Basavaraja Bommai: ನಬಾರ್ಡ್ ಯೋಜನೆಗಳಿಗೆ ಹೆಚ್ಚಿನ ಅನುದಾನಕ್ಕಾಗಿ ಕೇಂದ್ರಕ್ಕೆ ಮನವಿ: ಬೊಮ್ಮಾಯಿ

ಜಿಎಸ್‌ಟಿಗೆ ಸಂಬಂಧಿಸಿದ ಸಚಿವರ ಸಮಿತಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು  ಅಧ್ಯಕ್ಷರನ್ನಾಗಿ ನೇಮಕ ಮಾಡಿರುವ ಹಿನ್ನೆಲೆಯಲ್ಲಿ  ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಮಾತನಾಡಿದರು.

ದೆಹಲಿಯಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿಯಾದ ಸಿಎಂ ಬಸವರಾಜ ಬೊಮ್ಮಾಯಿ.

ದೆಹಲಿಯಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿಯಾದ ಸಿಎಂ ಬಸವರಾಜ ಬೊಮ್ಮಾಯಿ.

  • Share this:
ನವದೆಹಲಿ (ಅ. 08): ನಬಾರ್ಡ್ (Nabard) ಯೋಜನೆಗಳಿಗೆ ಹೆಚ್ಚಿನ ಅನುದಾನಕ್ಕಾಗಿ ಕೇಂದ್ರ ಸರ್ಕಾರಕ್ಕೆ (Union Government) ಮನವಿ  ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Chief Minister Basavaraja Bommai) ಅವರು  ತಿಳಿಸಿದರು. ಜಿಎಸ್‌ಟಿಗೆ (GST)  ಸಂಬಂಧಿಸಿದ ಸಚಿವರ ಸಮಿತಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು  ಅಧ್ಯಕ್ಷರನ್ನಾಗಿ ನೇಮಕ ಮಾಡಿರುವ ಹಿನ್ನೆಲೆಯಲ್ಲಿ  ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Union Finance Minister Nirmala Seetaraman)  ಅವರನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ನಬಾರ್ಡ್ ಯೋಜನೆಗಳಲ್ಲಿ ಕರ್ನಾಟಕಕ್ಕೆ ಹೆಚ್ಚಿನ ಅನುದಾನ ನೀಡಲು ಸುದೀರ್ಘ ಚರ್ಚೆಯಾಯಿತು. ಮೂಲಭೂತಸೌಕರ್ಯ ಅಭಿವೃದ್ಧಿಗೆ, ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿಗೆ ಹೆಚ್ಚಿಗೆ ಅನುದಾನ ನೀಡಲು ಮನವಿ ಮಾಡಲಾಗಿದೆ. ನಬಾರ್ಡ್ ಮತ್ತು SIDBIಯ ಕರ್ನಾಟಕದ ಯೋಜನೆಗಳ ಬಗ್ಗೆ ನವೆಂಬರ್ ಮೊದಲನೆ ವಾರದಲ್ಲಿ ನಡೆಯುವ ಸಭೆಯಲ್ಲಿ ಕೇಂದ್ರ ವಿತ್ತ ಸಚಿವರು ಈ ಬಗ್ಗೆ ಸೂಕ್ತ ನಿರ್ದೇಶನ SIDBI  ಯಿಂದ ಸಣ್ಣ ಕೈಗಾರಿಕೆಗೆ  ಹಾಗೂ ಮೈಕ್ರೋ ಫೈನಾನ್ಸ್ (Micro Finance) ಯೋಜನೆಗಳ ಅನುಷ್ಠಾನಕ್ಕೆ ಆದ್ಯತೆ ನೀಡಲಾಗುತ್ತಿದೆ.

ಜಿಎಸ್‌ಟಿ ಸಚಿವರ ಸಮಿತಿಯ  ರಚನೆ, ಜವಾಬ್ದಾರಿ, ಕಾರ್ಯಚಟುವಟಿಕೆಗಳ ಬಗ್ಗೆ  ಕೇಂದ್ರ ವಿತ್ತ ಸಚಿವರೊಂದಿಗೆ ಚರ್ಚಿಸಲಾಗಿದ್ದು, ಸಮಿತಿಯ ಪ್ರಥಮ ಸಭೆಯನ್ನು ಸಧ್ಯದಲ್ಲಿಯೇ ಕೈಗೊಳ್ಳಲಿದ್ದೇನೆ ಎಂದರು. ರಾಜ್ಯಕ್ಕೆ ಜಿಎಸ್‌ಟಿಯ ಪರಿಹಾರ ಮೊತ್ತ 12,000 ಕೋಟಿ ರೂ. ದೊರಕಿದ್ದು, ಮಾರ್ಚ್ 2021 ರವರೆಗಿನ 11,800 ಕೋಟಿ ರೂಗಳ ಪರಿಹಾರ ಮೊತ್ತವನ್ನು ಕಂತಿನಲ್ಲಿ ಕೊಡಲು ಪ್ರಾರಂಭಿಸಿದ್ದಾರೆ. ಈ ವರ್ಷ 18,000 ಕೋಟಿ ರೂ. ಕೇಂದ್ರ ಸರ್ಕಾರ ನೀಡುತ್ತಿದೆ.  ಈ ವರ್ಷ ಜಿಎಸ್‌ಟಿ ಸಂಗ್ರಹ ಸುಧಾರಣೆ ಕಂಡಿರುವುದರಿಂದ  ರಾಜ್ಯಕ್ಕೆ ಜಿಎಸ್‌ಟಿ ಪರಿಹಾರ ಹೆಚ್ಚಿಗೆ ದೊರೆಯಲಿದೆ ಎಂದು ತಿಳಿಸಿದರು.

ರಸಗೊಬ್ಬರ ಕೊರತೆ ನಿವಾರಣೆಗೆ ಕೇಂದ್ರದ ಭರವಸೆ

ಸಿಎಂ ಬಸವರಾಜ ಬೊಮ್ಮಾಯಿ ಅವರು ನವದೆಹಲಿಯಲ್ಲಿ ಆರೋಗ್ಯ, ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಮನ್ ಸುಖ್ ಮಾಂಡವೀಯ (Union Minister Mansuk Mandovia)  ಅವರನ್ನು ಭೇಟಿಯಾಗಿ ವಿವಿಧ ವಿಷಯಗಳ ಕುರಿತು ಚರ್ಚಿಸಿದರು. ಈ ಕುರಿತು ಮಾಧ್ಯಮದವರಿಗೆ ಮಾಹಿತಿ ನೀಡಿದ ಮುಖ್ಯಮಂತ್ರಿಗಳು, ರಬಿ ಹಂಗಾಮಿಗೆ ಸುಮಾರು 32 ಸಾವಿರ ಮೆಟ್ರಿಕ್ ಟನ್ ಡಿಎಪಿ ಹಾಗೂ ಸುಮಾರು 10 ಸಾವಿರ ಮೆಟ್ರಿಕ್ ಟನ್ ಎಂಓಪಿ ಕೊರತೆ ಇದ್ದು, ಇದನ್ನು ಒದಗಿಸುವಂತೆ ಮನವಿ ಮಾಡಲಾಯಿತು. ಇದನ್ನು ಒಂದು ವಾರದೊಳಗೆ ಒದಗಿಸುವುದಾಗಿ ಕೇಂದ್ರ ಸಚಿವರು ತಿಳಿಸಿದ್ದಾರೆ ಎಂದರು.

ರಾಜ್ಯದ ಲಸಿಕೆ ಅಭಿಯಾನದ ಕುರಿತು ಕೇಂದ್ರ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಕಳೆದ ಒಂದು ತಿಂಗಳಲ್ಲಿ 1.48 ಕೋಟಿ ಡೋಸ್ ಲಸಿಕೆ ನೀಡಲಾಗಿದ್ದು, ಈ ಕುರಿತು ಅವರು ಸಂತೋಷ ವ್ಯಕ್ತಪಡಿಸಿದರು. ಈವರೆಗೆ ಶೇ. 81 ರಷ್ಟು ಮೊದಲ ಡೋಸ್ ಹಾಗೂ   ಶೇ. 37 ರಷ್ಟು ಎರಡನೇ ಡೋಸ್ ನೀಡಲಾಗಿದೆ. 51 ಲಕ್ಷ ಡೋಸ್ ದಾಸ್ತಾನು ಲಭ್ಯವಿದ್ದು, ಎರಡನೇ ಡೋಸ್ ನೀಡಲು ಒತ್ತು ನೀಡಲಾಗುವುದು ಎಂದು ತಿಳಿಸಿದರು.

ಇದನ್ನು ಓದಿ: Midday Meal: ಶಾಲಾ ಮಕ್ಕಳಿಗೆ ಗುಡ್ ನ್ಯೂಸ್, ದಸರಾ ಬಳಿಕ ಶಾಲಾ ಮಕ್ಕಳಿಗೆ ಮತ್ತೆ ಮಧ್ಯಾಹ್ನದ ಬಿಸಿಯೂಟ!

ಡಿಸೆಂಬರ್ ಅಂತ್ಯದೊಳಗೆ ಮೊದಲ ಡೋಸ್ 90 ಶೇಕಡಾ ಹಾಗೂ ಎರಡನೇ ಡೋಸ್ ಕನಿಷ್ಠ 70 ಶೇಕಡಾ ಕೊಡಬೇಕೆಂಬ ಗುರಿ ಇದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು. ನಿಮ್ಹಾನ್ಸ್ ಘಟಿಕೋತ್ಸವಕ್ಕಾಗಿ ಸೋಮವಾರ ಸಚಿವರು ಬೆಂಗಳೂರಿಗೆ ಆಗಮಿಸಲಿದ್ದು, ರಾಜ್ಯದ ಆರೋಗ್ಯ ಸೇವಾ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯದ ಬೇಡಿಕೆಗಳ ಕುರಿತು ಪರಿಶೀಲನೆ ನಡೆಸಿ, ಕ್ರಮ ವಹಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
Published by:HR Ramesh
First published: