news18-kannada Updated:September 25, 2020, 10:49 AM IST
ನಿರೂಪಕಿ ಅನುಶ್ರೀ
ಬೆಂಗಳೂರು (ಸೆ. 25): ಸ್ಯಾಂಡಲ್ವುಡ್ ಡ್ರಗ್ ಪ್ರಕರಣದಲ್ಲಿ ಸಾಕಷ್ಟು ಸೆಲೆಬ್ರಿಟಿಗಳ ಹೆಸರು ಕೇಳಿಬರುತ್ತಿದೆ. ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಈಗಾಗಲೇ ಕಂಬಿಗಳ ಹಿಂದೆ ಸೇರಿದ್ದಾರೆ. ನಟ ದಿಗಂತ್, ನಟಿ ಐಂದ್ರಿತಾ ರೇ, ನಿರೂಪಕ ಅಕುಲ್ ಬಾಲಾಜಿ, ಲೂಸ್ ಮಾದ ಯೋಗಿ ಹೀಗೆ ನಾನಾ ಸೆಲೆಬ್ರಿಟಿಗಳ ಹೆಸರು ಡ್ರಗ್ ಕೇಸ್ನಲ್ಲಿ ತಳುಕು ಹಾಕಿಕೊಂಡಿರುವ ಹಿನ್ನೆಲೆಯಲ್ಲಿ ಅವರೆಲ್ಲರ ವಿಚಾರಣೆಯೂ ನಡೆದಿದೆ. ಇದೀಗ ಕಿರುತೆರೆಯ ಖ್ಯಾತ ನಿರೂಪಕಿ ಅನುಶ್ರೀ ಅವರ ಹೆಸರು ಕೂಡ ಡ್ರಗ್ ಕೇಸ್ನಲ್ಲಿ ಕೇಳಿಬರುತ್ತಿದ್ದು, ಈಗಾಗಲೇ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು ನೋಟೀಸ್ ನೀಡಿದ್ದಾರೆ. ಬೆಂಗಳೂರಿನಲ್ಲಿರುವ ಅನುಶ್ರೀಗೆ ಮಂಗಳೂರು ಸಿಸಿಬಿ ಕಚೇರಿಯಿಂದ ನಿನ್ನೆ ಸಂಜೆ ನೋಟೀಸ್ ತಲುಪಿಸಲಾಗಿದೆ. ಈಗಾಗಲೇ ಮಂಗಳೂರಿಗೆ ಹೊರಟಿರುವ ಅನುಶ್ರೀ ಇಂದು ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗಲಿದ್ದಾರೆ.
ಡ್ರಗ್ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಈ ಕೇಸ್ನಲ್ಲಿ ಬಂಧಿತನಾಗಿರುವ ಡ್ಯಾನ್ಸರ್ ಕಿಶೋರ್ ಶೆಟ್ಟಿ ನನಗೆ ಕೋರಿಯೋಗ್ರಾಫರ್ ಆಗಿದ್ದವರು. ಅವರೊಂದಿಗೆ ನನಗೆ ನಿಕಟ ಸಂಪರ್ಕವಿಲ್ಲ. ನಾನು ಇಂದು ವಿಚಾರಣೆಗೆ ಹಾಜರಾಗುತ್ತಿದ್ದೇನೆ, ನಾನು ಅಪರಾಧಿ ಅಲ್ಲ. ನನಗೆ ತಿಳಿದಿರುವ ಮಾಹಿತಿಯನ್ನು ಸಿಸಿಬಿ ಅಧಿಕಾರಿಗಳಿಗೆ ನೀಡುತ್ತೇನೆ ಎಂದು ಅನುಶ್ರೀ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: Anushree: ಡ್ರಗ್ ಡೀಲರ್ ಕಿಶೋರ್ ಶೆಟ್ಟಿ ಜೊತೆಗಿನ ನಂಟೇ ಕಂಟಕವಾಯ್ತಾ ಅನುಶ್ರೀಗೆ; ಪೊಲೀಸರಿಂದ ನಿರೂಪಕಿಯ ವಿಚಾರಣೆ ಸಾಧ್ಯತೆ?
ಮೂಲಗಳ ಪ್ರಕಾರ, ನಿರೂಪಕಿ ಅನುಶ್ರೀಗೆ ಈಗಾಗಲೇ ಡ್ರಗ್ ಕೇಸ್ನಲ್ಲಿ ಬಂಧಿತರಾಗಿರುವ ಕಿಶೋರ್ ಶೆಟ್ಟಿ ಮತ್ತು ತರುಣ್ ಹೇಳಿಕೆಯನ್ನು ಮಾತ್ರ ಆಧರಿಸಿ ನೋಟೀಸ್ ಕೊಟ್ಟಿಲ್ಲ. ಕಿಶೋರ್ ಶೆಟ್ಟಿ ಮತ್ತು ತರುಣ್ ಇಬ್ಬರ ಮೊಬೈಲ್ಗಳನ್ನು ವಶಕ್ಕೆ ಪಡೆದಿದ್ದ ಮಂಗಳೂರು ಪೊಲೀಸರು ಅವರ ಸಂಪರ್ಕದಲ್ಲಿದ್ದವರ ಮಾಹಿತಿ, ಮೆಸೇಜ್ಗಳ ಪರಿಶೀಲನೆ ಮಾಡಿದ್ದರು. ಆಗ ಅವರಿಬ್ಬರ ಮೊಬೈಲ್ನಲ್ಲಿ ಕೆಲವು ಸಂದೇಶಗಳು ಹಾಗೂ ಕಾಂಟ್ಯಾಕ್ಟ್ ಲೀಸ್ಟ್ ಡಿಲೀಟ್ ಆಗಿರೋದು ಪತ್ತೆಯಾಗಿತ್ತು. ಬಂಧಿತ ಕಿಶೋರ್ ಶೆಟ್ಟಿ ವಾಟ್ಸಾಪ್ ಮೂಲಕವೇ ಹೆಚ್ಚಾಗಿ ತನ್ನ ಗೆಳೆಯರಿಗೆ ಫೋನ್ ಮಾಡುತ್ತಿದ್ದ. ಯಾರೊಟ್ಟಿಗಾದರೂ ವಾಟ್ಸಾಪ್ ಮೂಲಕ ಚಾಟ್ ಅಥವಾ ಕಾಲ್ ಮಾಡಿದರೆ ಕೂಡಲೇ ಡಿಲೀಟ್ ಮಾಡುತ್ತಿದ್ದ.
ಕಿಶೋರ್ ಶೆಟ್ಟಿ ಮೊಬೈಲ್ ಮತ್ತು ತರುಣ್ ಇಬ್ಬರ ಮೊಬೈಲ್ಗಳನ್ನೂ ಮಂಗಳೂರಿನ ಸಿಸಿಬಿ ಅಧಿಕಾರಿಗಳು ಟೆಕ್ನಿಕಲ್ ಸೆಲ್ ಗೆ ರಿಟ್ರೀವ್ಗೆ ಕಳುಹಿಸಿದ್ದರು. ಈ ವೇಳೆ ಇಬ್ಬರ ಸಂಪರ್ಕದಲ್ಲೂ ನಿರೂಪಕಿ ಅನುಶ್ರೀ ಇರೋದು ಬೆಳಕಿಗೆ ಬಂದಿತ್ತು. ಅಲ್ಲದೆ, ಅನುಶ್ರೀ ಪಾರ್ಟಿಗಳಲ್ಲಿ ಭಾಗಿಯಾಗುತ್ತಿದ್ದ ಬಗ್ಗೆಯೂ ಇಬ್ಬರು ಆರೋಪಿಗಳು ವಿಚಾರಣೆ ವೇಳೆ ಹೇಳಿಕೆ ನೀಡಿದ್ದರು. ಇದೇ ಕಾರಣಕ್ಕೆ ಖುದ್ದು ಬೆಂಗಳೂರಿಗೆ ಬಂದು ಅನುಶ್ರೀಗೆ ಮಂಗಳೂರು ಸಿಸಿಬಿ ತಂಡ ನೋಟೀಸ್ ಕೊಟ್ಟಿತ್ತು. ಇಂದು ಬೆಳಗ್ಗೆ 11 ಗಂಟೆಗೆ ಅನುಶ್ರೀ ವಿಚಾರಣೆಗೆ ಹಾಜರಾಗಲಿದ್ದಾರೆ. ವಿಚಾರಣೆ ಸಂದರ್ಭದಲ್ಲೇ ಅನುಶ್ರೀ ಮೊಬೈಲ್ ವಶಕ್ಕೆ ಪಡೆಯುವ ಸಾಧ್ಯತೆಯಿದೆ. ಇಂದು ಸಂಜೆಯವರೆಗೂ ಅನುಶ್ರೀ ವಿಚಾರಣೆ ನಡೆಸಲಾಗುತ್ತದೆ.
Published by:
Sushma Chakre
First published:
September 25, 2020, 9:16 AM IST