ಖಾತೆ ಬಗ್ಗೆ ಅಸಮಾಧಾನವಿಲ್ಲ, ಸಚಿವ ಸ್ಥಾನ ಬಿಟ್ಟುಕೊಡಲೂ ಸಿದ್ಧ; ಆನಂದ್ ಸಿಂಗ್ ಅಚ್ಚರಿಯ ಹೇಳಿಕೆ

Anand Singh: ನನಗೆ ಯಾವ ಖಾತೆ ಕೊಟ್ಟರೂ ಖುಷಿಯಿಂದ ನಿಭಾಯಿಸುತ್ತೇನೆ. ಇಂದೇ ನಾನು ಅಧಿಕಾರ ಸ್ವೀಕರಿಸಲಿದ್ದೇನೆ. ಸಚಿವ ಸ್ಥಾನವನ್ನು ಬೇರೆಯವರಿಗೆ ಬಿಟ್ಟುಕೊಡಲು ಸೂಚಿಸಿದರೂ ನಾನು ಸಿದ್ಧನಿದ್ದೇನೆ ಎನ್ನುವ ಮೂಲಕ ರಾಜೀನಾಮೆ ವದಂತಿಗಳಿಗೆ ಸಚಿವ ಆನಂದ್ ಸಿಂಗ್ ತೆರೆ ಎಳೆದಿದ್ದಾರೆ.

ಸಚಿವ ಆನಂದ್​ ಸಿಂಗ್​​

ಸಚಿವ ಆನಂದ್​ ಸಿಂಗ್​​

  • Share this:
ಬೆಂಗಳೂರು (ಜ. 29): ಬಿಜೆಪಿಯಲ್ಲಿ ಸಂಪುಟ ವಿಸ್ತರಣೆ ವೇಳೆ ಕಾಣಿಸಿಕೊಂಡಿದ್ದ ಅಸಮಾಧಾನ ಕಳೆದ ವಾರ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಚಿವ ಖಾತೆ ಬದಲಾವಣೆ ಮಾಡಿದ ಬಳಿಕ ಮತ್ತಷ್ಟು ಹೆಚ್ಚಾಗಿತ್ತು. ಅರಣ್ಯ ಸಚಿವರಾಗಿದ್ದ ಆನಂದ್ ಸಿಂಗ್ ಅವರಿಗೆ ಅದರ ಬದಲಾಗಿ ಮೂಲ ಸೌಕರ್ಯ, ಹಜ್ ಮತ್ತು ವಕ್ಫ್​ ಇಲಾಖೆಯ ಜವಾಬ್ದಾರಿಯನ್ನು ನೀಡಲಾಗಿತ್ತು. ಇದರಿಂದ ಅಸಮಾಧಾನಗೊಂಡಿದ್ದ ಆನಂದ್ ಸಿಂಗ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ, ಇಂದು ಮೊದಲ ಬಾರಿಗೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಚಿವ ಆನಂದ್ ಸಿಂಗ್, ನನಗೆ ಯಾವುದೇ ಅಸಮಾಧಾನವೂ ಇಲ್ಲ. ಯಾವ ಖಾತೆ ಕೊಟ್ಟರೂ ಖುಷಿಯಿಂದ ನಿಭಾಯಿಸುತ್ತೇನೆ. ಇಂದೇ ನಾನು ಅಧಿಕಾರ ಸ್ವೀಕರಿಸಲಿದ್ದೇನೆ ಎನ್ನುವ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಖಾತೆ ಸಿಗದಿರುವ ಬಗ್ಗೆ ನಮ್ಮ ಪಕ್ಷದ ಹಿರಿಯ ಸದಸ್ಯರು ಸಭೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಹಿರಿಯರಿಗೂ ಸಚಿವ ಸ್ಥಾನ ನೀಡಬೇಕು. ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆ ಮಾಡಬೇಕು. ಮುಂದಿನ ದಿನಗಳಲ್ಲಿ ಸಂಪುಟ ಪುನರ್ ರಚನೆಯಾಗಬೇಕು. ಆಗ ಇತರರಿಗೂ ಖಾತೆ ನೀಡಬೇಕು. ಆಗ ಬೇರೆ ಖಾತೆ ನೀಡಿದರೂ ನಿಭಾಯಿಸುತ್ತೇನೆ. ಅಥವಾ ಸಚಿವ ಸ್ಥಾನವನ್ನು ಬೇರೆಯವರಿಗೆ ಬಿಟ್ಟುಕೊಡಲು ಸೂಚಿಸಿದರೂ ನಾನು ಸಿದ್ಧನಿದ್ದೇನೆ. ಹಿರಿಯರ ಜೊತೆಗೆ ಯುವಕರಿಗೂ ಸಚಿವ ಸ್ಥಾನ ನೀಡಬೇಕಿದೆ. ಎಲ್ಲರೂ ನನ್ನಂತೆಯೇ ಇರಬೇಕು ಅಂತೇನಿಲ್ಲ. ನನಗೆ ಯಾವುದೇ ಅಸಮಾಧಾನ ಇಲ್ಲ. ಯಾವುದೇ ಖಾತೆ ನೀಡಿದ್ರೂ ಅಸಮಾಧಾನ ಇಲ್ಲ. ಇಂದೇ ಹೊಸ ಖಾತೆಯ ಅಧಿಕಾರ ವಹಿಸಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

ಕಳೆದ ವರ್ಷ ಫೆಬ್ರವರಿಯಲ್ಲಿ ಅರಣ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದ ಆನಂದ್ ಸಿಂಗ್ ಖಾತೆ ಬದಲಾವಣೆಯ ನಂತರ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ಈ ಖಾತೆಗಿಂತಲೂ ಶಾಸಕ ಸ್ಥಾನವೇ ದೊಡ್ಡದು ಎನ್ನುವ ಮೂಲಕ ಮೂಲಸೌಕರ್ಯ, ವಕ್ಫ್ ಇಲಾಖೆಯ ಜವಾಬ್ದಾರಿ ನೀಡಿದ್ದಕ್ಕೆ ಬೇಸರ ಹೊರಹಾಕಿದ್ದರು. ಅಲ್ಲದೆ, ರಾಜೀನಾಮೆ ಬಗ್ಗೆ ನಾಳೆಯವರೆಗೂ ಕಾದು ನೋಡಿ ಎನ್ನುವ ಮೂಲಕ ಸಸ್ಪೆನ್ಸ್​ ಕಾಯ್ದುಕೊಂಡಿದ್ದರು.

ಇದನ್ನೂ ಓದಿ: ಕಲಾಪ ಸಲಹಾ ಸಮಿತಿ ಸಭೆಗೆ ಕಾಂಗ್ರೆಸ್ ಬಹಿಷ್ಕಾರ; ಇಂದಿನ ಸಭೆ ಮುಂದೂಡಿಕೆ

ಆದರೆ, ಇಂದು ಈ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, ನಾನು ರಾಜೀನಾಮೆ ನೀಡುತ್ತೇನೆ ಎಂಬ ಬಗ್ಗೆ ಊಹಾಪೋಹಗಳು ಹರಿದಾಡುತ್ತಿವೆ. ಸಚಿವ ಸ್ಥಾನ ಬದಲಿಸಿದಾಗ ಅಸಮಾಧಾನವಾಗುವುದು ಸಹಜ. ಆದರೆ, ನನಗೆ ಅಸಮಾಧಾನವಿಲ್ಲ. ಸಿಎಂ ಜೊತೆ ಈ ಬಗ್ಗೆ ಮಾತುಕತೆ ಮಾಡಿದ್ದೇನೆ. ಎಲ್ಲರಿಗೂ ಸಮಾಧಾನ ಮಾಡಲು ಬದಲಾವಣೆ ಸಹಜ. ಖಾತೆಯಲ್ಲಿ ದೊಡ್ಡದು, ಚಿಕ್ಕದು ಅಂತ ಏನೂ ಇಲ್ಲ. ಯಾವುದೇ ಖಾತೆ ಕೊಟ್ಟರೂ ಅದನ್ನು ನಿಭಾಯಿಸಿ, ಸಿಎಂಗೆ ಸಹಕಾರ ಕೊಡಬೇಕು ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಸರ್ಕಾರಿ ಕೆಲಸ ದೇವರ ಕೆಲಸ ಅಂತ ವಿಧಾನಸೌಧದಲ್ಲಿ ಬರೆದಿದ್ದಾರೆ. ನನಗೆ ಅರಣ್ಯ ಇಲಾಖೆ ಖಾತೆ ನೀಡಿದ್ದಾಗ ಅನೇಕ ಕೆಲಸ ಮಾಡಿದ್ದೇನೆ. ಡೀಮ್ಡ್ ಫಾರೆಸ್ಟ್ ಮಾಡಲಾಗಿದೆ. ಅರವಿಂದ ಲಿಂಬಾವಳಿ ಓಡಾಡಿದರೆ, ಒಂದೂವರೆ ತಿಂಗಳಲ್ಲಿ ಕೆಲಸ ಪೂರ್ಣಗೊಳ್ಳಲಿದೆ. ಪರಿಸರ ಖಾತೆ ಕೊಟ್ಟಿದ್ದು, ಅದನ್ನೂ ನಿಭಾಯಿಸಿದೆ. ಈಗ ಹಜ್ ಮತ್ತು ವಕ್ಫ್ ಖಾತೆಯನ್ನು ನೀಡಿದ್ದಾರೆ. ಅದನ್ನು ಕೂಡ ಚೆನ್ನಾಗಿಯೇ ನಿಭಾಯಿಸಿಕೊಂಡು ಹೋಗುತ್ತೇನೆ ಎಂದಿದ್ದಾರೆ.
Published by:Sushma Chakre
First published: