ಬೆಂಗಳೂರಿನ ಮತ್ತೊಬ್ಬರಲ್ಲಿ ರೂಪಾಂತರಿ ಕೊರೋನಾ‌ ಪತ್ತೆ: 11ಕ್ಕೆ ಏರಿದ ಬ್ರಿಟನ್ ಸೋಂಕಿತರ ಸಂಖ್ಯೆ

ಸದ್ಯ ಬೆಂಗಳೂರಿನಲ್ಲಿ 7 ಹಾಗೂ ಶಿವಮೊಗ್ಗದಲ್ಲಿ 4 ಸೇರಿದಂತೆ ಒಟ್ಟು ರಾಜ್ಯದಲ್ಲಿ 11 ಮಂದಿಗೆ ಬ್ರಿಟನ್ ವೈರಸ್ ತಗುಲಿರುವುದು ದೃಢವಾಗಿದೆ. ಇನ್ನು ಈಗಾಗಲೇ ವ್ಯಾಕ್ಸಿನ್ ಹಂಚಿಕೆಗೂ ಸಿದ್ದತೆಗಳು ನಡೆಯುತ್ತಿದೆ. ಮಹಾಮಾರಿ ಕೊರೋನಾಗೆ ಔಷಧಿ ಜನರಿಗೆ ಸಿಗುವ ಕಾಲ ಸನಿಹದಲ್ಲಿದೆ ಎಂದು ಆಶಿಸಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬೆಂಗಳೂರು; ನಗರದಲ್ಲಿ ರೂಪಾಂತರಿ ಕೊರೋನಾ ಮೆಲ್ಲನೆ ತನ್ನ ಆಧಿಪತ್ಯ ಶುರುವಾದಂತಿದೆ. ಈಗ ಮತ್ತೊಂದು ಬ್ರಿಟನ್ ವೈರಸ್ ಪ್ರಕರಣ ಪತ್ತೆಯಾಗಿದೆ. ಹೀಗಾಗಿ ಮತ್ತೊಂದು ಸುತ್ತಿನ ಆತಂಕದ ಸುಳಿಯಲ್ಲಿದೆ ಸಿಲಿಕಾನ್ ಸಿಟಿ.‌ ಇನ್ನೇನು ಕೊರೋನಾ ಮುಗಿದೇ ಹೋಯ್ತು ಅನ್ನೋವಷ್ಟರಲ್ಲಿ ಕೊರೋನಾ ತನ್ನ ರೂಪ ಬದಲಿಸಿಕೊಂಡು ರಾಜ್ಯಕ್ಕೆ ಕಾಲಿಟ್ಟು ಬಿಟ್ಟಿತ್ತು. ಬ್ರಿಟನ್ ನಿಂದ ಬಂದವರಲ್ಲಿ ಅಲ್ಲಿನ ಹೊಸ ಕೊರೋನಾ ಕಾಣಿಸಿಕೊಂಡಿದ್ದು, ಈಗ ರಾಜ್ಯದಲ್ಲೂ ಈ ರೂಪಾಂತರಿ ಕೊರೋನಾ ಮೆಲ್ಲನೆ ತನ್ನ ಹಿಡಿತ ಸಾಧಿಸಿಕೊಳ್ಳೋಕೆ ಮುಂದಾದಂತಿದೆ. ಈಗ ಮತ್ತೊಬ್ಬರಲ್ಲಿ ಬ್ರಿಟನ್ ವೈರಸ್ ಕಾಣಿಸಿಕೊಂಡಿದ್ದು, ಮತ್ತಷ್ಟು ಆತಂಕ ಸೃಷ್ಟಿಯಾಗಿದೆ. ಇದೂ ಸೇರಿದಂತೆ ಸದ್ಯ ರಾಜ್ಯದಲ್ಲಿ 11 ಮಂದಿಗೆ ರೂಪಾಂತರಿ ಕೊರೋನಾ ಇರೋದು ಖಚಿತವಾಗಿದೆ.

  ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ನಿವಾಸಿ ಒಬ್ಬರಲ್ಲಿ ನ್ಯೂ ಕೊರೋನಾ ಕಾಣಿಸಿಕೊಂಡಿದೆ. ಆದರೆ ಇದು ಪ್ರಾಥಮಿಕ ಸಂಪರ್ಕದಿಂದ ತಗುಲಿರುವ ಕೊರೋನಾ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದಲ್ಲಿನ 10 ಪ್ರಕರಣಗಳ ಪೈಕಿ 6 ಬೆಂಗಳೂರಿನಲ್ಲಿ ಹಾಗೂ 4 ಶಿವಮೊಗ್ಗದಲ್ಲಿ ಪತ್ತೆಯಾಗಿತ್ತು. ಆದರೆ ಈಗ 11ನೇ ಕೇಸ್ ಕಾಣಿಸಿಕೊಂಡಿದ್ದು, ಈ ವ್ಯಕ್ತಿಗೆ ಶಿವಮೊಗ್ಗ ಮೂಲದ ವ್ಯಕ್ತಿಯಿಂದ ಹರಡಿದೆ. ಶಿವಮೊಗ್ಗದಲ್ಲಿ ಪತ್ತೆಯಾಗಿದ್ದ 4 ಪ್ರಕರಣಗಳಲ್ಲಿನ ಒಬ್ಬ ಸೋಂಕಿತನ ಜೊತೆಗೆ ಈತನಿಗೆ ಸಂಪರ್ಕವಿತ್ತು. ಹೀಗಾಗಿ ಪ್ರಾಥಮಿಕ ಸಂಪರ್ಕದಿಂದ ಈಗ ಈತನಿಗೆ‌ ಕೊರೋನಾ ಬಂದಿದೆ ಎಂದು  ದೃಢವಾಗಿದೆ. ಈ ಹಿನ್ನೆಲೆ ತಕ್ಷಣ ಬಿಬಿಎಂಪಿ ಸಿಬ್ಬಂದಿಗಳು ಸೋಂಕಿತನ ಮನೆಗೆ ತೆರಳಿ ಪ್ರಾಥಮಿಕವಾಗಿ ಸ್ಯಾನಿಟೈಸಿಂಗ್ ಹಾಗೂ ಇತರೆ ಸುರಕ್ಷತ ಕ್ರಮಗಳನ್ನು ಕೈಗೊಂಡಿದ್ದಾರೆ.

  ಇದನ್ನು ಓದಿ: ಶಾಲಾ-ಕಾಲೇಜುಗಳಲ್ಲಿ ಉತ್ತಮ ಹಾಜರಾತಿ; ಶಿಕ್ಷಣ ಸಚಿವ ಸುರೇಶ್ ಕುಮಾರ್

  ಇನ್ನು ಬ್ರಿಟನ್ ನಿಂದ ಬಂದವರಲ್ಲಿ 114 ಮಂದಿ ನಾಪತ್ತೆಯಾಗಿದ್ದಾರೆ. ಇವರನ್ನು ಪತ್ತೆ ಮಾಡಲು ಬಿಬಿಎಂಪಿ ಹಾಗೂ ಇದಕ್ಕೆ ಸಂಬಂಧಪಟ್ಟ ಇಲಾಖೆಗಳು ಹರಸಾಹಸ ಪಡುತ್ತಿದೆ. ಈ ಬಗ್ಗೆ ಮಾದ್ಯಮಗಳಿಗೆ ಮಾಹಿತಿ ಕೊಟ್ಟಿರುವ ವಿಶೇಷ ಆಯುಕ್ತ ರಾಜೇಂದ್ರ ಚೋಳನ್, ನಾಪತ್ತೆಯಾದವರನ್ನು ಪತ್ತೆ ಮಾಡಲು ಪೊಲೀಸ್ ಇಲಾಖೆ ಹಾಗೂ ಪಾಲಿಕೆ ಶ್ರಮ ವಹಿಸುತ್ತಿದೆ. ಅವರ ವಿಳಾಸ ಬೆಂಗಳೂರಿನದ್ದು, ಆದರೆ ಅವರ ಫೋನ್ ನಂಬರ್ ಬೇರೆ ಇದೆ. ಅವರು ಬೇರೆ ರಾಜ್ಯದವರಾಗಿರಬಹುದು ಎಂಬ ಅನುಮಾನ ಕೂಡ ಇದೆ. ಒಂದಿಷ್ಟು ಜನರ ಫೋನ್ ನಂಬರ್ ಅಮೇರಿಕಾದ್ದಾಗಿವೆ. ಪತ್ತೆ ಹಚ್ಚುವ ಕಾರ್ಯ ಮುಂದುವರೆದಿದೆ. ನಾಲ್ಕೈದು ದಿನಗಳಲ್ಲಿ ಅವರೆಲ್ಲಾ ಪತ್ತೆಯಾಗಲಿದ್ದಾರೆ. ಇದಕ್ಕಾಗಿ ವಲಯವಾರು ವಿಶೇಷ ತಂಡ ರಚನೆ ಮಾಡಿದ್ದೇವೆ ಅಂತ ಹೇಳಿದ್ದಾರೆ.

  ಈಗ ಹೊಸ ಪ್ರಕರಣ ಸೇರಿದಂತೆ ತಪ್ಪಿಸಿಕೊಂಡಿರುವ ಈ 114 ಮಂದಿಯಿಂದ ಬೆಂಗಳೂರು ಮತ್ತೊಂದು ಸುತ್ತಿಗೆ ಆತಂಕ ಪಡುವ ಹಾಗೆ ಆಗಿದೆ. ಸದ್ಯ ಬೆಂಗಳೂರಿನಲ್ಲಿ 7 ಹಾಗೂ ಶಿವಮೊಗ್ಗದಲ್ಲಿ 4 ಸೇರಿದಂತೆ ಒಟ್ಟು ರಾಜ್ಯದಲ್ಲಿ 11 ಮಂದಿಗೆ ಬ್ರಿಟನ್ ವೈರಸ್ ತಗುಲಿರುವುದು ದೃಢವಾಗಿದೆ. ಇನ್ನು ಈಗಾಗಲೇ ವ್ಯಾಕ್ಸಿನ್ ಹಂಚಿಕೆಗೂ ಸಿದ್ದತೆಗಳು ನಡೆಯುತ್ತಿದೆ. ಮಹಾಮಾರಿ ಕೊರೋನಾಗೆ ಔಷಧಿ ಜನರಿಗೆ ಸಿಗುವ ಕಾಲ ಸನಿಹದಲ್ಲಿದೆ ಎಂದು ಆಶಿಸಬಹುದು.

  ವರದಿ; ಆಶಿಕ್ ಮುಲ್ಕಿ
  Published by:HR Ramesh
  First published: