ಬೆಳಗಾವಿ (ಜ.17): 'ಕರ್ನಾಟಕದ ಲೋಕಪ್ರಿಯ ಮುಖ್ಯಮಂತ್ರಿ ಯಡಿಯೂರಪ್ಪ ಜೀ..'- ಬೆಳಗಾವಿಯ ಜನಸೇವಕ ಸಭೆಯಲ್ಲಿ ಹೀಗೆ ಭಾಷಣ ಆರಂಭಿಸಿದ ಕೇಂದ್ರ ಗೃಹಸಚಿವ ಅಮಿತ್ ಷಾ, ರಾಜ್ಯ ಸರ್ಕಾರವನ್ನು ಹಾಡಿಹೊಗಳಿದ್ದಾರೆ. ಅದರಲ್ಲೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜಾರಿಗೆ ತಂದಿರುವ ಯೋಜನೆಗಳನ್ನು ಶ್ಲಾಘಿಸಿದ್ದಾರೆ. ಕರ್ನಾಟಕ ರಾಜ್ಯದ ಸಿಎಂ ಕೊರೋನಾ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ ಎಂದರು.
ಕೊರೋನಾ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಚಾಲಕರಿಗೆ 5 ಸಾವಿರ ನೇರ ಹಣ ವರ್ಗಾವಣೆ ಮಾಡಿದ್ದಾರೆ ಎಂದು ಶ್ಲಾಘಿಸಿದರು. ಇಂತಹ ಒಳ್ಳೆಯ ಕೆಲಸಗಳನ್ನು ಮಾಡಿದಾಗ ಕಾಂಗ್ರೆಸ್ ಪಕ್ಷಕ್ಕೆ ಜೊತೆಯಾಗಿ ನಿಲ್ಲಲೂ ಸಹ ಬರುವುದಿಲ್ಲ. ಸರ್ಕಾರವು ಕೊರೋನಾ ಪರಿಸ್ಥಿತಿಯನ್ನು ಎದುರಿಸಲು ಹಲವು ರೀತಿಯ ವ್ಯವಸ್ಥೆ ಮಾಡಿತು. ಇದಾಗ್ಯೂ ಕಾಂಗ್ರೆಸ್ ಇದೀಗ ಕೊರೋನಾ ಲಸಿಕೆ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ ಎಂದು ಅಮಿತ್ ಷಾ ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ಬಾಗಲಕೋಟೆಯಲ್ಲಿ ಮಾತನಾಡಿದ ಅಮಿತ್ ಷಾ, ಯಡಿಯೂರಪ್ಪ ಕೂಡ ರೈತರ ಜನರ ಅಭಿವೃದ್ದಿಗೆ ಯಾವುದೇ ರೀತಿ ಹಿಂದೆ ಬಿದ್ದಿಲ್ಲ. ಕೇಂದ್ರದ ಎಲ್ಲಾ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ಮೂಲಕ ಉತ್ತಮ ಆಡಳಿತ ನೀಡುತ್ತಿದ್ದಾರೆ. ಕರ್ನಾಟಕದಲ್ಲೂ ಮೋದಿಯವರ ಯೋಜನೆಗಳನ್ನ ಪರಿಣಾಮಕಾರಿಯಾಗಿ ಅನುಷ್ಠಾಗೊಳಿಸಲಾಗಿದೆ. ಯಡಿಯೂರಪ್ಪ ಅವರಿಗೆ ಅಭಿನಂದಿಸುತ್ತೇನೆ ಎಂದರು.
ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕೆರಕಲಮಟ್ಟಿ ಗ್ರಾಮದ ಬಳಿಯಿರುವ ಕೇದಾರನಾಥ ಸಕ್ಕರೆ ಕಾರ್ಖಾನೆ ಆವರಣದಲ್ಲಿ ನಡೆದ ಕಾರ್ಖಾನೆಗಳ ಉದ್ಘಾಟನೆ, ಎಥೆನಾಲ್ ಉತ್ಪಾದನೆ ಹೆಚ್ಚಿಸುವ ಘಟಕಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಮಾತನಾಡಿದರು.
ಏನಿದು 5 ಸಾವಿರ ರೂ. ಯೋಜನೆ?
ಈ ಹಿಂದೆ ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಕ್ಯಾಬ್, ಟ್ಯಾಕ್ಸಿ ಹಾಗೂ ಆಟೊ ಚಾಲಕರಿಗೆ ರಾಜ್ಯ ಸರ್ಕಾರವು 5 ಸಾವಿರ ಸಹಾಯಧನ ಘೋಷಿಸಿತ್ತು. ಇದಕ್ಕಾಗಿ ಚಾಲಕರು ಸೇವಾಸಿಂಧು ಜಾಲತಾಣದ ಮೂಲಕ ಅರ್ಜಿ ಸಲ್ಲಿಸಲು ತಿಳಿಸಲಾಗಿತ್ತು. ಯಡಿಯೂರಪ್ಪ ಸರ್ಕಾರದ ಈ ಯೋಜನೆಯನ್ನು ಪ್ರಸ್ತಾಪಿಸಿ ಇಂದು ಗೃಹ ಸಚಿವರು ಮುಖ್ಯಮಂತ್ರಿಯನ್ನು ಶ್ಲಾಘಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ