ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ನೀರಿನ ಕೊರತೆ ಇರುವಾಗಲೇ ತನ್ನ ಪಾಲಿನ ನೀರು ಪಡೆದುಕೊಳ್ಳುತ್ತಿರುವ ಆಂಧ್ರ

ಸಾಮಾನ್ಯವಾಗಿ ಏಪ್ರಿಲ್ ತಿಂಗಳಲ್ಲಿ ಆಂಧ್ರ ಪಾಲಿನ ನೀರು ಪಡೆಯುತ್ತಿತ್ತು. ಏಪ್ರಿಲ್ ನಂತರ ನೀರು ನದಿಗೆ ಬಿಟ್ಟರೆ ಈ ನೀರು ತಮ್ಮ ರಾಜ್ಯಕ್ಕೆ ಬರುವುದಿಲ್ಲ ಎಂಬ ಕಾರಣಕ್ಕೆ ಈಗಲೇ ನೀರು ಪಡೆಯುತ್ತಿದೆ. ಇದರಿಂದಾಗಿ ಜಲಾಶಯವು ಮಾರ್ಚ್​ ಅಂತ್ಯಕ್ಕೆ ಬರಿದಾಗುವ ಸಾಧ್ಯತೆ ಇದೆ.

ತುಂಗಭದ್ರಾ ಅಚ್ಚುಕಟ್ಟು ಪ್ರದೇಶ

ತುಂಗಭದ್ರಾ ಅಚ್ಚುಕಟ್ಟು ಪ್ರದೇಶ

  • Share this:
ರಾಯಚೂರು(ಮಾ.23): ರೈತರ ಜೀವನಾಡಿ ತುಂಗಭದ್ರಾ ಅಚ್ಚಕಟ್ಟು ಪ್ರದೇಶದಲ್ಲಿ ಈಗ ನೀರಿಗಾಗಿ ಪರದಾಟ ನಡೆದಿದೆ.  ಈ ಮಧ್ಯೆ ಆಂಧ್ರ ಪ್ರದೇಶದವರು ತಮ್ಮ ಪಾಲಿನ ನೀರನ್ನು ಈಗಲೇ ಬಿಡಿಸಿಕೊಳ್ಳುತ್ತಿದ್ದಾರೆ. ನದಿಗೆ ನಿಗಿದಿಗಿಂತ ಅಧಿಕ ಪ್ರಮಾಣದಲ್ಲಿ ನೀರು ಬಿಡುತ್ತಿದ್ದು ಮುಂದಿನ ದಿನಗಳಲ್ಲಿ ತುಂಗಭದ್ರಾ ನಾಲೆಗಳನ್ನು ನಂಬಿಕೊಂಡಿರುವ ಕೊಪ್ಪಳ, ರಾಯಚೂರು, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಯ ರೈತರು ನೀರು ಇಲ್ಲದೆ ರೈತರ ಬೆಳೆದು ನಿಂತಿರುವ ಬೆಳೆ ಹಾಳಾಗುವ ಭೀತಿಯಲ್ಲಿದ್ದಾರೆ.

ಈ ವರ್ಷ ಮುಂಗಾರು ಹಂಗಾಮಿನಲ್ಲಿ ಉತ್ತಮ‌ ಮಳೆಯಾಗಿದ್ದರಿಂದ ತುಂಗಭದ್ರಾ ಜಲಾಶಯ ಭರ್ತಿಯಾಗಿತ್ತು. ಮೂರು ವರ್ಷಗಳ‌ ನಂತರ ಎರಡನೆಯ ಬೆಳೆಗೆ ನಾಲೆಗಳಿಂದ ರೈತರ ಭೂಮಿಗೆ ನೀರು ಬಿಡಲು ತೀರ್ಮಾನಿಸಲಾಗಿದೆ. ಅದರಂತೆ ತುಂಗಭದ್ರಾ ನೀರು ನಿರ್ವಹಣಾ ಸಲಹಾ ಸಮಿತಿ‌ ನಿರ್ಧಾರದಂತೆ ತುಂಗಭದ್ರಾ ಎಡದಂಡೆ ನಾಲೆಗೆ ಮಾರ್ಚ್​  31ರವರೆಗೆ ನೀರು ಬಿಡುವುದಾಗಿ ಹೇಳಿದ್ದಾರೆ. ಬೇಸಿಗೆ ಬೆಳೆಗೆ ನೀರು ಸಿಗುತ್ತದೆ ಎಂಬ ಕಾರಣಕ್ಕೆ ತುಂಗಭದ್ರಾ ಎಡದಂಡೆ ನಾಲೆಯ ವ್ಯಾಪ್ತಿಯ 6 ಲಕ್ಷ ಎಕರೆ ಪ್ರದೇಶದ ರೈತರು ಭತ್ತ ಹಾಗೂ ಮೆಣಸಿನಕಾಯಿ ಹಾಕಿದ್ದಾರೆ.

ಈ ವರ್ಷ ಪ್ರತಿಕೂಲ ವಾತಾವರಣದಿಂದಾಗಿ ಭತ್ತ ಹಾಗೂ ಮೆಣಸಿನಕಾಯಿ ಸಕಾಲಕ್ಕೆ ಕಾಳು ಕಟ್ಟಿಲ್ಲ. ಇದರಿಂದ ಬೆಳೆಯ ಅವಧಿ ಅಧಿಕವಾಗಿದೆ. ಈ ಮಧ್ಯೆ ಈಗಿರುವ ಬೆಳೆಯ ಫಸಲು ಕೈಗೆ ಬರಬೇಕಾದರೆ ಕನಿಷ್ಠ ಏಪ್ರಿಲ್ 10 ರವರೆಗೆ ನೀರು ಬಿಡಲೇಬೇಕು. ಈ ನಿಟ್ಟಿನಲ್ಲಿ ರೈತರು ಮುಖ್ಯಮಂತ್ರಿ ಗಳು ಸೇರಿದಂತೆ ಅಧಿಕಾರಿಗಳಿಗೆ ಜನಪ್ರತಿನಿಧಿಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ. ರೈತರ ಒತ್ತಡದ ಹಿನ್ನಲೆಯಲ್ಲಿ ಈಗ ಭದ್ರಾ ಜಲಾಶಯದಿಂದ ತುಂಗಭದ್ರಾ ಜಲಾಶಯಕ್ಕೆ 1200 ಕ್ಯೂಸೆಕ್ ನೀರು ಬಿಡಲಾಗಿದೆ.

ಯುಗಾದಿ ಅಂಗವಾಗಿ ಆಂಧ್ರಪ್ರದೇಶದ ಶ್ರೀಶೈಲ ಮಲ್ಲಯ್ಯ ಜಾತ್ರೆ; ಯಾತ್ರಾರ್ಥಿಗಳಿಗೆ ಕೊರೋನಾ ಬಗ್ಗೆ ಕಟ್ಟುನಿಟ್ಟಿನ ಸೂಚನೆ

ಮಾರ್ಚ್​ 19 ರಿಂದಲೇ ಭದ್ರಾದಿಂದ ನೀರು ಬಿಡಲಾಗಿದ್ದು, ಕಡಿಮೆ ಪ್ರಮಾಣದಲ್ಲಿ ನೀರು ಬಿಟ್ಟಿದ್ದರಿಂದ ಇನ್ನೂ ಈ ನೀರು ತುಂಗಭದ್ರಾ ಜಲಾಶಯ ತಲುಪಿಲ್ಲ, ಒಟ್ಟು 1.7 ಟಿಎಂಸಿ ನೀರು ಭದ್ರಾದಿಂದ ತುಂಗಭದ್ರಾ ಜಲಾಶಯಕ್ಕೆ ಬಿಡಲಾಗುತ್ತಿದ್ದು, ಈ ನೀರು ತುಂಗಭದ್ರಾ ಜಲಾಶಯಕ್ಕೆ ಪೂರ್ಣ ಪ್ರಮಾಣದಲ್ಲಿ ಬಂದು ತಲುಪುವುದು ಅನುಮಾನ. ಕಾರಣ ನದಿಯಲ್ಲಿ ಗುಂಡಿಗಳಿಗೆ, ದಾವಣಗೆರೆ, ಹರಿಹರ, ಗದಗ ಸೇರಿದಂತೆ ಹಲವಾರು ನಗರ ಪಟ್ಟಣ ಹಾಗೂ ಗ್ರಾಮೀಣ ಭಾಗದವರು ಕುಡಿವ ನೀರಿಗಾಗಿ ನದಿಯ ನೀರನ್ನು ನಿಲ್ಲಿಸುತ್ತಿದ್ದಾರೆ.

ಇಷ್ಟೆಲ್ಲ ಸಂಕಷ್ಟ ಇರುವಾಗಲೇ ಆಂಧ್ರ ಸರಕಾರವು ತುಂಗಭದ್ರಾ ಜಲಾಶಯದಿಂದ ತನ್ನ ಪಾಲಿನ ನೀರನ್ನು ಈಗ ಪಡೆದುಕೊಳ್ಳುತ್ತಿದೆ. ಆಂಧ್ರ ಹಾಗು ತೆಲಂಗಾಣ ರಾಜ್ಯಕ್ಕೆ ಈಗ 7 ಟಿಎಂಸಿ ನೀರು ನೀಡಬೇಕಾಗಿತ್ತು. ಅದರಲ್ಲಿ ತೆಲಂಗಾಣದವರು ಆಗಲೇ ತನ್ನ ಪಾಲಿನ 3.3 ಟಿಎಂಸಿ ನೀರನ್ನು ಪಡೆದುಕೊಂಡಿದ್ದಾರೆ. ಈಗ ಉಳಿದಿರುವ 3.7 ಟಿಎಂಸಿ ನೀರನ್ನು ಆಂಧ್ರ ಈಗ ಪಡೆಯುತ್ತಿದೆ. ಹೆಎಲ್ ಸಿ ಹಾಗೂ ನದಿಯ ಮೂಲಕ ತನ್ನ ಪಾಲಿನ ನೀರು ಪಡೆಯುತ್ತಿದ್ದಾರೆ.

ಸಾಮಾನ್ಯವಾಗಿ ಏಪ್ರಿಲ್ ತಿಂಗಳಲ್ಲಿ ಆಂಧ್ರ ಪಾಲಿನ ನೀರು ಪಡೆಯುತ್ತಿತ್ತು. ಏಪ್ರಿಲ್ ನಂತರ ನೀರು ನದಿಗೆ ಬಿಟ್ಟರೆ ಈ ನೀರು ತಮ್ಮ ರಾಜ್ಯಕ್ಕೆ ಬರುವುದಿಲ್ಲ ಎಂಬ ಕಾರಣಕ್ಕೆ ಈಗಲೇ ನೀರು ಪಡೆಯುತ್ತಿದೆ. ಇದರಿಂದಾಗಿ ಜಲಾಶಯವು ಮಾರ್ಚ್​ ಅಂತ್ಯಕ್ಕೆ ಬರಿದಾಗುವ ಸಾಧ್ಯತೆ ಇದೆ.

ತುಂಗಭದ್ರಾ ಜಲಾಶಯದಲ್ಲಿ ಈಗ 16.33 ಟಿಎಂಸಿ ನೀರಿದ್ದು ಅದರಲ್ಲಿ 2 ಟಿಎಂಸಿ ಡೆಡ್ ಸ್ಟೋರೇಜ್,  ವೆಪರೇಷನ್ ಲಾಸ್ , ಕುಡಿವ ನೀರಿಗಾಗಿ 2 ಟಿಎಂಸಿ ಹಾಗೂ ಕಾರ್ಖಾನೆಗಳಿಗೆ ಅರ್ಧ ಟಿಎಂಸಿ ನೀರು ನೀಡಬೇಕಾಗಿದೆ. ಈಗ ನಿತ್ಯ ರಾಜ್ಯ ಕಾಲುವೆಗಳಿಗೆ ಒಂದು ಟಿಎಂಸಿಯಷ್ಟು ನೀರು ಹರಿಯುತ್ತಿದೆ. ಆಂಧ್ರ ತನ್ನ ಪಾಲಿನ‌ ನೀರು ಈಗ 3.7 ಟಿಎಂಸಿ ಪಡೆದರೆ ಮಾರ್ಚ್​ ಅಂತ್ಯಕ್ಕೆ ಜಲಾಶಯ ಸಂಪೂರ್ಣವಾಗಿ ಖಾಲಿಯಾಗುತ್ತದೆ.

ಭದ್ರಾದಿಂದ ಸುಮಾರು 3 ಸಾವಿರ ಕ್ಯೂಸೆಕ್ ನೀರು ಬಿಟ್ಟು ಸುಮಾರು 2 ಟಿಎಂಸಿಯಷ್ಟು ನೀರು ತುಂಗಭದ್ರಾ ಜಲಾಶಯಕ್ಕೆ ಬಂದು ತಲುಪಿದರೆ ಅಚ್ಚಕಟ್ಟು ಪ್ರದೇಶದ ರೈತರು ಕೇಳಿದಂತೆ ಏಪ್ರಿಲ್ ಮೊದಲು ವಾರದವರೆಗೂ ನೀರು ನೀಡಬಹುದು. ಇಲ್ಲದಿದ್ದರೆ ಮಾರ್ಚ್​ ಅಂತ್ಯಕ್ಕೆ ನೀರು ಖಾಲಿಯಾದರೆ ರಾಯಚೂರು , ವಿಜಯನಗರ, ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಯ ರೈತರಿಗೆ ಕೈಗೆ ಬಂದು ಬಾಯಿಗೆ ಬಾರದಂತಾಗಿ ಅಪಾರ ನಷ್ಟವಾಗಲಿದೆ, ಆಂಧ್ರಕ್ಕೆ ಹರಿಸುತ್ತಿರುವ ನೀರು ನಿಲ್ಲಿಸಬೇಕು, ಭದ್ರಾದಿಂದ ಇನ್ನಷ್ಟು ನೀರು ಬಿಡಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.
Published by:Latha CG
First published: