ಮೂರು ದಿನ ಕಳೆದರೂ ಮುಗಿಯದ ಸರ್ಕಾರ- ಸಾರಿಗೆ ನೌಕರರ ಹಗ್ಗ ಜಗ್ಗಾಟ; ಹೈರಾಣಾದ ಸಾರ್ವಜನಿಕರು!

ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಅನ್ನೋ ಹಾಗೆ ಸಾರಿಗೆ ನೌಕರರು ಹಾಗೂ ಸರ್ಕಾರದ ನಡುವಿನ ತಿಕ್ಕಾಟದಲ್ಲಿ ಪ್ರಯಾಣಿಕರು ಪೇಚಿಗೆ ಸಿಲುಕಿದ್ದಾರೆ. ಯುಗಾದಿ ಬಂತು. ಲಾಂಗ್ ವೀಕೆಂಡ್ ಇದೆ. ಊರಿನ ಕಡೆ ಹೋಗೋಣ ಅಂತ ಪ್ಲಾನ್ ಮಾಡಿಕೊಂಡವರಿಗೆ ಬಸ್ ಮುಷ್ಕರ ತೀರಾ ನಿರಾಸೆ ಮೂಡಿಸಿದೆ.

ಕೆಎಸ್​ಆರ್​ಟಿಸಿ

ಕೆಎಸ್​ಆರ್​ಟಿಸಿ

  • Share this:
ಬೆಂಗಳೂರು: ಸಾರಿಗೆ ನೌಕರರ ಮುಷ್ಕರ ಮೂರನೇ ದಿನ ಪೂರೈಸಿದೆ.  3 ದಿನದ ಬಳಿಕವೂ ಸರ್ಕಾರ ಹಾಗೂ ಸಾರಿಗೆ ನೌಕರರ ನಡುವಿನ ಹಗ್ಗ ಜಗ್ಗಾಟ ಮುಂದುವರೆದಿದೆ. ಸರ್ಕಾರ ಖಾಸಗಿ ಮೊರೆಹೋದರೆ, ನೌಕರರು ಪಟ್ಟು ಬಿಗಿಗೊಳಿಸಿದ್ದಾರೆ. ಇವರಿಬ್ಬರ ಹಗ್ಗ-ಜಗ್ಗಾಟಕ್ಕೆ ಸಾರ್ವಜನಿಕರು ಹೈರಾಣಾಗಿದ್ದಾರೆ. 

ಹೌದು, 6ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರೋ ಮುಷ್ಕರ ಮೂರನೇ ದಿನ ಪೂರೈಸಿದೆ. ಶತಾಯಗತಾಯ 6ನೇ ವೇತನ ಆಯೋಗ ಜಾರಿಯಾಗಲೇ ಬೇಕೆಂದು ಸಾರಿಗೆ ನೌಕರರು ಬಿಗಿಪಟ್ಟು ಹಿಡಿದು ಕುಳಿತ್ತಿದ್ದಾರೆ. ಇತ್ತ ಸರ್ಕಾರ ಆಗಿದ್ದಾಗ್ಲಿ,  6ನೇ ವೇತನ ಆಯೋಗ ಜಾರಿ ಅಸಾಧ್ಯ ಅಂತ ಸಾರಿಗೆ ನೌಕರರ ವಿರುದ್ಧ ಸೆಡ್ಡುಹೊಡೆದಿದೆ. ಸರ್ಕಾರ ಹಾಗೂ ನೌಕರರ ನಡುವಿನ ಜಂಗೀ ಕುಸ್ತಿಯಲ್ಲಿ ಸಾರ್ವಜನಿಕರು ಬಸವಳಿಯುವಂತಾಗಿದೆ. ಇನ್ನೊಂದೆಡೆ ಸರ್ಕಾರ ಯುಗಾದಿ ಹಾಗೂ ವೀಕೆಂಡ್ ಹಿನ್ನಲೆ ಹೆಚ್ಚುವರಿ ಬಸ್ ಸೇವೆ ಒದಗಿಸಲು ಮುಂದಾಗಿದೆ. ಖಾಸಗಿ ಬಸ್ ಜೊತೆಗೆ ಕೆಎಸ್ಆರ್​ಟಿಸಿ ನಿವೃತ ನೌಕರರನ್ನೂ ಬಳಸಿ ಬಸ್ ಓಡಿಸೋಕೆ ನಿಗಮ ಮುಂದಾಗಿದೆ. ನಿಗಮದ ಈ ತೀರ್ಮಾನ ಈಗ ಹೊಸ ತಲೆನೋವಿಗೂ ಕಾರಣವಾಗಿದೆ.

ಇಂದು ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಕೆಎಸ್ಆರ್​ಟಿಸಿ ಬಸ್ ಬರ್ತಿದ್ದಂತೆ ಖಾಸಗಿ ಬಸ್ ಮಾಲೀಕರು ಕಿರಿಕ್ ತೆಗೆದಿದ್ದಾರೆ. ಮುಷ್ಕರ ಮುಗಿಯುವವರೆಗೂ ನಮಗೆ ಅವಕಾಶ ಕೊಟ್ಟಿದ್ದೀರಿ. ಮಧ್ಯೆ ನೀವು ಬಂದ್ರೆ ನಾವು ಹೇಗೆ ಬಸ್ ಓಡಿಸೋದು. ಕೆಎಸ್ಆರ್​ಟಿಸಿ ಬಸ್ ರಸ್ತೆಗಿಳಿಸಿದರೆ ನಮ್ಮ ಸೇವೆ ನಿಲ್ಲಿಸ್ತಿವಿ ಅಂತ ಅಧಿಕಾರಿಗಳ ವಿರುದ್ಧ ಗುಟುರಿದ್ದಾರೆ. ಹೀಗಾಗಿ ಕೆಲಕಾಲ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಗದ್ದಲದ ವಾತಾವರಣವೂ ನಿರ್ಮಾಣವಾಗಿತ್ತು.  ಇನ್ನು ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಸಾಕಷ್ಟು ಖಾಸಗಿ ಬಸ್ ವ್ಯವಸ್ಥೆ ಮಾಡಿದ್ರು ಪ್ರಯಾಣಿಕರ ಬರ ಎದ್ದುಕಾಣ್ತಿತ್ತು.

ಇದನ್ನು ಓದಿ: ಸಾರಿಗೆ ನೌಕರರ ಮುಷ್ಕರ; 10 ಲಕ್ಷ ರೂ. ಪರಿಹಾರ ಕೋರಿ ಬಿಎಂಟಿಸಿ ಎಂಡಿಗೆ ಬೆಂಗಳೂರು ವಿದ್ಯಾರ್ಥಿನಿಯಿಂದ ಲೀಗಲ್ ನೋಟಿಸ್!

ಇದೆಲ್ಲದರ ನಡುವೆ ಕೆಂಗೇರಿ ಜೆಎಸ್ಎಸ್ ಅಕಾಡೆಮಿ ಆಫ್ ಟೆಕ್ನಿಕಲ್ ಎಜುಕೇಷನ್ ಕಾಲೇಜಿನ ಪಾವನ ಎಂಬ ವಿದ್ಯಾರ್ಥಿನಿ ಕೋಡಿಹಳ್ಳಿ ಚಂದ್ರಶೇಕರ್ ಹಾಗೂ ಬಿಎಂಟಿಸಿ ಎಂಡಿಗೆ ಲೀಗಲ್ ನೋಟಿಸ್ ಇಶ್ಯು ಮಾಡಿದ್ದಾಳೆ. ನಾವು ಬಿಎಂಟಿಸಿ ಪಾಸ್ ಪಡೆದು ಸಂಚಾರ ಮಾಡ್ತಿದ್ದೆವು. ಸದ್ಯ ಮುಷ್ಕರದಿಂದಾಗಿ ನಮಗೆ ನಷ್ಟವಾಗ್ತಿದೆ. ನಮ್ಮ ಬಳಿ ವಾರ್ಷಿಕ ಪಾಸ್ ಇದೆ. ಪಾಸ್ ಇದ್ದವರಿಗೆ ಸೇವೆ ನೀಡದಿರೋದು ವ್ಯಾಪಾರ ಪದ್ಧತಿಯ ನ್ಯೂನತೆಯಾಗಿದೆ. ಹೀಗಾಗಿ 10 ಲಕ್ಷ ಪರಿಹಾರ ನೀಡುವಂತೆ ಕೋಡಿಹಳ್ಳಿ ಚಂದ್ರಶೇಖರ್ ಹಾಗೂ ಬಿಎಂಟಿಸಿ ಎಂಡಿ ಶಿಖಾಗೆ ಲಾಯರ್ ಮೂಲಕ ವಿದ್ಯಾರ್ಥಿನಿ ಪಾವನ ಲೀಗಲ್ ನೋಟಿಸ್ ನೀಡಿದ್ದಾಳೆ. ಈ ನೋಟಿಸ್​ಗೆ ಉತ್ತರಿಸಿರೋ ಕೋಡಿಹಳ್ಳಿ ಇದು ನಮ್ಮ ಸಮಸ್ಯೆಯಲ್ಲ ಇದಕ್ಕೆ ಬಿಎಂಟಿಸಿ ಉತ್ತರ ನೀಡಬೇಕೆಂದು ಸಮಜಾಯಿಶಿ ನೀಡಿದ್ದಾರೆ.

ಒಟ್ಟಿನಲ್ಲಿ ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಅನ್ನೋ ಹಾಗೆ ಸಾರಿಗೆ ನೌಕರರು ಹಾಗೂ ಸರ್ಕಾರದ ನಡುವಿನ ತಿಕ್ಕಾಟದಲ್ಲಿ ಪ್ರಯಾಣಿಕರು ಪೇಚಿಗೆ ಸಿಲುಕಿದ್ದಾರೆ. ಯುಗಾದಿ ಬಂತು. ಲಾಂಗ್ ವೀಕೆಂಡ್ ಇದೆ. ಊರಿನ ಕಡೆ ಹೋಗೋಣ ಅಂತ ಪ್ಲಾನ್ ಮಾಡಿಕೊಂಡವರಿಗೆ ಬಸ್ ಮುಷ್ಕರ ತೀರಾ ನಿರಾಸೆ ಮೂಡಿಸಿದೆ. ಸರ್ಕಾರ ಖಾಸಗಿ ಬಸ್ ವ್ಯವಸ್ಥೆ ಮಾಡಿದರೂ ಈ ರಾದ್ದಾಂತಕ್ಕೆ ಹೆದರಿ ಜನ ಬಸ್ ನಿಲ್ದಾಣದತ್ತ ಬರೋದನ್ನೇ ನಿಲ್ಲಿಸಿದ್ದಾರೆ.
Published by:HR Ramesh
First published: