ಕೊಡಗು: ಕೊಡವರಿಗೆ (Kodavas) ಕೋವಿ (Gun) ಎನ್ನೋದು ಕೇವಲ ಆಯುಧವಷ್ಟೇ (Weapon) ಅಲ್ಲ, ಅದು ಬದುಕಿನ ಅವಿಭಾಜ್ಯ ಅಂಗ. ಕೊಡವರಲ್ಲಿ ಮಗುವೊಂದು (Baby) ಜನಿಸಿತ್ತೆಂದರೆ ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸುತ್ತಾರೆ. ಮನೆಯಲ್ಲಿ ಯಾರೆ ಸತ್ತರೆಂದರೂ ಮೂರು ಸುತ್ತು ಗುಂಡು ಹಾರಿಸಿ ಶ್ರದ್ಧಾಂಜಲಿ ಅರ್ಪಿಸಲಾಗುತ್ತದೆ. ಅಷ್ಟೇ ಅಲ್ಲ ಪೂಜ್ಯನೀಯ ಸ್ಥಾನ ಹೊಂದಿರುವ ಕೋವಿಗೆ ವಿಶೇಷ ಹಬ್ಬ (Festival) ಆಚರಿಸಿ ಪೂಜೆ ಸಲ್ಲಿಸುವ ಸಂಪ್ರದಾಯವಿದೆ. ಕೋವಿಗೆ ವಿಶೇಷ ಪೂಜೆ ಸಲ್ಲಿಸಿ ದುಡಿಕೊಟ್ಟು ಪಾಟ್ ಬಡಿಯುತ್ತಾ ಕೋವಿಯನ್ನು ಮೆರವಣಿಗೆ ಮಾಡಲಾಗುತ್ತದೆ. ಹೀಗೆ ಕೋವಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಕೊಡವರ ಕೋವಿಯ ಹಕ್ಕನ್ನೇ ಪ್ರಶ್ನಿಸಿ ಅರೆಭಾಷೆ ಗೌಡ ಜನಾಂಗದ ನಿವೃತ್ತ ಕ್ಯಾಪ್ಟನ್ ವೈ.ಕೆ. ಚೇತನ್ ಎಂಬುವವರು ಹೈಕೋರ್ಟ್ (High Court) ಮೆಟ್ಟಿಲೇರಿದ್ದರು.
ಕೊಡವರು-ಅರೆಭಾಷೆ ಗೌಡರ ಮಧ್ಯೆ ಕಲಹ
ಈ ವೇಳೆ ಕೊಡವರು ಮತ್ತು ಅರೆಭಾಷೆ ಗೌಡ ಜನಾಂಗಗಳ ನಡುವೆ ದ್ವೇಷ ಮನೋಭಾವ ಹುಟ್ಟುವಂತೆ ಮಾಡಿತ್ತು. ಆದರೆ ಕೋವಿ ಕೊಡವರ ಹಕ್ಕು ಅದನ್ನು ಯಾವುದೇ ಅನುಮತಿ ಇಲ್ಲದೆ ಹೊಂದಬಹುದು ಮತ್ತು ಸಾಗಿಸಬಹುದು ಎಂದು ರಾಜ್ಯ ಸರ್ಕಾರ ಹೇಳಿತ್ತು. ರಾಜ್ಯ ಉಚ್ಚನ್ಯಾಯಾಲಯವು ಇದನ್ನೇ ಎತ್ತಿ ಹಿಡಿದಿತ್ತು. ಇದರಿಂದ ಕೊಡವರು ತಮ್ಮ ಪರಮೋಚ್ಚ ಹಕ್ಕನ್ನು ಮುಂದುರಿಸಿಕೊಳ್ಳಬಹುದು ಎಂದು ಸಂತಸಪಟ್ಟಿದ್ದರು.
ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಕೆ
ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಕ್ಯಾಪ್ಟನ್ ಚೇತನ್ ಅವರು ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಕ್ಯಾಪ್ಟನ್ ಚೇತನ್ ಅವರ ಮೇಲ್ಮನವಿಯನ್ನು ಪರಿಶೀಲಿಸಿರುವ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರ ಪೀಠ ಅನುಮತಿ ಇಲ್ಲದೆ ಕೋವಿ ಹೊಂದುವುದು ಮತ್ತು ಸಾಗಾಟ ಮಾಡುವುದು ಅಪರಾಧ. ಆದರೆ ಸಶಸ್ತ್ರ ಕಾಯ್ದೆ 41 ಪ್ರಕಾರ ಸಾರ್ವಜನಿಕರ ಹಿತಾಸಕ್ತಿಯಿಂದ ಕೋವಿ ಹೊಂದುವುದಕ್ಕೆ ವಿನಾಯಿತಿ ನೀಡಬಹುದು ಎಂದಿದೆ.
ಇದನ್ನೂ ಓದಿ: Mysuru: ಮದುವೆಯಾದ ಪ್ರೇಮಿಗಳ ಮೇಲೆ ಮಾರಣಾಂತಿಕ ಹಲ್ಲೆ, ಮಗಳನ್ನು ಎಳೆದೊಯ್ದ ಪೋಷಕರು
ರಾಜ್ಯ ಸರ್ಕಾರಕ್ಕೆ ಶೋಕಾಸ್ ನೋಟಿಸ್
ವಿನಾಯಿತಿ ನೀಡುವಾಗ ಸರ್ಕಾರಗಳು ತಮ್ಮ ಅಧಿಸೂಚನೆಯಲ್ಲಿ ಸೂಕ್ತ ಕಾರಣಗಳನ್ನು ತಿಳಿಸಬೇಕು. ಕರ್ನಾಟಕ ಸರ್ಕಾರ ಯಾವುದೇ ಸೂಕ್ತ ಕಾರಣಗಳನ್ನೇ ನೀಡದೆ ಅನಿರ್ಧಿಷ್ಟಾವಧಿಗೆ ಕೋವಿ ಪರವಾನಗಿ ನೀಡುವುದು ಯಾಕೆ ಎಂದು ಕರ್ನಾಟಕ ಸರ್ಕಾರಕ್ಕೆ ಶೋಕಾಸ್ ನೋಟಿಸ್ ನೀಡಿದೆ.
ಕೊಡವರಿಗೆ ಶುರುವಾಗಿದೆ ಆತಂಕ
ಇದು ಅಬಾಧಿತವಾಗಿ ಕೋವಿ ಹಕ್ಕು ಹೊಂದಿದ್ದ ಕೊಡವರಿಗೆ ತಮ್ಮ ಹಕ್ಕು ಏನಾಗುವುದು ಎಂಬ ಆತಂಕ ಶುರುವಾಗಿದೆ. ಹೀಗಾಗಿ ತಲೆತಲಾಂತರಗಳಿಂದ ಸಾಂಪ್ರದಾಯಿಕವಾಗಿ ಹೊಂದಿದ್ದ ಕೋವಿಯ ಹಕ್ಕನ್ನು ಉಳಿಸಿಕೊಳ್ಳುವುದಕ್ಕೆ ಕೊಡವರು ಮತ್ತೆ ಕಾನೂನು ಹೋರಾಟ ನಡೆಸಬೇಕಾಗಿದೆ.
ಕೋವಿ ಹೊಂದುವ ಹಕ್ಕು ಸಿಗುವ ವಿಶ್ವಾಸ
ಈ ಕುರಿತು ಮಾತನಾಡಿರುವ ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು. ನಾಚಪ್ಪ ಕೋವಿ ಹೊಂದಿರುವುದು ನಮ್ಮ ಧಾರ್ಮಿಕ ಸಂಸ್ಕಾರ. ಅದನ್ನು ರಕ್ಷಣೆ ಮಾಡಿಕೊಳ್ಳಲು ಸಂವಿಧಾನದ 25 ಮತ್ತು 26 ನೇ ವಿಧಿಯಲ್ಲಿ ಅವಕಾಶವಿದೆ. ಇದರಿಂದ ಶಾಶ್ವತ ಸಂವಿಧಾನದ ರಕ್ಷಣೆ ಬೇಕು. 1800 ರಲ್ಲಿ ಕೊಡಗಿಗೆ ಬಂದವರಿಗೆ ನಮ್ಮ ಹಕ್ಕನ್ನು ಪ್ರಶ್ನಿಸುವ ಹಕ್ಕಿಲ್ಲ. ನಮ್ಮ ಹಕ್ಕನ್ನು ಕೋರ್ಟಿನಲ್ಲಿ ಪ್ರಶ್ನಿಸುತ್ತಿರುವವರ ಹಿಂದೆ ರಾಜಕೀಯವಾಗಿ ಬಲಾಢ್ಯರಾಗಿರುವ ಸಮುದಾಯ ಮತ್ತು ರಾಜಕಾರಣಿಗಳ ಪಿತೂರಿ ಇದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: Belagavi: ಮಾಜಿ ಸೈನಿಕನ ಹುಚ್ಚಾಟ: 5 ಸುತ್ತು ಗುಂಡು ಹಾರಿಸಿದ ವಿಡಿಯೋ ವೈರಲ್
ಕಾಯ್ದೆ ಬಗ್ಗೆ ಸರಿಯಾದ ತಿಳುವಳಿಕೆಯೇ ಇಲ್ಲ
ಈ ಕುರಿತು ಮಾತನಾಡಿರುವ ವಕೀಲ ಕೆ.ಪಿ. ಬಾಲಸುಬ್ರಹ್ಮಣ್ಯಂ 1959 ರಲ್ಲಿ ಬಂದ ಸಶಸ್ತ್ರ ಕಾಯ್ದೆ ಪ್ರಕಾರ ಕೋವಿಯನ್ನು ಎಲ್ಲರೂ ಹೊಂದಬಹುದು. ಆದರೆ ಕೆಲವರಿಗೆ ವಿನಾಯಿತಿ ಇದ್ದು, ಯಾವುದೇ ಪರವಾನಗಿ ಇಲ್ಲದೆ ಹೊಂದಬಹುದು. ಹೀಗಾಗಿ ಸೈನಿಕ ಪರಂಪರೆಯನ್ನು ಹೊಂದಿರುವ ಕೊಡವ ಸಮುದಾಯಕ್ಕೆ ಕೋವಿ ಮತ್ತು ಜಮ್ಮ ಹಿಡುವಳಿದಾರರಿಗೆ ಕೋವಿ ಹೊಂದುವುಕ್ಕೆ ರಿಯಾಯ್ತಿ ಇದೆ.
ಕೊಡವರ ಕೋವಿ ಹಕ್ಕನ್ನು ಪ್ರಶ್ನಿಸಿ ಕೋರ್ಟಿಗೆ ಹೋಗಿರುವವರಿಗೆ ಈ ಕಾಯ್ದೆ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲ ಎನಿಸುತ್ತದೆ ಎಂದಿದ್ದಾರೆ. ಒಟ್ಟಿನಲ್ಲಿ ಕೊಡವರು ತಮ್ಮ ಪಾರಂಪರಿಕ ಹಕ್ಕನ್ನು ಉಳಿಸಿಕೊಳ್ಳಲು ಮತ್ತೆ ಕಾನೂನು ಹೋರಾಟ ನಡೆಸಬೇಕಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ