ಶಿವಮೊಗ್ಗದಲ್ಲಿ ಈಕೆ ಸತ್ಯ ಹರಿಶ್ಚಂದ್ರೆ ಎಂದೇ ಫೇಮಸ್; ಪುರುಷರಿಗಿಂತಲೂ ಗಟ್ಟಿಗಿತ್ತಿ; ಆದರೆ ಬದುಕು ಕಟ್ಟಿಕೊಳ್ಳಲು ಪರದಾಟ

ತುಂಗಾ ನದಿ ದಂಡೆ ಮೇಲಿರುವ ಈ ಚಿತಾಗಾರಕ್ಕೆ ಶಿವಮೊಗ್ಗ ನಗರದ ಬಹುತೇಕ ಭಾಗಗಳಿಂದ ಮೃತದೇಹಗಳು ಅಂತ್ಯ ಸಂಸ್ಕಾರಕ್ಕೆ ಬರುತ್ತವೆ. ಇಂತಹ ಚಿತಾಗಾರದಲ್ಲಿ ಈ ಮಹಿಳೆ 16 ವರ್ಷಗಳಿಂದ ಈ ಕಾಯಕ ಮಾಡುತ್ತಿದ್ದಾರೆ.

ಅನಸೂಯಮ್ಮ

ಅನಸೂಯಮ್ಮ

  • Share this:
ಶಿವಮೊಗ್ಗ(ಜ. 25): ಸತ್ಯಹರಿಚಂದ್ರೆ ಈಕೆ ದಿಟ್ಟ, ಧೈರ್ಯವಂತೆ, ಸ್ವಾಭಿಮಾನಿ ಮಹಿಳೆ ಎಂದರೆ ತಪ್ಪಾಗಲಾರದು. ಈಕೆ ಮಾಡುತ್ತಿರುವ ವೃತ್ತಿಯೇ ಅಂಥದ್ದು. ಪುರುಷರು ಸಹ ಈ ಕೆಲಸ ಮಾಡಲು ಹಿಂದೇಟು ಹಾಕುತ್ತಾರೆ. ಅಂತಹ ಕೆಲಸವನ್ನು ಯಾವುದೇ ಭಯ ಭೀತಿ ಇಲ್ಲದೇ ಇವರು ಮಾಡುತ್ತಾರೆ. ಈ ಕೆಲಸ ನಿರ್ವಹಿಸಲು ಪುರುಷರನ್ನು ಹುಡುಕಿದರೂ ಸಿಗದಿದ್ದಾಗ ನಾನೇ ಮಾಡುತ್ತೇನೆ ಬಿಡು ಎಂದು ಜವಾಬ್ದಾರಿ ತೆಗೆದುಕೊಂಡು 16 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಶಿವಮೊಗ್ಗ ನಗರದಲ್ಲಿ ಈಕೆ ಮನೆ ಮಾತಾಗಿದ್ದಾರೆ.

ಈ ಮಹಿಳೆಯ ಹೆಸರು ಅನಸೂಯಮ್ಮ. ವಯಸ್ಸು ಇನ್ನು 40 ವರ್ಷ. ಈ ಮಹಿಳೆ ಮಾಡುತ್ತಿರುವ ವೃತ್ತಿ ಏನು ಎಂದು ನೀವು ಕೇಳಿದರೆ ಅಚ್ಚರಿ ಪಡುವುದರಲ್ಲಿ ಎರಡು ಮಾತಿಲ್ಲ. ಚಿತಾಗಾರದಲ್ಲಿ ಮೃತದೇಹ ಸುಡುವ ಕಾಯಕ ಮಾಡುತ್ತಿದ್ದಾರೆ ಇವರು. ಶಿವಮೊಗ್ಗ ರೋಟರಿ ಚಿತಾಗಾರದ ಸತ್ಯಹರಿಚಂದ್ರೆ ಎಂತಲೇ ಫೇಮಸ್ಸ್. ರೋಟರಿ ಚಿತಾಗಾರದ ಸಂಪೂರ್ಣ ಜವಾಬ್ದಾರಿಯನ್ನು ಈ ಮಹಿಳೆ ಹೊತ್ತಿದ್ದಾರೆ.

ಸ್ಮಶಾನ, ಚಿತಾಗಾರ ಎಂಬ ಹೆಸರು ಕೇಳಿದರೆ ಎದರುವಂತಹ ಈ ಕಾಲದಲ್ಲಿ ಯಾವುದೇ ಭಯ ಭೀತಿ ಇಲ್ಲದೇ ಅನಸೂಯಮ್ಮ ಇಲ್ಲಿ ಸತ್ಯ ಹರಿಚಂದ್ರನಂತೆ ಮೃತದೇಹಗಳನ್ನು ಸುಡುವ ಕಾಯಕದಲ್ಲಿ ನಿರತರಾಗಿದ್ದಾರೆ. ಹಿಂದು ಧರ್ಮದಲ್ಲಿ ಅಂತ್ಯ ಕ್ರಿಯೆಗೆ ಅತ್ಯಂತ ಮಹತ್ವದ ಸ್ಥಾನವಿದೆ. ಮೃತಪಟ್ಟ ವ್ಯಕ್ತಿಗೆ ಮುಕ್ತಿ ಸಿಗಬೇಕು ಎಂಬ ಕಾರಣಕ್ಕೆ ಅಂತ್ಯಕ್ರಿಯೆಯನ್ನು ಕಟ್ಟುನಿಟ್ಟಾಗಿ ಮಾಡಲಾಗುತ್ತದೆ. ಇಂತಹ ಒಂದು ಕಾರ್ಯಕ್ಕೆ ಅನಸೂಯಾ ಹೆಗಲೇರಿಸಿದ್ಧಾರೆ. ರೋಟರಿ ಚಿತಾಗಾರದಲ್ಲಿ ಬರುವಂಥ ಎಲ್ಲಾ ಹೆಣಗಳನ್ನು ಸುಟ್ಟು, ಅವರ ಕುಟುಂಬದವರಿಗೆ ಚಿತಾ ಭಸ್ಮಾ ಕೊಡುವ ಕೆಲಸದಲ್ಲಿ ನಿರತರಾಗಿದ್ದಾರೆ.

ತುಂಗಾ ನದಿ ದಂಡೆ ಮೇಲಿರುವ ಈ ಚಿತಾಗಾರಕ್ಕೆ ಶಿವಮೊಗ್ಗ ನಗರದ ಬಹುತೇಕ ಭಾಗಗಳಿಂದ ಮೃತದೇಹಗಳು ಅಂತ್ಯ ಸಂಸ್ಕಾರಕ್ಕೆ ಬರುತ್ತವೆ. ಇಂತಹ ಚಿತಾಗಾರದಲ್ಲಿ ಈ ಮಹಿಳೆ 16 ವರ್ಷಗಳಿಂದ ಈ ಕಾಯಕ ಮಾಡುತ್ತಿದ್ದಾರೆ. ಇವರು ಬರೀ ಹೆಣ ಸುಡುವ ಕೆಲಸ ಮಾತ್ರ ಮಾಡಲ್ಲ. ಚಿತಾಗಾರದ ಸ್ವಚ್ಚತೆ, ಅಂತ್ಯ ಸಂಸ್ಕಾರಕ್ಕೆ ಸಿದ್ಧತೆಗಳು, ಸೌದೆ ಜೋಡಿಸುವುದು, ಲೆಕ್ಕಪತ್ರ, ಮೃತದೇಹ ಸುಟ್ಟ ನಂತರ ಚಿತಾ ಭಸ್ಮಾವನ್ನು ಮಡಿಕೆಗೆ ಹಾಕಿ ಕೊಡುವುದು ಹೀಗೆ ಅಲ್ಲಿನ ಎಲ್ಲಾ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿದ್ದಾರೆ.

ಅನಸೂಯಮ್ಮನ ಪತಿ ಇದೇ ಚಿತಾಗಾರವನ್ನು ನೋಡಿಕೊಳ್ಳುತ್ತಿದ್ದರು. ಪತಿ ಮೃತಪಟ್ಟ ನಂತರ ಈ ಮಹಿಳೆಯ ಜೀವನ ನಿರ್ವಹಣೆ ಕಷ್ಟಕರವಾಯಿತು. ರೋಟರಿ ಚಿತಾಗಾರದವರು ಪುರುಷರನ್ನು ಈ ಕೆಲಸಕ್ಕೆ ಹುಡುಕಿದರು. ಅವರಿಗೆ ಯಾರೂ ಸಿಗದೇ ಇದ್ದಾಗ, ಅನಸೂಯಮ್ಮ ನಾನೇ ಮಾಡುತ್ತೇನೆ ಬಿಡಿ ಎಂದು ಕೆಲಸ ಆರಂಭಿಸಿಯೇ ಬಿಟ್ಟಿದ್ದಾರೆ. ಶಿವಮೊಗ್ಗ ನಗರದ ಹಲವು ಸಂಘ ಸಂಸ್ಥೆಗಳು ಈಕೆಯನ್ನು ಸನ್ಮಾನಿಸಿವೆ.

ಇದನ್ನೂ ಓದಿ :  ದಶಕಗಳ ಕೂಗಿಗೆ ಕಡೆಗೂ ಕಾಯಕಲ್ಪ: ಸಾಗರ ತಾಲೂಕಿನ ಸಿಂಗದೂರು ಸೇತುವೆ ಕಾಮಗಾರಿ ಆರಂಭ

ಈಕೆಗೆ ಇರುವ ಕೊನೆ ಆಸೆ ಎಂದರೆ ಶಿವಮೊಗ್ಗ ನಗರದಲ್ಲಿ ಒಂದು ಸ್ವತಃ ಮನೆ ಕಟ್ಟಿಕೊಳ್ಳಬೇಕು ಎಂದು. ಅದರೆ ಅದು ಸಾಧ್ಯವಾಗುತ್ತಲೇ ಇಲ್ಲ. ಬರುವಂತಹ ಅಲ್ಪಸ್ಪಲ್ಪ ಸಂಬಳದಲ್ಲಿ ಜೀವನ ನಡೆಸುವುದೇ ಕಷ್ಟಕರವಾಗಿದೆ. ಅನಸೂಯಮ್ಮ ಎಷ್ಟು ಸ್ವಾಭಿಮಾನಿ ಎಂದರೆ, ಅವಳ ಗಂಡ ಮಾಡಿದ್ದ 80 ಸಾವಿರ ಸಾಲವನ್ನು ಸಹ ಇದೇ ದುಡಿಮೆಯಿಂದಲೇ ತೀರಿಸಿದ್ದಾರೆ.

ಅನಸೂಯಮ್ಮನ ಈ ಕೆಲಸಕ್ಕೆ ಸಮಾಜದಿಂದಲೂ ಬೆಂಬಲ ಸಿಗುತ್ತಿದೆ. ಜನಪ್ರತಿನಿಧಿಗಳು, ಈಕೆಗೆ ಸರ್ಕಾರಿಂದ ಯಾವುದಾದರೂ ಯೋಜನೆಯಲ್ಲಿ ಒಂದು ಮನೆ ಕೊಡಿಸಿದರೆ ಅವಳಿಗೂ ಆಸರೆಯಾಗಲಿದೆ.

 
First published: