‘ರಾಗಿ ಕಣಜ‘ ಖ್ಯಾತಿಯ ಆನೇಕಲ್​ನಲ್ಲಿ ಬರದ ಛಾಯೆ; ಮಳೆ ನಿರೀಕ್ಷೆಯಲ್ಲಿ ಅನ್ನದಾತ

ಆಗೊಮ್ಮೆ ಈಗೊಮ್ಮೆ ತುಂತುರು ಮಳೆಯಾಗುತ್ತಿದ್ದು, ಬಿತ್ತನೆಗೆ ಬೇಕಾದ ತೇವಾಂಶ ಭೂಮಿಯಲ್ಲಿ ಇಲ್ಲವಾಗಿದ್ದು,  ರೈತರು ಕಂಗಲಾಗಿದ್ದಾರೆ.

ರೈತ

ರೈತ

  • Share this:
ಆನೇಕಲ್(ಆ.18): ರಾಗಿ ಕಣಜ ಖ್ಯಾತಿಯ ಆನೇಕಲ್ ತಾಲ್ಲೂಕಿನಲ್ಲಿ ಸುರಿಯದ ವಾಡಿಕೆ ಪ್ರಮಾಣದಷ್ಟು ಮಳೆ. ಮಳೆಗಾಗಿ ಕಾದು ಕುಳಿತ ಅನ್ನದಾತ. ಹೌದು ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನಲ್ಲಿ ಉತ್ತಮ ಮಳೆ ನಿರೀಕ್ಷೆಯಲ್ಲಿದ್ದ ರೈತನಿಗೆ ಮಳೆ ಕೈ ಕೊಟ್ಟಿದೆ.  ಬಿತ್ತನೆ ಸಮಯಕ್ಕೆ ಉತ್ತಮ ಮಳೆ ಸುರಿಯಬಹುದು ಎಂದುಕೊಂಡಿದ್ದ ರೈತನ ನಿರೀಕ್ಷೆ ಹುಸಿಯಾಗಿದೆ. ಮಳೆ ಬರುವ ಭರವಸೆಯಲ್ಲಿ  ಬಿತ್ತನೆಗಾಗಿ ಜಮೀನು ಹದಗೊಳಿಸಿರುವ ರೈತ ಮಳೆ ನಿರೀಕ್ಷೆಯಲ್ಲಿದ್ದಾನೆ.   

ಹೌದು ಪ್ರತಿ ವರ್ಷ ಅಗಸ್ಟ್ ತಿಂಗಳು ಕೊನೆ ವಾರದ ಹೊತ್ತಿಗೆ ಆನೇಕಲ್ ತಾಲ್ಲೂಕಿನ ಬಹುತೇಕ ಎಲ್ಲಾ ರೈತರು ಬಿತ್ತನೆ ಚಟುವಟಿಕೆಗಳು ಮುಗಿಸುತ್ತಿದ್ದರು. ಆದ್ರೆ ಈ ವರ್ಷ ಆಗಸ್ಟ್ ಕೊನೆ ವಾರ ಸಮೀಪಿಸುತ್ತಿದ್ದರೂ ಅರ್ಧದಷ್ಟು ಪ್ರಮಾಣದಲ್ಲಿ ಬಿತ್ತನೆ ಕಾರ್ಯ ನಡೆದಿಲ್ಲ. ಪ್ರಾರಂಭದಲ್ಲಿ ಉತ್ತಮವಾಗಿ ಮಳೆ ಸುರಿದಿದ್ದರಿಂದ ರೈತರು ಸಂತಸಗೊಂಡಿದ್ದರು. ವರ್ಷವಿಡೀ ಉತ್ತಮ ಮಳೆಯಾಗುವ ಖುಷಿಯಲ್ಲಿ ಜಮೀನನ್ನು ಸಹ ಉಳಿಮೆ ಮಾಡಿ ಬಿತ್ತನೆಗೆ ಹದಗೊಳಿಸಿದ್ದರು. ಇನ್ನೇನು ಬಿತ್ತನೆ ಕಾರ್ಯ ಸಮೀಪಿಸುತ್ತಿದ್ದಂತೆ ಮಳೆ ಕೈ ಕೊಟ್ಟಿದೆ.

ಆಗೊಮ್ಮೆ ಈಗೊಮ್ಮೆ ತುಂತುರು ಮಳೆಯಾಗುತ್ತಿದ್ದು, ಬಿತ್ತನೆಗೆ ಬೇಕಾದ ತೇವಾಂಶ ಭೂಮಿಯಲ್ಲಿ ಇಲ್ಲವಾಗಿದ್ದು,  ರೈತರು ಕಂಗಲಾಗಿದ್ದಾರೆ. ಈಗಾಗಲೇ ಬಿತ್ತನೆ ಅವಧಿ ಮುಗಿಯುವ ಹಂತದಲ್ಲಿದ್ದು, ಈ ತಿಂಗಳ ಕೊನೆ ವಾರದೊಳಗೆ ಬಿತ್ತನೆ ಮಾಡಿದರೆ ಮಾತ್ರ ಫಸಲು ಬರುವ ಸಾಧ್ಯತೆ ಇದೆ. ಹಾಗಾಗಿ ತಾಲ್ಲೂಕಿನ ಉತ್ತಮ ಮಳೆ ನಿರೀಕ್ಷೆಯಲ್ಲಿರುವುದಾಗಿ ರೈತ ರೆಡ್ಡಿ ತಿಳಿಸಿದ್ದಾರೆ.

ಇದನ್ನೂ ಓದಿ:Karnataka Weather Today: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ; ರಾಜ್ಯದ 8 ಜಿಲ್ಲೆಗಳಲ್ಲಿ ಇಂದಿನಿಂದ ಭಾರೀ ಮಳೆ

ಇನ್ನೂ ಕಳೆದ ಹಲವು ವರ್ಷಗಳಿಂದ ವರುಣನ ಕಣ್ಣಾಮುಚ್ಚಾಲೆ ಆಟದಿಂದಾಗಿ ರಾಗಿ ಕಣಜ ಖ್ಯಾತಿಯ ಆನೇಕಲ್ ತಾಲ್ಲೂಕಿನಲ್ಲಿ ಬರ ರೈತರನ್ನು ಕಂಗೆಡಿಸಿದೆ. ಕಳೆದ ವರ್ಷ ಹಿಂಗಾರು ಮಳೆ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಸುರಿದಿದ್ದರಿಂದ ರಾಗಿ ಬೆಳೆ ಕಟಾವಿಗೆ ಅಡ್ಡಿಯಾಗಿ ಬೆಳೆ ಮಣ್ಣು ಪಾಲಾಗಿತ್ತು.  ಈ ವರ್ಷ ಉತ್ತಮ ಮಳೆ ನಿರೀಕ್ಷೆಯಲ್ಲಿದ್ದ ರೈತನಿಗೆ ಮಳೆ ಮತ್ತೆ ಬರೆ ಎಳೆದಿದೆ. ಉತ್ತಮ ಮಳೆಯಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ರೈತ ಕಂಗಾಲಾಗಿದ್ದಾನೆ.

ಇಷ್ಟೊತ್ತಿಗೆ ರಾಗಿ, ಅವರೆ, ಅಲಸಂದೆ ಬಿತ್ತನೆ ಮಾಡಬೇಕಿತ್ತು. ಆದ್ರೆ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಈಗ ಬಿತ್ತನೆ ಮಾಡಿದರೂ ತೇವಾಂಶವಿಲ್ಲದೆ ಬಿತ್ತನೆ ಬೀಜ ಮೊಳಕೆ ಬರುವುದಿಲ್ಲ. ಒಂದು ವೇಳೆ ಹಿಂಗಾರು ಉತ್ತಮ ಮಳೆಯಾದರೆ ಒಂದಷ್ಟು ಫಸಲು ಕೈಗೆ ಬರಬಹುದು. ಇಲ್ಲದಿದ್ದರೆ ಬಿತ್ತನೆ ಕಾಳು ಹಾಳಾಗುತ್ತದೆ. ಉತ್ತಮವಾಗಿ ಫಸಲು ಬಂದರೂ ರೈತ ಬೆಳೆದ ಬೆಳೆಗೆ ಸೂಕ್ತ ಬೆಲೆ ದೊರೆಯುವುದಿಲ್ಲಎಂದು ರೈತ ರಾಮಣ್ಣ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿದೆ

ಉತ್ತಮ ಮಳೆಯಾದ್ರೆ ಅತಿವೃಷ್ಠಿ, ಮಳೆಯಾಗದಿದ್ದರೆ ಅನಾವೃಷ್ಠಿ. ಒಟ್ಟಿನಲ್ಲಿ ರೈತನಿಗೆ ಮಳೆಯಾದರೂ ಕಷ್ಟ ಮಳೆಯಾಗದಿದ್ದರೂ ನಷ್ಟ. ಅದರಲ್ಲೂ ಮಳೆ ನೆಚ್ಚಿಕೊಂಡು ಕೃಷಿ ಮಾಡುವ ರೈತನ ಸದ್ಯದ ಸ್ಥಿತಿ ಸಂಕಷ್ಟದಲ್ಲಿದ್ದು, ಮಳೆ ಕೊರತೆ ಹೀಗೆ ಮುಂದುವರಿದರೆ ಪರಿಸ್ಥಿತಿ ಮತ್ತಷ್ಟು ಹದಗೆಡುವುದರಲ್ಲಿ ಯಾವುದೇ ಸಂಶಯವಿಲ್ಲ. 

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.
Published by:Latha CG
First published: