ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (CM Basavaraj Bommai) ದೆಹಲಿಯಲ್ಲಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ (Union Minister Amit Shah), ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ (BJP President JP Nadda) ಸೇರಿದಂತೆ ಹೈಕಮಾಂಡ್ ನಾಯಕರನ್ನು (BJP High command Leaders) ಭೇಟಿಯಾಗುತ್ತಿದ್ದಾರೆ. ಸೋಮವಾರ ನಡೆದ ಸಭೆಯಲ್ಲಿ ಅಮಿತ್ ಶಾ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ತಿಳಿದು ಬಂದಿದೆ. ದಿಢೀರ್ ದೆಹಲಿ ಭೇಟಿ ಹಿಂದೆ ಕುರ್ಚಿ ಕಂಟಕ, ಎಲೆಕ್ಷನ್ ಆತಂಕವಿದೆ ಎನ್ನಲಾಗಿದೆ. ಅಷ್ಟೇ ಅಲ್ಲದೇ ಮೀಸಲಾತಿ ಫೈಟ್ (Reservation) ಜೊತೆ ಜನಾರ್ದನ ರೆಡ್ಡಿ ಹೊಸ ಪಾರ್ಟಿ ಘೋಷಣೆ ಬಗ್ಗೆಯೂ ಹೈಕಮಾಂಡ್ ನಾಯಕರ ಜೊತೆ ಮುಖ್ಯಮಂತ್ರಿಗಳು ಚರ್ಚೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಚುನಾವಣೆಗೆ ಇನ್ನೂ ಮೂರ್ನಾಲ್ಕು ತಿಂಗಳು ಇದ್ರೂ ಪಕ್ಷದಲ್ಲಿ ಸಂಪುಟ ವಿಸ್ತರಣೆಗೆ (Cabinet Expansion) ಒತ್ತಡ ಕೇಳಿ ಬರುತ್ತಿದೆ.
ಈ ಸಂಬಂಧ ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ (Former Minister Ramesh Jarkiholi) ಮತ್ತು ಕೆ.ಎಸ್.ಈಶ್ವರಪ್ಪ (Former Minister KS Eshwarappa) ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕುತ್ತಿದ್ದಾರೆ.
ಅಮಿತ್ ಶಾ ಜೊತೆಯಲ್ಲಿ ಹೈವೋಲ್ಟೇಜ್ ಸಭೆ
ಕೇಂದ್ರ ಗೃಹ ಸಚಿವ ಅಮಿತ್ ಶಾ ಮನೆಯಲ್ಲಿ ಸೋಮವಾರ ದೆಹಲಿಯಲ್ಲಿ ಹೈವೋಲ್ಟೇಜ್ ಸಭೆ ನಡೆಯಿತು. ಎರಡೂವರೆ ಗಂಟೆಗಳ ಕಾಲ ನಡೆದ ಸಭೆಯಲ್ಲಿ ಸಿಎಂ ಬೊಮ್ಮಾಯಿ ಭಾಗಿಯಾಗಿದ್ರು. ರಾಜ್ಯ ಸಚಿವ ಸಂಪುಟ ವಿಸ್ತರಣೆ, ರಾಜ್ಯ ಚುನಾವಣಾ ಸಿದ್ದತೆ, ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಮಹತ್ವದ ಸಮಾಲೋಚನೆ ಮಾಡಲಾಯ್ತು.
ಸಂಪುಟ ವಿಸ್ತರಣೆಗೆ ಬಗ್ಗೆ ಸಿಎಂ ಜಾಣ ಉತ್ತರ
ಸಭೆ ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ, ಡಿಸೆಂಬರ್ 30ಕ್ಕೆ ಅಮಿತ್ ಶಾ, ಜನವರಿ 12ಕ್ಕೆ ಪ್ರಧಾನಿ ಮೋದಿ ರಾಜ್ಯಕ್ಕೆ ಬರಲಿದ್ದಾರೆ ಅಂತ ಹೇಳಿದರು. ಇನ್ನು ಸಂಪುಟ ವಿಸ್ತರಣೆ ಬಗ್ಗೆ ಸಿಎಂ ಜಾಣ ಉತ್ತರ ನೀಡಿದ್ದಾರೆ. ಪ್ರಾಂತ್ಯವಾರು, ಜಾತಿವಾರು ಸಂಪುಟ ವಿಸ್ತರಣೆ ಚರ್ಚೆಯಾಗಿದೆ. ಸಂಪುಟ ವಿಸ್ತರಣೆ ವಿಚಾರ ಅಂತಿಮ ಹಂತಕ್ಕೆ ಬಂದಿದೆ. ಹೈಕಮಾಂಡ್ ಮಾರ್ಗದರ್ಶನದಂತೆ ವಿಸ್ತರಣೆ ಮಾಡ್ತೀವಿ ಅಂತ ಹೇಳಿದರು.
ಈ ಬಾರಿಗೂ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿಲ್ಲ ಎನ್ನಲಾಗುತ್ತಿದೆ. ಹಾಗಾಗಿ ರೆಬೆಲ್ ಆಗಿರುವ ನಾಯಕರು ಮುಂದೆ ಏನು ಮಾಡ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ. ಇತ್ತ ನೂತನ ಪಕ್ಷ ಘೋಷಣೆ ಮಾಡಿರುವ ಜನಾರ್ದನ ರೆಡ್ಡಿ, ಬಿಜೆಪಿಯಲ್ಲಿರುವ ಅತೃಪ್ತರನ್ನ ಸೆಳೆಯುವ ಸೂಚನೆ ನೀಡಿದ್ದಾರೆ.
ಮೀಸಲಾತಿ ಬಗ್ಗೆ ಸರ್ವಪಕ್ಷ ಸಭೆ
ರಾಜ್ಯ ಸರ್ಕಾರಕ್ಕೆ ಮೀಸಲಾತಿ ಸಂಕಷ್ಟ ಎದುರಾಗಿದೆ. ಈ ಕುರಿತು ಸಿಎಂ ಬೊಮ್ಮಾಯಿ ನಿನ್ನೆ ಕೇಂದ್ರ ಸಚಿವ ಅಮಿತ್ ಶಾ ಜೊತೆ ಚರ್ಚಿಸಿದ್ರು. ದೆಹಲಿಯಲ್ಲಿ ಮಾತನಾಡಿರೋ ಸಿಎಂ, ಪಂಚಮಸಾಲಿ ಮೀಸಲಾತಿ ಬಗ್ಗೆ ವರದಿ ಪಡೆದಿದ್ದೇವೆ. ಸರ್ಕಾರದ ನಿರ್ಧಾರಕ್ಕೂ ಮುನ್ನ ಸರ್ವಪಕ್ಷ ಸಭೆ ಕರೆಯುತ್ತೇವೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಧಾರ ಕೈಗೊಳ್ಳಲಾಗುತ್ತೆ ಅಂತ ಅಮಿತ್ ಶಾ ಸಭೆ ಬಳಿಕ ಸಿಎಂ ಬೊಮ್ಮಾಯಿ ಹೇಳಿದ್ರು.
ಐದು ವಿಷಯಗಳ ಜೊತೆ ದೆಹಲಿಗೆ ಸಿಎಂ
ಸಿಎಂ ಬೊಮ್ಮಾಯಿ ಒಟ್ಟು 5 ಪ್ರಮುಖ ವಿಷಯಗಳನ್ನು ತೆಗೆದುಕೊಂಡು ದೆಹಲಿಗೆ ಹೋಗಿದ್ದಾರೆ ಎಂದು ಹೇಳಲಾಗಿದೆ. ಈ ಐದು ವಿಷಯಗಳಿಗೆ ಸಂಬಂಧಿಸಿದಂತೆ ಪಕ್ಷದ ಅಧ್ಯಕ್ಷರಿಂದ ಸ್ಪಷ್ಟನೆ ಪಡೆಯಲು ಸಿಎಂ ಬೊಮ್ಮಾಯಿ ದೆಹಲಿಗೆ ತೆರಳಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: Bengaluru Roads: ರಸ್ತೆ ಗುಂಡಿ ವಿರುದ್ಧ ದೂರು ನೀಡಲು ಮೊಬೈಲ್ ಆ್ಯಪ್!
ಆ ‘ಐದು’ ಪ್ರಮುಖ ವಿಷಯಗಳು
1.2023ರ ಚುನಾವಣೆ ಕುರಿತ ತಯಾರಿ ಬಗ್ಗೆ ಚರ್ಚೆ
2.ಅತೃಪ್ತ ಕೆ.ಎಸ್.ಈಶ್ವರಪ್ಪ ಮತ್ತು ರಮೇಶ್ ಜಾರಕಿಹೊಳಿ ಸೇರಿದಂತೆ ಹಲವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದು.
3.ಜನಾರ್ದನ ರೆಡ್ಡಿ ಹೊಸ ಪಕ್ಷದಿಂದಾಗುವ ಡ್ಯಾಮೇಜ್ಗಳು
4.ಜನಾರ್ದನ ರೆಡ್ಡಿ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡರೆ ಆಗುವ ಲಾಭಗಳು
5.ಇದರ ಜೊತೆಗೆ ಮೀಸಲಾತಿ ಚರ್ಚೆ
ಈ ಎಲ್ಲಾ ಬೆಳವಣಿಗೆ ನಡುವೆ ಬಿಜೆಪಿಯ ಯುವ ಶಾಸಕರಿಂದ ಹೊಸ ಕೂಗು ಕೇಳಿ ಬಂದಿದೆ ಎಂದು ಹೇಳಲಾಗುತ್ತಿದೆ. ಚುನಾವಣೆ ಸಮೀಪಿಸುತ್ತಿದ್ದು, ಪಕ್ಷ ಹೊಸ ಮುಖಗಳಿಗೆ ಮಣೆ ಹಾಕಬೇಕು. ಇದರಿಂದ ಚುನಾವಣೆಯಲ್ಲಿ ಯುವ ಪೀಳಿಗೆ ಮತಗಳನ್ನು ಸೆಳೆಯಬಹುದು ಎಂದು ಹೇಳಿದ್ದಾರಂತೆ. ಈ ಬಗ್ಗೆ ಪಕ್ಷದಲ್ಲಿ ಚರ್ಚೆಗಳು ನಡೆಯುತ್ತಿವೆ ಎಂದು ಹೇಳಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ