HOME » NEWS » State » ANEKAL POLICE FIRING ON ACCUSED WHO INVOLVED IN LADY MURDER CASE LG

ಒಂಟಿ ಮನೆ ಗೃಹಿಣಿ ಕೊಲೆ ಕೇಸ್; ಇಬ್ಬರು ಆರೋಪಿಗಳ ಕಾಲಿಗೆ ಗುಂಡೇಟು

ಇದೇ ತಿಂಗಳು 10ನೇ ತಾರೀಖು ಸಂಜೆ ಸಮಯದಲ್ಲಿ ಆನೇಕಲ್ ತಾಲ್ಲೂಕಿನ ಸಿಂಗೇನಾ ಅಗ್ರಹಾರ ಗ್ರಾಮದ ವಾಸಿ ಶ್ವೇತಾ(32) ಎಂಬುವವರನ್ನು ಅವರದೇ ತೋಟದ ಮನೆಯಲ್ಲಿ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿ ಮಾಂಗಲ್ಯ ಸರ ಮತ್ತು ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.

news18-kannada
Updated:September 22, 2020, 1:33 PM IST
ಒಂಟಿ ಮನೆ ಗೃಹಿಣಿ ಕೊಲೆ ಕೇಸ್; ಇಬ್ಬರು ಆರೋಪಿಗಳ ಕಾಲಿಗೆ ಗುಂಡೇಟು
ಪ್ರಾತಿನಿಧಿಕ ಚಿತ್ರ
  • Share this:
ಆನೇಕಲ್(ಸೆ.22): ಬೆಳ್ಳಂ ಬೆಳಗ್ಗೆ ಪೊಲೀಸರ ಬಂದೂಕು ಸದ್ದು ಮಾಡಿದೆ. ಹೌದು, ಕೊಲೆ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳ ಕಾಲಿಗೆ ಹೆಬ್ಬಗೋಡಿ ಪೊಲೀಸರು ಗುಂಡು ಹೊಡೆದಿದ್ದಾರೆ. ಬಳಿಕ ಆರೋಪಿಗಳನ್ನು ಬಂಧಿಸಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಸುಣವಾರ ಸಮೀಪದ ಮುತ್ಯಾಲಮಡು ಬಳಿ ಇಂದು ಮುಂಜಾನೆ ನಸುಕಿನಲ್ಲಿ ನಡೆದಿದೆ. ವೇಲು ಅಲಿಯಾಸ್ ಸೈಕೋ ವೇಲು(23) ಮತ್ತು ಬಾಲಕೃಷ್ಣ ಅಲಿಯಾಸ್ ಬಾಲು ಪೊಲೀಸರಿಂದ ಗುಂಡೇಟು ತಿಂದ ಬಂಧಿತ ಆರೋಪಿಗಳು. ಖಚಿತ ಮಾಹಿತಿ ಮೇರೆಗೆ ಹೆಬ್ಬಗೋಡಿ ಠಾಣೆ ಇನ್ಸ್ಪೆಕ್ಟರ್ ಗೌತಮ್, ಬನ್ನೇರುಘಟ್ಟ ಸಬ್ ಇನ್ಸ್ಪೆಕ್ಟರ್ ಗೋವಿಂದ್ ಮತ್ತು ತಂಡ ಆರೋಪಿಗಳನ್ನು ವಶಕ್ಕೆ ಪಡೆಯಲು ಹೋದಾಗ ಪೊಲೀಸ್ ಪೇದೆ ಶಿವಕುಮಾರ್ ಎಂಬುವವರ ಮೇಲೆಯೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಇಬ್ಬರು ಆರೋಪಿಗಳಿಗೆ ಶರಣಾಗುವಂತೆ ಸೂಚಿಸಿದ್ದಾರೆ. ಆದರೆ ಆರೋಪಿಗಳು ಮಾತ್ರ ಇದ್ಯಾವುದನ್ನು ಲೆಕ್ಕಿಸದೆ ಪರಾರಿಯಾಗಲು ಮುಂದಾಗಿದ್ದಾರೆ.

ಈ ವೇಳೆ ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ ಅಧಿಕಾರಿಗಳು, ಆರೋಪಿಗಳ ಬಳಿಕ ಕಾಲಿಗೆ ಗುಂಡೇಟು ಹೊಡೆದಿದ್ದಾರೆ. ಕಾಲಿಗೆ ಗುಂಡೇಟು ಬೀಳುತ್ತಿದ್ದಂತೆ ಇಬ್ಬರು ಆರೋಪಿಗಳು ಕುಸಿದು ಬಿದ್ದಿದ್ದಾರೆ. ಕೂಡಲೇ ಸುತ್ತುವರಿದ ಪೊಲೀಸ್ ಅಧಿಕಾರಿಗಳು ಮತ್ತು ಇತರೆ ಸಿಬ್ಬಂದಿ ಆರೋಪಿಗಳನ್ನು ವಶಕ್ಕೆ ಪಡೆದು ಆನೇಕಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಹೆಚ್ವಿನ ಚಿಕಿತ್ಸೆಗೆ ಕೊಡಿಸಿದ್ದಾರೆ. ಜೊತೆಗೆ ಗಾಯಾಳು ಪೊಲೀಸ್ ಸಿಬ್ಬಂದಿಗೂ ಸಹ ಆನೇಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಿದ್ದಾರೆ.

ಏನಿದು ಘಟನೆ?

ಇದೇ ತಿಂಗಳು 10ನೇ ತಾರೀಖು ಸಂಜೆ ಸಮಯದಲ್ಲಿ ಆನೇಕಲ್ ತಾಲ್ಲೂಕಿನ ಸಿಂಗೇನಾ ಅಗ್ರಹಾರ ಗ್ರಾಮದ ವಾಸಿ ಶ್ವೇತಾ(32) ಎಂಬುವವರನ್ನು ಅವರದೇ ತೋಟದ ಮನೆಯಲ್ಲಿ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿ ಮಾಂಗಲ್ಯ ಸರ ಮತ್ತು ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಊರ ಹೊರವಲಯದ ಒಂಟಿ ಮನೆಯಲ್ಲಿ ಮೃತ ಮಹಿಳೆ ಒಬ್ಬಂಟಿಯಾಗಿರುವುದನ್ನು ಅಂದಾಜು ಮಾಡಿದ್ದ ದುಷ್ಕರ್ಮಿಗಳು ನಡು ಮನೆಯಲ್ಲಿಯೇ ಮಹಿಳೆಯ ಹೊಟ್ಟೆ, ಕುತ್ತಿಗೆ ಭಾಗಕ್ಕೆ ಚಾಕುವಿನಿಂದ ಇರಿದು ಆಕೆಯ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರ ಕಸಿಯುವುದರ ಜೊತೆಗೆ, ಮನೆಯೆಲ್ಲ ಜಾಲಾಡಿ ಸಿಕ್ಕ ಬೆಲೆ ಬಾಳುವ ವಸ್ತುಗಳನ್ನು ಕದ್ದೊಯ್ದಿದ್ದರು.

World Rose Day 2020: ಇಂದು ವಿಶ್ವ ಗುಲಾಬಿ ದಿನ; ಕ್ಯಾನ್ಸರ್​​ ರೋಗಿಗಳನ್ನು ನೋಡುವ ದೃಷ್ಟಿ ಬದಲಾಯಿಸಿಕೊಳ್ಳೋಣ..!

ಘಟನೆ ಸಂಬಂಧ ಸ್ಥಳಕ್ಕಾಗಮಿಸಿದ್ದ ಹಿರಿಯ ಪೊಲೀಸ್ ಅಧಿಕಾರಿಗಳು, ಶ್ವಾನದಳ ಪರಿಶೀಲನೆ ನಡೆಸಿದ್ದು, ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಜೊತೆಗೆ ಕೃತ್ಯವೆಸಗಿದ ದುಷ್ಕರ್ಮಿಗಳಿಗಾಗಿ ಐದು ತಂಡಗಳನ್ನು ರಚಿಸಲಾಗಿತ್ತು.  ತನಿಖೆ ಕೈಗೆತ್ತಿಕೊಂಡ ಪೊಲೀಸರು ಕೃತ್ಯ ನಡೆದ ಮನೆ ಸುತ್ತಮುತ್ತಲಿನ ಹಳ್ಳಿ, ರಸ್ತೆ ಸೇರಿದಂತೆ ಹಲವು ಕಡೆ ಶೋಧ ನಡೆಸಿದಾಗ ಸಮೀಪದ ಡಾಬಾವೊಂದರ ಬಳಿ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲಿ ಆರೋಪಿ ಸಾಗುತ್ತಿರುವ ದೃಶ್ಯಗಳು ಲಭ್ಯವಾಗಿತ್ತು. ಅವುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಆರೋಪಿಗಳ ಸುಳಿವು ದೊರೆತಿತ್ತು.

ಸಿಕ್ಕ ಸುಳಿವು ಆಧರಿಸಿ ತನಿಖೆ ತೀವ್ರಗೊಳಿಸಿದಾಗ ಆರೋಪಿಗಳು ಬನ್ನೇರುಘಟ್ಟ ಅರಣ್ಯಕ್ಕೆ ಹೊಂದಿಕೊಂಡಂತಿರುವ ಮುತ್ಯಾಲಮಡು ಬಳಿ ಇರುವಿಕೆ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಬೆಳ್ಳಂಬೆಳಗ್ಗೆ ಆರೋಪಿಗಳ ಸೆರೆಗೆ ಮುಂದಾದಾಗ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಹೆಬ್ಬಗೋಡಿ ಠಾಣೆ ಇನ್ಸ್ಪೆಕ್ಟರ್ ಗೌತಮ್ ಮತ್ತು ಬನ್ನೇರುಘಟ್ಟ ಠಾಣೆ ಸಬ್ ಇನ್ಸ್ಪೆಕ್ಟರ್ ಆರೋಪಿಗಳ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ ಚನ್ನಣ್ಣನವರ್ ತಿಳಿಸಿದ್ದಾರೆ.
Youtube Video

ಒಟ್ಟಿನಲ್ಲಿ ಕಳುವು ಮಾಡುವ ಸಲುವಾಗಿ ಒಬ್ಬಂಟಿಯಾಗಿದ್ದ ಮನೆ ಒಡತಿಯನ್ನು ಬರ್ಬರವಾಗಿ ಕೊಂದಿದ್ದ ಆರೋಪಿಗಳನ್ನು ಗುಂಡು ಹೊಡೆದು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವವರಿಗೆ ಖಡಕ್ ಸಂದೇಶ ರವಾನಿಸಿದ್ದಾರೆ. ಜೊತೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ಸಹ ಆರೋಪಿಗಳ ಬಂಧನ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಗಾಯಗೊಂಡಿದ್ದ ಸಿಬ್ಬಂದಿಯನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಜೊತೆಗೆ ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Published by: Latha CG
First published: September 22, 2020, 1:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories