ಕರ್ನಾಟಕದ ಜನಪ್ರಿಯ ಬ್ರ್ಯಾಂಡ್ ಎಂದೆನಿಸಿರುವ ನಂದಿನಿ (Nandini) ಹಾಗೂ ಗುಜರಾತ್ ಮೂಲದ ಅಮುಲ್ ಬ್ರ್ಯಾಂಡ್ (Amul Brand) ನಡುವಿನ ಜಟಾಪಟಿ ದಿನದಿಂದ ದಿನಕ್ಕೆ ಕಾವೇರುತ್ತಲೇ ಇದೆ. ಈಗಾಗಲೇ ಅಮುಲ್ ಬಾಯ್‌ಕಾಟ್ ಅಭಿಯಾನ ಸಾಮಾಜಿಕ ತಾಣದಲ್ಲಿ (Social Media) ಕಿಚ್ಚು ಹಚ್ಚಿದ್ದು ವಿಪಕ್ಷ ನಾಯಕರು, ರಾಜಕೀಯ ವ್ಯಕ್ತಿಗಳು ಕೂಡ ನಂದಿನಿಯ ಪರವಾಗಿಯೇ ತಮ್ಮ ಬೆಂಬಲ ಎಂದು ಮುಕ್ತವಾಗಿ ತಿಳಿಸಿದ್ದಾರೆ. ವಿರೋಧದ ನಡುವೆಯೂ ಅಮುಲ್ ಭರ್ಜರಿಯಾಗಿಯೇ ವಿಧವಿಧವಾದ ಜಾಹೀರಾತುಗಳಿಂದ ಗ್ರಾಹಕರ ಮನಸೆಳೆಯುವ ಕೆಲಸ ಮಾಡುತ್ತಿದೆ.
ನಂದಿನಿ ಬ್ರ್ಯಾಂಡ್‌ನೊಂದಿಗೆ ಪೈಪೋಟಿ ಇಲ್ಲ
ಇದೀಗ ಗುಜರಾತ್ ಮೂಲದ ಅಮುಲ್ ಬ್ರಾಂಡ್‌ನ ಸಹಕಾರಿ ಮಾರಾಟದ ಮುಖ್ಯಸ್ಥರು, ಬೆಂಗಳೂರಿನಲ್ಲಿ ಆನ್‌ಲೈನ್ ತಾಣಗಳ ಮೂಲಕ ಮಾತ್ರ ಅಮುಲ್ ಹಾಲು ಹಾಗೂ ಮೊಸರನ್ನು ಮಾರಾಟ ಮಾಡುವುದಾಗಿ ತಿಳಿಸಿದ್ದು ರಾಜ್ಯಸರ್ಕಾರದ ಸಬ್ಸಿಡಿಯಿಂದ ಹೆಚ್ಚು ಅಗ್ಗವಾಗಿರುವ ನಂದಿನಿ ಬ್ರ್ಯಾಂಡ್‌ನೊಂದಿಗೆ ಯಾವುದೇ ಪೈಪೋಟಿ ನಡೆಸುತ್ತಿಲ್ಲ ಎಂದು ತಿಳಿಸಿದ್ದಾರೆ.
ಆನ್‌ಲೈನ್ ವೆಬ್ಸೈಟ್ಗಳ ಮೂಲಕ ಮಾತ್ರ ಅಮುಲ್ ಹಾಲು, ಮೊಸರು ಮಾರಾಟ
ಗುಜರಾತ್ ಕೋ-ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ ಎಮ್‌ಡಿ ಜಯೇನ್ ಮೆಹ್ತಾ ತಿಳಿಸಿರುವಂತೆ ಎರಡೂ ಬ್ರ್ಯಾಂಡ್‌ಗಳ ನಡುವೆ ಸ್ಪರ್ಧೆ ಇಲ್ಲ ಹಾಗೂ ಅಮುಲ್ ವರ್ಸಸ್ ನಂದಿನಿ ಸನ್ನಿವೇಶ ಇರಬಾರದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಅಮುಲ್ ವಿವಾದದ ಮಧ್ಯೆ ಇತರ ರಾಜ್ಯಗಳ ಆಕ್ರಮಣಕಾರಿ ಮಾರ್ಕೆಟಿಂಗ್ ನೀತಿಗೆ ಬ್ರೇಕ್ ಹಾಕಲು KCMMF ಒತ್ತಾಯ
ಏಕೆಂದರೆ ಎರಡೂ ಬ್ರ್ಯಾಂಡ್‌ಗಳು ರೈತರ ಒಡೆತನದ ಸಹಕಾರಿ ಸಂಸ್ಥೆಗಳಾಗಿವೆ. ಜಿಸಿಎಂಎಂಎಫ್ ತನ್ನ ಅಮುಲ್ ಉತ್ಪನ್ನಗಳನ್ನು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಮಾತ್ರ ಮಾರಾಟ ಮಾಡುತ್ತದೆ ಹಾಗೂ ಕರ್ನಾಟಕದ ಮಾರುಕಟ್ಟೆಗೆ ಪೂರ್ಣ ಪ್ರಮಾಣದಲ್ಲಿ ಪ್ರವೇಶಿಸುವ ಯಾವುದೇ ಯೋಜನೆ ಇಲ್ಲ ಎಂದು ಸುದ್ದಿಮಾಧ್ಯಮಕ್ಕೆ ತಿಳಿಸಿದ್ದಾರೆ.
ಅವರ ಪ್ರಕಾರ, ಅಮುಲ್ 2015-16 ರಿಂದ ಉತ್ತರ ಕರ್ನಾಟಕದ ಎರಡು ಜಿಲ್ಲೆಗಳಲ್ಲಿ ತಾಜಾ ಹಾಲನ್ನು ಮಾರಾಟ ಮಾಡುತ್ತಿದೆ ಆದರೆ ನಂದಿನಿಯೊಂದಿಗೆ ಯಾವುದೇ ಸ್ಪರ್ಧೆಯನ್ನು ಹೊಂದುವ ಇಚ್ಛೆಯಿಲ್ಲ ಎಂದು ತಿಳಿಸಿದ್ದಾರೆ.
ರಾಜ್ಯ ಸರಕಾರದ ಸಬ್ಸಿಡಿಯಿಂದ ನಂದಿನಿ ಹಾಲು ಅಮುಲ್‌ಗಿಂತ ಕಡಿಮೆ ದರದ್ದಾಗಿದೆ. ಅಮುಲ್‌ನ ಒಂದು ಲೀಟರ್ ಹಾಲಿಗೆ ರೂ 54 ದರವಾಗಿದ್ದರೆ ನಂದಿನಿಯ ಒಂದು ಲೀಟರ್ ಹಾಲಿನ ಬೆಲೆ ರೂ 39 ಆಗಿದೆ. ಇದಕ್ಕೆ ಕಾರಣವೆಂದರೆ ರೈತರಿಗೆ ರಾಜ್ಯ ಸರಕಾರ ಒದಗಿಸುವ ಸಬ್ಸಿಡಿಯಾಗಿದೆ ಎಂದು ಜಯೇನ್ ತಿಳಿಸಿದ್ದಾರೆ.
ರಾಜಕೀಯವಾಗಿ ರಂಗೇರಿದ ಬ್ರ್ಯಾಂಡ್ ಜಟಾಪಟಿ
ಅಮುಲ್ - ನಂದಿನಿಯೊಂದಿಗೆ ಪೈಪೋಟಿಗೆ ಇಳಿಯಲಿದೆ ಎಂಬ ಸುದ್ದಿಯೊಂದಿಗೆ ರಾಜಕೀಯವಾಗಿ ರಂಗೇರಿದ ಅಮುಲ್ ಬಾಯ್‌ಕಾಟ್ ಅಭಿಯಾನ ತಾರಕಕ್ಕೇರಿತು.
ಏಪ್ರಿಲ್ 5 ರಿಂದ, ಮನೆ ಮನೆಯಲ್ಲಿ ಅಮುಲ್ ಹಾಲು, ಮೊಸರು ಇನ್ನು ದೊರೆಯಲಿದೆ ಎಂಬ ಘೋಷಣೆಯ ಬೆನ್ನಲ್ಲೇ ನಂದಿನಿ ಬ್ರ್ಯಾಂಡ್ ಮಹತ್ವ ಕಳೆದುಕೊಳ್ಳಲಿದೆ ಎಂಬ ಸುದ್ದಿ ಕೂಡ ಹರಡಿತು.
ಅಸೆಂಬ್ಲಿ ಚುನಾವಣೆಗೆ ಇನ್ನೇನು ಕೆಲವೇ ದಿನಗಳಿರುವಾಗ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಆಡಳಿತ ಪಕ್ಷ ಬಿಜೆಪಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡವು ಹಾಗೂ ರೂ 21,000 ಕೋಟಿಯ ನಂದಿನಿ ಬ್ರ್ಯಾಂಡ್ ಅನ್ನು ಇನ್ನುಮುಂದೆ ಅಮುಲ್‌ನೊಂದಿಗೆ ವಿಲೀನಗೊಳ್ಳಲಿದೆ ಎಂಬ ಪ್ರಚಾರವನ್ನು ಹರಡಿಸಿದವು.
ಎರಡೂ ಬ್ರ್ಯಾಂಡ್‌ಗಳನ್ನು ವಿಲೀನಗೊಳಿಸುವ ಪ್ರಶ್ನೆಯೇ ಇಲ್ಲ. ಎರಡೂ ಕೂಡ ಸಹಕಾರಿ ಸಂಘಗಳು. ಅಮುಲ್ ಗುಜರಾತ್‌ನ ರೈತರ ಒಡೆತನದಲ್ಲಿದ್ದರೆ ನಂದಿನಿ ಕರ್ನಾಟಕ್ ರೈತರ ಒಡೆತನದಲ್ಲಿದೆ. ಎರಡೂ ಬ್ರ್ಯಾಂಡ್‌ಗಳು ಭಾರತದ ಸಹಾಕಾರಿ ಡೈರಿ ಇಂಡಸ್ಟ್ರಿಗಾಗಿ ಹಲವಾರು ದಶಕಗಳಿಂದ ಜೊತೆಯಾಗಿ ಕೆಲಸ ಮಾಡುತ್ತಿವೆ. ಇವೆರಡೂ ಸಹಕಾರಿ ಸಂಘಟಗಳ ಜೊತೆಯಾದ ಸಂಯೋಜನೆಯಿಂದಲೇ ಭಾರತ ವಿಶ್ವದಲ್ಲಿಯೇ ಹಾಲಿನ ಉತ್ಪಾದನೆಯಲ್ಲಿ ದೊಡ್ಡ ಉತ್ಪಾದಕ ಎಂಬ ಹೆಸರು ಗಳಿಸಿದೆ ಎಂದು ಮೆಹ್ತಾ ತಿಳಿಸಿದ್ದಾರೆ.
ಲಾಭದಲ್ಲಿರುವ ಗುಜರಾತ್ ಹಾಲು ಸಹಕಾರಿ ಸಂಘ
GCMMF ತನ್ನ ಆದಾಯದಲ್ಲಿ 20% ಬೆಳವಣಿಗೆಯನ್ನು ಈ ಹಣಕಾಸು ವರ್ಷದಲ್ಲಿ ಸುಮಾರು 66,000 ಕೋಟಿ ರೂಪಾಯಿಗಳಿಗೆ ಬೇಡಿಕೆಯ ಮೇಲೆ ನಿರೀಕ್ಷಿಸುತ್ತಿದೆ. ಇದು 2022-23ರಲ್ಲಿ ರೂ 55,055 ಕೋಟಿ ವಹಿವಾಟು ದಾಖಲಿಸಿದೆ, ಇದು ಹಿಂದಿನ ವರ್ಷಕ್ಕಿಂತ 18.5 ರಷ್ಟು ಹೆಚ್ಚಾಗಿದೆ.
ಪ್ರಸ್ತುತ, GCMMF ದೇಶಾದ್ಯಂತ 98 ಹಾಲು ಸಂಸ್ಕರಣಾ ಘಟಕಗಳನ್ನು ಹೊಂದಿದ್ದು, ದಿನಕ್ಕೆ 470 ಲಕ್ಷ ಲೀಟರ್ ಸ್ಥಾಪಿತ ಸಾಮರ್ಥ್ಯ ಹೊಂದಿದೆ. ರೈತರಿಂದ ಪ್ರತಿದಿನ ಸರಾಸರಿ 270 ಲಕ್ಷ ಲೀಟರ್ ಹಾಲು ಸಂಗ್ರಹಿಸುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ