡೆಸಿದ್ದಾರೆ. ನಗರದ ಬಹುತೇಕ ರಸ್ತೆಗಳಲ್ಲಿ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ. ಬಸ್ ನಿಲ್ದಾಣ, ತರಕಾರಿ ಮಾರುಕಟ್ಟೆಳಲ್ಲಿಯೂ ಡೋಂಟ್ ಕೇರ್ ಅಂತಿರೋ ಜನ.

ಸೋಂಕಿತರ ಸಂಖ್ಯೆ ಮತ್ತು ಸಾವಿನ ಸಂಖ್ಯೆ ಹೆಚ್ಚಾದ್ರೂ ಮಾಸ್ಕ್ ಹಾಕುವಲ್ಲಿ ಜನರ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಸಾಮಾಜಿಕ ಅಂತರವೂ ಕಾಪಾಡದೆ ಬೇಕಾಬಿಟ್ಟಿ ಅಡ್ಡಾಟ ನಡೆಸಿದ್ದಾರೆ. ಆದರೆಮಹಾನಗರ ಪಾಲಿಕೆ, ಜಿಲ್ಲಾಡಳಿತ ಜಾಣ ನಿದ್ರೆಗೆ ಜಾರಿದಂತೆ ವರ್ತಿಸಲಾರಂಭಿಸಿವೆ. ಜನರ ಬೇಜವಾಬ್ದಾರಿಯಿಂದ ವಾಣಿಜ್ಯ ನಗರಿಯಲ್ಲಿ ಕೊರೋನಾ ಮತ್ತಷ್ಟು ಉಲ್ಬಣ ಆಗೋ ಆತಂಕ ಎದುರಾಗಿದೆ.

(ವರದಿ - ಶಿವರಾಮ ಅಸುಂಡಿ)
Published by:Seema R
First published: