• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಡಿಜಿಟಲ್‌ ಇಂಡಿಯಾದತ್ತ ಮಹತ್ವದ ಹೆಜ್ಜೆ; ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲೆಗಳ ಭದ್ರತೆಗೆ ಡಿಜಿ ಲಾಕರ್‌!

ಡಿಜಿಟಲ್‌ ಇಂಡಿಯಾದತ್ತ ಮಹತ್ವದ ಹೆಜ್ಜೆ; ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲೆಗಳ ಭದ್ರತೆಗೆ ಡಿಜಿ ಲಾಕರ್‌!

ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಣ

ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಣ

ನನ್ನ ನೇತೃತ್ವದಲ್ಲಿ ಉನ್ನತಾಧಿಕಾರಿ ಸಮಿತಿ ರಚನೆ ಜತೆಗೆ, ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಚಾಲನಾ ಸಮಿತಿ, ಇ-ಗವರ್ನೆನ್ಸ್‌ ಯೋಜನಾ ನಿರ್ದೇಶಕರ ನೇತೃತ್ವದಲ್ಲಿ ಯೋಜನಾ ನಿರ್ವಹಣಾ ಸಮಿತಿಯನ್ನು ರಚಿಸಲಾಗಿದೆ ಎಂದು ಡಿಸಿಎಂ ತಿಳಿಸಿದರು.

  • Share this:

ಬೆಂಗಳೂರು; ಎಸ್‌ಎಸ್‌ಎಲ್‌ಸಿಯಿಂದ ಮೊದಲುಗೊಂಡು ಉನ್ನತ ಶಿಕ್ಷಣದ ಕೊನೆ ಹಂತದವರೆಗೂ ವಿದ್ಯಾರ್ಥಿಗಳ ಎಲ್ಲ ಸಮಗ್ರ ಶೈಕ್ಷಣಿಕ ದಾಖಲೆಗಳನ್ನು ಡಿಜಿ ಲಾಕರ್‌ನಲ್ಲಿ ಭದ್ರವಾಗಿರಿಸುವ ಮಹತ್ವದ ಕಾರ್ಯಕ್ರಮ ಜಾರಿಗೆ ಉನ್ನತ ಶಿಕ್ಷಣ ಸಚಿವ ಹಾಗೂ ಡಿಸಿಎಂ ಸಿ.ಎನ್.ಅಶ್ವತ್ಥನಾರಾಯಣ ಮುಂದಾಗಿದ್ದಾರೆ. ಮುಂದಿನ ದಿನಗಳಲ್ಲಿ ಯಾರೂ ದಾಖಲೆಗಳು ಕಳೆದುಹೋಗುತ್ತವೆ ಎಂದು ಭಯಪಡಬೇಕಿಲ್ಲ ಹಾಗೂ ತಮ್ಮ ದಾಖಲೆಗಳು ನಕಲಿಯಾಗುತ್ತವೆ ಎಂಬ ಆತಂಕವೂ ಇರುವುದಿಲ್ಲ ಎಂದು ಡಿಸಿಎಂ ಹೇಳಿದ್ದಾರೆ.


ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ʼಶೈಕ್ಷಣಿಕ ಡಿಜಿ ಲಾಕರ್‌ʼ ವ್ಯವಸ್ಥೆ ರಾಜ್ಯದಲ್ಲಿ ಜಾರಿಗೆ ಬರುತ್ತದೆ. ಈ ವ್ಯವಸ್ಥೆಯಿಂದ ವಿದ್ಯಾರ್ಥಿಗಳ ದಾಖಲೆಗಳು ಸುರಕ್ಷಿತವಾಗಿರುತ್ತವೆ ಹಾಗೂ ಉದ್ಯೋಗದಾತರಿಗೂ ಇವು ಸಿಗಲಿವೆ. ಇನ್ನು ಮುಂದೆ ಕಾಗದ ರೂಪದ ಯಾವುದೇ ಶೈಕ್ಷಣಿಕ ದಾಖಲೆಗಳಿಗೆ ಅವಕಾಶ ಇರುವುದಿಲ್ಲ ಎಂದು ಉಪ ಮುಖ್ಯಮಂತ್ರಿಗಳು ತಿಳಿಸಿದರು.


ರಾಜ್ಯದ ಶೈಕ್ಷಣಿಕ ಕ್ಷೇತ್ರವನ್ನು ಡಿಜಿಟಲ್‌ನತ್ತ ಕೊಂಡೊಯ್ಯುವ ಇನ್ನೊಂದು ಮಹತ್ವದ ಹೆಜ್ಜೆ ಎಂದಿರುವ ಅವರು, ಈ ಸಂಬಂಧ ಬೆಂಗಳೂರಿನಲ್ಲಿ ಬುಧವಾರ ರಾಷ್ಟ್ರೀಯ ಶೈಕ್ಷಣಿಕ ದಾಖಲೆಗಳ ಸಂಗ್ರಹಗಾರ (National Academic Depository-NAD)ದ ಕೇಂದ್ರ ಮಟ್ಟದ ಅಧಿಕಾರಿಗಳು ಹಾಗೂ ರಾಜ್ಯದ ಶಿಕ್ಷಣ ಇಲಾಖೆಯ ವಿವಿಧ ಹಂತದ ಉನ್ನತ ಅಧಿಕಾರಿಗಳ ಜತೆ ಉನ್ನತ ಮಟ್ಟದ ಸಭೆ ನಡೆಸಿದ ನಂತರ ಈ ವಿಷಯ ತಿಳಿಸಿದರು.


ಈಗಾಗಲೇ ಕೇಂದ್ರ ಸರಕಾರದ ಮಟ್ಟದಲ್ಲಿ ಜಾರಿಯಾಗಿರುವ ಶೈಕ್ಷಣಿಕ ಡಿಜಿ ಲಾಕರ್‌ ವ್ಯವಸ್ಥೆಯನ್ನು ರಾಜ್ಯದಲ್ಲೂ ಕೂಡಲೇ ಜಾರಿಗೆ ತರಲು ನಿರ್ಧರಿಸಲಾಗಿದೆ. ಈ ಸಂಬಂಧ ನನ್ನ ನೇತೃತ್ವದಲ್ಲಿಯೇ ಉನ್ನತಾಧಿಕಾರ ಸಮಿತಿಯೊಂದನ್ನು ರಚನೆ ಮಾಡಲಾಗಿದ್ದು, ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ಸೇರಿ ಕಾರ್ಯಕ್ರಮ ಅನುಷ್ಠಾನ ಪ್ರಗತಿಯನ್ನು ಪರಿಶೀಲನೆ ಮಾಡಲಾಗುವುದು. ಸರಕಾರಿ, ಖಾಸಗಿ ಸೇರಿದಂತೆ ಯಾವುದೇ ಪದವಿ ಪ್ರದಾನ ಮಾಡುವ ವಿಶ್ವವಿದ್ಯಾಲಯ, ಕಾಲೇಜು, ಡೀಮ್ಡ್‌ ಯುನಿವರ್ಸಿಟಿಗಳೂ ಸೇರಿದಂತೆ ಎಲ್ಲ ಶೈಕ್ಷಣಿಕ ಸಂಸ್ಥೆಗಳು ಈ ವ್ಯವಸ್ಥೆಗೆ ಕಡ್ಡಾಯವಾಗಿ ಸೇರಿಕೊಳ್ಳಬೇಕು ಎಂದು ಡಿಸಿಎಂ ಸೂಚಿಸಿದರು.


ಏನಿದು ಶೈಕ್ಷಣಿಕ ಡಿಜಿ ಲಾಕರ್‌?


ಇದು ವಿದ್ಯಾರ್ಥಿಗಳ ಎಲ್ಲ ಶೈಕ್ಷಣಿಕ ದಾಖಲೆಗಳನ್ನು ಸುರಕ್ಷಿತವಾಗಿ ಸಂಗ್ರಹ ಮಾಡುವ ವ್ಯವಸ್ಥೆ. ಇದಕ್ಕೆ ರಾಷ್ಟ್ರೀಯ ಶೈಕ್ಷಣಿಕ ದಾಖಲೆಗಳ ಸಂಗ್ರಹಗಾರ (National Academic Depository-NAD) ಎಂದು ಕರೆಯಲಾಗುತ್ತದೆ. ಕೇಂದ್ರ ಸರಕಾರದ ಉಸ್ತುವಾರಿಯಲ್ಲಿ ಇದು ಕೆಲಸ ಮಾಡುತ್ತದೆ. ಸಂಗ್ರಹಣಾ ಸ್ಥಳವನ್ನು ಈ ಸಂಸ್ಥೆಯೇ ಒದಗಿಸುತ್ತದೆ. ವಿದ್ಯಾರ್ಥಿಗಳ ಅಂಕಪಟ್ಟಿ, ಪದವಿ ಪ್ರಮಾಣ ಪತ್ರಗಳು, ವರ್ಗಾವಣೆ ಪತ್ರ ಸೇರಿದಂತೆ ಅವರ ಎಲ್ಲ ಶೈಕ್ಷಣಿಕ ದಾಖಲೆಗಳನ್ನು ಇಲ್ಲಿ ಭದ್ರವಾಗಿ ಸಂಗ್ರಹಿಸಿಡಲಾಗಿರುತ್ತದೆ. ಹತ್ತನೇ ತರಗತಿ, ಪಿಯುಸಿ, ಡಿಗ್ರಿ, ಡಿಪ್ಲೊಮೋ, ಎಂಜಿನಿಯರಿಂಗ್‌, ಪದವಿ, ಸ್ನಾತಕೋತ್ತರ, ಐಟಿಐ ಸೇರಿದಂತೆ ಇನ್ನೂ ಅನೇಕ ವಿಭಾಗಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ದಾಖಲೆಗಳು ಇಲ್ಲಿ ಸಂಗ್ರಹವಾಗುತ್ತವೆ. ತನ್ನ ದಾಖಲೆಗಳನ್ನು ಆಕ್ಸೆಸ್‌ ಮಾಡಲು ಪ್ರತಿ ವಿದ್ಯಾರ್ಥಿಗೂ ಅವಕಾಶ ಇರುತ್ತದೆ. ಯಾವಾಗ ಬೇಕಾದರೂ ಅವುಗಳನ್ನು ನೋಡಿಕೊಳ್ಳಬಹುದು. ಜತೆಗೆ, ಆ ವಿದ್ಯಾರ್ಥಿಯ ಉದ್ಯೋಗದಾತನೂ ಕೂಡ ಆ ಉದ್ಯೋಗ ನೀಡುವುದಕ್ಕೆ ಮುನ್ನ ಪರಿಶೀಲನೆ ಮಾಡಬಹುದು. ಇಲ್ಲಿ ಎಲ್ಲ ದಾಖಲೆಗಳು ಸುರಕ್ಷಿತವಾಗಿರುತ್ತವೆ ಹಾಗೂ ಕದಿಯುವ ಅಥವಾ ಕಳುವಾಗುವ ಅವಕಾಶ ಇರುವುದೇ ಇಲ್ಲ. ನಕಲು ಮಾಡುವ ಸಾಧ್ಯತೆಯೂ ಇರುವುದಿಲ್ಲ. ಮಳೆ, ಗಾಳಿಗೆ ಸಿಕ್ಕಿ ಹಾಳಾಗುತ್ತವೆ ಎನ್ನುವ ಭಯವೂ ಇರುವುದಿಲ್ಲ ಎಂದು ಡಾ.ಅಶ್ವತ್ಥನಾರಾಯಣ ಮಾಹಿತಿ ನೀಡಿದರು.


ರಾಜ್ಯದಲ್ಲಿ 2003ರಿಂದಲೇ ಎಸ್ಸೆಸ್ಸೆಲ್ಸಿ ಅಂಕಪಟ್ಟಿಯನ್ನು, 2008ರಿಂದ ದ್ವಿತೀಯ ಪಿಯುಸಿ ಅಂಕಪಟ್ಟಿಯನ್ನು ಡಿಜಿಟಲೀಕರಣ ಮಾಡಲಾಗಿದೆ. ಆಗಿನಿಂದ ಮುದ್ರಿತ ಅಂಕಪಟ್ಟಿಗಳನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದ್ದರೂ ಆ ದತ್ತಾಂಶ ನಮ್ಮಲ್ಲಿ ಇದೆ. ಆ ದತ್ತಾಂಶವನ್ನು ಈಗ ರಾಷ್ಟ್ರೀಯ ಶೈಕ್ಷಣಿಕ ದಾಖಲೆಗಳ ಸಂಗ್ರಹಗಾರ (National Academic Depository-NAD) ಪೋರ್ಟಲ್‌ಗೆ ಅಪ್‌ಲೋಡ್‌ ಮಾಡಲಾಗುವುದು ಎಂದರು.


ಶೈಕ್ಷಣಿಕ ಡಿಜಿ ಲಾಕರ್‌ ಆಕ್ಸಸ್‌ ಹೇಗೆ?


ಅಂದಹಾಗೆ ಈ ಲಾಕರ್‌ನ ಪ್ರವೇಶ ಸುಲಭ. ಪ್ರತಿ ವಿದ್ಯಾರ್ಥಿಯೂ ತನ್ನ ಆಧಾರ್‌ ಸಂಖ್ಯೆ ಮೂಲಕ National Academic Depository-NAD ಪೋರ್ಟಲ್‌ಗೆ ನೋಂದಣಿ ಮಾಡಿಕೊಳ್ಳಬಹುದು. ಅದರಲ್ಲಿ ತನ್ನ ಇ-ಕೆವೈಸಿಯನ್ನು ತುಂಬಿ ಅಪ್‌ಲೋಡ್‌ ಮಾಡಿದ ನಂತರ ತನ್ನೆಲ್ಲ ದಾಖಲೆಗಳನ್ನು ಯಾವುದೇ ವಿದ್ಯಾರ್ಥಿಯೂ ಆಕ್ಸೆಸ್‌ ಮಾಡಬಹುದು. ಇನ್ನು ಎಲ್ಲ ವಿವಿಗಳು, ಶೈಕ್ಷಣಿಕ ಸಂಸ್ಥೆಗಳು ತಮ್ಮಲ್ಲಿ ವ್ಯಾಸಂಗ ಮಾಡಿ ಪದವಿ ಅಥವಾ ಯಾವುದೇ ಸರ್ಟಿಫಿಕೇಟ್‌ ಪಡೆದ ವಿದ್ಯಾರ್ಥಿಯ ಎಲ್ಲ ದಾಖಲೆಗಳನ್ನು ಡಿಜಿಟಲ್‌ ಸಹಿಯೊಂದಿಗೆ ಈ ಪೋರ್ಟಲ್‌ಗೆ ಅಪ್‌ಲೋಡ್‌ ಮಾಡಬೇಕು ಎಂದರು ಡಿಸಿಎಂ.
ಹಣಕಾಸು ಹೊರೆ ಇಲ್ಲ. ನಮ್ಮ ವಿದ್ಯಾರ್ಥಿಗಳ ದಾಖಲೆಗಳಿಗೆ ಬೇಕಾದ ಸ್ಪೇಸ್‌ ಅನ್ನು NAD ನೀಡುತ್ತದೆ. ನಿರ್ವಹಣೆ ಮತ್ತು ಭದ್ರತೆಯ ಹೊಣೆಗಾರಿಕೆಯೂ ಆ ಸಂಸ್ಥೆಯದ್ದೇ. ಹೀಗಾಗಿ ರಾಜ್ಯಕ್ಕೆ ಹಣಕಾಸು ಹೊರೆ ಬೀಳುವುದಿಲ್ಲ. ನಮ್ಮ ಕಡೆಯಿಂದ ವಿದ್ಯಾರ್ಥಿಗಳ ದಾಖಲೆಗಳನ್ನು ಅಪ್‌ಲೋಡ್‌ ಮಾಡಿದರೆ ಸಾಕು ಎಂದರು.


ಡಿಜಿಟಲ್‌ ಇಂಡಿಯಾ ಡ್ರೈವ್‌ ಮೂಲಕ ಶೈಕ್ಷಣಿಕ ಡಿಜಿ ಲಾಕರ್‌ ವ್ಯವಸ್ಥೆಯನ್ನು ಕೇಂದ್ರ ಸರಕಾರ ಬಹಳ ಹಿಂದೆಯೇ ಅನುಷ್ಠಾನಕ್ಕೆ ತಂದಿದೆ. ಆದರೆ, ಇಂಥ ಕ್ರಾಂತಿಕಾರಕ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಹಿಂದಿನ ಸರಕಾರಗಳು ನಿರ್ಲಕ್ಷ್ಯ ತಾಳಿದ್ದವು. ಅಂಕಿ-ಅಂಶಗಳ ಪ್ರಕಾರ ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವಲ್ಲಿ ಕರ್ನಾಟಕವು 22ನೇ ಸ್ಥಾನದಲ್ಲಿದೆ. ಐಟಿ, ತಂತ್ರಜ್ಞಾನ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ದೇಶದಲ್ಲಿಯೇ ಮುಂಚೂಣಿಯಲ್ಲಿರುವ ನಮ್ಮ ರಾಜ್ಯ ಇಂಥ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಹಿಂದೆಮುಂದೆ ನೋಡಿರುವುದನ್ನು ಕಂಡು ನನಗೆ ನೋವಾಯಿತು. ಕೂಡಲೇ ಈ ವ್ಯವಸ್ಥೆಯನ್ನು ಜಾರಿ ಮಾಡಲು ಎಲ್ಲ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ಡಾ.ಅಶ್ವತ್ಥನಾರಾಯಣ ವಿವರಿಸಿದರು.


ಇದನ್ನು ಓದಿ: ಹಾಸನದಲ್ಲಿ 10 ಮಂದಿ ಶಿಕ್ಷಕರಿಗೆ ಕೊರೋನಾ ಪಾಸಿಟಿವ್; ಆತಂಕದಲ್ಲಿ ವಿದ್ಯಾರ್ಥಿಗಳು, ಪೋಷಕರು!


ಇಡೀ ಜಗತ್ತು ಡಿಜಿಟಲ್‌ ಜಗತ್ತಿನ ಹಿಂದೆ ಶರವೇಗದಲ್ಲಿ ಪ್ರಯಾಣ ಮಾಡುತ್ತಿದೆ. ಈ ವಿಷಯದಲ್ಲಿ ಕರ್ನಾಟಕ ಯಾವ ಕಾರಣಕ್ಕೂ ಹಿಂದೆ ಬೀಳಬಾರದು. ಈ ಹಿನ್ನೆಲೆಯಲ್ಲಿ ಶೈಕ್ಷಣಿಕ ಡಿಜಿ ಲಾಕರ್‌ ಸಿಸ್ಟಮ್‌ ಜಾರಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ನನ್ನ ನೇತೃತ್ವದಲ್ಲಿ ಉನ್ನತಾಧಿಕಾರಿ ಸಮಿತಿ ರಚನೆ ಜತೆಗೆ, ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಚಾಲನಾ ಸಮಿತಿ, ಇ-ಗವರ್ನೆನ್ಸ್‌ ಯೋಜನಾ ನಿರ್ದೇಶಕರ ನೇತೃತ್ವದಲ್ಲಿ ಯೋಜನಾ ನಿರ್ವಹಣಾ ಸಮಿತಿಯನ್ನು ರಚಿಸಲಾಗಿದೆ ಎಂದು ಡಿಸಿಎಂ ತಿಳಿಸಿದರು.


ಇ- ಆಡಳಿತ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೀವ್ ಚಾವ್ಲಾ, ಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ್ ನಾಯಕ್, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್, ಪಿಯು ನಿರ್ದೇಶಕಿ ಸ್ನೇಹಲ್, ಪ್ರೌಢಶಿಕ್ಷಣ ಇಲಾಖೆಯ ನಿರ್ದೇಶಕಿ ಸುಮಂಗಲ ಹಾಜರಿದ್ದರು. ಎನ್ಎಡಿ ಪ್ರತಿನಿಧಿ ಅಮಿತ್ ಅವರು ದೆಹಲಿಯಿಂದಲೇ ವಿಡಿಯೊ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು.

Published by:HR Ramesh
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು