Uttara Kannada Flood: ಕೊಚ್ಚಿ ಹೋದ ಸೇತುವೆ; ದ್ವೀಪದಂತಾದ ಗ್ರಾಮಗಳು, ಜನರು ಕಂಗಾಲು

ನೆರೆ ಪ್ರವಾಹದ ಅಟ್ಟಹಾಸಕ್ಕೆ ನಲುಗಿದ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಗುಳ್ಳಾಪುರದ ಸೇತುವೆ ಕೊಚ್ಚಿ ಹೋಗಿ ಎಂಟು ಹತ್ತು ಊರುಗಳು ಸಂಪರ್ಕ ಕಳೆದುಕೊಂಡು  ದ್ವೀಪ ವಾಗಿದೆ.

ಸೇತುವೆ ಕೊಚ್ಚಿ ಹೋಗಿರುವ ದೃಶ್ಯ

ಸೇತುವೆ ಕೊಚ್ಚಿ ಹೋಗಿರುವ ದೃಶ್ಯ

  • Share this:
ಕಾರವಾರ (ಜು. 30): ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಗುಳ್ಳಾಪುರ ಗ್ರಾಮದಲ್ಲಿ ಹರಿಯುವ ಗಂಗಾವಳಿ ನದಿಗೆ ಅಡ್ಡಲಾಗಿ ಕಳೆದ 25 ವರ್ಷಗಳ ಹಿಂದೆ ಸೇತುವೆಯನ್ನ ನಿರ್ಮಿಸಿದ್ದು, ಇದು ಪಕ್ಕದ ಹತ್ತಾರು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುತ್ತಿತ್ತು. ಕಳೆದ ವರ್ಷದ ನೆರೆಯಲ್ಲಿ ಈ ಸೇತುವೆ ಸಂಪೂರ್ಣ ನೀರಿನಿಂದ ಮುಚ್ಚಿಹೋಗಿತ್ತಾದರೂ ಹೆಚ್ಚಿನ ಹಾನಿ‌ ಉಂಟಾಗಿರಲಿಲ್ಲ. ಆದರೆ ಈ ಬಾರಿಯ ಪ್ರವಾಹದಲ್ಲಿ ಸೇತುವೆ ಮುಚ್ಚಿ‌ ಹೆದ್ದಾರಿವರೆಗೂ ನೀರು ತುಂಬಿದ್ದು ನೀರಿನ ರಭಸಕ್ಕೆ ಸೇತುವೆಯ ಮಧ್ಯಭಾಗ ತುಂಡಾಗಿ ನೆಲಕಚ್ಚಿದೆ. ಇದರಿಂದಾಗಿ ಹತ್ತಾರು ಗ್ರಾಮಗಳ ಸಂಪರ್ಕ ಕೋಂಡಿಯೇ ಕಳಚಿಹೋದಂತಾಗಿದ್ದು ದಶಕಗಳ ಬಳಿಕ ಮತ್ತೆ ದೋಣಿ ಮೇಲೆ ಓಡಾಡಬೇಕಾದ ಪರಿಸ್ಥಿತಿ ಇಲ್ಲಿನ ಗ್ರಾಮಸ್ಥರದ್ದಾಗಿದೆ. ಹಿಂದೆದೂ ಕಂಡು ಕೇಳರಿಯದ ಮಟ್ಟಿಗೆ ಗಂಗಾವಳಿ ನದಿ ಏಕಾಏಕಿ ಉಕ್ಕಿ ಹರಿದಿದ್ದು ನೀರಿನ ರಭಸಕ್ಕೆ ಇಡೀ ಗ್ರಾಮವೇ ನಲುಗಿಹೋಗಿದೆ.

ಇನ್ನು ಈ ಸೇತುವೆ ನದಿ ಪಕ್ಕದ ಹಳವಳ್ಳಿ, ಡೋಂಗ್ರಿ, ಕಮ್ಮಾಣಿ ಸೇರಿದಂತೆ ಹತ್ತಾರು ಊರುಗಳಿಗೆ ಪ್ರಮುಖ ಸಂಪರ್ಕ ಕೊಂಡಿಯಾಗಿತ್ತು. ತಾಲ್ಲೂಕಿನ ಸುಂಕಸಾಳ ಹಾಗೂ ರಾಮನಗುಳಿ ಗ್ರಾಮಗಳ ಬಳಿ ಇದೇ ಗಂಗಾವಳಿ ನದಿಗೆ ಅಡ್ಡಲಾಗಿ ಎರಡು ತೂಗುಸೇತುವೆಗಳನ್ನ ನಿರ್ಮಾಣ ಮಾಡಲಾಗಿತ್ತು. ಆದ್ರೆ 2019ರಲ್ಲಿ ಉಂಟಾಗಿದ್ದ ನೆರೆ ಸಂದರ್ಭದಲ್ಲಿ ಎರಡೂ ತೂಗುಸೇತುವೆಗಳು ಕೊಚ್ಚಿಹೋಗಿದ್ದು ಇದೊಂದೇ ಸೇತುವೆ ಆಸರೆಯಾಗಿತ್ತು. ಆದ್ರೆ ಈ ಸೇತುವೆಯೂ ಇದೀಗ ಮುರಿದುಬಿದ್ದಿದ್ದು ಆದಷ್ಟು ಬೇಗ ಸೇತುವೆ ವ್ಯವಸ್ಥೆ ಮಾಡಿಕೊಡಬೇಕು ಅನ್ನೋದು ಗ್ರಾಮಸ್ಥರ ಆಗ್ರಹವಾಗಿದೆ.

ಇದ್ದ ಒಂದು ಸೇತುವೆಯೂ ಹೊಯ್ತು

ಗುಳ್ಳಾಪುರ ದಿಂದ ನದಿಯ ಆಚೆ ಭಾಗದಲ್ಲಿ ಇರುವ ಹಳವಳ್ಳಿ, ಕಲ್ಲೇಶ್ವರ, ಕಮ್ಮಾಣಿ ಹೀಗೆ ಹತ್ತು ಹಳ್ಳಿಗಳನ್ನ ಸಂಪರ್ಕಿಸುವ ಗುಳ್ಳಾಪುರ ಸೇತುವೆ ಮುರಿದು ಬಿದ್ದು  ಇದ್ದ ಒಂದು ಸೇತುವೆ ಈಗ ಕೊಚ್ಚಿ ಹೋಗಿ ಗ್ರಾಮಗಳು ದ್ವೀಪದಂತಾಗಿವೆ...ಇಲ್ಲಿನ ಜನ ಈಗ ಶಿಕ್ಷಣದಿಂದ ವಂಚಿತವಾಗಲಿದ್ದಾರೆ...ನದಿಯ ಆಚೆಯ ಜನರು ಗುಳ್ಳಾಪುರ ಮೂಲಕ ಯಲ್ಲಾಪುರ ತಾಲೂಕಿಗೆ ಕಾಲೇಜು ಮತ್ತಿತ್ತರ ಶಿಕ್ಷಣ ಮತ್ತು ಉದ್ಯೋಗಕ್ಕೆ ತೆರಳುವವರಿಗೆ ದೊಡ್ಡ ಹೊಡೆತ...ಮತ್ತೆ ಇಲ್ಲಿನ ಜನ 25ವರ್ಷದ ಹಿಂದಿನ ಸ್ಥಿತಿಗೆ ಹಿಂದುರಗಲಿದ್ದಾರೆ...‌ಅಂತ ಕೆಟ್ಟ ಸ್ಥಿತಿ ಪ್ರವಾಹ ತಂದೊಡ್ಡಿದೆ.

ಇದನ್ನು ಓದಿ: ಗಡಿ ಜಿಲ್ಲೆಗಳಲ್ಲಿ ಹೆಚ್ಚಾದ ಸೋಂಕು; ಅಧಿಕಾರಿಗಳೊಂದಿಗೆ ನಾಳೆ ಸಿಎಂ ಸಭೆ

ಈಡೇರತ್ತಾ ಸಿಎಂ ಭರವಸೆ?

ನೂತನ ಸಿಎಮ್ ಬಸವರಾಜ್ ಬೊಮ್ಮಾಯಿ ಉತ್ತರ ಕನ್ನಡ ಜಿಲ್ಲೆಯ ನೆರೆ ಪೀಡಿತ ಪ್ರದೇಶಕ್ಕೆ ಭೇಟಿ, ಹಾನಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸಂತ್ರಸ್ತರಿಗೆ ಸಾಂತ್ವಾನ ಹೇಳಿದ ಅವರು, ಹತ್ತು ಹಲವು ಪರಿಹಾರದ  ಭರವಸೆಯನ್ನು ನೀಡಿದ್ದಾರೆ. ಆದರೆ ಆ ಭರವಸೆಗಳನ್ನು ಈಡೇರಿಸುವುದೇ ದೊಡ್ಡ ಸವಾಲಾಗಿದೆ. ಸಂಪರ್ಕ ಸೇತುವೆಯನ್ನ ಮತ್ತೆ ನಿರ್ಮಾಣ ಮಾಡೋದು ಈಗ ಸುಲಭದ ಕೆಲಸ ಅಲ್ಲ ಸರಕಾರ ಎಷ್ಟೆ ಭರವಸೆ ಕೊಟ್ರು ಅದು ಇಡೆರುವುದು ಕಷ್ಟ ಸಾಧ್ಯ ಎನ್ನಲಾಗುತ್ತಿದೆ. ಆದರೂ ಸರ್ಕಾರ ಬೇಗ ಪರಿಹಾರ ನೀಡಲಿ ಎನ್ನುತ್ತಿದ್ದಾರೆ ಸಂತ್ರಸ್ತರು

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
Published by:Seema R
First published: