ವಾರಂಗಲ್ ಮಾದರಿಯಲ್ಲೇ ನಡೆದೋಯ್ತು ಎನ್​ಕೌಂಟರ್; ಎರಡೂ ಪ್ರಕರಣದ ಹಿಂದಿದೆ ಕನ್ನಡಿಗ ವಿಶ್ವನಾಥ್ ಸಜ್ಜನವರ್ ಖದರ್!

ಇಂದು ಜನರ ಕೂಗಿನಂತೆ ಕೊನೆಗೂ ಪೊಲೀಸರು ವಾರಂಗಲ್ ಪ್ರಕರಣದ ಮಾದರಿಯಲ್ಲೇ ಪಶುವೈದ್ಯೆ ಆರೋಪಿಗಳನ್ನು ಎನ್​ಕೌಂಟರ್ ಮಾಡಿದ್ದಾರೆ. ಅನಾಮತ್ತಾಗಿ ನಾಲ್ಕೂ ಜನ ಆರೋಪಿಗಳನ್ನು ತಮ್ಮ ಗುಂಡಿಗೆ ಬಲಿ ತೆಗೆದುಕೊಂಡಿದ್ದಾರೆ. ಅಸಲಿಗೆ ಏನದು ವಾರಂಗಲ್ ಎನ್​ಕೌಂಟರ್​ ಪ್ರಕರಣ? ಇಲ್ಲಿದೆ ಮಾಹಿತಿ.

MAshok Kumar | news18-kannada
Updated:December 6, 2019, 11:12 AM IST
ವಾರಂಗಲ್ ಮಾದರಿಯಲ್ಲೇ ನಡೆದೋಯ್ತು ಎನ್​ಕೌಂಟರ್; ಎರಡೂ ಪ್ರಕರಣದ ಹಿಂದಿದೆ ಕನ್ನಡಿಗ ವಿಶ್ವನಾಥ್ ಸಜ್ಜನವರ್ ಖದರ್!
ಪೊಲೀಸ್ ಅಧಿಕಾರಿ ವಿಶ್ವನಾಥ್ ಸಜ್ಜನವರ್​ ಅತ್ಯಾಚಾರ ಆರೋಪಿಗಳ ಕುರಿತು ಪತ್ರಿಕಾಗೋಷ್ಠಿ ನಡೆಸುತ್ತಿರುವಾಗ ತೆಗೆದ ಚಿತ್ರ.
  • Share this:
ನಾಲ್ವರು ಲಾರಿ ಚಾಲಕರು ಕಳೆದ ವಾರ ತೆಲಂಗಾಣ ಪಶುವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಅಮಾನವೀಯವಾಗಿ ಆಕೆಯನ್ನು ಜೀವಂತ ಸುಟ್ಟು ಕೊಲೆ ಮಾಡಿದ್ದರು. ಈ ಘಟನೆ ರಾಷ್ಟ್ರದಾದ್ಯಂತ ದೊಡ್ಡ ಮಟ್ಟದ ಆಕ್ರೋಶಕ್ಕೆ ಕಾರಣವಾಗಿತ್ತು. ಮಹಿಳೆಯರು ಹಾಗೂ ಮಹಿಳಾ ಪರ ಸಂಘಟನೆಗಳು ಮತ್ತೊಮ್ಮೆ ಬೀದಿಗಿಳಿದು ಅತ್ಯಾಚಾರಿಗಳ ವಿರುದ್ಧ ದೊಡ್ಡ ಮಟ್ಟದ ಹೋರಾಟ ನಡೆಸಿದ್ದರು. ಅಲ್ಲದೆ, ಇಂತಹ ಅತ್ಯಾಚಾರಿಗಳಿಗೆ ಕ್ರೂರ ಶಿಕ್ಷೆಯನ್ನು ನೀಡಬೇಕು ಎಂದು ಒತ್ತಾಯಿಸಿದ್ದರು.

ಘಟನೆಯ ಕುರಿತು ದೇಶದಾದ್ಯಂತ ಅಲ್ಲಲ್ಲಿ ಪ್ರತಿನಿತ್ಯ ಜನಾಕ್ರೋಶ ವ್ಯಕ್ತವಾಗುತ್ತಲೇ ಇತ್ತು. ತನಿಖೆ ಆರಂಭಿಸಿದ ಹೈದರಾಬಾದ್ ಪೊಲೀಸರು ನಾಲ್ವರು ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿಯೂ ಸಹ ಯಶಸ್ವಿಯಾಗಿದ್ದರು. ಆದರೆ, ಇದೇ ಸಂದರ್ಭದಲ್ಲಿ ತೆಲಂಗಾಣದ ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲೊಂದು ಕೂಗೆಬ್ಬಿಸಿದ್ದರು. “ವಾರಂಗಲ್ ಪ್ರಕರಣದ ಮಾದರಿಯಲ್ಲಿ ಪಶುವೈದ್ಯೆ ಪ್ರಕರಣ ಆರೋಪಿಗಳನ್ನು ಎನ್​ಕೌಂಟರ್ ಮಾಡಿ” ಎಂದು ಪೊಲೀಸರನ್ನು ಸರ್ಕಾರವನ್ನೂ ತ್ತಾಯಿಸಿದ್ದರು.

ಕಳೆದ ಒಂದು ವಾರದಿಂದ ತೆಂಲಗಾಣ ಮತ್ತು ಆಂಧ್ರಪ್ರದೇಶದ ಸಾಮಾಜಿಕ ಜಾಲತಾಣಗಳಲ್ಲಿ ವಾರಂಗಲ್ ಪ್ರಕರಣ ಮತ್ತೊಮ್ಮೆ ದೊಡ್ಡ ಮಟ್ಟದ ಹೈಪ್ ಕ್ರಿಯೇಟ್ ಮಾಡಿತ್ತು. ಇದು ಸಾಮಾನ್ಯವಾಗಿ ಪೊಲೀಸರನ್ನೂ ಸಹ ಒತ್ತಡಕ್ಕೆ ದೂಡಿದ್ದು ಸುಳ್ಳಲ್ಲ. ಆದರೆ, ಇಂದು ಜನರ ಕೂಗಿನಂತೆ ಕೊನೆಗೂ ಪೊಲೀಸರು ವಾರಂಗಲ್ ಪ್ರಕರಣದ ಮಾದರಿಯಲ್ಲೇ ಪಶುವೈದ್ಯೆ ಆರೋಪಿಗಳನ್ನು ಎನ್​ಕೌಂಟರ್ ಮಾಡಿದ್ದಾರೆ. ಅನಾಮತ್ತಾಗಿ ನಾಲ್ಕೂ ಜನ ಆರೋಪಿಗಳನ್ನು ತಮ್ಮ ಗುಂಡಿಗೆ ಬಲಿ ತೆಗೆದುಕೊಂಡಿದ್ದಾರೆ. ಅಸಲಿಗೆ ಏನದು ವಾರಂಗಲ್ ಎನ್​ಕೌಂಟರ್​ ಪ್ರಕರಣ? ಇಲ್ಲಿದೆ ಮಾಹಿತಿ.

ಏನದು ವಾರಂಗಲ್ ಎನ್​ಕೌಂಟರ್ ಪ್ರಕರಣ?

2008ರಲ್ಲಿ ಅಂದಿನ ಅಖಂಡ ಆಂಧ್ರಪ್ರದೇಶವನ್ನು ತಲ್ಲಣಕ್ಕೆ ದೂಡಿದ್ದ ಪ್ರಕರಣ ಇದು. ಓದಿ ಸಮಾಜದಲ್ಲಿ ದೊಡ್ಡವರಾಗಬೇಕಿದ್ದ ಇಂಜಿಯರಿಂಗ್ ವಿದ್ಯಾರ್ಥಿಗಳು ಪ್ರೀತಿ ವಿಚಾರಕ್ಕೆ ಯುವತಿಯರ ಮುಖಕ್ಕೆ ಆಸಿಡ್ ಎರಚಿ ಕೊನೆಗೆ ಅನಾಮತ್ತು ಪೊಲೀಸರ ಗುಂಡಿಗೆ ಬಲಿಯಾಗಿದ್ದ ತೆಲುಗು ಜನ ಎಂದಿಗೂ ಮರೆಯಲಾಗದ ಕಹಿ ಘಟನೆ ಅದು.

ಅದು 2008 ಡಿಸೆಂಬರ್ 13. ವಾರಂಗಲ್ ಜಿಲ್ಲೆಯ ಕಾಕತೀಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದ ಸ್ವಪ್ನಿಕ ಮತ್ತು ಪ್ರಣೀತ ಎಂದಿನಂತೆ ಕಾಲೇಜು ಮುಗಿಸಿ ಬಸ್ಸಿಗಾಗಿ ಬಸ್ ನಿಲ್ದಾಣದಲ್ಲಿ ಕಾದು ನಿಂತಿದ್ದರು.

ಈ ವೇಳೆ ಅದೇ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳಾಗಿದ್ದ ಎಸ್. ಶ್ರೀನಿವಾಸ ರಾವ್ (25), ಪಿ. ಹರಿಕೃಷ್ಣ (24) ಹಾಗೂ ಬಿ. ಸಂಜಯ್ (22) ಬಸ್ ನಿಲ್ದಾಣಕ್ಕೆ ಆಗಮಿಸಿ ಯುವತಿಯರ ಜೊತೆಗೆ ಗಲಾಟೆ ಮಾಡಿದ್ದರು. ಅಲ್ಲದೆ, ತಾವು ತಂದಿದ್ದ ಆಸಿಡ್ ಅನ್ನು ಇಬ್ಬರೂ ಯುವತಿಯರ ಮುಖಕ್ಕೆ ಎರಚಿ ಪರಾರಿಯಾಗಿದ್ದರು.ಆಸಿಡ್ ದಾಳಿಯಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದ ಯುವತಿ ಸ್ವಪ್ನಿಕ ಚಿಕಿತ್ಸೆ ಫಲಕಾರಿಯಾಗದೆ ಕೊನೆಗೂ ಮೃತಪಟ್ಟಿದ್ದಳು. ತನಿಖೆಯ ವೇಳೆ ಬಾಯ್ಬಿಟ್ಟಿದ್ದ ಪ್ರಮುಖ ಆರೋಪಿ ಶ್ರೀನಿವಾಸ್ ರಾವ್ ಸ್ವಪ್ನಿಕ ತನ್ನ ಪ್ರೇಮ ನಿವೇದನೆಯನ್ನು ಒಪ್ಪಿಕೊಳ್ಳದ ಕಾರಣಕ್ಕೆ ಆಸಿಡ್ ದಾಳಿ ನಡೆಸಿದ್ದಾಗಿ ತಿಳಿಸಿದ್ದ.

ಈ ಪ್ರಕರಣ ಇಡೀ ದೇಶವನ್ನು ಬೆಚ್ಚಿ ಬೀಳಿಸಿತ್ತು. ಆಂಧ್ರಪ್ರದೇಶದ ಜನ ಬೀದಿಗಿಳಿದು ದೊಡ್ಡ ಮಟ್ಟದ ಹೋರಾಟ ನಡೆಸಿದ್ದರು. ಆರೋಪಿಗಳನ್ನು ಸಾರ್ವಜನಿಕವಾಗಿ ಗುಂಡಿಟ್ಟು ಕೊಲ್ಲುವಂತೆ ಆಗ್ರಹಿಸಿದ್ದರು. ಅಂದಿನ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿಗೆ ಈ ಪ್ರಕರಣ ದೊಡ್ಡ ತಲೆ ನೋವಾಗಿ ಪರಿಣಮಿಸಿತ್ತು.

ಕೊನೆಗೆ ಆಸಿಡ್ ದಾಳಿ ನಡೆದು ಒಂದು ವಾರದ ತರುವಾಯ ಸ್ಥಳ ಮಹಜರ್ ಹೆಸರಲ್ಲಿ ದಾಳಿ ನಡೆದ ಸ್ಥಳಕ್ಕೆ ಆರೋಪಿಗಳನ್ನು ಕರೆದೊಯ್ದಿದ್ದ ಪೊಲೀಸರು ಆತ್ಮರಕ್ಷಣೆಯ ಹೆಸರಲ್ಲಿ ಮೂವರು ಆರೋಪಿಗಳನ್ನು ಹೊಡೆದುರುಳಿಸಿದ್ದರು.

ಯುವರಿಯ ಮೇಲೆ ಆಸಿಡ್ ದಾಳಿ ನಡೆಸಿದ್ದ ಪಾತಕಿಗಳ ಎನ್ಕೌಂಟರ್​ಗೆ ಇಡೀ ರಾಜ್ಯ ಮತ್ತು ದೇಶ ಮೆಚ್ಚುಗೆ ಸೂಚಿಸಿತ್ತು. ಆತ್ಮರಕ್ಷಣೆ ಹೆಸರಿನಲ್ಲಿ ನಾಟಕವಾಡಿರುವ ಪೊಲೀಸರು ಯುವಕರನ್ನು ಉದ್ದೇಶಪೂರ್ವಕವಾಗಿ ಎನ್​ಕೌಂಟರ್ ಮಾಡಿದ್ದಾರೆ ಎಂದು ಮಾನವ ಹಕ್ಕು ಆಯೋಗ ನೇರವಾಗಿ ಆರೋಪಿಸಿತ್ತು.

ಆದರೆ, ಆಂಧ್ರಪ್ರದೇಶದ ಅಂದಿನ ಸಿಎಂ ದಿವಂಗತ ವೈ ಎಸ್. ರಾಜಶೇಖರ ರೆಡ್ಡಿ “ಮಹಿಳೆಯರ ರಕ್ಷಣೆ ತಮ್ಮ ಸರ್ಕಾರ ಹೊಣೆ” ಎಂದು ಬಹಿರಂಗ ಹೇಳಿಕೆ ನೀಡುವ ಮೂಲಕ ಈ ಎನ್​ಕೌಂಟರ್ ತನ್ನದೇ ತೀರ್ಮಾನ ಎಂಬುದನ್ನು ಪರೋಕ್ಷವಾಗಿ ತಿಳಿಸಿದ್ದರು. ಆ ಮೂಲಕ ಜನ ಮೆಚ್ಚುಗೆಗೆ ಪಾತ್ರರಾಗಿದ್ದರು. ಹೀಗಾಗಿ ಈ ಎನ್​ಕೌಂಟರ್ ಪ್ರಕರಣದ ಅಸಲಿಯತ್ತನ್ನು ತನಿಖೆ ಮಾಡುವುದಕ್ಕೆ ಮಾನವ ಹಕ್ಕು ಆಯೋಗವೂ ಮುಂದಾಗದಿದ್ದದ್ದು ಇಂದು ಇತಿಹಾಸ. ಆದರೆ, ಸರಿಯಾಗಿ ಒಂದು ದಶಕದ ನಂತರ ಹೈದರಾಬಾದ್​ ಎನ್​ಕೌಂಟರ್​ ಜೊತೆಗೆ ಇತಿಹಾಸ ಇಂದು ಮತ್ತೆ ಮರುಕಳಿಸಿದೆ. ಈ ಎರಡೂ ಪ್ರಕರಣದ ಹಿಂದಿರುವುದು ಕನ್ನಡಿಗನ ಖದರ್ .

ಜನರ ಕೂಗಿನಂತೆ ಕೊನೆಗೂ ವಾರಂಗಲ್ ಸ್ಟೈಲ್​ನಲ್ಲೇ ನಡೆದೋಯ್ತು ಮತ್ತೊಂದು ಎನ್​ಕೌಂಟರ್; ಎರಡೂ ಪ್ರಕರಣದ ಹಿಂದಿದೆ ಕನ್ನಡಿಗನ ಗನ್!

ತೆಲಂಗಾಣ ಪಶುವೈದ್ಯೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಗುಂಡಿಟ್ಟು ಕೊಂದಿರುವ ವಿಚಾರ ಇಂದು ಮುಂಜಾನೆಯಿಂದ ದೊಡ್ಡ ಮಟ್ಟದ ಸದ್ದು ಮಾಡುತ್ತಿದೆ. ಈ ಸುದ್ದಿಯ ಬೆನ್ನಿಗೆ ಸದ್ದು ಮಾಡುತ್ತಿರುವ ಮತ್ತೊಂದು ಹೆಸರು ಹುಬ್ಬಳ್ಳಿ ಮೂಲದ ಪೊಲೀಸ್ ಅಧಿಕಾರಿ ವಿಶ್ವನಾಥ್ ಸಜ್ಜನರ್.

ಹೌದು…ತೆಲಂಗಾಣ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಎಲ್ಲಾ ನಾಲ್ಕು ಜನ ಆರೋಪಿಗಳನ್ನು ಹೊಡೆದುರುಳಿಸಿರುವುದು ಸೈದರಾಬಾದ್ ಪೊಲೀಸ್ ಆಯುಕ್ತ ವಿಶ್ವನಾಥ್. ಕಾಮುಕರನ್ನು ಹೊಡೆದುರುಳಿಸಿರುವ ಅಧಿಕಾರಿ ನಮ್ಮದೇ ನಾಡಿನ ಕನ್ನಡಿಗ ಎಂಬುದು ಇದೀಗ ಎಲ್ಲಾ ಕನ್ನಡಿಗರಿಗೂ ಹೆಮ್ಮೆಯ ವಿಚಾರವಾಗಿ ಬದಲಾಗಿದೆ. ಆದರೆ, ಕನ್ನಡಿಗರಿಗೆ ತಿಳಿಯದ ಮತ್ತೊಂದು ವಿಚಾರ ಎಂದರೆ ವಾರಂಗಲ್​ನ ಆಸಿಡ್​ ಆರೋಪಿಗಳನ್ನು ಎನ್​ಕೌಂಟರ್ ಮಾಡಿದ್ದು ಸಹ ಇದೇ ವಿಶ್ವನಾಥ್ ಸಜ್ಜನರ್ ಎಂಬ ಖಡಕ್ ಪೊಲೀಸ್ ಅಧಿಕಾರಿ.

2008ರಲ್ಲಿ ವಾರಂಗಲ್​ನಲ್ಲಿ ಯುವತಿಯರ ಮೇಲೆ ಆಸಿಡ್ ದಾಳಿ ನಡೆದಿದ್ದಾಗ ಆ ಜಿಲ್ಲೆಯ ಎಸ್​ಪಿ(ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ)ಯಾಗಿ ಕಾರ್ಯನಿರ್ವಹಿಸಿದ್ದು ಇದೇ ಹುಬ್ಬಳ್ಳಿ ಮೂಲಕ ಕನ್ನಡಿಗ ವಿಶ್ವನಾಥ್ ಸಜ್ಜನರ್.  ಅಂದು ಆಸಿಡ್ ದಾಳಿ ನಡೆಸಿದ್ದ ಯುವಕರನ್ನು ಸ್ಥಳ ಮಹಜರ್ ಮಾಡಲು ಇವರ ನೇತೃತ್ವದಲ್ಲೇ ತೆರಳಲಾಗಿತ್ತು. ಆದರೆ, ಹೀಗೆ ಸ್ಥಳ ಮಹಜರ್ ಮಾಡಲು ತೆರಳಿದ್ದ ಯುವಕರು ಕೊನೆಗೆ ವಿಶ್ವನಾಥ್ ಅವರ ಗುಂಡಿಗೆ ಬಲಿಯಾಗಿದ್ದರು.

ಪಶುವೈದ್ಯೆ ಅತ್ಯಾಚಾರ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಅಲ್ಲಿನ ಜನ ಸಾಮಾಜಿಕ ಜಾಲತಾಣದಲ್ಲಿ ವಾರಂಗಲ್ ಪ್ರಕರಣವನ್ನು ಉಲ್ಲೇಖಿಸಿದ್ದರು. ಇದು ಕಾಕತಾಯವೋ ಅಥವಾ ಅಲ್ಲಿನ ಸರ್ಕಾರ ಉದ್ದೇಶಪೂರ್ವಕವಾಗಿಯೇ ಹೀಗೊಂದು ತೀರ್ಮಾನ ತೆಗೆದುಕೊಂಡಿತೋ ಗೊತ್ತಿಲ್ಲ. ಒಟ್ಟಾರೆ ಪ್ರಕರಣದ ವಿಚಾರಣೆಯನ್ನು ತೆಲಂಗಾಣ ಸರ್ಕಾರ ಎನ್​ಕೌಂಟರ್ ಸ್ಪೆಷಲಿಸ್ಟ್​  ಪೊಲೀಸ್ ಅಧಿಕಾರಿ ವಿಶ್ವನಾಥ್ ಸಜ್ಜನವರ್ ಜವಾಬ್ದಾರಿಗೆ ನೀಡಿತ್ತು.

ಕೊನೆಗೂ ಇಡೀ ದೇಶ ನಿರೀಕ್ಷಿಸಿದ್ದ ಮಹತ್ವದ ಕೆಲಸವನ್ನು ಕನ್ನಡಿದ ಅಧಿಕಾರಿ ವಿಶ್ವನಾಥ್ ಸಜ್ಜನವರ್ ಅನಿರೀಕ್ಷಿತವಾಗಿ ಮಾಡಿ ಮುಗಿಸಿದ್ದಾರೆ. ವಾರಂಗಲ್ ಮಾದರಿಯಲ್ಲೇ ಮತ್ತೊಂದು ಎನ್​ಕೌಂಟರ್​ ನಡೆಸುವ ಮೂಲಕ ಅತ್ಯಾಚಾರಿಗಳಿಗೆ ಖಡಕ್ ಎಚ್ಚರಿಕೆಯನ್ನು ರವಾನಿಸಿದ್ದಾರೆ.

ಇದನ್ನೂ ಓದಿ : ಪಶುವೈದ್ಯೆ ಅತ್ಯಾಚಾರ ಕೊಲೆ ಆರೋಪಿಗಳ ಎನ್​ಕೌಂಟರ್​; ಪೊಲೀಸರಿಗೆ ಧನ್ಯವಾದ ಅರ್ಪಿಸಿದ ಸಂತ್ರಸ್ತೆಯ ಕುಟುಂಬ
First published: December 6, 2019, 10:24 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading