• Home
  • »
  • News
  • »
  • state
  • »
  • Agnipath Protest: ಉರಿಯೋ 'ಅಗ್ನಿ'ಗೆ ತುಪ್ಪ ಸುರಿಯಲು ಬಿಡದ ಪೊಲೀಸರು! ಠುಸ್ ಆಯ್ತು ಬೆಳಗಾವಿ ಬಂದ್

Agnipath Protest: ಉರಿಯೋ 'ಅಗ್ನಿ'ಗೆ ತುಪ್ಪ ಸುರಿಯಲು ಬಿಡದ ಪೊಲೀಸರು! ಠುಸ್ ಆಯ್ತು ಬೆಳಗಾವಿ ಬಂದ್

ಬೆಳಗಾವಿ ಪೊಲೀಸರಿಂದ ಹೈಅಲರ್ಟ್

ಬೆಳಗಾವಿ ಪೊಲೀಸರಿಂದ ಹೈಅಲರ್ಟ್

ಸಾಮಾಜಿಕ ಜಾಲತಾಣಗಳಲ್ಲಿ ಬಂದ್ ಕುರಿತು ಸಂದೇಶ ರವಾನೆ ಮಾಡಿದ್ದ ಯುವಕರನ್ನು ಕರೆಯಿಸಿ ಖಡಕ್ ವಾರ್ನಿಂಗ್ ಮಾಡಿ, ಸೇನಾಕಾಂಕ್ಷಿಗಳು, ಕೋಚಿಂಗ್ ಸೆಂಟರ್ ಮುಖ್ಯಸ್ಥರಿಂದ ಬಂದ್ ಮಾಡದಂತೆ ಮನವಿ ಮಾಡಿದ ವಿಡಿಯೋ ಹೇಳಿಕೆಯನ್ನ ಪೋಲಿಸರು ಬಿಡುಗಡೆಗೊಳಿಸಿದ್ದರಿಂದ ಬಂದ್ ವಿಫಲವಾಗಿದೆ.

  • Share this:

ಬೆಳಗಾವಿ, ಜೂನ್ 20:  ಅಗ್ನಿಪಥ್ ಯೋಜನೆ (Agnipath Scheme) ವಿರೋಧಿಸಿ ಇಂದು ಕರೆ ನೀಡಿದ್ದ ಬೆಳಗಾವಿ ಬಂದ್ (Belagavi Bundh) ಠುಸ್ ಆಗಿದೆ.  ಬೆಳಗಾವಿ ಕಮೀಶನರೇಟ್ (Commissionerate) ಹಾಗೂ ಜಿಲ್ಲಾ ಪೋಲಿಸರ (Police) ಬಿಗಿ ಕ್ರಮಗಳಿಂದ ಬಂದ್ ವಿಫಲವಾಗಿದ್ದು ಪೋಲಿಸರ ಕಣ್ತಪ್ಪಿಸಿ ಪ್ರತಿಭಟನೆ (Protest) ಬಂದಿದ್ದ 200 ಕ್ಕೂ ಹೆಚ್ಚು ಯುವಕರನ್ನ ಪೋಲಿಸರು ವಶಕ್ಕೆ ಪಡೆದಿದ್ದಾರೆ. ಅಗ್ನಿಪಥ ಯೋಜನೆಗೆ ರಾಷ್ಟ್ರಾದ್ಯಂತ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಗಡಿ ಜಿಲ್ಲೆ ಬೆಳಗಾವಿಯಲ್ಲೂ ಅಗ್ನಿಪಥಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಅಗ್ನಿಪಥ ರದ್ದು ಪಡಿಸುವಂತೆ ಆಗ್ರಹಿಸಿ ವಿವಿಧ ವಾಟ್ಸಾಪ್ ಗ್ರೂಪ್‌ಗಳ (WhatsApp Group) ಮೂಲಕ ಪ್ರತಿಭಟನೆಗೆ ಸೇನಾಕಾಂಕ್ಷಿಗಳಿಗೆ ಆಹ್ವಾನ (Invite) ನೀಡಲಾಗಿತ್ತು.  ಸಾಮಾಜಿಕ ‌ಜಾಲತಾಣಗಳ (Social Media) ಮೇಲೆ ಹದ್ದಿಣ‌ ಕಣ್ಣು ಇಟ್ಟಿದ್ದ ಬೆಳಗಾವಿ ಪೋಲಿಸರು ಬೆಳಗಾವಿಗೆ ಸಂಪರ್ಕಿಸುವ ಎಲ್ಲ ಮಾರ್ಗಗಗಳಲ್ಲಿ (Road) ನಾಕಾ ಬಂಧಿ (Naka Bandhi) ಹಾಕುವ ಮೂಲಕ ಪ್ರತಿಭಟನಾಕಾರರು ಬೆಳಗಾವಿ ಪ್ರವೇಶಿಸದಂತೆ ಮಾಡಿದ್ರು.


ಬಂದ್‌ಗೆ ಕರೆ ನೀಡಿದ್ದ ಯುವಕರಿಗೆ ಖಡಕ್ ವಾರ್ನಿಂಗ್


ಸಾಮಾಜಿಕ ಜಾಲತಾಣಗಳಲ್ಲಿ ಬಂದ್ ಕುರಿತು ಸಂದೇಶ ರವಾನೆ ಮಾಡಿದ್ದ ಯುವಕರನ್ನು ಕರೆಯಿಸಿ ಖಡಕ್ ವಾರ್ನಿಂಗ್ ಮಾಡಿ, ಸೇನಾಕಾಂಕ್ಷಿಗಳು, ಕೋಚಿಂಗ್ ಸೆಂಟರ್ ಮುಖ್ಯಸ್ಥರಿಂದ ಬಂದ್ ಮಾಡದಂತೆ ಮನವಿ ಮಾಡಿದ ವಿಡಿಯೋ ಹೇಳಿಕೆಯನ್ನ ಪೋಲಿಸರು ಬಿಡುಗಡೆಗೊಳಿಸಿದ್ದರಿಂದ ಬಂದ್ ವಿಫಲವಾಗಿದೆ.


ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರಿಂದ ಪಥ ಸಂಚಲನ


ಇನ್ನೂ ರ್ಯಾಪಿಡ್ ಆಕ್ಷನ್ ಫೋರ್ಸ್ ಜೊತೆಗೆ ಪಥಸಂಚಲನ ನಡೆಸಿದ ಬೆಳಗಾವಿ ಪೋಲಿಸ್ ಕಮೀಶನರ್ ಡಾ: ಬೋರಲಿಂಗಯ್ಯ  ಪ್ರತಿಭಟನೆಗೆ ಅವಕಾಶವಿಲ್ಲ ಎಂಬ ಖಡಕ್ ಸಂದೇಶ ರವಾನಿಸಿದ್ರೆ, ಅತ್ತ ಬೆಳಗಾವಿ ಎಸ್ಪಿ ಲಕ್ಷ್ಮಣ ನಿಂಬರಗಿ ಸ್ವತಃ ಹತ್ತರಗಿ ಟೋಲ್ ನಲ್ಲಿ ಬೀಡು ಬಿಟ್ಟು, ಪ್ರತಿಭಟನೆಗೆ ಬರುತ್ತಿದ್ದ ಯುವಕರಿಗೆ ತಿಳಿ ಹೇಳಿದ್ರು


ಇದನ್ನೂ ಓದಿ: Explained: ಏನಿದು ಅಗ್ನಿಪಥ್ ಯೋಜನೆ? ಭಾರತದ ರಕ್ಷಣೆಯಲ್ಲಿ ಇದರ ಮಹತ್ವವೇನು?


200ಕ್ಕೂ ಹೆಚ್ಚು ಪ್ರತಿಭಟನಾಕಾರರು ವಶಕ್ಕೆ


ಪೋಲಿಸರ ಕಣ್ತಪ್ಪಿಸಿ ಬೆಳಗಾವಿಗೆ ಬಂದಿದ್ದ 200 ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೋಲಿಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಕೇಂದ್ರ ಬಸ್ ನಿಲ್ದಾಣ, ರೈಲು ನಿಲ್ದಾಣ, ಚನ್ನಮ್ಮ ವೃತ್ತದ ಬಳಿ ಸಂಶಯಾಸ್ಪದವಾಗಿ ಓಡಾಡುತ್ತಿದ್ದ ಯುವಕರನ್ನು ಪೋಲಿಸರು ವಶಕ್ಕೆ ಪಡೆದ್ರು.


ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯೆ


ಬಂದ್ ಗೆ ಪೋಲಿಸರ ತಡೆ ಕುರಿತು ಪ್ರತಿಕ್ರಿಯೆ ನೀಡಿ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕಾನೂನು ಸುವ್ಯವಸ್ಥೆ ಹದಗೆಡಬಾರದು ಅಂತಾ ಪೊಲೀಸರು ಕ್ರಮ ಕೈಗೊಂಡಿರಬಹುದು, ಎಲ್ಲಾ ಕಡೆ ಬೆಂಕಿ ಹಚ್ಚೋದು ಕಲ್ಲು ಹೊಡೆಯೋದು ನಡೀತಿದೆ ಅದಕ್ಕೋಸ್ಕರ ಮುಂಜಾಗ್ರತೆ ತಗೆದುಕೊಂಡಿರಬಹುದು.


ಉರಿಯೋ ‘ಅಗ್ನಿ’ಗೆ ತುಪ್ಪ ಸುರಿದ್ರಾ ಲಕ್ಷ್ಮೀ ಹೆಬ್ಬಾಳ್ಕರ್?


ಪ್ರತಿಭಟನೆ ಒಂದು ದಿನ ತಡೆಯಬಹುದು, ಶಿವಮೊಗ್ಗದಿಂದ ರ‌್ಯಾಪಿಡ್ ಆ್ಯಕ್ಷನ್ ಫೋರ್ಸ್ ತರಿಸಿದ್ದಾರೆ, ಎಷ್ಟು ದಿನ ಇರ್ತಾರೆ ಅಂತ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶ್ನಿಸಿದ್ದಾರೆ. ಒಂದಲ್ಲ ಒಂದ್ ದಿನ ಸ್ಫೋಟ ಆಗುತ್ತೆ, ಯಾರನ್ಯಾರು ತಡೆಯೋಕಾಗಲ್ಲ.., ನನ್ನ ನೀವು ತಡೆಯೋಕಾಗಲ್ಲ, ನಿಮ್ಮನ್ನು ನಾವು ತಡೆಯೋಕಾಗಲ್ಲ ಎನ್ನುವ ಮೂಲಕ ಉರಿಯೋ ಬೆಂಕಿಗೆ ತುಪ್ಪ ಸುರಿದಿದ್ದು, ಅಮಿತ್ ಶಾ ಮಗ ಜಯ್ ಶಾ ಗೆ ಅಗ್ನಿಪಥ್ ಕೆಲಸಕ್ಕೆ ಹೋಗೋಕೆ ಹೇಳಿ ಎಂದು ಟಾಂಗ್ ನೀಡಿದ್ರು.


ಇದನ್ನೂ ಓದಿ: Explained: ಅಗ್ನಿಪಥ್‌ ಯೋಜನೆಯ ಲಾಭವೇನು? ಅಗ್ನಿವೀರರಿಗೆ ಏನೆಲ್ಲಾ ಸೌಲಭ್ಯಗಳು ಸಿಗುತ್ತವೆ?


ಪೋಲಿಸರ ಶಥ ಪ್ರಯತ್ನದಿಂದ ಅಗ್ನಿಪಥ ಕಿಚ್ಚು ಇಂದು ತಣ್ಣಗಾದಂತೆ ಕಂಡು ಬಂದ್ರು, ಒಳಗೊಳಗೆ ಮಾತ್ರ ಬೂದಿ ಮುಚ್ಚಿದ ಕೆಂಡದಂತಿದೆ.

Published by:Annappa Achari
First published: