ಹಲ್ಮಿಡಿ ಶಾಸನಕ್ಕಿಂತಲೂ ಶತಮಾನದ ಹಿಂದೆಯೇ ಇದ್ದ ಕನ್ನಡ ಶಾಸನ ತಾಳಗುಂದದಲ್ಲಿ ಪತ್ತೆ

ತಾಳಗುಂದದ ಶಾಸನವೇ ಕನ್ನಡದ ಮೊಟ್ಟ ಮೊದಲ ಶಾಸನ ಎಂದಾಗುತ್ತದೆ. ಇಂತಹ ಒಂದು ಅಂಶ ಭಾರತೀಯ ಪುರಾತತ್ವ ಇಲಾಖೆ ನಡೆಸಿದ ಉತ್ಖನನದಲ್ಲಿ ಗೋಚರವಾಗಿದೆ. ಈ ಮಾಹಿತಿಯನ್ನು ತನ್ನ ವೆಬ್ ಸೈಟ್ ನಲ್ಲಿ ಭಾರತೀಯ ಪುರಾತಾತ್ವ ಇಲಾಖೆ ಪ್ರಕಟಿಸಿದೆ.

ತಾಳಗುಂದಲ್ಲಿ ಪತ್ತೆಯಾದ ಶಾಸನ

ತಾಳಗುಂದಲ್ಲಿ ಪತ್ತೆಯಾದ ಶಾಸನ

  • Share this:
ಶಿವಮೊಗ್ಗ(ಜ.08): ಕನ್ನಡ ಭಾಷೆಯ ಪ್ರಥಮ ಶಾಸನ ಯಾವುದು ಎಂದು ಇವತ್ತಿಗೂ ಯಾರಿಗೆ ಪ್ರಶ್ನೆ ಮಾಡಿದರೂ ಮೊದಲು ಕೇಳಿ ಬರುವ ಹೆಸರು ಹಲ್ಮಿಡಿ ಶಾಸನ. ಅದರೆ, ಅದಕ್ಕಿಂತ ಹಳೆಯ ಪ್ರಾಚೀನ ಶಾಸನ ಸಹ ಇತ್ತು ಎಂಬುದು ಉತ್ಖನನದಿಂದ ಬೆಳಕಿಗೆ ಬಂದಿದೆ. ಭಾರತೀಯ ಪುರಾತತ್ವ ಇಲಾಖೆ ನಡೆಸಿದ ಉತ್ಖನನದಲ್ಲಿ ಕನ್ನಡ ಭಾಷೆಯ ಶಾಸನ ಕ್ರಿ.ಶ. 370 ರಿಂದ 450 ಮಧ್ಯಮ ಅವಧಿಯಲ್ಲೇ ಇತ್ತು ಎಂಬುದು ದೃಡಪಟ್ಟಿದೆ.

ಇತಿಹಾಸ ಮಾಹಿತಿಗಳ ಪ್ರಕಾರ ಕನ್ನಡದ ಮೊಟ್ಟ ಮೊದಲ ಶಾಸನ ಹಲ್ಮಿಡಿ ಶಾಸನವಾಗಿದೆ. ಅದು ಸರಿ ಸುಮಾರು ಕ್ರಿ.ಶ. 450 ಅವಧಿಯದ್ದು. ಇದನ್ನೇ ನಾವು ಕನ್ನಡದ ಮೊಟ್ಟ ಮೊದಲ ಶಾಸನ ಎಂದು ಇಲ್ಲಿಯವರೆಗೂ ಓದಿಕೊಂಡು ಬಂದಿದ್ದೇವೆ. ಅದರೆ ಈಗ ತಾಳಗುಂದದಲ್ಲಿ ಸಿಕ್ಕಿರುವ ಶಾಸನ ಕನ್ನಡದ ಇತಿಹಾಸವನ್ನು ಇನ್ನೂ ನೂರು ವರ್ಷಗಳ ಹಿಂದಕ್ಕೆ ತೆಗೆದುಕೊಂದು ಹೋಗುತ್ತದೆ. ಕ್ರಿ.ಶ. 370 ರಿಂದ 450 ಮಧ್ಯಮ ಅವಧಿಯಲ್ಲಿ ಈಗ ಸಿಕ್ಕಿರುವ ಶಾಸನ ರಚನೆಯಾಗಿದೆ ಎಂಬ ಅಂಶ ಬೆಳಕಿಗೆ ಬಂದಿದೆ.

ತಾಳಗುಂದದ ಶಾಸನವೇ ಕನ್ನಡದ ಮೊಟ್ಟ ಮೊದಲ ಶಾಸನ ಎಂದಾಗುತ್ತದೆ. ಇಂತಹ ಒಂದು ಅಂಶ ಭಾರತೀಯ ಪುರಾತತ್ವ ಇಲಾಖೆ ನಡೆಸಿದ ಉತ್ಖನನದಲ್ಲಿ ಗೋಚರವಾಗಿದೆ. ಈ ಮಾಹಿತಿಯನ್ನು ತನ್ನ ವೆಬ್ ಸೈಟ್ ನಲ್ಲಿ ಭಾರತೀಯ ಪುರಾತಾತ್ವ ಇಲಾಖೆ ಪ್ರಕಟಿಸಿದೆ.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ತಾಳಗುಂದ ಗ್ರಾಮ ಹಲವು ಇತಿಹಾಸದ ವಿಷಯಗಳಿಗಾಗಿ ಈಗ ಬಹಳ ಪ್ರಚಲಿತದಲ್ಲಿರುವ ಹೆಸರು. ತಾಳಗುಂದದ ಸ್ತಂಭ ಶಾಸನ ಕನ್ನಡ ನಾಡನ್ನು ಆಳಿದ ಪ್ರಥಮ ಕನ್ನಡಿಗ ಅರಸನ ಮಾಹಿತಿ ನೀಡುತ್ತದೆ. ಕದಂಬ ಸಂಸ್ಥಾನ ಕನ್ನಡದ ಮೊದಲ ರಾಜಮನೆತನವಾಗಿದೆ. ಅದರ ಪ್ರಥಮ ರಾಜ ಮಯೂರವರ್ಮ ನಮ್ಮ ಕನ್ನಡ ನಾಡಿನ ಮೊದಲ ಅರಸ. ಅಂತಹ ಸಾಮ್ರಾಜ್ಯದಲ್ಲಿ ಇದ್ದ, ತಾಳಗುಂದ ಗ್ರಾಮದಲ್ಲಿ ಕನ್ನಡ ಭಾಷೆಯ, ರಾಜರ ಬಗ್ಗೆ ಹಲವು ಕುರುವುಗಳು ಸಹ ಈಗ ಸಿಕ್ಕಿವೆ. ತಾಳಗುಂದ ಒಂದು ಕಾಲದಲ್ಲಿ ಕದಂಬರ ಪ್ರಮುಖ ಕೇಂದ್ರವಾಗಿತ್ತು. ಇಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, ಸಾವಿರಾರೂ ಜನ ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆಯಲು ಆಗಮಿಸುತ್ತಿದ್ದರು ಎಂದು ಇತಿಹಾಸ ಹೇಳುತ್ತದೆ. ಅಂತಹ ತಾಳಗುಂದದಲ್ಲಿ ಈಗ ಮತ್ತೊಂದು ಇತಿಹಾಸದ ಪುಟ ತೆರೆದುಕೊಂಡಿದೆ.

talagunda
ತಾಳಗುಂದಲ್ಲಿ ಪತ್ತೆಯಾದ ಶಾಸನವನ್ನು ವೀಕ್ಷಿಸುತ್ತಿರುವ ಅಧಿಕಾರಿಗಳು


2013 ಮತ್ತು 2014 ರಲ್ಲಿ ಎರಡು ಬಾರಿ ಭಾರತೀಯ ಪುರತಾತ್ವ ಇಲಾಖೆಯ ಸಂಶೋಧಕರು ಇಲ್ಲಿ ಉತ್ಖನನ ನಡೆಸಿದ್ದಾರೆ. ಮೊದಲ ಬಾರಿ ತಾಳಗುಂದದಲ್ಲಿರುವ ಪ್ರಣವಲಿಂಗೇಶ್ವರ ದೇವಸ್ಥಾನದ ಈಶಾನ್ಯ ಭಾಗದಲ್ಲಿ ಉತ್ಖನನ ನಡೆಸಿದ ಸಮಯದಲ್ಲಿ 2 ಜೊತೆ ತಾಮ್ರದ  ಶಾಸನ, 4 ಗ್ರಾಂನ 13 ಚಿನ್ನದ ನಾಣ್ಯಗಳು ಸಿಕ್ಕಿವೆ. ಈ ನಾಣ್ಯಗಳು ಕ್ರಿ. ಶ 605 ರಿಂದ 635 ರವರೆಗೆ ತಾಳಗುಂದವನ್ನು ಆಳಿದ ಭೂವಿಕ್ರಮನರು ಎಂದು ಗುರುತಿಸಲಾಗಿದೆ. ನಾಣ್ಯಗಳಲ್ಲಿ ಆನೆ ಮತ್ತು ಗಂಗರಸರ ಚಿತ್ರಗಳು ಕಾಣಸಿಗುತ್ತವೆ. ತಾಮ್ರದ ಶಾಸನವು ಕ್ರಿ.ಶ 1180 ರ ಕಳಚೂರಿ ಸಂಕಮನದು ಎಂದು ತಿಳಿದಿದೆ. ನಾಲ್ಕು  ವರ್ಷಗಳ ಹಿಂದೆ ಪತ್ತೆಯಾದ ತಾಳಗುಂದ ಶಾಸನ ಕನ್ನಡದ ಅತ್ಯಂತ ಪ್ರಾಚೀನ ಶಾಸನ ಎಂದು ಪುರಾತತ್ವ ಇಲಾಖೆ ಅಧಿಕೃತವಾಗಿ ಪ್ರಕಟಿಸಿದೆ.

ಕ್ರಿ.ಶ.345 ರಲ್ಲಿ ಮಯೂರ ವರ್ಮ ಕದಂಬ ಸಾಮ್ರಾಜ್ಯ ಸ್ಥಾಪಿಸಿದ್ದು, ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿ ಕದಂಬರ ರಾಜಧಾನಿ. ಮಯೂರ ವರ್ಮ ಮೃತಪಟ್ಟ ನಂತರ ಕಂಗವರ್ಮ, ಭಗೀರಥ ವರ್ಮ, ರಘುಪತಿ ವರ್ಮ ಆಳ್ವಿಕೆ ನಡೆಸಿದ್ದರು. ಕ್ರಿ. ಶ 425 ರಿಂದ 455 ರವರೆಗೆ ಕಾಕುತ್ಸವರ್ಮ ಅಧಿಕಾರ ನಡೆಸಿದ್ದು, ಕ್ರಿ. ಶ 450 ರಲ್ಲಿ ಹಲ್ಮಿಡಿ ಶಾಸನ  ರಚನೆಯಾಗಿತ್ತು. ಈಗ ಅದಕ್ಕಿಂತಲೂ ಮೊದಲೇ ಕನ್ನಡ ಶಾಸನ ಇತ್ತು ಎಂಬುದು ಈ ಉತ್ಖನನದಿಂದ ತಿಳಿದು ಬಂದಿದೆ. ಉತ್ಖನನದಲ್ಲಿ ಕಲ್ಲಿನ ಶಾಸನದ ಜೊತೆಗೆ ಈಗ ಪತ್ತೆಯಾಗಿರುವ ಮುಖ ಮಂಟಪದ ಬಳಿಯ ಸಿಂಹ ಖಟಾಂಜನವು ಇತಿಹಾಸ ಅಧ್ಯಯನದ ಬಹುಮುಖ್ಯ ಭಾಗ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ : ಬಿಜೆಪಿ ಶಾಸಕರು ಹುಲಿಗಳಿದ್ದ ಹಾಗೆ; ಅವರನ್ನು ಮುಟ್ಟುವ ಧೈರ್ಯ ಯಾರಿಗೂ ಇಲ್ಲ: ಸಚಿವ ಈಶ್ವರಪ್ಪ

ಈ ಹಿಂದೆ ಇದ್ದ  ಭಾರತೀಯ ಪುರಾತತ್ವ ಇಲಾಖೆಯ ರಾಜ್ಯ ಅಧೀಕ್ಷಕ ಡಾ. ನಂಬಿರಾಜನ್ ಮಾರ್ಗದರ್ಶನದಲ್ಲಿ ಉಪನಿರೀಕ್ಷಕ ಕೇಶವ್ ಮತ್ತು ತಂಡ ನಡೆಸಿದೆ. ತಾಳಗುಂದದಲ್ಲಿ ದೊರೆತಿರುವ ಈ ಶಾಸನ ವಜಿನಾಗ ಎಂಬ ಅಂಬಿಗನಿಗೆ ಕುರಿತ ಮಾಹಿತಿ ನೀಡುತ್ತದೆ. ಇತನಿಗೆ ಭೂಮಿಯನ್ನು ಇನಾಮು ನೀಡಿದ ಬಗ್ಗೆ ಇದರಲ್ಲಿ ಮಾಹಿತಿ ಇದೆ. ತುಂಡರಿಸಿರುವ ಈ ಶಾಸನದಲ್ಲಿ 7 ಸಾಲುಗಳಿದ್ದು, ಇದರಲ್ಲಿ ಕನ್ನಡ ಮತ್ತು ಸಂಸ್ಕೃತ ಪದಗಳ ಬಳಕೆ ಮಾಡಲಾಗಿದೆ.

ಇಂತಹ ಅಮೂಲ್ಯವಾದ ಶಾಸನ ಸಿಕ್ಕಿ ನಾಲ್ಕು ವರ್ಷಗಳು ಕಳೆಯುತ್ತಾ ಬಂದರು ರಾಜ್ಯ ಸರ್ಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಣ್ಣುಚ್ಚಿ ಕುಳಿತಿವೆ. ಇದರ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಿ, ಅದರ ಬಗ್ಗೆ ನಾಡಿನ ಜನರಿಗೆ ಹೆಚ್ಚಿನ ಮಾಹಿತಿ ಕೊಡುವ ಕೆಲಸ ಆಗಬೇಕಿದೆ.

 
Published by:G Hareeshkumar
First published: