ಶಿವಮೊಗ್ಗ(ಸೆ.03): ಭದ್ರಾವತಿ ಕ್ಷೇತ್ರದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನರಾಗಿದ್ದಾರೆ. ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು, ನಿನ್ನೆ ತಡರಾತ್ರಿ ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಅವರ ಅಂತ್ಯಕ್ರಿಯೆ ಇಂದು ಭದ್ರಾವತಿ ತಾಲೂಕಿನ ಗೋಣಿಬೀಡಿನಲ್ಲಿರುವ ತೋಟದಲ್ಲಿ ನಡೆಯಲಿದೆ.
ಜೆಡಿಎಸ್ ಮುಖಂಡ ಮಾಜಿ ಶಾಸಕ ಅಪ್ಪಾಜಿಗೌಡ ಇಹಲೋಕ ತ್ಯಜಿಸಿದ್ದಾರೆ. ನಿನ್ನೆ ಅವರ ಆರೋಗ್ಯದಲ್ಲಿ ಏರುಪೇರು ಕಂಡ ಬಂದ ಹಿನ್ನೆಲೆಯಲ್ಲಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಕೊರೋನಾ ಪಾಸಿಟಿವ್ ಇರುವುದು ಧೃಡಪಟ್ಟಿತ್ತು. ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕರಿಯಾಗದೇ ಅವರು ಮೃತಪಟ್ಟಿದ್ದಾರೆ. ಭದ್ರಾವತಿ ಕ್ಷೇತ್ರದಲ್ಲಿ ಮೂರು ಬಾರಿ ಅವರು ಶಾಸಕರಾಗಿ ಆಯ್ಕೆಯಾಗಿದ್ದರು.
ಅಪ್ಪಾಜಿಗೌಡರ ನಿಧನಕ್ಕೆ ಸಿಎಂ ಬಿ.ಎಸ್. ಯಡಿಯೂರಪ್ಪ ಸಂತಾಪ ವ್ಯಕ್ತಪಡಿಸಿದ್ದಾರೆ. ಟ್ವೀಟ್ ಮಾಡಿರುವ ಅವರು, ಭದ್ರಾವತಿಯ ಮಾಜಿ ಶಾಸಕ ಅಪ್ಪಾಜಿಗೌಡ ಅವರು ನಿಧನರಾದ ಸುದ್ದಿ ಕೇಳಿ ತೀವ್ರ ದುಃಖವಾಯಿತು. ಕ್ಷೇತ್ರದ ಕಾರ್ಮಿಕರ ಹಿತರಕ್ಷಣೆಗೆ ಅವರ ಪರಿಶ್ರಮವನ್ನು ಮರೆಯಲಾಗದು. ಅವರ ಆತ್ಮಕ್ಕೆ ಸದ್ಗತಿ ಪ್ರಾರ್ಥಿಸುತ್ತಾ, ದೇವರು ಅವರ ಕುಟುಂಬದವರಿಗೆ, ಅಭಿಮಾನಿಗಳಿಗೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಕೋರುತ್ತೇನೆ ಎಂದು ತಿಳಿಸಿದ್ದಾರೆ.
Karnataka Reservoir Water Level: ರಾಜ್ಯದಲ್ಲಿ ಮುಂದುವರೆದ ಮಳೆ; ವಿವಿಧ ಜಲಾಶಯಗಳ ಇಂದಿನ ನೀರಿನ ಮಟ್ಟ ಇಲ್ಲಿದೆ
ಭದ್ರಾವತಿಯ ಮಾಜಿ ಶಾಸಕ ಶ್ರೀ ಅಪ್ಪಾಜಿಗೌಡ ಅವರು ನಿಧನರಾದ ಸುದ್ದಿ ಕೇಳಿ ತೀವ್ರ ದುಃಖವಾಯಿತು. ಕ್ಷೇತ್ರದ ಕಾರ್ಮಿಕರ ಹಿತರಕ್ಷಣೆಗೆ ಅವರ ಪರಿಶ್ರಮವನ್ನು ಮರೆಯಲಾಗದು. ಅವರ ಆತ್ಮಕ್ಕೆ ಸದ್ಗತಿ ಪ್ರಾರ್ಥಿಸುತ್ತಾ, ದೇವರು ಅವರ ಕುಟುಂಬದವರಿಗೆ, ಅಭಿಮಾನಿಗಳಿಗೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಕೋರುತ್ತೇನೆ. ಓಂ ಶಾಂತಿ
— B.S. Yediyurappa (@BSYBJP) September 3, 2020
1994 ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಭದ್ರಾವತಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದರು. 2013 ರಲ್ಲಿ ಜೆಡಿಎಸ್ನಿಂದ ಸ್ಪರ್ಧೆ ಮಾಡಿ ಶಾಸಕರಾಗಿ ಆಯ್ಕೆಯಾಗಿದ್ದರು 2018 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ನಿಂದ ಸ್ಪರ್ಧೆ ಮಾಡಿ, ಸೋಲು ಕಂಡಿದ್ದರು.
ಅಪ್ಪಾಜಿಗೌಡರು ನಿಧನರಾಗಿದ್ದಾರೆ ಎಂಬ ವಿಷಯ ತಿಳಿದು ಅವರ ಅಭಿಮಾನಿಗಳು ಮೆಗ್ಗಾನ್ ಆಸ್ಪತ್ರೆ ಬಳಿ ಆಗಮಿಸಿದ್ದರು. ಆದರೆ ಅಪ್ಪಾಜಿ ಗೌಡರಿಗೆ ಕೊರೋನಾ ಪಾಸಿಟಿವ್ ಇದ್ದ ಕಾರಣ ಯಾರನ್ನು ಆಸ್ಪತ್ರೆ ಒಳಗೆ ಬಿಡಲಿಲ್ಲ. ಇನ್ನು ತಡರಾತ್ರಿ ಅಪ್ಪಾಜಿ ಗೌಡರ ಪಾರ್ಥಿವ ಶರೀರವನ್ನು ಭದ್ರಾವತಿಯ ಅವರ ನಿವಾಸಕ್ಕೆ ಕಳುಹಿಸಿ ಕೊಡಲಾಗಿದೆ. ಅಪ್ಪಾಜಿಗೌಡರ ಕುಟುಂಬ ಮತ್ತು ಅಭಿಮಾನಿಗಳು ದುಖಃದ ಮಡುವಿನಲ್ಲಿ ಮುಳುಗಿದ್ದರು. ಅವರ ಆಕ್ರಂದನ ಮುಗಿಲು ಮುಟ್ಟಿತ್ತು.
ಇದೇ ವೇಳೆ ಮಾತನಾಡಿದ ಅವರ ಪತ್ನಿ ಶಾರದ ಅವರು ದೇವರು ಇಷ್ಟು ಬೇಗ ಅವರ ಆಯಸ್ಸು ಕಡಿಮೆ ಮಾಡಬಾರದಿತ್ತು. ಇನ್ನು ಜನಸೇವೆಗೆ ಅವಕಾಶ ಮಾಡಿಕೊಡಬೇಕಿತ್ತು. ಭದ್ರಾವತಿ ಕ್ಷೇತ್ರದಲ್ಲಿ ಯಾರಿಗೂ ನೋವು ನೀಡದೇ ಬಾಳಿದವರಾಗಿದ್ದರು ಎಂದು ದುಃಖ ತೋಡಿಕೊಂಡರು. ಅವರು ರಾಜನ ರೀತಿಯಲ್ಲಿದ್ದರು, ರಾಜರ ರೀತಿಯಲ್ಲಿಯೇ ಇಹಲೋಕ ತ್ಯಜಿಸಿದ್ದಾರೆ (ಅಗಲಿದ್ದಾರೆ) ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ