Mass Suicide| ಮಗಳನ್ನ ನೇಣಿಗೇರಿಸಿ ತಾಯಿಯೂ ಆತ್ಮಹತ್ಯೆಗೆ ಯತ್ನ; ರಾಜ್ಯದಲ್ಲಿ ಹೆಚ್ಚುತ್ತಿದೆ ಸಾಮೂಹಿಕ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ!

ರಾಜ್ಯದಲ್ಲಿ ಪ್ರತಿ 46 ನಿಮಿಷಕ್ಕೆ ಒಬ್ಬರಂತೆ ಆತ್ಮಹತ್ಯೆಗಳಾಗುತ್ತಿವೆ. 2015-2019ರ ನಡುವೆ ರಾಜ್ಯದಲ್ಲಿ 5 ವರ್ಷದಲ್ಲಿ 54,038 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಕೊರೋನಾ ಆಗಮನದ ಬಳಿಕ ಕುಟುಂಬ ಸಮೇತ ಆತ್ಮಹತ್ಯೆಗೆ ಶರಣಾಗುವುದೂ ಸೇರಿದಂತೆ ಪ್ರಾಣ ತೆಗೆದುಕೊಳ್ಳುವವರ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ ಎಂದು ತಿಳಿದುಬಂದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬೆಂಗಳೂರು (ಸೆಪ್ಟೆಂಬರ್​ 22); ಮನೆಯಲ್ಲಿ ಫ್ಯಾನಿಗೆ ಮಗಳನ್ನು ನೇಣು ಹಾಕಿ, ಅದೇ ಫ್ಯಾನಿನ ಕುಣಿಕೆಗೆ ತಾಯಿಯೂ ಕೊರಳೊಡ್ಡಿರುವ ಹೃದಯ ವಿದ್ರಾವಕ ಘಟನೆ ಬೆಂಗಳೂರಿನ ಹೊರ ವಲಯದ ರಾಜಾನುಕುಂಟೆ ಬಳಿಯ ದಿಬ್ಬೂರಿನಲ್ಲಿ ನಡೆದಿದೆ. ಘಟನೆಯಲ್ಲಿ 12 ವರ್ಷದ ಮಗಳು ದಿವ್ಯಶ್ರೀ ಸಾವನ್ನಪ್ಪಿದ್ದರೆ, 38 ವರ್ಷದ ತಾಯಿ ವರ ಮಹಾಲಕ್ಷ್ಮಿ ಜೀವಾಪಾಯದಿಂದ ಪಾರಾಗಿದ್ದಾರೆ. ಇಬ್ಬರು ಹೆಣ್ಣು ಮಕ್ಕಳ ತಾಯಿಯಾಗಿರೋ ವರಲಕ್ಷ್ಮಿ ನೇಣು ಹಾಕಿಕೊಳ್ಳುವ ಸಂದರ್ಭದಲ್ಲಿ ತಾಯಿ ಮತ್ತು ಅಕ್ಕ ನೇಣು ಕುಣಿಕೆಯಲ್ಲಿರೋದನ್ನ ನೋಡಿದ್ದ 8 ವರ್ಷದ ಮಗು ಜೋರಾಗಿ ಕಿರುಚುತ್ತಾ ಮನೆಯಿಂದ ಹೊರಗೆ ಓಡಿ ಬಂದಿದೆ. ಮಗು ಕಿರುಚಾಟ ಕಂಡ ಸ್ಥಳೀಯರು ಕೂಡಲೇ ಮನೆಗೆ ತೆರಳಿ ತಾಯಿಯನ್ನು ರಕ್ಷಣೆ ಮಾಡಿದ್ದಾರೆ. ಆದರೆ, ಅಷ್ಟರಲ್ಲಾಗಲೆ 12 ವರ್ಷದ ಮಗಳು ದಿವ್ಯಶ್ರೀ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

  ವರಲಕ್ಷ್ಮಿ ಅಂಗವಿಕಲೆಯಾಗಿದ್ದು, ಆಕೆಯ ಗಂಡ ತಿಮ್ಮರಾಜು ಇತ್ತೀಚಿಗೆ ಮಹಾಮಾರಿ ಕೊರೋನಾ ವೈರಸ್​ಗೆ ಬಲಿಯಾಗಿದ್ದ.  ಮಾಹಾಮಾರಿಗೆ ಬಲಿಯಾಗಿದ್ದರು. ಹೀಗಾಗಿ ಸಂಸಾರದ ಜೀವನ ನಿರ್ವಹಣೆಗೆ ಕಷ್ಟವಾಗಿತ್ತು. ಇದೇ ಕಾರಣಕ್ಕೆ ವರಲಕ್ಷ್ಮಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಬದುಕುಳಿದ ತಾಯಿ ವರಲಕ್ಷ್ಮೀಗೆ ಅಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  ಚಾಮರಾಜನಗರ ನಾಲ್ವರ ಸಾಮೂಹಿಕ ಆತ್ಮಹತ್ಯೆ ಪ್ರಕರಣ:

  ಕೊರೋನಾ ಕಾರಣಕ್ಕೆ ರಾಜ್ಯದಲ್ಲಿ ಸಾಮೂಹಿಕ ಆತ್ಮಹತ್ಯೆ ಪ್ರಕರಣಗಳು ದಾಖಲಾಗುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ 2021 ಜೂನ್. 02 ರಂದು ಚಾಮರಾಜನಗರದ ಹೆಚ್. ಮೂಕಹಳ್ಳಿಯಲ್ಲಿ ಕೊರೋನಾ ಕಾರಣಕ್ಕೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಒಂದೇ ಕುಟುಂಬದ ನಾಲ್ವರು ಸಾಮೂಹಿಕವಾಗಿ ಆತ್ಮಹತ್ಯೆಗೆ ಶರಣಾಗಿದ್ದರು. ಗ್ರಾಮದ ಮಹದೇವಸ್ವಾಮಿ (55) ಹಾಗು ಅವರ ಪತ್ನಿ ಮಂಗಳಮ್ಮ(40) ಮತ್ತು ಪುತ್ರಿಯರಾದ 16 ವರ್ಷದ ಗೀತಾ ಹಾಗು 11 ವರ್ಷದ ಶೃತಿ ಮನೆಯೊಳಗಿನ ತೊಲೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆ ರಾಜ್ಯದಾದ್ಯಂತ ಜನ ಬೆಚ್ಚಿಬಿದ್ದಿದ್ದರು.

  ದಾವಣಗೆರೆಯಲ್ಲಿ ಮೂವರು ಸಾಮೂಹಿಕ ಆತ್ಮಹತ್ಯೆ;

  ಇದರ ಬೆನ್ನಿಗೆ ಸೆ.20 ರಂದು ಕೊರೋನಾ ಆರ್ಥಿಕ ಮುಗ್ಗಟ್ಟಿನ ಕಾರಣಕ್ಕೆ ದಾವಣಗೆರೆಯಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾಗಿದ್ದರು. ವೃತ್ತಿಯಲ್ಲಿ ಚಾಲಕರಾದ ಕೃಷ್ಣ ನಾಯಕ್ ಕೆಲಸ ಕಳೆದುಕೊಂಡಿದ್ದರು. ಅಲ್ಲದೆ, ಅವರಿಗೆ ಟಿಬಿ ಖಾಯಿಲೆಯೂ ಇತ್ತು. ಹೀಗಾಗಿ ಕುಟುಂಬ ನಿರ್ವಹಣೆ ಕಷ್ಟವಾಗಿತ್ತು. ಇದೇ ಕಾರಣಕ್ಕೆ ಕೃಷ್ಣ ನಾಯಕ್ ಆತನ ಪತ್ನಿ ಸರಸ್ವತಿ ಮತ್ತು ಎಂಟು ವರ್ಷದ ಮಗು ಆತ್ಮಹತ್ಯೆಗೆ ಶರಣಾಗಿದ್ದರು.

  ಬೆಂಗಳೂರಿನಲ್ಲಿ ಐವರ ಆತ್ಮಹತ್ಯೆ

  ಮೇಲಿನ ಮೂರು ಪ್ರಕರಣಗಳು ಕೊರೋನಾ ಕಾರಣಕ್ಕೆ ಸಾಮೂಹಿಕ ಆತ್ಮಹತ್ಯೆಗೆ ಶರಣಾಗಿದ್ದರೆ, ಬೆಂಗಳೂರಿನ ಪ್ರಕರಣ ಕೌಟುಂಬಿಕ ಕಲಹದಿಂದಾಗಿ ಒಂದೇ ಕುಟುಂಬದ ನಾಲ್ಕು ಜನ ಆತ್ಮಹತ್ಯೆಗೆ ಶರಣಾಗಿದ್ದರೆ, 9 ತಿಂಗಳ ಮಗು ಅತ್ತು ಅತ್ತು ಹಸಿವಿನಿಂದ ಪ್ರಾಣ ಕಳೆದುಕೊಂಡಿತ್ತು. ಮೃತಪಟ್ಟವರನ್ನು ಭಾರತಿ (50), ಸಿಂಚನ (33), ಸಿಂಧೂರಾಣಿ (30), ಮಧುಸಾಗರ್​ (26) ಮತ್ತು ಒಂಭತ್ತು ತಿಂಗಳ ಮಗು ಎಂದು ಗುರುತಿಸಲಾಗಿತ್ತು.

  ಸೆ.17 ರಂದು ಬೆಳಕಿಗೆ ಬಂದ ಈ ಪ್ರಕರಣ ಇಡೀ ರಾಜ್ಯವನ್ನು ತಲ್ಲಣಕ್ಕೆ ದೂಡಿತ್ತು. ಅದರ ಬೆನ್ನಿಗೆ ಇಂದು ರಾಜಾನುಕುಂಟೆಯಲ್ಲೂ ಸಾಮೂಹಿಕ ಆತ್ಮಹತ್ಯೆ ಪ್ರಕರಣ ದಾಖಲಾಗಿರುವುದು ಜನರಲ್ಲಿ ಆತಂಕವನ್ನು ಹೆಚ್ಚಿಸಿದೆ.

  ರಾಜ್ಯದಲ್ಲಿ ಹೆಚ್ಚುತ್ತಿದೆ ಆತ್ಮಹತ್ಯೆಗಳ ಸಂಖ್ಯೆ:

  ರಾಜ್ಯದಲ್ಲಿ ಪ್ರತಿ 46 ನಿಮಿಷಕ್ಕೆ ಒಬ್ಬರಂತೆ ಆತ್ಮಹತ್ಯೆಗಳಾಗುತ್ತಿವೆ. 2015-2019ರ ನಡುವೆ ರಾಜ್ಯದಲ್ಲಿ 5 ವರ್ಷದಲ್ಲಿ 54,038 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಕೊರೋನಾ ಆಗಮನದ ಬಳಿಕ ಕುಟುಂಬ ಸಮೇತ ಆತ್ಮಹತ್ಯೆಗೆ ಶರಣಾಗುವುದೂ ಸೇರಿದಂತೆ ಪ್ರಾಣ ತೆಗೆದುಕೊಳ್ಳುವವರ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ ಎಂದು ತಿಳಿದುಬಂದಿದೆ.

  ರಾಷ್ಟ್ರೀಯ ಅಪರಾಧ ದಾಖಲೆಗಳ ದಳ(ಎನ್‌ಸಿಆರ್‌ಬಿ)ದ ವರದಿಯ ಪ್ರಕಾರ ಕರ್ನಾಟಕದಲ್ಲಿ ದಿನಕ್ಕೆ ಸರಾಸರಿ 31 ಮಂದಿ ಮಾನಸಿಕ ಖಿನ್ನತೆ, ಕೌಟುಂಬಿಕ ಸಮಸ್ಯೆ, ಪ್ರೇಮ ವೈಫಲ್ಯ ಸೇರಿದಂತೆ ನಾನಾ ನೆಪಗಳಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ದುರಂತದ ಸಂಗತಿಯೆಂದರೆ ಈ ಪೈಕಿ ಯುವ ಜನತೆಯೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.

  ಸಾಮೂಹಿಕ ಆತ್ಮಹತ್ಯೆಯೂ ಹೆಚ್ಚಳ;

  2019ರವರೆಗೆ ನೆರೆ ರಾಜ್ಯಗಳಲ್ಲಿ ವರದಿಯಾಗುತ್ತಿದ್ದ ಒಂದಿಡೀ ಕುಟುಂಬದ ಸಾಮೂಹಿಕ ಆತ್ಮಹತ್ಯೆ ಪ್ರಕರಣಗಳು ಪ್ರಸ್ತುತ ರಾಜ್ಯದಲ್ಲಿ ಕಾಣಲಾರಂಭಿಸಿದೆ. 2019ರಲ್ಲಿ ತಮಿಳುನಾಡಿನಲ್ಲಿ 16, ಆಂಧ್ರಪ್ರದೇಶದ 14, ಕೇರಳದ 11 ಕುಟುಂಬದ ಸದಸ್ಯರೆಲ್ಲರೂ ಆತ್ಮಹತ್ಯೆಗೆ ಶರಣಾದ ಉದಾಹರಣೆಗಳಾಗಿದ್ದವು. ಆದರೆ, ರಾಜ್ಯದಲ್ಲಿ ಕಳೆದೊಂದು ವರ್ಷದಿಂದ ಸೋಂಕಿನ ಭೀತಿ, ಲಾಕ್‌ಡೌನ್‌ ಹೊಡೆತದಂತಹ ಕೊರೊನಾ ಎಫೆಕ್ಟ್ಗೆ ಸಾಮೂಹಿಕವಾಗಿ ಕುಟುಂಬ ಸದಸ್ಯರೆಲ್ಲಆತ್ಮಹತ್ಯೆಗೀಡಾಗುತ್ತಿರುವ ಉದಾಹರಣೆಗಳು ಹೆಚ್ಚಾಗುತ್ತಿವೆ ಎನ್ನಲಾಗುತ್ತಿದೆ.

  ಇದನ್ನೂ ಓದಿ: Bengaluru Mass Suicide Case: ಇಂದು ಮನೆ ಮಹಜರು ಪ್ರಕ್ರಿಯೆ; ಮೃತರ ಮೊಬೈಲ್ ಚೆಕ್, ವಾಟ್ಸ್ಯಾಪ್​​ ಚಾಟ್ ಕೂಡ ಪರಿಶೀಲನೆ

  ಖಿನ್ನತೆಯೇ ಮುಖ್ಯ ಕಾರಣ

  ಬಹುತೇಕ ಆತ್ಮಹತ್ಯೆ ಪ್ರಕರಣಗಳಿಗೆ ಪ್ರಮುಖ ಕಾರಣ ಮಾನಸಿಕ ಖಿನ್ನತೆ. 5 ವರ್ಷಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ 54,038 ಜನರಲ್ಲಿ 40,481 ಪುರುಷರು, 15,551 ಮಹಿಳೆಯರಿದ್ದಾರೆ. ಮಾನಸಿಕ ಖಿನ್ನತೆಗೆ 13,990, ಕೌಟುಂಬಿಕ ಸಮಸ್ಯೆಗಳಿಗೆ 10,727, ದಿವಾಳಿತನದ ಆತಂಕದಲ್ಲಿ 5,987, ಮದುವೆ ವಿಚಾರಕ್ಕೆ 2,338, ಪರೀಕ್ಷೆಗಳಲ್ಲಿ ಅನುತ್ತೀರ್ಣ 1,298, ಪ್ರೀತಿ ವೈಪಲ್ಯ 1,791, ನಿರುದ್ಯೋಗ 1,782, ಭವಿಷ್ಯದ ಚಿಂತೆಯಲ್ಲಿ 1,106 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉಳಿದ ಆತ್ಮಹತ್ಯೆಗಳಿಗೆ ನಿಖರ ಕಾರಣಗಳೇ ತಿಳಿದುಬಂದಿಲ್ಲ. ಅಲ್ಲದೆ ಇವರಲ್ಲಿ 10,205 ರೈತರು, 9,323 ಸ್ವ-ಉದ್ಯೋಗಿಗಳು, 7,748 ಗೃಹಿಣಿಯರು ಎಂದು ಗುರುತಿಸಲಾಗಿದೆ.
  Published by:MAshok Kumar
  First published: