ಡಿಕೆಶಿಗೆ ಹೈಕೋರ್ಟ್​ನಲ್ಲಿ ಮತ್ತೆ ಹಿನ್ನಡೆ; ಬಂಧನದಿಂದ ರಕ್ಷಣೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ

ವಾದ - ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಅರವಿಂದ್​ ಕುಮಾರ್​ ಡಿ ಕೆ ಶಿವಕುಮಾರ್​ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದಾರೆ.

Sharath Sharma Kalagaru | news18-kannada
Updated:August 30, 2019, 1:40 PM IST
ಡಿಕೆಶಿಗೆ ಹೈಕೋರ್ಟ್​ನಲ್ಲಿ ಮತ್ತೆ ಹಿನ್ನಡೆ; ಬಂಧನದಿಂದ ರಕ್ಷಣೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ
ಡಿಕೆ ಶಿವಕುಮಾರ್
  • Share this:
ಬೆಂಗಳೂರು: ಕರ್ನಾಟಕ ಹೈಕೋರ್ಟ್​ ಗುರುವಾರ ಡಿಕೆ ಶಿವಕುಮಾರ್​ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತ್ತು. ಜಾರಿ ನಿರ್ದೇಶನಾಲಯ ನೀಡಿರುವ ಸಮನ್ಸ್​ ರದ್ದು ಕೋರಿ ಡಿಕೆಶಿ ಅರ್ಜಿ ಸಲ್ಲಿಸಿದ್ದರು. ಆದರೆ ಪ್ರಕರಣ ತನಿಖೆಗೆ ಯೋಗ್ಯವಾಗಿದೆ ಎಂದು ಹೇಳುವ ಮೂಲಕ ಅರ್ಜಿಯನ್ನು ನ್ಯಾಯಮೂರ್ತಿ ಅರವಿಂದ್​ ಕುಮಾರ್​ ತಿರಸ್ಕರಿಸಿ ಆದೇಶಿಸಿದ್ದರು. ಇದೀಗ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಂದ ಬಂಧನ ಭೀತಿಯಲ್ಲಿರುವ ಡಿಕೆಶಿ ಮಧ್ಯಂತರ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನೂ ಈಗ ಹೈಕೋರ್ಟ್​ ವಜಾಗೊಳಿಸಿದೆ. 

ಈಗಾಗಲೇ ಡಿಕೆ ಶಿವಕುಮಾರ್​ ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ. ಇದೀಗ ಮತ್ತೆ ಹೈಕೋರ್ಟ್​ನಿಂದ ಹಿನ್ನಡೆಯಾದ ಹಿನ್ನೆಲೆಯಲ್ಲಿ ಅವರು ನಾಳೆ ಜಾರಿ ನಿರ್ದೇಶನಾಲಯದ ಮುಂದೆ ವಿಚಾರಣೆಗೆ ಹಾಜರಾಗಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಜತೆಗೆ ಬಂಧನದ ಭೀತಿಯೂ ಹೆಚ್ಚಾಗಿದೆ. ಹಿಂದಿನ ವಾರ ಇದೇ ಪರಿಸ್ಥಿತಿಯಲ್ಲಿ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಸಿಲುಕಿದ್ದರು, ನಂತರ ಬಂಧನಕ್ಕೂ ಒಳಗಾಗಿದ್ದರು.

ಕೋರ್ಟ್​ನಲ್ಲಿ ನಡೆದದ್ದೇನು?:

ವಾದ ಆರಂಭಿಸಿದ ಆಚಾರ್ಯ, ನಾವು ನಿರೀಕ್ಷಣಾ ಜಾಮೀನನ್ನು ಕೇಳುತ್ತಿಲ್ಲ. ಜಾರಿ ನಿರ್ದೇಶನಾಲಯ ನೀಡಿದ್ದ ಸಮನ್ಸ್​ಗೆ ತಡೆ ನೀಡಲು ಹೈಕೋರ್ಟ್​ ನಿರಾಕರಿಸಿದೆ. ಇದನ್ನು ಸುಪ್ರೀಂ ಕೋರ್ಟ್​ನಲ್ಲಿ ಪ್ರಶ್ನಿಸುತ್ತೇವೆ. ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸುವವರೆಗೆ ಜಾರಿ ನಿರ್ದೇಶನಾಲಯ ಇಲಾಖೆ ಡಿಕೆ ಶಿವಕುಮಾರ್​ ಅವರನ್ನು ಬಂಧಿಸದಂತೆ ಆದೇಶಿಸಿ, ಎಂದು ಆಚಾರ್ಯ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಾರಿ ನಿರ್ದೇಶನಾಲಯ ಪರ ವಕೀಲರು, ಕಳೆದ ಒಂಭತ್ತು ತಿಂಗಳಿಂದ ಇದೇ ನಡೆಯುತ್ತಿದೆ. ವಿಚಾರಣೆ ಅಂದ ಮಾತ್ರಕ್ಕೆ ಬಂಧಿಸುತ್ತಾರೆ ಎಂದಲ್ಲ. ಬಂಧಿಸುವುದು ಬಿಡುವುದು ಅಧಿಕಾರಿಗಳಿಗೆ ಬಿಟ್ಟ ವಿಚಾರ ಎಂದರು.

ಇದಕ್ಕೆ ಪ್ರತಿಯಾಗಿ ವಾದಿಸಿದ ಬಿವಿ ಆಚಾರ್ಯ, ಶನಿವಾರ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ. ಸೆಪ್ಟೆಂಬರ್​ 5 ಅಥವಾ 6ನೇ ತಾರೀಕಿಗೆ ದಿನಾಂಕ ನಿಗದಿ ಮಾಡುವಂತೆ ನಿರ್ದೇಶಿಸಿ ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಇಂದೇ ಮೇಲ್ಮನವಿ ಅರ್ಜಿ ಸಲ್ಲಿಸಬಹುದಲ್ಲ. ನಾಳೆಯ ವರೆಗೂ ಕಾಯುವ ಅಗತ್ಯವೇನು. ನಾಳೆ ವಿಚಾರಣೆಗೆ ಹಾಜರಾಗುತ್ತೀರಾ? ಎಂದು ಪ್ರಶ್ನಿಸಿದರು.ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸದಿದ್ದರೆ ವಿಚಾರಣೆಗೆ ಡಿಕೆ ಶಿವಕುಮಾರ್​ ಹಾಜರಾಗುತ್ತಾರೆ ಎಂದು ಬಿವಿ ಆಚಾರ್ಯ ಉತ್ತರಿಸಿದರು.

ವಾದ ಪ್ರತಿವಾದಗಳ ನಂತರ ಹೈಕೋರ್ಟ್​ ಡಿಕೆ ಶಿವಕುಮಾರ್​ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದರು. ಸಿಆರ್​ಪಿಸಿ 482ರ ಅಡಿಯಲ್ಲಿ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಗುರುವಾರ ಈ ಕಾಯಿದೆಯ ಅಡಿಯಲ್ಲೇ ಅರ್ಜಿಯನ್ನು ವಜಾಗೊಳಿಸಲಾಗಿತ್ತು. ಹಿಂದಿನ ಆದೇಶಕ್ಕೆ ತಿದ್ದುಪಡಿ ತರಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್​ ಅರ್ಜಿ ವಜಾಗೊಳಿಸಿತು.
First published: August 30, 2019, 1:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading