ಉತ್ತರ ಕನ್ನಡ ಜಿಲ್ಲೆಯಲ್ಲಿ ಆ್ಯಂಬುಲೆನ್ಸ್​​ಗಳ ‌ಸ್ಥಿತಿ ಗಂಭೀರ; ನಿರ್ವಹಣೆ ಇಲ್ಲದೆ ಸೊರಗುತ್ತಿವೆ 108 ವಾಹನಗಳು

ಯಾವುದೇ ಅಪಘಾತ, ಅಹಿತಕರ ಘಟನೆ ಅಥವಾ ಅನಾರೋಗ್ಯ ಕಾಣಿಸಿಕೊಳ್ಳಲಿ ಗಾಯಾಳುಗಳನ್ನು, ಅನಾರೋಗ್ಯ ಪೀಡಿತರನ್ನು  ಆಸ್ಪತ್ರೆಗೆ ದಾಖಲಿಸಲು ನೆನಪಾಗುವುದು 108 ಅಂಬ್ಯುಲೆನ್ಸ್. ಆದರೆ, ಇದೇ ಅಂಬ್ಯುಲೆನ್ಸ್ ಗಳು  ಗಾಯಾಳು ಹಾಗೂ ರೋಗಿಗಳ ಜೀವದ ಜತೆ ಚೆಲ್ಲಾಟ ನಡೆಸುತ್ತಿದೆ

ನಿರ್ವಹಣೆ ಇಲ್ಲದೆ ಸೊರಗಿರುವ ಆ್ಯಂಬುಲೆನ್ಸ್​

ನಿರ್ವಹಣೆ ಇಲ್ಲದೆ ಸೊರಗಿರುವ ಆ್ಯಂಬುಲೆನ್ಸ್​

  • Share this:
ಕಾರವಾರ(ಫೆ.14): ಉತ್ತರ ಕನ್ನಡ ಜಿಲ್ಲೆಯಲ್ಲಿ ಗಾಯಾಳುಗಳು ಮತ್ತು ರೋಗಿಗಳ ಪಾಲಿಗೆ ಜೀವರಕ್ಷಕನಾಗಿರುವ 108 ಆ್ಯಂಬುಲೆನ್ಸ್​ ಈಗ ತನ್ನನ್ನ ತಾನು ರಕ್ಷಿಸಿಕೊಳ್ಳುವುದೇ ಸವಾಲಾಗಿದೆ. ಜಿಲ್ಲೆಯಲ್ಲಿ 108 ವಾಹನಗಳು ನಿರ್ವಹಣೆ ಇಲ್ಲದೆ ಸೊರಗಿವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುವ 108 ಆ್ಯಂಬುಲೆನ್ಸ್​​ ವಾಹನಗಳು ನಿರ್ವಹಣೆ ಇಲ್ಲದೆ ಅಲ್ಲಲ್ಲಿ ಕೆಟ್ಟು ನಿಂತುಕೊಳ್ಳುತ್ತಿವೆ. ಕಳೆದ ಎರಡು ಮೂರು ವರ್ಷದಿಂದ ವಾಹನದ ಸರಿಯಾದ ನಿರ್ವಹಣೆ ಇಲ್ಲದೆ ವಾಹನಗಳು ಕೆಡುವಂತಾಗಿವೆ. ರಸ್ತೆ ಅಪಘಾತಗಳು ಆದಂತ ಸಂದರ್ಭದಲ್ಲಿ ಗಾಯಾಳುಗಳ ರಕ್ಷಣೆಗೆ ಧಾವಿಸುವ ಈ ವಾಹನಗಳಿಗೆ ಸುರಕ್ಷತೆ ಇಲ್ಲದಂತಾಗಿದೆ. ಹೋದಲೆಲ್ಲ ವಾಹನಗಳು ಕೆಟ್ಟು ನಿಲ್ಲುವುದರಿಂದ ಮತ್ತು ಸರಿಯಾದ ಸಮಯಕ್ಕೆ ಬಾರದಿರುವುದರಿಂದ ಒಂದೆಡೆ ಸಾರ್ವಜನಿಕರು ಆರೋಗ್ಯ ಇಲಾಖೆಯ ವಿರುದ್ದ ಮತ್ತು ವ್ಯವಸ್ಥೆ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇನ್ನೊಂದೆಡೆ 108  ಆ್ಯಂಬುಲೆನ್ಸ್ ಸಿಬ್ಬಂದಿ ಕೂಡಾ ಸಾರ್ವಜನಿಕರಿಗೆ ಉತ್ತರಿಸಲಾಗದೆ ಮೌನಕ್ಕೆ ಶರಣಾಗಿ ಬರುವ ಪರಿಪಾಟಲು ಮುಂದುವರೆದಿದೆ. ಜಿಲ್ಲೆಯಲ್ಲಿ ಈಗ ಒಟ್ಟು 20 ವಾಹನಗಳು ಕಾರ್ಯ ನಿರ್ವಹಿಸುತ್ತಿವೆ. ಖಾಸಗಿ ಜಿ.ವಿ.ಕೆ ಕಂಪನಿಯರು ಇದರ ಗುತ್ತಿಗೆ ಪಡೆದುಕೊಂಡಿದ್ದಾರೆ. 20ರ ಪೈಕಿ ಈಗ ಉತ್ತಮ ಕಂಡೀಷನ್ ನಲ್ಲಿ ಇರುವ ವಾಹನಗಳ ಸಂಖ್ಯೆ ಕೇವಲ 8 ಮಾತ್ರ. ಇನ್ನು 12 ವಾಹನಗಳು ಸರಿಯಾದ ಕಂಡೀಷನ್ ಇಲ್ಲದೆ ಸೊರಗುತ್ತಿವೆ. ಒಂದಲ್ಲ ಒಂದು ಸಮಸ್ಯೆಯಿಂದ ಈ ವಾಹನಗಳು ರೋಗಿಗಳ ಪಾಲಿಗೆ ರಕ್ಷಕನಾಗುತ್ತಿಲ್ಲ.

ಎಣ್ಣೆ ಪಾರ್ಟಿಗೆಂದು ಹೋದವನು ಗೆಳೆಯರಿಂದಲೇ ಕೊಲೆಯಾದ..!; ಕುಡಿದ ಮತ್ತಿನಲ್ಲಿ ವ್ಯಕ್ತಿಯ ಬರ್ಬರ ಹತ್ಯೆ

ಹೇಗಿದೆ  108 ಅವ್ಯವಸ್ಥೆ?

ಸವೆದ ಟೈರ್‌ಗಳು, ತುಕ್ಕು ಹಿಡಿದಿರುವ ಬ್ರೇಕ್ ಪೆಡಲ್, ಪ್ಲಾಸ್ಟಿಕ್‌ನಿಂದ ಸುತ್ತಿರುವ  ಪೈಪ್‌ಗಳು, ಸ್ಟ್ರೇಚರ್, ವೀಲ್ ಚೇರ್ ಮತ್ತು ಸ್ಕೂಪ್. ಕಾರ್ಯ ನಿರ್ವಹಿಸದ ವೆಂಟಿಲೇಟರ್, ಡಿಫಿಬ್ರಿಲೇಟರ್,  ಜೀವರಕ್ಷಕ ಎಲೆಕ್ಟ್ರಾನಿಕ್ ವಸ್ತುಗಳು. ಇದು ಜಿಲ್ಲೆಯಲ್ಲಿರುವ 108 ಅಂಬ್ಯುಲೆನ್ಸ್ ಅಸಲಿಯತ್ತು. ಹೀಗೆ ಸೂಕ್ತ ನಿರ್ವಹಣೆ ಇಲ್ಲದೆ ಸೊರಗಿರುವ 108 ಆ್ಯಂಬುಲೆನ್ಸ್ ಒಯ್ಯುವ ಚಾಲಕರ ಹಾಗೂ ಸಿಬ್ಬಂದಿಗಳ ಗೋಳು ಕೇಳುವರೇ ಇಲ್ಲ. ಜಿಲ್ಲಾ ಕೇಂದ್ರದಲ್ಲಿಯೇ ಯಮಲೋಕದ ದಾರಿ ತೋರಿಸಲು ಇದ್ದಂತಿರುವ 108 ಆ್ಯಂಬುಲೆನ್ಸ್ ಬಗ್ಗೆ ನ್ಯೂಸ್ 18 ಕನ್ನಡ ರಿಯಾಲಿಟಿ ಚೆಕ್‌ನಲ್ಲಿ ವಾಸ್ತವದ ಚಿತ್ರಣ ಸಂಪೂರ್ಣ ಬಯಲಾಗಿದೆ.

ಯಾವುದೇ ಅಪಘಾತ, ಅಹಿತಕರ ಘಟನೆ ಅಥವಾ ಅನಾರೋಗ್ಯ ಕಾಣಿಸಿಕೊಳ್ಳಲಿ ಗಾಯಾಳುಗಳನ್ನು, ಅನಾರೋಗ್ಯ ಪೀಡಿತರನ್ನು  ಆಸ್ಪತ್ರೆಗೆ ದಾಖಲಿಸಲು ನೆನಪಾಗುವುದು 108 ಅಂಬ್ಯುಲೆನ್ಸ್. ಆದರೆ, ಇದೇ ಅಂಬ್ಯುಲೆನ್ಸ್ ಗಳು  ಗಾಯಾಳು ಹಾಗೂ ರೋಗಿಗಳ ಜೀವದ ಜತೆ ಚೆಲ್ಲಾಟ ನಡೆಸುತ್ತಿದೆ.  ರಾಜ್ಯ ಸರಕಾರ ಖಾಸಗಿ ಸಂಸ್ಥೆಯ ಸಹಭಾಗಿತ್ವದಲ್ಲಿ ಜನರಿಗೆ ಉಚಿತ ಸೇವೆ ನೀಡಲು ಈ ಸೇವೆ ಪ್ರಾರಂಭಿಸಿದೆ. ಇದನ್ನು ಜಿ.ವಿ.ಕೆ ಎಂಬ ಸಂಸ್ಥೆ ನಿರ್ವಹಣೆ ಮಾಡುತ್ತಿದೆ.

ಆದರೆ,ಪ್ರಸ್ತುತ ಈ ಅಂಬ್ಯುಲೆನ್ಸ್ ಗಳ ಸ್ಥಿತಿ ನೋಡಿದರೆ ಜೀವ ಉಳಿಯೋದೆ ಅನುಮಾನ ಅನಿಸೋದು ಸುಳ್ಳಲ್ಲ. ಸಾಮಾನ್ಯವಾಗಿ ರಸ್ತೆ ಬದಿಗಳಲ್ಲಿ ಯಾವುದೇ ಅಪಘಾತಗಳು ನಡೆದಲ್ಲಿ ಅಥವಾ ಯಾವುದೇ ವ್ಯಕ್ತಿಗೆ ಅನಾರೋಗ್ಯ ಕಾಡಿದಲ್ಲಿ ಕೂಡಲೇ ಜನರು ಫೋನಾಯಿಸೋದು 108 ಅಂಬ್ಯುಲೆನ್ಸ್ ಗೆ. ಬಡವರ ಪಾಲಿನ ಆಶಾಕಿರಣವಾಗಿ ರೋಗಿಯ ಪ್ರಾಣ ಉಳಿಸುವುದರ ಜತೆಗೆ, ತುರ್ತು ಚಿಕಿತ್ಸೆಗೆ ಆಸ್ಪತ್ರೆಗೆ ಸೇರಿಸುವ ಈ ಅಂಬ್ಯುಲೆನ್ಸ್ ನಲ್ಲಿ ಹೊರಗಿನಿಂದ ಸರಿಯಾಗಿ ಗಮನಿಸಿದರೆ ವಾಹನದ ಸುತ್ತಲೂ ತುಕ್ಕು ಹಿಡಿದು ಬಿದ್ದಿದೆ.

ಮುಖ್ಯವಾಗಿ ಚಾಲಕನ ಪಕ್ಕದಲ್ಲಿ ಇರಬೇಕಾದ ಸೈಡ್ ಮಿರರೇ ಇಲ್ಲ.  ಹಿಂದಿನ ಬಾಗಿಲಿನ ಮೇಲ್ಭಾಗದಲ್ಲಿ ಉರಿಯಬೇಕಾಗಿದ್ದ ಲೈಟ್ ಅಂತೂ ಕಿತ್ತು ಹೋಗಿದೆ. ಗಾಯಾಳು, ರೋಗಿಗಳ ಜೀವ ಕಾಪಾಡುವ ವೆಂಟಿಲೇಟರ್ ಕಣ್ಮುಚ್ಚಿ ಕುಳಿತಿದೆ. ಅಕಸ್ಮಾತ್ ವ್ಯಕ್ತಿಯ ಶ್ವಾಸ ನಿಂತರೆ ಮತ್ತೆ ಉಸಿರಾಡುವಂತೆ ಮಾಡೋ ಡಿಫಿಬ್ರಿಲೇಟರ್ ಕಾರ್ಯ ನಿರ್ವಹಿಸುವುದೇ ಇಲ್ಲ. ಮನುಷ್ಯನ ಪಲ್ಸ್ ಹಾಗೂ ಇತರ ಮಾಹಿತಿ ನೀಡೋ ಮಾನಿಟರ್ ಮಲಗಿದೆ.

ಇನ್ನು, ಟ್ಯೂಬ್ ಲೈಟ್‌ಗಳ ಸ್ಥಿತಿಯೂ ಕೆಟ್ಟದಾಗಿದ್ದು, ಅರ್ಧ ಕಣ್ಣು ತೆರೆದಂತಿದೆ.ಇನ್ನು ಇವುಗಳಿಗೆಲ್ಲಾ ಪವರ್ ನೀಡುವ ಯುಪಿಎಸ್ ಸತ್ತೇ ಹೋಗಿದೆ. ಇಂತಹ ಕೆಟ್ಟ ಪರಿಸ್ಥಿತಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ  ಅಂಬ್ಯುಲೆನ್ಸ್ ನಲ್ಲಿರೋ ಬಗ್ಗೆ ಖುದ್ದಾಗಿ ಸಿಬ್ಬಂದಿಯೇ ಸಾಕಷ್ಟು ಬಾರಿ ಸಂಬಂಧಪಟ್ಟ ಅಧಿಕಾರಿಗಳಲ್ಲಿ ತಿಳಿಸಿ ಮನವಿ ಮಾಡಿದರೂ, ನಿರ್ಲಕ್ಷ್ಯ ವಹಿಸುತ್ತಿರುವ ಅಧಿಕಾರಿಗಳು ಜನರ ಜೀವದ ಜತೆ ಚೆಲ್ಲಾಟವಾಡುತ್ತಿದ್ದಾರೆ.
Published by:Latha CG
First published: