ಬಾಗಲಕೋಟೆ(ಜ. 17): ಕರ್ನಾಟಕದಲ್ಲಿ ಯಡಿಯೂರಪ್ಪ ಕೂಡ ರೈತರ ಜನರ ಅಭಿವೃದ್ದಿಗೆ ಯಾವುದೇ ರೀತಿ ಹಿಂದೆ ಬಿದ್ದಿಲ್ಲ. ಕೇಂದ್ರದ ಎಲ್ಲಾ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ಮೂಲಕ ಉತ್ತಮ ಆಡಳಿತ ನೀಡುತ್ತಿದ್ದಾರೆ. ಕರ್ನಾಟಕದಲ್ಲೂ ಮೋದಿಯವರ ಯೋಜನೆಗಳನ್ನ ಪರಿಣಾಮಕಾರಿಯಾಗಿ ಅನುಷ್ಠಾಗೊಳಿಸಲಾಗಿದೆ. ಯಡಿಯೂರಪ್ಪ ಅವರಿಗೆ ಅಭಿನಂದಿಸುತ್ತೇನೆ ಎಂದು ಬಾಗಲಕೋಟೆಯಲ್ಲಿ ಕೇಂದ್ರ ಗೃಹ ಸಚಿವ, ಬಿಜೆಪಿ ಚಾಣಕ್ಯ ಅಮಿತ್ ಷಾ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಹಾಡಿಹೊಗಳುವ ಮೂಲಕ ಪರೋಕ್ಷವಾಗಿ ಮತ್ತೊಮ್ಮೆ ನಾಯಕತ್ವ ಬದಲಾವಣೆ ಆಗುತ್ತಾರೆ ಎನ್ನುವ ವಿಪಕ್ಷಗಳಿಗೆ ಕುಟುಕಿದ್ದಾರೆ.
ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕೆರಕಲಮಟ್ಟಿ ಗ್ರಾಮದ ಬಳಿಯಿರುವ ಕೇದಾರನಾಥ ಸಕ್ಕರೆ ಕಾರ್ಖಾನೆ ಆವರಣದಲ್ಲಿ ನಡೆದ ಕಾರ್ಖಾನೆಗಳ ಉದ್ಘಾಟನೆ, ಎಥೆನಾಲ್ ಉತ್ಪಾದನೆ ಹೆಚ್ಚಿಸುವ ಘಟಕಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಮಾತನಾಡಿದರು. “ಬಾಗಲಕೋಟೆ ಕ್ಷೇತ್ರದ ಪುಣ್ಯಭೂಮಿಗೆ ವಂದಿಸುತ್ತೇನೆ.ಇಲ್ಲಿಯ ಜನರು, ರೈತರು ಕೃಷಿಯನ್ನೇ ಅವಲಂಬಿಸಿದ್ದಾರೆ. ಈ ಭಾಗದ ರೈತರಿಗೆ ಕೋಟಿ ಕೋಟಿ ವಂದನೆಗಳು. ಮಕರ ಸಂಕ್ರಾಂತಿ ರೈತರ ಪಾಲಿನ ದೊಡ್ಡ ಹಬ್ಬ. ಸೂರ್ಯ ಪಥ ಬದಲಿಸುವ ಸಮಯ. ರೈತರಿಗೆ ಶುಭ ಕಾಮನೆಗಳು. ಇವತ್ತು ವಿವಿಧ ಯೋಜನೆಗಳ ಉದ್ಘಾಟನೆ ಕಾರ್ಯಕ್ರಮ ನೆರವೇರಿದ್ದೇನೆ. ನಿರಾಣಿ ಗ್ರೂಪ್ ಆಫ್ ಇಂಡಸ್ಟ್ರೀಸ್ ಸಾಹಸಕ್ಕೆ ಕೈ ಹಾಕಿದೆ. ಇದಕ್ಕಾಗಿ ಮುರುಗೇಶ ನಿರಾಣಿ ಅವರಿಗೆ ಅಭಿನಂದಿಸುತ್ತೇನೆ. ಇವರು ಉತ್ಸವ ಮೂರ್ತಿ” ಎಂದು ಅಮಿತ್ ಶಹಬ್ಬಾಸ್ ಗಿರಿ ನೀಡಿದರು.
“ಕರ್ನಾಟಕ ಜನರು 2014-2019 ರಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಪೂರ್ಣ ಬಹುಮತ ಕೊಟ್ಟಿದ್ದಾರೆ. ನಾವು ಅವರಿಗೆ ಆಭಾರಿಯಾಗಿದ್ದೇವೆ. ಮುಂಬೈ ಕರ್ನಾಟಕ ಕೂಡ ಬಿಜೆಪಿಯನ್ನು ಬೆಂಬಲಿಸುತ್ತ ಬಂದಿದೆ. ನಮ್ಮ ಪೆಟ್ರೋಲ್ ಹಾಗೂ ಇತರೇ ವಸ್ತುಗಳಲ್ಲಿಯೇ ಹೆಚ್ಚಿನ ಖರ್ಚಾಗುತ್ತೆ. ಇಂದಿನ ದಿನಮಾನಗಳಲ್ಲಿ ಎಥೆನಾಲ್ ಉತ್ಪಾದನೆ ಹೆಚ್ಚಿಸುವ ಕೆಲಸವನ್ನು ಮೋದಿ ಮಾಡ್ತಾ ಇದ್ದಾರೆ. ಇದರಿಂದ ಎಲ್ಲರಿಗೂ ಒಳಿತಾಗಲಿದೆ. ಖರ್ಚು ಕಡಿಮೆಯಾಗಲಿದೆ. ದೇಶದ ಜನರ ರೈತರಿಗೆ ಒಳ್ಳೆಯದಾಗಲಿದೆ. ಇದು ಮೋದಿಯವರ ಆತ್ಮನಿರ್ಭರ ಕೆಲಸ. ನಿರಾಣಿ ಗ್ರೂಪ್ ಕೂಡ ಎಥೇನಾಲ್ ಉತ್ಪಾದಿಸುತ್ತಿದೆ. ಎಥೆನಾಲ ಮೇಲೆ 2018ರಲ್ಲಿ ಜಿ.ಎಸ್.ಟಿ ಕೇವಲ 5% ಮಾಡಿದ್ದರಿಂದ ಎಲ್ಲರಿಗೂ ಅನುಕೂಲವಾಗಿದೆ. ರೈತರಿಗೂ ಅನುಕೂಲವಾಗಿದೆ, ಸಕ್ಕರೆ ಕಾರ್ಖಾನೆಗಳಿಗೂ ಅನುಕೂಲವಾಗಲಿದೆ. ಉದ್ಯೋಗವೂ ಹೆಚ್ಚಲಿದೆ. ಕಬ್ಬು, ತ್ಯಾಜ್ಯದಿಂದಲೂ ಕೂಡ ಎಥೆನಾಲ್ ಉತ್ಪಾದನೆ ಮಾಡಲು ಪರ್ಮಿಷನ್ ನೀಡಲಾಗಿದೆ. 2025 ರಷ್ಟರ ಹೊತ್ತಿಗೆ ಎಥೆನಾಲ್ ಶೇ 25ರಷ್ಟು ಉತ್ಪಾದಿಸುವ ಗುರಿ ಹೊಂದಲಾಗಿದೆ. ಇದರಿಂದ ರೈತರಿಗೂ ಅನುಕೂಲವಾಗಲಿದೆ. ಬಿಜೆಪಿಯ ನರೇಂದ್ರ ಮೋದಿಯವರ ದೂರದೃಷ್ಟಿಯಿಂದ ಇದು ಸಾಧ್ಯವಾಗಿದೆ.
ಇದನ್ನೂ ಓದಿ: Vaccination - ಎರಡನೇ ದಿನವೂ ಭರ್ಜರಿ ಲಸಿಕೆ ಅಭಿಯಾನ; ಬೆಂಗಳೂರಿನ 80 ವರ್ಷದ ವೈದ್ಯೆಗೆ ಮೊದಲ ವ್ಯಾಕ್ಸಿನ್
“2022ರ ಹೊತ್ತಿಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕೇಂದ್ರ ಸರ್ಕಾರ ಅನುಕೂಲ ಕಲ್ಪಿಸಲಿದೆ. ರೈತರ ಆದಾಯ ಹೆಚ್ಚಿಸುವ ಗುರಿಯೇ ಮೋದಿಯವರಿದ್ದಾಗಿದೆ. ಕಾಂಗ್ರೆಸ್ ತನ್ನ ಅಧಿಕಾರದಾವಧಿಯಲ್ಲಿ ರೈತರಿಗೆ ಖರ್ಚು ಮಾಡಿದ್ದು ಕೇವಲ 21300 ಕೋಟಿ ರೂಪಾಯಿ. ಮೋದಿ 1.34 ಲಕ್ಷ ಕೋಟಿ ರೂಪಾಯಿಯನ್ನು ರೈತರಿಗಾಗಿ ಖರ್ಚು ಮಾಡ್ತಾ ಇದ್ದಾರೆ. ಮೋದಿಜಿ ಕಾಂಗ್ರೆಸ್ಸಿಗರಿಗಿಂತ ಉತ್ತಮ ಆಡಳಿತ ನೀಡುತ್ತಿದ್ದಾರೆ. ಈಗ ರೈತರಿಗೆ ನೇರವಾಗಿ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಅವರ ಅಕೌಂಟಿಗೇ ಹಣ ಜಮೆ ಆಗುತ್ತಿದೆ. ಮೋದಿ ಸರ್ಕಾರ 10ಲಕ್ಷ ಕೋಟಿಗೂ ಹೆಚ್ಚು ಖರ್ಚು ಮಾಡಿ ರೈತರ ಅಭಿವೃದ್ದಿಗೆ ಶ್ರಮಿಸಲಾಗುತ್ತಿದೆ.
“ಕಾಶ್ಮೀರದಲ್ಲಿ 371 ಆರ್ಟಿಕಲ್ ತೆಗೆಯುವ ಧೈರ್ಯ ಯಾರೂ ಮಾಡಿರಲಿಲ್ಲ. ಮೋದಿಯವರು ತೆಗೆದು ಹಾಕಿದ್ದರು. ಈಗ ಕಾಶ್ಮೀರ ಯಾವತ್ತೂ ನಮ್ಮದೇ. ಬಾಗಲಕೋಟೆಯ ಪುಣ್ಯಭೂಮಿಯಲ್ಲಿ ನಿಂತು ಮನವಿ ಮಾಡುವೆ ಬಿಜೆಪಿ, ಮೋದಿ ಎಲ್ಲರ ಮೇಲೂ ನಿಮ್ಮ ಆಶೀರ್ವಾದವಿರಲಿ. ಆತ್ಮನಿರ್ಭರ ಭಾರತಕ್ಕೆ ನಿಮ್ಮ ಆಶೀರ್ವಾದವಿರಲಿ” ಕೇಂದ್ರ ಗೃಹ ಸಚಿವ ಅಮಿತ್ ಶಾ ಕೋರಿಕೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, “ಈ ಕಾರ್ಯಕ್ರಮದಲ್ಲಿ ನಾವೆಲ್ಲಾ ಒಟ್ಟಾಗಿ ಸಂತೋಷದಿಂದ ಭಾಗಿಯಾಗಿದ್ದೇವೆ. ಸರ್ದಾರ್ ವಲ್ಲಭಭಾಯಿ ಪಟೇಲ್ ನಂತರ ಗೃಹ ಮಂತ್ರಿಯಾಗಿ ಅಮಿತ್ ಷಾ ಅವರು ಬೆಳೆದಿದ್ದಾರೆ. ಈಗ ಇಬ್ಬರ ಬಗ್ಗೆ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಬಗ್ಗೆ ದೇಶದಲ್ಲಿ ಚರ್ಚೆಯಾಗುತ್ತಿದೆ. ದೇಶದಲ್ಲಿ ಅವರ ಪ್ರಯತ್ನದಿಂದ ಕ್ರಾಂತಿಕಾರಿ ಬದಲಾವಣೆಗಳಾಗಿವೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದ್ದು, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ, ಅಮಿತ್ ಶಾ ಗೃಹ ಮಂತ್ರಿ ಆಗಬೇಕು. ನಾನು ದೇಗುಲಕ್ಕೆ ಹೋದಾಗಲೆಲ್ಲ ಈ ಬಗ್ಗೆ ಪ್ರಾರ್ಥನೆ ಮಾಡುತ್ತೇನೆ. ಯಾರ ಮೇಲೆ ಅವಲಂಬಿತರಾಗದೇ ಸ್ವಂತ ಬಲದಿಂದ ಅಧಿಕಾರಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. 150 ಸ್ಥಾನ ಗೆಲ್ಲುವ ಮೂಲಕ ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ತರುತ್ತೇವೆ” ಎನ್ನುವ ಮೂಲಕ ಆಪರೇಷನ್ ಕಮಲಕ್ಕೆ ಕೈ ಹಾಕಿ ಸರ್ಕಾರ ನಡೆಸುತ್ತಿರುವುದರ ಸಂಕಷ್ಟವನ್ನು ಪರೋಕ್ಷವಾಗಿ ಹೊರ ಹಾಕಿದರು. ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಸ್ಪಷ್ಟ ಬಹುಮತದ ಸರ್ಕಾರ ತರುತ್ತೇವೆ ಎಂದು ಅಮಿತ್ ಷಾ ಅವರಿಗೆ ಭರವಸೆ ಕೊಡುತ್ತೇನೆ ಎಂದರು.
ಇದನ್ನೂ ಓದಿ: ದಶಕದ ಕನಸು ನನಸು - ಬಸವ ನಾಡಿನ ಭಾರತೀಯ ಮೀಸಲು ಪಡೆ ಬಟಾಲಿಯನ್ ಉದ್ಘಾಟಿಸಿದ ಅಮಿತ್ ಶಾ
ಕಾರ್ಯಕ್ರಮದಲ್ಲಿ ಸಚಿವ ಮುರುಗೇಶ್ ನಿರಾಣಿ ಪ್ರಾಸ್ತಾವಿಕವಾಗಿ ಮಾತನಾಡಿ, ಎಂ ಆರ್ ಎನ್ (ನಿರಾಣಿ) ಉದ್ಯಮಿ ಸಮೂಹ ಸಂಸ್ಥೆಯ ಸಾಧನೆ ಬಗ್ಗೆ ಹೇಳಿದರು. ಕಾರ್ಯಕ್ರಮದಲ್ಲಿ ವಿಜಯಪಥ, ನವಭಾರತದ ಹರಿಕಾರ ಪುಸ್ತಕ ಬಿಡುಗಡೆಗೊಳಿಸಿದರು. ಕಾರ್ಯಕ್ರಮದ ವೇದಿಕೆಗೆ ಬರುವ ಮುನ್ನ ಅಮಿತ್ ಷಾ 11ಗೋವುಗಳಿಗೆ ಪೂಜೆ ಸಲ್ಲಿಸಿ, ಕಾರ್ಖಾನೆ ಉದ್ಘಾಟನೆ, ಎಥೆನಾಲ್ ಉತ್ಪಾದನೆ ಹೆಚ್ಚಿಸುವ ಘಟಕಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ 40ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗಿದ್ದರು. ಸಚಿವ ಮುರುಗೇಶ್ ನಿರಾಣಿ ಅಮಿತ್ ಷಾ ಅವರಿಗೆ ಬೆಳ್ಳಿ ಗದೆ ನೀಡಿ ಗೌರವಿಸಿದರು. ವೇದಿಕೆ ಮೇಲೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಡಿಸಿಎಂ ಗೋವಿಂದ ಕಾರಜೋಳ, ಜಗದೀಶ್ ಶೆಟ್ಟರ್, ಬಿ ಸಿ ಪಾಟೀಲ್, ಆರ್ ಶಂಕರ್, ಉಮೇಶ್ ಕತ್ತಿ, ಶಶಿಕಲಾ ಜೊಲ್ಲೆ ಸೇರಿದಂತೆ ಶಾಸಕರು,ಸಂಸದರು ಭಾಗಿಯಾಗಿದ್ದರು.
ಕೇಂದ್ರ ಗೃಹ ಸಚಿವ ಅಮಿತ್ ಷಾ ಕಾರ್ಯಕ್ರಮ ಹಿನ್ನೆಲೆಯಲ್ಲಿ ಭಾರಿ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ ಜನರನ್ನು ತಪಾಸಿಸಿ, ಸ್ಯಾನಿಟೈಜ್ ಮಾಡಿ ವೇದಿಕೆಯೊಳಗೆ ಬಿಡಲಾಯಿತು. ಇನ್ನು ಪೊಲೀಸರು ಮುರುಗೇಶ್ ನಿರಾಣಿ ತಂದೆ ರುದ್ರಪ್ಪ, ತಾಯಿ ಸುಶೀಲಾಬಾಯಿ ಹಾಗೂ ಕುಟುಂಬಸ್ಥರನ್ನು ವಿಐಪಿ ಆಸನಗಳತ್ತ ಬಿಡಲಿಲ್ಲ. ಈ ವೇಳೆ ಪೊಲೀಸರೊಂದಿಗೆ ನಿರಾಣಿ ಮಾತನಾಡಿ, ತಮ್ಮ ಪೋಷಕರನ್ನು ಒಳಬಿಡುವಂತೆ ಸೂಚಿಸಿದ ಘಟನೆ ನಡೆದಿದೆ. ಕೇಂದ್ರ ಸರ್ಕಾರದ ತಿದ್ದುಪಡಿ ಕಾಯ್ದೆ ಹಿಂಪಡೆಯುವಂತೆ ಆಗ್ರಹಿಸಿ ರೈತ ಸಂಘದ ಜಿಲ್ಲಾಧ್ಯಕ್ಷ ಬಸವಂತಪ್ಪ ಕಾಂಬ್ಳೆ ನೇತೃತ್ವದಲ್ಲಿ ನೂರಾರು ರೈತರು ಪ್ರತಿಭಟನೆಗೆ ಮುಂದಾದ ವೇಳೆ ಕೆರಕಲಮಟ್ಟಿ ಬಳಿ ಪೊಲೀಸರು ರೈತರನ್ನು ತಡೆದು ಬಂಧಿಸಿ ಪೊಲೀಸ್ ಠಾಣೆಗೆ ಕರೆದೊಯ್ದರು. ಈ ವೇಳೆ ರೈತರು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ವರದಿ: ರಾಚಪ್ಪ ಬನ್ನಿದಿನ್ನಿ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ