ವಿಜಯಪುರ: ಸಿದ್ದರಾಮಯ್ಯ (Siddaramaiah) ಸಿಎಂ ಆಗಲಿ ಎಂದು ಬಾಲಕಿಯೊಬ್ಬಳು ಐದು ಸಾವಿರ ರೂಪಾಯಿ ಹಣವನ್ನು ದೇಣಿಗೆಯಾಗಿ ನೀಡಿದ ಅಪರೂಪದ ಘಟನೆ ವಿಜಯಪುರದಲ್ಲಿ ನಡೆಯಿತು. ವಿಜಯಪುರ (Vijayapura) ಜಿಲ್ಲೆ ಸಿಂದಗಿ ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಯಾತ್ರೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಭಾಗವಹಿಸಿದ್ದರು. ಈ ವೇಳೆ ಸಮಾವೇಶದಲ್ಲಿ ಬಂದಿದ್ದ 11 ವರ್ಷದ ಜಿಯಾ ರಫೀಕ್ (Ziya Rafeeq) ಎಂಬ ಬಾಲಕಿ ತಾನು ಕೂಡಿಟ್ಟ 5000 ರೂಪಾಯಿ ಹಣವನ್ನು ದೇಣಿಗೆಯಾಗಿ ಕೊಟ್ಟಿದ್ದಾಳೆ.
ತಾನು ಕೂಡಿಟ್ಟ 5000 ರೂಪಾಯಿ ಹಣವನ್ನು ಸಿದ್ದರಾಮಯ್ಯ ಅವರಿಗೆ ನೀಡುತ್ತಿದ್ದಂತೆ ಅದನ್ನು ಪಡೆದ ಸಿದ್ದರಾಮಯ್ಯ ವಾಪಸ್ ಬಾಲಕಿಗೆ ನೀಡಿದರು. ಈ ವೇಳೆ ಅವರು ನಿನ್ನ ವಿದ್ಯಾಭ್ಯಾಸಕ್ಕೆ ಈ ಹಣವನ್ನು ಬಳಸಿಕೋ, ಚೆನ್ನಾಗಿ ಓದಿ ದೊಡ್ಡವಳಾಗಬೇಕು ಎಂದು ಆತ್ಮವಿಶ್ವಾಸ ತುಂಬಿದರು.
ಸಿದ್ದರಾಮಯ್ಯ ಗರಂ
ಮುಂಬರುವ ಚುನಾವಣೆಯಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗರಂ ಆಗಿದ್ದಾರೆ. ಪತ್ರಕರ್ತರು ಕೋಲಾರ (Kolar) ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲುವ ಕುರಿತು ಪ್ರಶ್ನೆ ಕೇಳಿದರು. ಆಗ ಸಿದ್ದರಾಮುಯ್ಯ ಅವರು ಪತ್ರಕರ್ತರ ವಿರುದ್ಧ ಸಿಡಿಮಿಡಿಗೊಂಡರು.
ಕೋಲಾರ ಮತ ಕ್ಷೇತ್ರದಲ್ಲಿ ಸ್ಪರ್ಧಿಸುವುದು ತಮಗೆ ಸುರಕ್ಷಿತವಲ್ಲ ಎಂಬ ರಾಜಕೀಯ ನಾಯಕರ ಹೇಳಿಕೆ ಕುರಿತು ಸುದ್ದಿಗಾರರು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು. ಆಗ ಉತ್ತರಿಸಿದ ಅವರು, ನಾನು ಕೋಲಾರದಿಂದ ಸ್ಪರ್ಧಿಸುವುದಕ್ಕೆ ನಿರ್ಧರಿಸಿದ್ದೇನೆ. ಸೇಫ್ ಅಲ್ಲ ಅನ್ನುವುದು ನಿಮಗೆ ಗೊತ್ತಾ ಎಂದು ಮರುಪ್ರಶ್ನೆ ಹಾಕಿದರು.
ಅಲ್ಲದೇ, ಡೂ ಯೂ ನೋ ದಿ ಸೋಷಿಯಲ್ ಬ್ಯಾಟಲ್ ಆಪ್ ದಿ ಕೋಲಾರ ಕಾನ್ಸಿಸ್ಟಿಟ್ಯೂಯೆನ್ಸಿ...? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಯಾರೋ ಹೇಳಿದ್ರೆ ಕೇಳಬೇಡ್ರಿ. ನಿಮಗೆ ಗೊತ್ತಾ ಹೋಗ್ಲೀ. ಕೋಲಾರ ಹೆಂಗಿದೆ ಅಂತ ಗೊತ್ತೇನ್ರೀ? ಗೊತ್ತಿದ್ರೆ ಮಾತಾಡಿ. ಗೊತ್ತಿಲ್ಲದೆ ಇದ್ದಲ್ಲಿ ಡೋಂಟ್ ಟಾಕ್ ಎಂದು ಖಡಕ್ ಆಗಿ ಪ್ರತಿಕ್ರಿಯೆ ನೀಡಿದರು.
'ಅವರು ಎಂದಾದರೂ ಗೆದ್ದಿದ್ದಾರಾ ನೀವೇ ಹೇಳ್ರಪ್ಪ..'
ಇನ್ನು ರಾಜ್ಯದಲ್ಲಿ ಜೆಡಿಎಸ್ ಪಕ್ಷ 123 ಕ್ಷೇತ್ರದಲ್ಲಿ ಗೆಲ್ಲುತ್ತದೆ ಎಂಬ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಅವರು ಎಂದಾದರೂ ಗೆದ್ದಿದ್ದಾರಾ ನೀವೇ ಹೇಳ್ರಪ್ಪ, ನಾನು ಅಧ್ಯಕ್ಷನಾಗಿದ್ದಾಗಲೇ 2004ರಲ್ಲಿ 59 ಸೀಟ್ ಗೆದ್ದಿತ್ತು. 2008 ರಲ್ಲಿ 28 ಗೆದ್ರು, 2013 ರಲ್ಲಿ 40 ಗೆದ್ರು, ಹೋದ ಸಾರಿ 30 ಗೆದ್ರು, ಈಗ ಒಮ್ಮೆಗೆ 123 ಸ್ಥಾನಗಳಲ್ಲಿ ಗೆಲ್ತಾರಾ? ಎಂದು ಮರು ಪ್ರಶ್ನಿಸಿದರು.
ಇದನ್ನೂ ಓದಿ: Pastel Colour Lehengas: ಮದುವೆ ವೇಳೆ ನೀವು ಬಾಲಿವುಡ್ ನಟಿಯರಂತೆ ಕಾಣಿಸ್ಕೊಬೇಕಾ? ಹಾಗಾದ್ರೆ ಈ ರೀತಿಯ ಲೆಹೆಂಗಾ ಖರೀದಿಸಿ
'ಸಿಎಂ ಇಬ್ರಾಹಿಂ ಮಾತಿಗೆ ಒಂದು ಪರ್ಸೆಂಟ್ ಕಿಮ್ಮತ್ತು ಕೊಡಬೇಡಿ..'
ಇನ್ನು ಕಾಂಗ್ರೆಸ್‌ನಿಂದ ಜೆಡಿಎಸ್‌ಗೆ ಬರುವವರಿದ್ದಾರೆ ಎಂಬ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿಎಂ ಇಬ್ರಾಹಿಂ ಅವರ ಹೇಳಿಕೆ ವಿಚಾರಕ್ಕೆ ಉತ್ತರಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಸಿಎಂ ಇಬ್ರಾಹಿಂ ಮಾತಿಗೆ ಒಂದು ಪರ್ಸೆಂಟ್ ಕಿಮ್ಮತ್ತು ಕೊಡಬೇಡಿ. ಸಿಎಂ ಇಬ್ರಾಹಿಂ ಬರಿ ಸುಳ್ಳು ಹೇಳ್ತಾರೆ ಎಂದರು.
ಇನ್ನು ಎಚ್‌ಡಿ ಕುಮಾರಸ್ವಾಮಿ ಸಿಎಂ ಆಗದೆ ಹೋದ್ರೆ ನಿವೃತ್ತಿ ಆಗ್ತೀನಿ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ ಪಾಪ ವಯಸ್ಸಾಗಿದೆ ನಿವೃತ್ತಿಯಾಗಲಿ ಎಚ್‌ಡಿ ಕುಮಾರಸ್ವಾಮಿ ನಿವೃತ್ತಿ ಹೇಳಿಕೆ ಬಗ್ಗೆ ವ್ಯಂಗ್ಯವಾಡಿದರು.
ಕನ್ನಡಪರ ಹೋರಾಟಗಾರರ ಮೇಲೆ ರೌಡಿಶೀಟರ್ ಓಪನ್ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಹೋರಾಟಗಾರರ ಮೇಲೆ ರೌಡಿಶೀಟರ್ ಪ್ರಕರಣ ದಾಖಲಿಸಬಾರದು. ಭಾಷೆ, ನೆಲ, ಜಲಕ್ಕಾಗಿ ಹೋರಾಟ ಮಾಡಿದರೆ ಕೇಸ್ ಹಾಕಬಾರದು. ನಮ್ಮ ಭಾಷೆ, ನೆಲ, ಜಲಕ್ಕಾಗಿ ಹೋರಾಟ ಮಾಡೋದು ನಮ್ಮ ಹಕ್ಕು. ರಾಜ್ಯಗಳ ಸ್ವಾಯತ್ತ ಹಕ್ಕು ಯಾರೂ ಕಸಿದುಕೊಳ್ಳುವಂತಿಲ್ಲ. ಮಹಾಜನ ವರದಿಯಲ್ಲಿ ಬೆಳಗಾವಿ ನಮ್ಮದು ಅಂತಾ ಹೇಳಲಾಗಿದೆ. ಆದರೂ ಕಾಲು ಕೆರೆದುಕೊಂಡು ಜಗಳಕ್ಕೆ ಬರುವುದು ಸರಿಯಲ್ಲ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ