ಜಯನಗರದ ಸೋಲು: ಅನಂತಕುಮಾರ್, ಅಶೋಕ್, ಆರೆಸ್ಸೆಸ್​ಗೆ ಮುಖಭಂಗ


Updated:June 13, 2018, 6:01 PM IST
ಜಯನಗರದ ಸೋಲು: ಅನಂತಕುಮಾರ್, ಅಶೋಕ್, ಆರೆಸ್ಸೆಸ್​ಗೆ ಮುಖಭಂಗ

Updated: June 13, 2018, 6:01 PM IST
- ಚಿದಾನಂದ ಪಟೇಲ್, ನ್ಯೂಸ್18 ಕನ್ನಡ

ಬೆಂಗಳೂರು(ಜೂನ್ 13): ಜಯನಗರದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದಷ್ಟೇ ಬಿಜೆಪಿಗೂ ಪ್ರತಿಷ್ಠೆಯ ಚುನಾವಣೆಯಾಗಿತ್ತು. ಆರೆಸ್ಸೆಸ್​ನ ಬಿಗಿಹಿಡಿತ ಇದೆ ಎನ್ನಲಾದ ಈ ಕ್ಷೇತ್ರದಲ್ಲಿ ಶತಾಯಗತಾಯ ಗೆಲುವು ದಕ್ಕಿಸಬೇಕೆಂದು ಹೈಕಮಾಂಡ್ ಸ್ಪಷ್ಟ ಸೂಚನೆ ರವಾನಿಸಿತ್ತು. ಜಯನಗರದಲ್ಲಿ ಸಾಕಷ್ಟು ಪ್ರಭಾವ ಹೊಂದಿರುವ ಅನಂತಕುಮಾರ್ ಹಾಗೂ ದಕ್ಷಿಣ ಬೆಂಗಳೂರಿನಲ್ಲಿ ಹಿಡಿತ ಹೊಂದಿರುವ ಆರ್. ಅಶೋಕ್ ಅವರಿಗೆ ಈ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಹೊಣೆಗಾರಿಕೆ ಕೊಡಲಾಗಿತ್ತು. ಅನಂತಕುಮಾರ್ ಅವರು ಮೂರ್ನಾಲ್ಕು ಬಾರಿ ಕ್ಷೇತ್ರಕ್ಕೆ ಹೋಗಿ ಪ್ರಚಾರ ಕೂಡ ಮಾಡಿದ್ದರು. ಪತ್ನಿ ತೇಜಸ್ವಿನಿ ಕೂಡ ಸಕ್ರಿಯರಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ವಿಶೇಷ ಪ್ರಚಾರಕ್ಕಾಗಿ ಅನಂತಕುಮಾರ್ ಸಾಕಷ್ಟು ತಂತ್ರಗಳನ್ನು ರೂಪಿಸಿದ್ದರು. ಬಿ.ಎನ್. ವಿಜಯ್​ಕುಮಾರ್ ಸೋದರ ಹಾಗು ಬಿಜೆಪಿ ಅಭ್ಯರ್ಥಿ ಬಿ.ಎನ್. ಪ್ರಹ್ಲಾದ್ ಬಾಬು ಅವರು ಆರೆಸ್ಸೆಸ್ ಜೊತೆ ನಿಕಟವಾಗಿರುವ ಹಿನ್ನೆಲೆಯಲ್ಲಿ ಸಂಘಕ್ಕೂ ಈ ಚುನಾವಣೆ ಪ್ರತಿಷ್ಠೆಯ ಸವಾಲಾಗಿತ್ತು. ಆರೆಸ್ಸೆಸ್ ಕಾರ್ಯಕರ್ತರು ಹೆಚ್ಚು ಕ್ರಿಯಾಶೀಲರಾಗಿ ಈ ಕ್ಷೇತ್ರದಲ್ಲಿ ಪ್ರಚಾರಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಮನೆಮನೆಗೂ ಹೋಗಿ ಪ್ರಚಾರ ಮಾಡಿದ್ದರು. ಇದೆಲ್ಲದರ ಜೊತೆಗೆ ಬಿ.ಎನ್. ವಿಜಯ್​ಕುಮಾರ್ ನಿಧನದಿಂದ ಅನುಕಂಪದ ಅಲೆ ಕ್ಷೇತ್ರದಲ್ಲಿರಬಹುದೆಂಬ ನಿರೀಕ್ಷೆಯೂ ಇತ್ತು. ಜೊತೆಗೆ, 104 ಸ್ಥಾನ ಗಳಿಸಿಯೂ ಅದಿಕಾರ ದಕ್ಕಲಿಲ್ಲವೆಂಬ ಅನುಕಂಪವೂ ಜನರಲ್ಲಿರಬಹುದೆಂದು ನಿರೀಕ್ಷಿಸಲಾಗಿತ್ತು. ಇಷ್ಟೆಲ್ಲಾ ಆದರೂ ಭಾರತೀಯ ಜನತಾ ಪಕ್ಷಕ್ಕೆ ಗೆಲ್ಲಲು ಸಾಧ್ಯವಾಗಲಿಲ್ಲ. ಅನಂತಕುಮಾರ್ ರಣತಂತ್ರಗಳು ಫ್ಲಾಪ್ ಆದವು.

ಏನು ಕಾರಣ?

ನ್ಯೂಸ್18 ಕನ್ನಡಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, ಜಯನಗರ ಕ್ಷೇತ್ರಕ್ಕೆ ಪ್ರಹ್ಲಾದ್ ಬಾಬು ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದು ಬಿ.ಎಸ್. ಯಡಿಯೂರಪ್ಪ ಅವರಿಗೆ ಇಷ್ಟವಿರಲಿಲ್ಲವೆನ್ನಲಾಗಿದೆ. ಕ್ಷೇತ್ರದ ಪ್ರಚಾರದ ವಿಚಾರದಲ್ಲಿ ಅವರು ತಲೆಹಾಕಲಿಲ್ಲ. ಯಡಿಯೂರಪ್ಪನವರು ತೆರಳಿ ಪ್ರಚಾರ ಮಾಡಿದಿದ್ದರೆ ಜಯನಗರವು ಬಿಜೆಪಿಯ ಪಾಲಾಗುತ್ತಿತ್ತು ಎಂದು ಅವರ ಬೆಂಬಲಿಗರು ಹೇಳುತ್ತಾರೆ. ಕ್ಷೇತ್ರದಲ್ಲಿ ಬಿಜೆಪಿ ಸೋಲಿಗೆ ಅನಂತಕುಮಾರ್ ಅವರೇ ಕಾರಣ ಎಂಬುದು ಬಿಎಸ್​ವೈ ಬಣದ ಅಭಿಪ್ರಾಯವಾಗಿದೆ.

ಆರ್. ಅಶೋಕ್ ಕೂಡ ಕ್ಷೇತ್ರಕ್ಕೆ ಹೋಗಿ ಪ್ರಚಾರ ಮಾಡಲಿಲ್ಲ. ಆರ್.ಆರ್. ನಗರದಲ್ಲೂ ಆರ್. ಅಶೋಕ್ ಅವರಿಗೆ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಡಲಾಗಲಿಲ್ಲ. ಇವೆರಡು ಕ್ಷೇತ್ರಗಳ ಸೋಲಿನ ಹೊಣೆಯಲ್ಲಿ ಆರ್. ಅಶೋಕ್ ಅವರ ಪಾಲೂ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಆದರೆ, ಬಿಜೆಪಿಗೆ ಮುಖಭಂಗವಾಗಿದೆ ಎಂಬ ವಾದವನ್ನು ಅನಂತಕುಮಾರ್ ಅಂಡ್ ಟೀಮ್ ಒಪ್ಪುವುದಿಲ್ಲ. ಹೊಸ ಅಭ್ಯರ್ಥಿಯನ್ನು ನಿಲ್ಲಿಸಿಯೂ ಕಳೆದ ಬಾರಿಗಿಂತ 8 ಸಾವಿರ ಹೆಚ್ಚು ಮತಗಳನ್ನು ಗೆದ್ದಿರುವುದಾಗಿ ಅನಂತಕುಮಾರ್ ಬೆಂಬಲಿಗರು ನ್ಯೂಸ್18 ಕನ್ನಡಕ್ಕೆ ತಿಳಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಕಣದಿಂದ ಹಿಂದೆ ಸರಿದದ್ದು ಬಿಜೆಪಿಯ ಸೋಲಿಗೆ ಪ್ರಮುಖ ಕಾರಣ ಎಂಬುದು ಬಿಜೆಪಿ ಬೆಂಬಲಿಗರ ವಾದವಾಗಿದೆ.
First published:June 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...