news18-kannada Updated:January 11, 2021, 8:05 AM IST
ಅಮೃತ್ ಮಹಲ್ ಗೋವು
ಚಿತ್ರದುರ್ಗ (ಜ.11): ಗೋ ಸಂಪತ್ತು ದೇಶದ ಸಂಪತ್ತು ಅನ್ನೋದು ನಮ್ಮ ಹಿರಿಯರ ಮಾತು. ಮನೆಯಲ್ಲೊಂದು ಗೋವು ಇದ್ದರೆ ಆ ಮನೆಯಲ್ಲಿ ಮುಕ್ಕೋಟಿ ದೇವರು ನೆಲೆಸಿರುತ್ತವೆ ಎನ್ನುತ್ತಾರೆ. ಅಂತಹ ದೇಶಿ ಗೋ ಸಂಪತ್ತನ್ನು ಉಳಿಸಲು ಚಿತ್ರದುರ್ಗ ಜಿಲ್ಲೆಯ ಈ ಊರಿನ ಜನ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಆದರೆ, ಈಗ ಆ ಊರಿನ ಅಪರೂಪದ ತಳಿ ಉಳಿಸಿಕೊಳ್ಳೋಕೆ ಜನರು ಸಂಕಷ್ಟ ಎದುರಿಸುವಂತಾಗಿದೆ. ಮುದ್ದು ಮುದ್ದಾಗಿ ಕಾಣ್ತಾ ಇರೋ ಈ ಹಸುಗಳು ಅಮೃತ್ ಮಹಲ್ ಅನ್ನೋ ಪಕ್ಕಾ ದೇಶಿ ತಳಿಯ ಹಸುಗಳು. ಈ ಹಸುಗಳ ಹಾಲಿಗೆ ಎಲ್ಲಿಲ್ಲದ ಬೇಡಿಕೆ. ಆದರೆ, ಇತ್ತೀಚಿನ ದಿನಗಳಲ್ಲಿ ದೇಶಿ ತಳಿಯ ಹಸುಗಳು ಕ್ಷೀಣಿಸುತ್ತಿದ್ದು, ಚಿತ್ರದುರ್ಗ ಜಿಲ್ಲೆ, ಹೊಳಲ್ಕೆರೆ ತಾಲೂಕಿನ ಕೊಡಗವಳ್ಳಿ ಹಟ್ಟಿಯ ಜನ ಅಮೃತ್ ಮಹಲ್ ತಳಿಯ ಹಸುಗಳನ್ನು ಉಳಿಸಿಕೊಳ್ಳಲು ಸಾಕಷ್ಟು ಹರಸಾಹಸ ಪಡುತ್ತಿದ್ದಾರೆ.
ಕೊಡಗವಳ್ಳಿ ಗ್ರಾಮದಲ್ಲಿ ಸುಮಾರು 200 ಕ್ಕೂ ಹೆಚ್ಚು ಮನೆಗಳಿದ್ದು, ಪ್ರತಿಯೊಬ್ಬರೂ ಸಾವಿರಾರು ಅಮೃತ್ ಮಹಲ್ ತಳಿಯ ಹಸುಗಳನ್ನು ಸಾಕುತ್ತಿದ್ದಾರೆ. ಹಸು ಸಾಕಿದ ಬಹುತೇಕರು ಹಾಲು ಮಾರಾಟ ಮಾಡೋದಿಲ್ಲ, ಬದಲಿಗೆ ಕರುಗಳೇ ಹಾಲು ಕುಡಿದುಕೊಂಡು ಬೆಳೆಯುತ್ತಿವೆ. ಇರುವ ಅಲ್ಪಸ್ವಲ್ಪ ಜಾಗದಲ್ಲಿ ಮೇವು ಬೆಳೆದುಕೊಂಡರೆ ಇತರೆ ಬೆಳೆ ಬೆಳೆದುಕೊಳ್ಳಲು ಆಗೋದಿಲ್ಲ. ಹಾಗಂತ ಮೇವು ಬೆಳೆಯದಿದ್ದರೆ ಗೋವು ಸಾಕೋದು ಕಷ್ಟ ಆಗುತ್ತದೆ. ಗ್ರಾಮದ ಸಾವಿರಾರು ಗೋವುಗಳಿಗೆ ಮೇವು ಪೂರೈಸಲು ಆಗುತ್ತಿಲ್ಲ. ಗ್ರಾಮದ ಸಮಿಪವೇ ಸಾವಿರಾರು ಎಕರೆ ಅಮೃತ್ ಮಹಲ್ ಕಾವಲು ಇದೆ. ಅಲ್ಲಿ ಗ್ರಾಮದ ಗೋವುಗಳಿಗೆ ಮೇವು ಬೆಳೆದುಕೊಳ್ಳಲು, ಮೇಯಿಸಲು ಅವಕಾಶ ಮಾಡಿಕೊಡಬೇಕು ಎನ್ನುತ್ತಾರೆ ಗ್ರಾಮಸ್ಥರು. ಕೊಡಗವಳ್ಳಿ ಹಟ್ಟಿಯ ದಿವಂಗತ ಹೆಚ್.ಎಸ್. ಬಡೇಗೌಡರಿಗೆ ಮೈಸೂರು ಸಂಸ್ಥಾನದ ಅರಸರು ಅಮೃತ್ ಮಹಲ್ ತಳಿಯ ಹಸು ಸಾಕಲು ಸೇರ್ವೆಗಾರಿಕೆ ನೀಡಿದ್ದರು.
ಇದನ್ನೂ ಓದಿ: ಚಿಕ್ಕಬಳ್ಳಾಪುರದ ಕಾಡಿನ ತುಂಬ ಸಾವಿರಾರು ಕೋಳಿ ಮರಿಗಳು; ಬ್ಯಾಗಿನಲ್ಲಿ ತುಂಬಿಕೊಂಡು ಹೋದ ಗ್ರಾಮಸ್ಥರು!
1959ರಲ್ಲಿ ಬಡೇಗೌಡರು ಸಾಕಿದ್ದ ಅಮೃತ್ ಮಹಲ್ ತಳಿಯ ಹಸು ಆಲ್ ಇಂಡಿಯಾ ಕ್ಯಾಟಲ್ ಶೋನಲ್ಲಿ ಭಾಗಿಯಾಗಿ 3ನೇ ಸ್ಥಾನ ಪಡೆದುಕೊಂಡಿತ್ತು. ಅದಕ್ಕೆ ಅಂದಿನ ಸರ್ಕಾರ ನೀಡಿದ್ದ ಪ್ರಶಸ್ತಿಗಳು ಇಂದಿಗೂ ಅವರ ಕುಟುಂಬದಲ್ಲಿ ಜೀವಂತವಾಗಿವೆ. ಅರಸರ ಕಾಲದಲ್ಲಿ ಸಾವಿರಾರು ಗೋವುಗಳನ್ನು ಸಾಕಿ ಸಲಹುತ್ತಿದ್ದ ಬಡೇಗೌಡರ ಕುಟುಂಬ ಇಂದಿಗೂ ಅಮೃತ್ ಮಹಲ್ ತಳಿಯ ಸಂವರ್ಧನೆಯ ಕಾಯಕದಲ್ಲಿ ತೊಡಗಿಕೊಂಡಿದೆ. ಆದರೆ, ಮೇವು ಸಮಸ್ಯೆಯಾಗುತ್ತಿದ್ದು, ಅಮೃತ್ ಮಹಲ್ ಕಾವಲಿನಲ್ಲಿ ಗ್ರಾಮದ ಜನರ ಗೋವುಗಳು ಮೇಯಿಸಿಕೊಳ್ಳಲು ಸರ್ಕಾರ ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಇತ್ತೀಚೆಗೆ ರಾಜ್ಯ ಸರ್ಕಾರ ಗೋ ಹತ್ಯೆ ನಿಷೇಧ ಕಾನೂನು ಜಾರಿಗೊಳಿಸಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರ ಜಂಟಿಯಾಗಿ ದೇಶಿ ಗೋ ತಳಿ ಸಂವರ್ಧನೆಗೆ ಯೋಜನೆ ರೂಪಿಸುತ್ತಿವೆ. ಆದರೆ, ಕೊಡಗವಳ್ಳಿ ಹಟ್ಟಿ ಗ್ರಾಮಸ್ಥರು ದಶಕಗಳಿಂದಲೂ ಯಾವುದೇ ಲಾಭವಿಲ್ಲದೆ, ಸರ್ಕಾರದ ಸೌಲಭ್ಯವಿಲ್ಲದೆ ಇದುವರೆಗೂ ತಳಿ ಸಂವರ್ಧನೆ ಮಾಡಿಕೊಂಡು ಬಂದಿರುವುದು ಶ್ಲಾಘನೀಯ ಕಾರ್ಯ. ಇನ್ನಾದರೂ ಸರ್ಕಾರ ಗ್ರಾಮಸ್ಥರ ಗೋವುಗಳಿಗೆ ಮೇವು ಬೆಳೆದುಕೊಳ್ಳಲು ಅನುವು ಮಾಡಿಕೊಡಬೇಕಿದೆ.
(ವರದಿ: ವಿನಾಯಕ ತೊಡರನಾಳ್)
Published by:
Sushma Chakre
First published:
January 11, 2021, 8:05 AM IST