ಧಾರವಾಡ : ವಿದ್ಯಾಕಾಶಿ ಎಂದೇ ಹೆಸರಾಗಿರುವ ಧಾರವಾಡದಲ್ಲಿ (Dharwad) ಕರ್ನಾಟಕ ವಿವಿ, ಕಾನೂನು ವಿವಿ, ಕೃಷಿ ವಿವಿ ಇವೆ. ಇದರ ಜೊತೆಗೆ ಐಐಟಿ ಹಾಗೂ ಐಐಐಟಿ ಕೂಡಾ ಬಂದಿವೆ. ಇದೀಗ ಧಾರವಾಡಕ್ಕೆ ಮತ್ತೊಂದು ಹೆಮ್ಮೆಯ ಗರಿ ಬಂದಿದೆ. ಶನಿವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯಕ್ಕೆ ಕ್ಯಾಂಪಸ್ಗೆ (Forensic University) ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು ದೆಹಲಿ ಬಿಟ್ಟರೆ ಫಾರೆನ್ಸಿಕ್ ವಿಭಾಗದಲ್ಲಿ ಕರ್ನಾಟಕ ಇದೆ. ಶಿಕ್ಷಣದಲ್ಲಿ ಮುಂದಿರುವ ಧಾರವಾಡಕ್ಕೆ ವಿಧಿ ವಿಜ್ಞಾನ ವಿಶ್ವವಿದ್ಯಾಲಯ ಕ್ಯಾಂಪಸ್ ಸೇರಿಕೊಂಡಿದೆ. ಇಂತಹ ವಿಶ್ವವಿದ್ಯಾಲಯಗಳಿಂದ ಭವಿಷ್ಯದಲ್ಲಿ ಅತಿ ಹೆಚ್ಚು ಫಾರೆನ್ಸಿಕ್ ತಜ್ಞರನ್ನು ಹೊಂದಿರುವ ದೇಶವಾಗಲಿದೆ ಎಂದು ಭವಿಷ್ಯ ಹೇಳಿದ್ದಾರೆ.
ಒಂದೇ ದಿನದಲ್ಲಿ ಕ್ಯಾಂಪಸ್ಗೆ 50 ಎಕರೆ ಜಾಗ
ಧಾರವಾಡದಲ್ಲಿಯೇ ವಿಧಿ ವಿಜ್ಞಾನ ವಿಶ್ವವಿದ್ಯಾಲಯ ಕ್ಯಾಂಪಸ್ ಮಾಡಿಕೊಡಬೇಕು ಎಂದು ಪ್ರಹ್ಲಾದ್ ಜೋಶಿ ಬೆನ್ನು ಬಿದ್ದಿದ್ದರು. ನಾನು ಕಾಡಿಸಬೇಕು ಅಂತಾನೆ ಜಾಗವೇ ಇಲ್ಲ, ಇಲ್ಲಿ ಹೇಗೆ ಮಂಜೂರು ಮಾಡಲಿ ಎಂದು ಹೇಳಿದ್ದೆ. ಆದರೆ ಒಂದೇ ದಿನದಲ್ಲಿ ಐವತ್ತು ಎಕರೆ ಜಾಗವನ್ನೆ ಹುಡುಕಿ ಕೊಟ್ಟರು. ಆಗ ನನಗೆ ಬೇರೆ ದಾರಿಯೇ ಇಲ್ಲದೇ ಕ್ಯಾಂಪಸ್ ಮಂಜೂರು ಮಾಡಿದೆ ಎಂದು ಅಮಿತ್ ಶಾ ಹೇಳಿದ್ದಾರೆ.
ಎಲ್ಕೆ ಅಡ್ವಾಣಿಯಿಂದ ವಿಧಿ ವಿಜ್ಞಾನ ವಿವಿ ಆರಂಭ
ಪ್ರಸ್ತುತ ನಮ್ಮ ದೇಶ ಅಪರಾಧ ಪತ್ತೆಯಲ್ಲಿ ತುಂಬಾ ಬೆಳೆದಿದೆ. ಇದಕ್ಕೆಲ್ಲಾ ಇದಕ್ಕೆ ಅಡಿಪಾಯ ಹಾಕಿದ್ದು ಎಲ್.ಕೆ. ಅಡ್ವಾಣಿಯವರು. ಅವರು ಗೃಹ ಸಚಿವರಾಗಿದ್ದಾಗಲೇ ವಿಧಿ ವಿಜ್ಞಾನ ವಿಭಾಗವನ್ನು ಆರಂಭಿಸಿದ್ದರು. ಪ್ರಸ್ತುತ ದಿನಗಳಲ್ಲಿ ವಿಧಿ ವಿಜ್ಞಾನದ ಮೂಲಕ ಅಪರಾಧ ಪತ್ತೆ ಮಹತ್ವ ಪಡೆದಿದೆ. ಇದಕ್ಕಾಗಿ ತಜ್ಞರ ನೇಮಕ ಮಾಡಬೇಕಾದರೆ ನಮ್ಮಲ್ಲಿ ತಜ್ಞರು ಇರಲಿಲ್ಲ. ಹೀಗಾಗಿಯೇ ದೇಶದಲ್ಲಿ ಫಾರೆನ್ಸಿಕ್ ವಿವಿಯನ್ನು ಮೋದಿಯವರು ಆರಂಭಿಸಿದರು ಎಂದು ಕೇಂದ್ರ ಸಚಿವ ಅಮಿತ್ ಶಾ ಹೇಳಿದರು.
ಇದನ್ನೂ ಓದಿ: Amit Shah: ವಿದ್ಯಾ ಕಾಶಿಗೆ ಆಗಮಿಸಿದ ಅಮಿತ್ ಶಾ, ಶಿಕ್ಷಣ ಕ್ಷೇತ್ರಕ್ಕೆ ಕೇಂದ್ರದಿಂದ ಭಾರಿ ಕೊಡುಗೆ
ಐದೇ ವರ್ಷದಲ್ಲಿ ಕಲಿತವರಿಗೆ ನೌಕರಿ
ವಿಧಿ ವಿಜ್ಞಾನ ಆರಂಭದಲ್ಲಿ ಕಷ್ಟದಿಂದಲೇ ಬೆಳೆಯಿತು. ಆದರೆ ಆರಂಭವಾದ ಐದು ವರ್ಷದಲ್ಲಿಯೇ ಇದಲ್ಲಿ ಕಲಿತವರಿಗೆ ನೌಕರಿ ಸಿಕ್ಕಿದೆ. ಇದು ನಮ್ಮ ವಿವಿ ಪರಿಕಲ್ಪನೆಗೆ ಯಶಸ್ವಿ ಸಿಕ್ಕಂತಾಗಿದೆ. ಎಸ್‌ಎಸ್‌ಎಲ್‌ಸಿ ಮುಗಿಸಿದ ತಕ್ಷಣವೇ ಫಾರೆನ್ಸಿಕ್ ಕಲಿಯಲು ಆರಂಭಿಸಬಹುದು. ಅಂತಹ ಒಂದು ಅವಕಾಶ ಈಗ ಈ ವಿವಿಯಿಂದ ದೊರೆಯಲಿದೆ. ಗುಜರಾತ್‌ನಲ್ಲಿ ವಿವಿ ಆಗುವಾಗ ನಾನು ಗುಜರಾತ್ ಗೃಹ ಸಚಿವನಾಗಿದ್ದೆ. ಈಗ ಕ್ಯಾಂಪಸ್‌ಗಳು ಬೆಳೆಯುತ್ತಿರುವಾಗ ಕೇಂದ್ರ ಗೃಹ ಸಚಿವನಾಗಿದ್ದೇನೆ ಎಂದು ತಿಳಿಸಿದರು.
ಹೆಚ್ಚು ಫಾರೆನ್ಸಿಕ್ ತಜ್ಞರನ್ನು ಹೊಂದಿದ ದೇಶವಾಗಲಿದೆ
ಇಂತಹ ವಿಶ್ವವಿದ್ಯಾಲಯಗಳು ದೇಶದಲ್ಲಿ ಆರಂಭವಾಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಜಗತ್ತಿನಲ್ಲಿಯೇ ಹೆಚ್ಚು ಫಾರೆನ್ಸಿಕ್ ತಜ್ಞರನ್ನು ಹೊಂದಿದ ದೇಶ ಭಾರತವಾಗಲಿದೆ. ಇವತ್ತು ಅಪರಾಧ ಜಗತ್ತು ಬೇರೆ ಬೇರೆ ಆಯಾಮದಲ್ಲಿ ಬೆಳೆದಿದೆ. ಪೊಲೀಸರಿಗಿಂತ ಅಪರಾಧಿಗಳು ಎರಡು ಹೆಜ್ಜೆ ಮುಂದಿರುತ್ತಾರೆ. ಆದರೆ ಪೊಲೀಸರು ಅಪರಾಧಿಗಳಿಗಿಂತ ಎರಡು ಹೆಜ್ಜೆ ಮುಂದೆ ಹೋಗಬೇಕಿದೆ. ಅದಕ್ಕಾಗಿ ಇದಕ್ಕಾಗಿ ಈಗ ತಂತ್ರಜ್ಞಾನ ಅಧಾರಿತ ತನಿಖೆ ಮಾಡಬೇಕಾಗಿದೆ. ಅಪರಾಧಿಗಳಿಗೆ ಶಿಕ್ಷೆ ಕೊಡಿಸಬೇಕಾದರೆ ಅಪರಾಧ ದೃಢವಾಗಬೇಕು. ಇತ್ತೀಚೆಗೆ ಅನೇಕ ಆರೋಪಿಗಳಿಗೆ ಶಿಕ್ಷೆಯಾಗುತ್ತಿದೆ. ಅದೆಲ್ಲದರ ಹಿಂದೆ ಫಾರೆನ್ಸಿಕ್ ತಜ್ಞರ ಪಾತ್ರ ಇದೆ ಎಂದು ಅಮಿತ್ ಶಾ ಪ್ರಶಂಸಿಸಿದರು.
ದೆಹಲಿ ಬಿಟ್ಟರೆ ಕರ್ನಾಟಕವೇ ಮುಂದೆ
ಫಾರೆನ್ಸಿಕ್ಸ್ ವಿಭಾಗಕ್ಕೆ ಹೆಚ್ಚು ಮಹತ್ವ ಕೊಟ್ಟಿರುವ ರಾಜ್ಯಗಳಲ್ಲಿ ದೆಹಲಿ ಬಿಟ್ಟರೆ ಕರ್ನಾಟಕ ಇದೆ. ಇದೀಗ ಈ ವಿಶ್ವವಿದ್ಯಾಲಯ ಆರಂಭದಿಂದ ಕರ್ನಾಟಕದಲ್ಲಿ ಮತ್ತಷ್ಟು ಈ ವಿಭಾಗ ಮತ್ತಷ್ಟು ಬೆಳೆಯಲಿದೆ. ಇನ್ನು ವಿಧಿವಿಜ್ಞಾನದ ಸಾಕ್ಷಿಗೆ ನ್ಯಾಯಾಲಯ ಮಹತ್ವ ಕೊಡಬೇಕಿದೆ. ಇದಕ್ಕಾಗಿ ಸಾಕ್ಷಿ ದೃಢತೆ ಕಾನೂನನನ್ನು ಸಹ ಬದಲಾವಣೆ ಮಾಡುವವರಿದ್ದೇವೆ.
ಈಗ ಅಪರಾಧ ಬಾಯಿಬಿಡಿಸಲು ಥರ್ಡ್ ಡಿಗ್ರಿ ಟ್ರೀಟ್ಮೆಂಟ್ ಮಾಡುವ ಸಮಯವಲ್ಲ. ಈಗ ಏನಿದ್ದರೂ ತಂತ್ರಜ್ಞಾನದ ಸಮಯವಾಗಿದ್ದು, ಭಾರತದ ಕಾನೂನು ಸುವ್ಯವಸ್ಥೆ ಸರಿ ಮಾಡಬೇಕಿದೆ. ಅದಕ್ಕಾಗಿ ನಾವು ಅನೇಕ ಬದಲಾವಣೆಗಳನ್ನು ಮಾಡಬೇಕಿದೆ ಎಂದರು.
ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆ
ಫಾರೆನ್ಸಿಕ್ ವಿಶ್ವವಿದ್ಯಾಲಯ ಕೇವಲ ಕಲಿಸುವ ಕಾರ್ಯ ಮಾತ್ರ ಮಾಡುವುದಿಲ್ಲ. ಜೊತೆಗೆ ತಂತ್ರಜ್ಞಾನ ಕ್ರೇತ್ರವನ್ನು ಬೆಳೆಸುತ್ತದೆ. ಅನೇಕ ಸೌಲಭ್ಯಗಳನ್ನು ಸೃಷ್ಟಿಸುತ್ತದೆ. ಈಗಾಗಲೇ ಅಪರಾಧ ಕೃತ್ಯಗಳಲ್ಲಿ ಪಾಲ್ಗೊಳ್ಳುವ ಎಲ್ಲಾ ಕೈದಿಗಳ ಪಿಂಗರ್ ಪ್ರಿಂಟ್ ದಾಖಲು ಮಾಡುವ ಕಾರ್ಯ ನಡೆದಿದೆ. ಇದರಿಂದ ಶೀಘ್ರವಾಗಿ ಅಪರಾಧ ಪತ್ತೆ ಮಾಡಬಹುದು. ಈಗಾಗಲೇ ಒಂದಷ್ಟು ಆಗಿದೆ. ಆದರೆ ಫಿಂಗರ್ ಪ್ರಿಂಟ್ ದಾಖಲು ಮಾಡುವುದನ್ನ ಸಾರ್ವತ್ರಿಕ ಮಾಡುವವರಿದ್ದೇವೆ. ಆಗ ಎಲ್ಲಾ ಕೈದಿಗಳ ಬೆರಳಚ್ಚಿನ ಡಾಟಾ ನಮ್ಮಬಳಿ ಸಿಗಲಿದೆ. ದೇಶವ್ಯಾಪಿ ಇದರಿಂದ ಅಪರಾಧ ತಡೆಗೆ ಅನುಕೂಲವಾಗಲಿದೆ ಎಂದು ಅಮಿತ್ ಶಾ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ