• Home
  • »
  • News
  • »
  • state
  • »
  • Anjanadri Betta: ಅಂಜನಾದ್ರಿಯೇ ಆಂಜನೇಯನ ಜನ್ಮ ಸ್ಥಳ, ಶೀಘ್ರವೇ ಸರ್ಕಾರದಿಂದ ಘೋಷಣೆ ಸಾಧ್ಯತೆ

Anjanadri Betta: ಅಂಜನಾದ್ರಿಯೇ ಆಂಜನೇಯನ ಜನ್ಮ ಸ್ಥಳ, ಶೀಘ್ರವೇ ಸರ್ಕಾರದಿಂದ ಘೋಷಣೆ ಸಾಧ್ಯತೆ

ಅಂಜನಾದ್ರಿ ಬೆಟ್ಟ

ಅಂಜನಾದ್ರಿ ಬೆಟ್ಟ

ಆಂಜನೇಯನ ಜನ್ಮ ಸ್ಥಳ ಅಂಜನಾದ್ರಿ ಎಂದು ಸದ್ಯದಲ್ಲೇ ಘೋಷಿಸಲಾಗುತ್ತೆ, ಆಗಮ ಶಾಸ್ತ್ರಿಗಳು, ಪಂಡಿತರ ಸಭೆಯ ನಡೆಸಿ ನಿರ್ಧಾರ ತಿಳಿಸೋದಾಗಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.

  • Share this:

ಕೊಪ್ಪಳ (ಫೆ.20) : ಜಗತ್ತಿನಾದ್ಯಂತ ಪೂಜೆ ಸಲ್ಲಿಸುವ ರಾಮಭಕ್ತ ಹನುಮನ (Hanuman)  ಜನ್ಮ ಸ್ಥಳದ ಬಗ್ಗೆ ಇತ್ತೀಚಿಗೆ  ಭಾರೀ ಚರ್ಚೆ. ಹನುಮಂತನ ಜನ್ಮಸ್ಥಳದ ಬಗ್ಗೆ ತಿರುಪತಿ ತಿರುಮಲ ದೇವಸ್ಥಾನ ಸಮಿತಿಯವರು (TTD) ವಿವಾದ (Controversy) ಹುಟ್ಟು ಹಾಕಿದ್ದಾರೆ. ಕಳೆದ ವರ್ಷ ಟಿಟಿಡಿಯು ಆಂಜನೇಯನ ಜನ್ಮ ಸ್ಥಳವು ತಿರುಪತಿಯಲ್ಲಿನ ಆಕಾಶ ಗಂಗಾ ಪ್ರದೇಶದ ಕಿಷ್ಕಂಧಾ ಎಂದು ಹೇಳಿ ವಿವಾದ ಹುಟ್ಟು ಹಾಕಿದೆ. ಈ ವಿವಾದಕ್ಕೆ ದಾಖಲೆ ಸಮೇತ ಉತ್ತರ ನೀಡಲು ಕೊಪ್ಪಳ (Koppala) ಜಿಲ್ಲಾಡಳಿತವು ಈಗ ಸಿದ್ದತೆ ನಡೆಸಿದೆ. ಈ ಭಾಗದಲ್ಲಿರುವ ಐತಿಹಾಸಿಕ, ಪೌರಾಣಿಕ ಹಾಗೂ ಧಾರ್ಮಿಕ ಪ್ರದೇಶಗಳ ಕುರುಹುಗಳ ಕುರಿತು ತಜ್ಞರ ವರದಿ ತಯಾರಿಸಿದ್ದು. ಕೆಲವೇ ದಿನಗಳಲ್ಲಿ ಮುಖ್ಯಮಂತ್ರಿಗಳು ಅಧಿಕೃತವಾಗಿ ಹನುಮ ಕರ್ನಾಟಕದಲ್ಲಿ ಹುಟ್ಟಿದ್ದಾನೆ ಎಂದು ಘೋಷಿಸಲು ಸಿದ್ದತೆ ನಡೆದಿದೆ. ಪುರಾತನ ಕಾಲದಿಂದಲೂ ಕೊಪ್ಪಳ ಜಿಲ್ಲೆಯ ಹನುಮನಳ್ಳಿಯ ಬಳಿಯಲ್ಲಿರುವ ಅಂಜನಾದ್ರಿ ಹಾಗು ಸಾಣಾಪುರ ಬಳಿಯಲ್ಲಿರುವ ಬಾಲಾಂಜನೇಯ ದೇವಸ್ಥಾನಗಳು ಆಂಜನೇಯನ ಜನ್ಮ ಸ್ಥಳ ವೆಂದು ನಂಬಿಕೊಂಡು ಬರಲಾಗಿದೆ.


ಆಂಜನೇಯ ಹುಟ್ಟಿದ್ದು ತಿರುಪತಿಯಲ್ಲಿ ಎಂದ ಟಿಟಿಡಿ


ಕಳೆದ ವರ್ಷ ತಿರುಪತಿ ತಿರುಮಲ ದೇವಸ್ಥಾನವು 16ನೇ  ಶತಮಾನದಲ್ಲಿ ದಾಖಲಾಗಿರುವ ಸಾಹಿತ್ಯವನ್ನು ಆದಾರವಾಗಿಟ್ಟುಕೊಂಡು ಆಂಜನೇಯ ಹುಟ್ಟಿದ್ದು ತಿರುಪತಿಯಲ್ಲಿ ಎಂದು ಹೇಳಿ ಅಲ್ಲಿ ಫೆಬ್ರುವರಿ 16 ರಂದು ಆಕಾಶ ಗಂಗಾ ಅಭಿವೃದ್ದಿ ಯೋಜನೆಗೆ ಚಾಲನೆ ನೀಡಿದೆ. ಈ ಬಗ್ಗೆ ಕೊಪ್ಪಳ ಜಿಲ್ಲಾಡಳಿತ ಹಾಗೂ ರಾಜ್ಯದ ಹನುಮನ ಭಕ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಭಾಗದ ಹಂಪಿಯಲ್ಲಿರುವ ಸೀತೆ ಸೆರಗು, ಕಿಷ್ಕಂದ ಹಾಗೂ ಪಂಪಾಸರೋವರ್ ಬಳಿಯಲ್ಲಿನ ಶಬರಿ ಗುಹೆ ಹೀಗೆ ಹಲವಾರು ಕುರುಹುಗಳನ್ನು ಈ ಪ್ರದೇಶ ಹೊಂದಿರುವದರಿಂದ ಇಲ್ಲಿಯೇ ಹನುಮ ಜನಿಸಿದ್ದಾನೆ ಎಂದು ಜನತೆ ಹೇಳುತ್ತಿದ್ದಾರೆ.


ಅಂಜನಾದ್ರಿಯೇ ಆಂಜನೇಯನ ಜನ್ಮ ಸ್ಥಳ


ಇವುಗಳ ಮಧ್ಯೆ ಕ್ರಿಸ್ತ ಪೂರ್ವ 5000 ವರ್ಷಗಳ ಹಿಂದಿನ ರಾಮಾಯಣದಲ್ಲಿಯೂ ಕಿಷ್ಕಂಧಾ ಕಾಂಡ ಹಾಗೂ ಸುಂದರ ಕಾಂಡದಲ್ಲಿ ಈ ಭಾಗದಲ್ಲಿರುವ ಕುರುಹುಗಳ ಹೊಲುವಂತೆ ಇದೇ ಭಾಗ ಕಿಷ್ಕಂಧಾ ಎಂದು ಹೇಳಿದೆ. ಅಲ್ಲದೆ ಬೇರೆ ಬೇರೆ ಸಾಹಿತ್ಯ, ಶಾಸನಗಳಲ್ಲಿಯೂ ಈ ಕುರಿತು ದಾಖಲಾಗಿದೆ. ಇಲ್ಲಿಯ ಇತಿಹಾಸ ತಜ್ಞರು ಸಹ ಕೊಪ್ಪಳ ಜಿಲ್ಲೆಯ ಅಂಜನಾದ್ರಿಯೇ ಆಂಜನೇಯನ ಜನ್ಮ ಸ್ಥಳ ಎಂದು ಹೇಳುತ್ತಿದ್ದಾರೆ. ಇಷ್ಟೆಲ್ಲಾ ದಾಖಲೆಗಳು ಇದ್ದರೂ ರಾಜ್ಯ ಸರಕಾರ ಟಿಟಿಡಿ ಆಂಜನೇಯನ ಜನ್ಮ ಸ್ಥಳ ಘೋಷಿಸಿದ್ದಕ್ಕೆ ಪ್ರತಿಕ್ರಿಯೆ ನೀಡಿಲ್ಲ.


ಇದನ್ನೂ ಓದಿ: Koppal: ಶಾಲೆಗೆ ಕೋಟಿ ಮೌಲ್ಯದ ಭೂಮಿ ದಾನ; ಮಕ್ಕಳಿಗೆ ಅಡುಗೆ ಮಾಡಿ ಜೀವನ ನಡೆಸ್ತಿರೋ ಮಹಾತಾಯಿಯ ಕಥೆ


ರಾಜ್ಯ ಸರಕಾರದಿಂದ ಅಧಿಕೃತ ಘೋಷಣೆಗೆ ಆಗ್ರಹ


ಅಧಿಕೃತವಾಗಿ ರಾಜ್ಯ ಸರಕಾರದಿಂದ ಘೋಷಣೆ ಮಾಡಬೇಕೆಂದು ಜನರು ಆಗ್ರಹಿಸಿದ್ದಾರೆ. ಒಂದು ವರ್ಷವಾದರೂ ರಾಜ್ಯ ಸರಕಾರ ಈ ಕುರಿತು ವಿಳಂಬ ಮಾಡಿರುವ ಬಗ್ಗೆಯೂ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಮಧ್ಯೆ ವಿಧಾನ ಪರಿಷತ್ ನಲ್ಲಿ ತುಂಗಭದ್ರಾ ನದಿಯ ದಡದಲ್ಲಿರುವ ಅಂಜನಾದ್ರಿ ಆಂಜನೇಯನ ಜನ್ಮ ಸ್ಥಳ ಕುರಿತು ವಿಧಾನ ಪರಿಷತ್ ಸದಸ್ಯರಾದ ಶಶಿಲ ನಮೋಶಿ ಹಾಗೂ ಪಿ ಎಚ್ ಪೂಜಾರ ಸಹ ಶೂನ್ಯ ವೇಳೆಯಲ್ಲಿ ಚರ್ಚಿಸಲು ಪ್ರಶ್ನೆ ಹಾಕಿದ್ದಾರೆ.


ಈ ನಿಟ್ಟಿನಲ್ಲಿ ಮುಜರಾಯಿ ಇಲಾಖೆಯು ಸಹ ಆಂಜನೇಯನ ಜನ್ಮ ಸ್ಥಳ ಕೊಪ್ಪಳ ಜಿಲ್ಲೆ ಎಂಬುವುದನ್ನು ದಾಖಲೆಗಳನ್ನು ಸಂಗ್ರಹಿಸಿ ಕಳುಹಿಸಲು ಕೊಪ್ಪಳ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ. ಇವುಗಳ ಮಧ್ಯೆ ಸಂಸದ ಸಂಗಣ್ಣ ಕರಡಿ ಸಹ ಜಿಲ್ಲೆಯ ಇತಿಹಾಸ ಸಂಶೋಧಕರ ಸಭೆಯ ನಡೆಸಿ ಅಧಿಕೃತ ಮಾಹಿತಿಯನ್ನು ನೀಡಿ, ಮುಖ್ಯಮಂತ್ರಿಗಳಿಂದ ಘೋಷಣೆ ಮಾಡಿಸಲು ವರದಿ ತಯಾರಿಸುತ್ತಿದ್ದಾರೆ ಎನ್ನಲಾಗಿದೆ.


ಇದನ್ನೂ ಓದಿ: PM Modi ಪತ್ನಿ ಭೇಟಿ ಬಳಿಕ ಎಲ್ಲವೂ ಬದಲಾಯ್ತು.. ಈಗ ಅಂಜನಾದ್ರಿಯೂ ಅಯೋಧ್ಯೆ ಮಾದರಿ ಆಗಲಿದೆಯಂತೆ


ಸರ್ಕಾರದಿಂದ ಶೀಘ್ರವೇ ಅಧಿಕೃತ ಘೋಷಣೆ


ಹೊಸಪೇಟೆಯಲ್ಲಿ ಪ್ರತಿಕ್ರಿಯಿಸಿದ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆರವರು ಆಂಜನೇಯನ ಜನ್ಮ ಸ್ಥಳ ಅಂಜನಾದ್ರಿ ಎಂದು ಘೋಷಿಸಲು ಆಗಮ ಶಾಸ್ತ್ರಿಗಳು, ಪಂಡಿತರ ಸಭೆಯ ನಡೆಸಿ ಮುಖ್ಯಮಂತ್ರಿಗಳಿಂದ ಘೋಷಣೆ ಮಾಡುತ್ತೇವೆ. ಅಂಜನಾದ್ರಿ ಅಭಿವೃದ್ದಿಗೆ ಸಿಎಂ ಘೋಷಣೆ ಮಾಡಿದಂತೆ ಅಭಿವೃದ್ದಿ ಕಾರ್ಯಗಳು ನಡೆಯುತ್ತವೆ ಎಂದರು.ಇದೇ ವೇಳೆ ಪ್ರತಿಕ್ರಿಯಿಸಿ ಪ್ರವಾಸೋದ್ಯಮ ಹಾಗು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಆನಂದಸಿಂಗ್ ಮೊದಲಿನಿಂದ ಹಂಪಿ ಸುತ್ತ ಮುತ್ತಲಿನ ಪ್ರದೇಶವೇ ಅಂಜನಾದ್ರಿಯಾಗಿದೆ.


ಟಿಟಿಡಿ ಹಾಗು ಆಂಧ್ರ ಸರಕಾರ ರಾಜಕೀಯಕ್ಕಾಗಿ ತಿರುಪತಿಯಲ್ಲಿ ಆಂಜನೇಯ ಹುಟ್ಟಿದ್ದಾನೆ ಎಂದು ಹೇಳುತ್ತಿದ್ದಾರೆ. ನಾನು ಸಹ ತಿರುಪತಿ ಭಕ್ತ ಆದರೆ ಅಲ್ಲಿ ಆಂಜನೇಯ ಹುಟ್ಟಿದ್ದಾನೆ ಎಂದು ಹೇಳುವದನ್ನು ಒಪ್ಪಿಕೊಳ್ಳುವುದಿಲ್ಲ. ರಾಜ್ಯ ಸರಕಾರದಿಂದ ಶೀಘ್ರ ಕೊಪ್ಪಳ ಜಿಲ್ಲೆಯೇ ಆಂಜನೇಯನ ಜನ್ಮ ಸ್ಥಳ ಎಂಬುವುದನ್ನು ಘೋಷಣೆ ಮಾಡಲಾಗುವುದು ಎಂದಿದ್ದಾರೆ.ಒಟ್ಟಿನಲ್ಲಿ ಈಗ ಆಂಜನೇಯನ ಜನ್ಮ ಸ್ಥಳದ ವಿವಾದಕ್ಕೆ ರಾಜ್ಯ ಸರಕಾರ ಅಧಿಕೃತವಾಗಿ ಘೋಷಣೆ ಮಾಡಿ ಟಿಟಿಡಿಗೆ ಠಕ್ಕರ್ ಕೊಡಬೇಕಾಗಿದೆ.

Published by:Pavana HS
First published: