ಕೊರೋನಾ ಅಟ್ಟಹಾಸದ ನಡುವೆಯೂ ಎಂಎಲ್​ಸಿ ನಾಮನಿರ್ದೇಶನ ಸ್ಥಾನಕ್ಕೆ ಲಾಬಿ ಶುರು

ಹಿರಿಯ ರಾಜಕಾರಣಿ ಶ್ರೀಕಾಂತ್ ಕುಲಕರ್ಣಿ ಸಂಘ ಪರಿವಾರದ ಮೂಲಕ ರಾಜಕಾರಣಕ್ಕೆ ಬಂದವರು. ಇದೀಗ ಇವರು ವಿಧಾನ ಪರಿಷತ್ ಸ್ಥಾನದ ಆಕಾಂಕ್ಷಿಯಾಗಿದ್ದು, ಹೈಕಮಾಂಡ್ ಶ್ರೀಕಾಂತ್ ಕುಲಕರ್ಣಿಗೆ ವಿಧಾನ ಪರಿಷತ್ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡುತ್ತಾ ಎಂದು ಕಾದು ನೋಡಬೇಕಿದೆ.

news18-kannada
Updated:May 23, 2020, 3:03 PM IST
ಕೊರೋನಾ ಅಟ್ಟಹಾಸದ ನಡುವೆಯೂ ಎಂಎಲ್​ಸಿ ನಾಮನಿರ್ದೇಶನ ಸ್ಥಾನಕ್ಕೆ ಲಾಬಿ ಶುರು
ಶ್ರೀಕಾಂತ್ ಕುಲಕರ್ಣಿ ಪರ ಅಭಿಮಾನಿಗಳು ಮಾಡಿರುವ ಪೋಸ್ಟ್.
  • Share this:
ಬಾಗಲಕೋಟೆ (ಮೇ 23): ರಾಜ್ಯದಲ್ಲಿ ಒಂದೆಡೆ  ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ.ಈ ಮಧ್ಯೆ ರಾಜ್ಯ ಬಿಜೆಪಿ ಪಾಳೆಯದಲ್ಲಿ ವಿಧಾನ ಪರಿಷತ್ ನಾಮನಿರ್ದೇಶನ ಸ್ಥಾನಕ್ಕೆ ಲಾಬಿ ಶುರುವಾಗಿದೆ.

ಜೂನ್ ತಿಂಗಳಲ್ಲಿ ವಿಧಾನ ಪರಿಷತ್ 5 ಸ್ಥಾನಗಳ ಅವಧಿ ಮುಗಿಯಲಿದೆ. ಹೀಗಾಗಿ ಈಗಿನಿಂದಲೇ ಆಕಾಂಕ್ಷಿಗಳು ಸ್ಥಾನ ಕೊಡಿಸಿ ಎಂದು ಹಿರಿಯ ಮುಖಂಡರ ದುಂಬಾಲು ಬಿದ್ದಿದ್ದಾರೆ. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾಗಿದ್ದು ಕಾಂಗ್ರೆಸ್, ಜೆಡಿಎಸ್ ನ ಅತೃಪ್ತ ಶಾಸಕರು. ಅತೃಪ್ತ ಶಾಸಕರು ರಾಜಿನಾಮೆ ನೀಡಿ, ಆ ಬಳಿಕ ಅನರ್ಹಗೊಂಡು, ನ್ಯಾಯಾಲಯದಲ್ಲಿ ಅರ್ಹರೆಂದು ಸಾಬೀತಾಗಿ ಚುನಾವಣೆಗೆ ಸ್ಪರ್ಧಿಸಿದ್ದರು‌. ಅವರಲ್ಲಿ ಕೆಲವರು ಮರು ಆಯ್ಕೆಯಾದರೆ, ಮತ್ತೆ ಕೆಲವರು ಸೋಲುಂಡರು. ಸೋಲುಂಡವರಿಗೆ ಎಂಎಲ್​ಸಿ ಸ್ಥಾನ ಕೊಡುತ್ತೇವೆಂದು ಬಿಜೆಪಿ ಹೈಕಮಾಂಡ್ ಅಭಯ ನೀಡಿದೆ. ಇದೀಗ ಜೂನ್ ತಿಂಗಳಲ್ಲಿ ತೆರವಾಗುವ ಸ್ಥಾನಗಳ ಮೇಲೆ ಎಚ್ ವಿಶ್ವನಾಥ, ಎಂಟಿಬಿ ನಾಗರಾಜ್, ಆರ್ ಶಂಕರ್ ಕಣ್ಣಿಟ್ಟಿದ್ದು, ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಇದೀಗ ಮೂಲ ಬಿಜೆಪಿ ಮಾಜಿ ಶಾಸಕರು ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಲಾಬಿ ಶುರು ಮಾಡಿರುವುದರಿಂದ ಬಿಜೆಪಿಗೆ ತಲೆನೋವು ಆಗುವ ಸಾಧ್ಯತೆ ಇದೆ. ಬಿಜೆಪಿ ಹೈಕಮಾಂಡ್ ವಲಸೆ, ಮೂಲ ಬಿಜೆಪಿ ಆಕಾಂಕ್ಷಿಗಳಿಗೆ ಅಳೆದು ತೂಗಿ ನೋಡಿ, ಅಸಮಾಧಾನವಾಗದ ರೀತಿಯಲ್ಲಿ ಪ್ರಾದೇಶಿಕ, ಜಾತಿವಾರು,ಅನುಭವವನ್ನಾಧರಿಸಿ ಸ್ಥಾನ ಹಂಚಿಕೆ ಮಾಡಬೇಕಿದೆ. ಸರ್ಕಾರದಿಂದ ನಾಮನಿರ್ದೇಶನ ಮಾಡುವ 5 ಸ್ಥಾನಗಳಿಗೆ ಬಿಜೆಪಿ ಹೈಕಮಾಂಡ್ ಯಾರಿಗೆ ಅವಕಾಶ ಕಲ್ಪಿಸುತ್ತದೆ ಅನ್ನೋದು ಸದ್ಯದ ಕುತೂಹಲ.

ಬಿಜೆಪಿ ಪಾಳೆಯದಲ್ಲಂತೂ ವಿಧಾನಪರಿಷತ್ ಸ್ಥಾನದ ಆಕಾಂಕ್ಷಿಗಳು ಈಗಾಗಲೇ ಲಾಬಿ ಶುರು ಮಾಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಹಿರಿಯ ಬಿಜೆಪಿ ಮುಖಂಡ ಶ್ರೀಕಾಂತ ಕುಲಕರ್ಣಿ ಎಂಎಲ್​ಸಿ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದು, ಈಗಾಗಲೇ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಚಿವರಾದ ಕೆ ಎಸ್ ಈಶ್ವರಪ್ಪ, ಗೋವಿಂದ ಕಾರಜೋಳ ಅವರನ್ನು ಭೇಟಿ ಮಾಡಿ ನಾಮನಿರ್ದೇಶನದ ಐದು ಸ್ಥಾನಗಳಲ್ಲಿ ನನಗೂ ಅವಕಾಶ ಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ನ್ಯೂಸ್ 18ನೊಂದಿಗೆ ಮಾತನಾಡಿದ ಶ್ರೀಕಾಂತ್ ಕುಲಕರ್ಣಿ, ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷಕ್ಕೆ ದುಡಿದಿದ್ದೇನೆ. ಕಳೆದ ಜಮಖಂಡಿ ಉಪ ಚುನಾವಣೆಯಲ್ಲಿ ಸೋಲಬೇಕಾಯಿತು. ಆದರೆ ಜಮಖಂಡಿ ಕ್ಷೇತ್ರದ ಜನ 53ಸಾವಿರ ಸಂಖ್ಯೆಯಲ್ಲಿ ಮತಗಳನ್ನು ನೀಡಿದ್ದರು. ಎಂಎಲ್ಸಿ ಸ್ಥಾನ ಸಿಕ್ಕರೆ ಜಮಖಂಡಿ ಜನತೆ ಸೇವೆ ಮಾಡಲು ಅನುಕೂಲವಾಗಲಿದೆ. ಈ ಬಗ್ಗೆ ಸಿಎಂ ಬಿ.ಎಸ್. ಯಡಿಯೂರಪ್ಪರಿಗೆ ಭೇಟಿಯಾಗಿ ಮನವಿ ಮಾಡಲಿದ್ದೇನೆ ಎಂದು ತಿಳಿಸಿದರು.

ಇನ್ನು ಶ್ರೀಕಾಂತ್ ಕುಲಕರ್ಣಿ ಅಭಿಮಾನಿಗಳು, ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷ ಕಟ್ಟಿದ ಶ್ರೀಕಾಂತ್ ಕುಲಕರ್ಣಿಗೆ ಎಂಎಲ್ಸಿ ಸ್ಥಾನ ನೀಡಲು ಆಗ್ರಹಿಸಿದ್ದಾರೆ. ಶ್ರೀಕಾಂತ್ ಕುಲಕರ್ಣಿಗೆ ಎಂಎಲ್ಸಿ ಸ್ಥಾನ ಸಿಕ್ಕರೆ ಸಂಗಮೇಶ್ ನಿರಾಣಿ ಜಮಖಂಡಿ ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧಿಸಲು ಹಾದಿ ಸುಗಮವಾಗಲಿದೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಕಳೆದ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಸಂಗಮೇಶ್ ನಿರಾಣಿಗೆ ಬಿಜೆಪಿ ಪಕ್ಷದ ಟಿಕೆಟ್ ಸಿಗಲಿಲ್ಲ. ಆಗ ಸಂಗಮೇಶ್ ನಿರಾಣಿ ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಬಿಜೆಪಿ ಅಭ್ಯರ್ಥಿ ಹಾಗೂ ಬಂಡಾಯ ಅಭ್ಯರ್ಥಿ ಮಧ್ಯೆ ಮತಗಳು ವಿಭಜನೆಯಾಗಿ ಕಾಂಗ್ರೆಸ್ ಅಭ್ಯರ್ಥಿ ದಿವಂಗತ ಸಿದ್ದು ನ್ಯಾಮಗೌಡ ಗೆಲುವು ಸಾಧಿಸಿದ್ದರು. ಆ ಬಳಿಕ ಸಿದ್ದು ನ್ಯಾಮಗೌಡ ರಸ್ತೆ ಅಪಘಾತದಲ್ಲಿ ವಿಧಿವಶರಾದರು. ಜಮಖಂಡಿ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಸಿದ್ದು ನ್ಯಾಮಗೌಡ ಪುತ್ರ ಆನಂದ ನ್ಯಾಮಗೌಡ ಸ್ಪರ್ಧಿಸಿದರೆ ಬಿಜೆಪಿಯಿಂದ ಶ್ರೀಕಾಂತ್ ಕುಲಕರ್ಣಿ ಸ್ಪರ್ಧಿಸಿದ್ದರು. ಉಪ ಚುನಾವಣೆಯಲ್ಲಿ ಸಂಗಮೇಶ್ ನಿರಾಣಿ, ಸೇರಿದಂತೆ ಬಂಡಾಯ ಮುಖಂಡರೆಲ್ಲರೂ ಒಂದಾಗಿ ಶ್ರೀಕಾಂತ್ ಕುಲಕರ್ಣಿ ಪರ ಪ್ರಚಾರ ಮಾಡಿದ್ದರು. ಪ್ರಚಾರದ ವೇಳೆಯಲ್ಲಿ ಶ್ರೀಕಾಂತ್ ಕುಲಕರ್ಣಿ ಇದು ನನ್ನ ಕೊನೆಯ ಚುನಾವಣೆ ಎಂದಿದ್ದರು.

ಇದನ್ನು ಓದಿ: ಕೇರಳದಲ್ಲಿ ಬಯಲಾಯ್ತು ಫಾದರ್​​​ನ ಕಾಮದಾಟ: ಚರ್ಚ್​​ನಲ್ಲೇ ಮಹಿಳೆ ಜತೆ ಸೆಕ್ಸ್​ ಮಾಡುತ್ತಾ ರೆಡ್​​ಹ್ಯಾಂಡ್ ಆಗಿ ಸಿಕ್ಕಿಬಿದ್ದ! ​​​

ಶ್ರೀಕಾಂತ ಕುಲಕರ್ಣಿ ಗೆಲುವಿಗಿಂತ ಸೋತಿದ್ದೆ ಹೆಚ್ಚು, ಬೀಳಗಿ, ಹಾಗೂ ಜಮಖಂಡಿ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದಾರೆ. ಜಮಖಂಡಿಯಿಂದ ಒಮ್ಮೆ ಶಾಸಕರಾಗಿ ಆಯ್ಕೆಯಾಗಿದ್ದರು. ಕಳೆದ ಜಮಖಂಡಿ ಉಪಚುನಾವಣೆಯಲ್ಲಿ 40ಸಾವಿರ ಮತಗಳಿಂದ ಸೋಲು ಕಂಡಿದ್ದರು. ಹಿರಿಯ ರಾಜಕಾರಣಿ ಶ್ರೀಕಾಂತ್ ಕುಲಕರ್ಣಿ ಸಂಘ ಪರಿವಾರದ ಮೂಲಕ ರಾಜಕಾರಣಕ್ಕೆ ಬಂದವರು. ಇದೀಗ ಇವರು ವಿಧಾನ ಪರಿಷತ್ ಸ್ಥಾನದ ಆಕಾಂಕ್ಷಿಯಾಗಿದ್ದು, ಹೈಕಮಾಂಡ್ ಶ್ರೀಕಾಂತ್ ಕುಲಕರ್ಣಿಗೆ ವಿಧಾನ ಪರಿಷತ್ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡುತ್ತಾ ಎಂದು ಕಾದು ನೋಡಬೇಕಿದೆ.
First published:May 23, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading