ಮಂಗಳೂರು: ಕರಾವಳಿ ಜಿಲ್ಲೆಗಳು (Karavali) ಬಿಜೆಪಿ ಪಾಲಿನ ಭದ್ರಕೋಟೆ. ಈ ಬಾರಿ ಕರಾವಳಿ ಜಿಲ್ಲೆಯಲ್ಲಿ ಎಲ್ಲಾ ಸ್ಥಾನಗಳಲ್ಲಿ ಗೆಲುವು ಪಡೆಯಲು ಕೇಸರಿ ಬ್ರಿಗೇಡ್ ಭರ್ಜರಿ ತಯಾರಿ ನಡೆಸಿದೆ. ಹೀಗಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಇಂದು ತುಳುನಾಡಿಗೆ (Tulu Nadu) ಆಗಮಿಸಿ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ. ಮೇಲಿಂದ ಮೇಲೆ ಕರ್ನಾಟಕ (Karnataka) ಪ್ರವಾಸ ಕೈಗೊಳ್ಳುತ್ತಿರುವ ಅಮಿತ್ ಶಾ, ಇವತ್ತು ಮಂಗಳೂರಿನಲ್ಲಿ (Mangaluru) ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಕೇರಳದ (Kerala) ಕಣ್ಣೂರಿನಿಂದ ನೇರವಾಗಿ ಪುತ್ತೂರಿನ ಈಶ್ವರಮಂಗಲಕ್ಕೆ (Puttur Ishwaramangala Temple) ಆಗಮಿಸಿ, ಅಮರಗಿರಿಯಲ್ಲಿ ನಿರ್ಮಾಣವಾಗಿರುವ ಭಾರತ ಮಾತೆಯ ಮಂದಿರವನ್ನು ಲೋಕಾರ್ಪಣೆಗೊಳಿಸಿದರು.
ಕಲ್ಲು ಎಸೆಯೋದಕ್ಕೂ ಭಯ ಬೀಳ್ತಿದ್ದಾರೆ
ಹನುಮಗಿರಿ ಪಂಚಮುಖಿ ಅಂಜನೇಯ ಕ್ಷೇತ್ರದ ಪಕ್ಕದಲ್ಲೇ ಇರುವ ಭಾರತ ಮಾತಾ ಮಂದಿರವನ್ನು ಸುಮಾರು ಎರಡೂವರೆ ಎಕರೆ ಜಾಗದಲ್ಲಿ ನಿರ್ಮಾಣ ಮಾಡಲಾಗಿದೆ. ಅದಕ್ಕೂ ಮುನ್ನ ಹನುಮಗಿರಿಯ ಪಂಚಮುಖಿ ಆಂಜನೇಯ ಕ್ಷೇತ್ರಕ್ಕೆ ಅಮಿತ್ ಶಾ ಭೇಟಿ ನೀಡಿದ್ದರು. ಬಳಿಕ ಮಾತಾಡಿದ ಅವರು, 370 ರದ್ದು ಮಾಡುವಾಗ ಕಾಂಗ್ರೆಸ್, ಜೆಡಿಎಸ್ನವರು ಬೇಡ ಎಂದರು. ರಕ್ತದ ಕೋಡಿ ಹರಿಯುತ್ತದೆ ಎಂದಿದ್ದರು. ಆದರೆ, ರಕ್ತದ ಕೋಡಿ ಹರಿಸುವುದು ಬೇರೆ ಮಾತು, ಈಗ ಕಲ್ಲು ಎಸೆಯುವುದಕ್ಕೆ ಭಯಪಡುವ ಸ್ಥಿತಿ ಬಂದಿದೆ ಎಂದರು.
ಇದನ್ನೂ ಓದಿ: Kantara-Amit Shah: ಕಾಂತಾರ ಸಿನಿಮಾ ನೋಡಿದ ಮೇಲೆ ಇಲ್ಲಿನ ಸಂಸ್ಕೃತಿ ತಿಳಿಯಿತು; ದೈವದ ನಾಡನ್ನು ಕೊಂಡಾಡಿದ ಅಮಿತ್ ಶಾ
ಇದಾದ ಬಳಿಕ ಪುತ್ತೂರಿನ ವಿವೇಕಾನಂದ ಶಾಲಾ ಮೈದಾನದಲ್ಲಿ ನಡೆದ ಕ್ಯಾಂಪ್ಕೋದ ಸುವರ್ಣ ವರ್ಷಾಚರಣೆ ಕಾರ್ಯಕ್ರಮದಲ್ಲಿ ಅಮಿತ್ ಶಾ ಭಾಗಿಯಾಗಿದ್ದರು. ಈ ವೇಳೆ ಅಡಿಕೆ ಬೆಳೆಗಾರರ ಸಂಘವಾಗಿರುವ ಕ್ಯಾಂಪ್ಕೋ ಅಗ್ರಿಮಾಲ್, ಕಲ್ಪ ತೆಂಗಿನ ಎಣ್ಣೆ ಉತ್ಪನ್ನ ಬಿಡುಗಡೆ ಮತ್ತು ಭದ್ರಾವತಿಯ ಅಡಿಕೆ ಗೋದಾಮು ಉದ್ಘಾಟನೆ ಮಾಡಿದರು. ಇದೇ ವೇಳೆ ಕರಾವಳಿ ಸಂಸ್ಕೃತಿಯನ್ನು ಸ್ಮರಿಸಿದ ಕೇಂದ್ರ ಸಚಿವರು, ಕಾಂಗ್ರೆಸ್ ವಿರುದ್ಧ ಗುಡುಗಿದರು.
ನಮ್ಮ ಪ್ರದೇಶಕ್ಕೂ ನಿಮ್ಮ ಪ್ರದೇಶಕ್ಕೂ ಅವಿನಾಭಾವ ಸಂಬಂಧ ಇದೆ
ಸುಪಾರಿ, ತೆಂಗು, ರಬ್ಬರ್, ಗೋಡಂಬಿ ಇವೆಲ್ಲವನ್ನೂ ಈ ಭಾಗದ ರೈತರು ಬೆವರು ಹರಿಸಿ ಬೆಳೆಯುತ್ತಾರೆ. ಗುಜರಾತಿಗಳು ನಿಮ್ಮ ಸುಪಾರಿ ತಿನ್ನುತ್ತಾರೆ. ಸುಪಾರಿ ತಿಂದರೆ ಮಂಗಳೂರು ನೆನಪಾಗುತ್ತೆ. ನಮ್ಮ ಪ್ರದೇಶಕ್ಕೂ ನಿಮ್ಮ ಪ್ರದೇಶಕ್ಕೂ ಅವಿನಾಭಾವ ಸಂಬಂಧ ಇದೆ ಎಂದು ಹೇಳಿದರು. ಅಲ್ಲದೆ, ಇಡೀ ವಿಶ್ವದ ಗಮನ ಸೆಳೆದ ಕಾಂತಾರ ಸಿನಿಮಾ ಬಗ್ಗೆಯೂ ಅಮಿತ್ ಶಾ ಪ್ರಸ್ತಾಪಿಸಿದ್ದರು. ಕಾಂತಾರ ಸಿನಿಮಾ ನೋಡಿದ್ದೇನೆ, ಇದರಿಂದ ಇಲ್ಲಿನ ಪರಂಪರೆ ತಿಳಿಯಿತು ಅಂದಿದ್ದಾರೆ.
ಜೆಡಿಎಸ್ಗೆ ಮತ ಹಾಕಿದರೆ ಕಾಂಗ್ರೆಸ್ಗೆ ಹೋಗುತ್ತೆ
ಕಾಂಗ್ರೆಸ್, ಜೆಡಿಎಸ್ ವಿರುದ್ಧದವೂ ವಾಗ್ದಾಳಿ ನಡೆಸಿ, ಜೆಡಿಎಸ್ಗೆ ಮತ ಹಾಕಿದರೆ ಕಾಂಗ್ರೆಸ್ಗೆ ಹೋಗುತ್ತೆ. ಕಾಂಗ್ರೆಸ್ಗೆ ಮತ ಹಾಕಿದರೆ ಜೆಡಿಎಸ್ಗೆ ಹೋಗುತ್ತೆ. ಬಿಜೆಪಿಗೆ ಮತ ಹಾಕಿದರೆ ಅದು ಬಿಜೆಪಿಗೆ ಸಿಗುತ್ತೆ. ಟಿಪ್ಪು ಹೆಸರಲ್ಲಿ ಕಾಂಗ್ರೆಸ್, ಜೆಡಿಎಸ್ಗೆ ವೋಟ್ ಕೊಡ್ತೀರಾ? ರಾಣಿ ಅಬ್ಬಕ್ಕ ಹೆಸರಲ್ಲಿ ಬಿಜೆಪಿಗೆ ಮತ ಹಾಕ್ತೀರಾ ನಿರ್ಧರಿಸಿ.
ಬಿಜೆಪಿಗೆ ಮತವನ್ನು ಹಾಕಿದರೆ ದೇಶ ಮತ್ತು ಕರ್ನಾಟಕದ ಅಭಿವೃದ್ಧಿಗೆ ಹಾಕುವ ಮತ ಮರೆಯಬೇಡಿ. ರಾಜ್ಯ ಕಾಂಗ್ರೆಸ್ ದೆಹಲಿಯ ಗಾಂಧಿ ಕುಟುಂಬದ ಎಟಿಎಂ ಆಗಿದೆ. ಈಗಾಗಲೇ ಪಿಎಫ್ಐ ಬ್ಯಾನ್ ಮಾಡಿ ನರೇಂದ್ರ ಮೋದಿ ಸರ್ಕಾರ ಮಾಡಿದೆ. ದೇಶದಲ್ಲಿ ನಕ್ಸಲ್ವಾದ ಮತ್ತು ಭಯೋತ್ಪಾದನಾ ಚಟುವಟಿಕೆ ನಿಲ್ಲಿಸಿದ್ದೇವೆ ಎಂದು ಹೇಳಿದರು.
ಕೆಂಜಾರು ಸಮೀಪದ ಶ್ರೀದೇವಿ ಸಂಸ್ಥೆಯಲ್ಲಿ ರಾಜ್ಯ ವಿಧಾನಸಭಾ ಚುನಾವಣಾ ಹಿನ್ನೆಲೆ ಅಮಿತ್ ಶಾ ಮಹತ್ವದ ಸಭೆ ನಡೆಸಿದ್ದರು. ಕೆಂಜಾರು ಶ್ರೀದೇವಿ ಕಾಲೇಜು ಸೆಮಿನಾರ್ ಹಾಲ್ನಲ್ಲಿ ಸಭೆ ಏರ್ಪಡಿಸಲಾಗಿತ್ತು. ರಾಜ್ಯ ಚುನಾವಣೆ ಹಿನ್ನೆಲೆ ನಡೆದ ಮಹತ್ವದ ಸಭೆಯಲ್ಲಿ, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವರಾದ ಸುನೀಲ್ ಕುಮಾರ್, ಅಂಗಾರ ಸೇರಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳ ಬಿಜೆಪಿ ಶಾಸಕರು ಸೇರಿದಂತೆ ಪ್ರಮುಖ ನಾಯಕರು ಸಭೆಯಲ್ಲಿ ಭಾಗಿಯಾಗಿದ್ದರು.
ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳ ನಾಯಕರ ಜೊತೆ ಸಭೆ ನಡೆಸಿದ ಅಮಿತ್ ಶಾ ಚುನಾವಣೆ ಗೆಲ್ಲಲು ನಾಯಕರಿಗೆ ಕೆಲವು ಟಾಸ್ಕ್ಗಳನ್ನೂ ನೀಡಿದ್ದಾರೆ. ಸಭೆ ಬಳಿಕ ದೆಹಲಿಗೆ ವಾಪಸ್ ಆದ ಅಮಿತ್ ಶಾ, ಮುಂದಿನ ದಿನಗಳಲ್ಲಿ ಕರ್ನಾಟಕಕ್ಕೆ ಸರಣಿ ಭೇಟಿ ನೀಡಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ