Kashmiri Pandits: ಕಾಶ್ಮೀರಿ ಪಂಡಿತ ಮಕ್ಕಳಿಗೆ ಉಚಿತ ವಸತಿ ಶಿಕ್ಷಣದ ಆಫರ್ ನೀಡಿದ ಪುತ್ತೂರಿನ ವಿದ್ಯಾಸಂಸ್ಥೆ

Kashmiri Pandit: ಅಂಬಿಕಾ ಮಹಾವಿದ್ಯಾಲಯದ ವಸತಿ ಶಾಲೆಯಲ್ಲಿ ಕಲಿಸುವ ವಿದ್ಯಾರ್ಥಿಯೋರ್ವನಿಗೆ  ವಾರ್ಷಿಕ 80 ಸಾವಿರ ರೂಪಾಯಿಗಳನ್ನು ಭರಿಸಲಾಗುತ್ತಿದ್ದು, ಉಳಿದ ಫ್ರೀಸ್, ಉಡುಪು, ಆರೋಗ್ಯ ಸೇರಿದಂತೆ ಉಳಿದ ವ್ಯವಸ್ಥೆಗಳಿಗೆ 40 ಸಾವಿರ ರೂಪಾಯಿಗಳ ವೆಚ್ಚ ತಗಲುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸರಿ ಸುಮಾರು 30-32 ವರ್ಷಗಳ ಹಿಂದೆ ಕಾಶ್ಮೀರದಲ್ಲಿ ಪಂಡಿತರ (Kashmiri Pandits) ಮೇಲೆ ನಡೆದ ದೌರ್ಜನ್ಯ ಇದೀಗ ದೇಶದೆಲ್ಲೆಡೆ ಭಾರೀ ಚರ್ಚೆಗೆ ಕಾರಣವಾಗಿದೆ. ಕಾಶ್ಮೀರೀ ಪಂಡಿತರ ಮೇಲಾದ ಶೋಷಣೆಯ ಘಟನೆಗಳನ್ನು ಹೊಂದಿರುವ ದಿ ಕಾಶ್ಮೀರೀ ಫೈಲ್ಸ್ ಚಿತ್ರ (Kashmiri Files) ತೆರೆಗೆ ಬಂದ ಬಳಿಕ ಈ ಚರ್ಚೆ ದೇಶದಲ್ಲಿ ಆರಂಭಗೊಂಡಿದೆ. ಕಾಶ್ಮೀರಿ ಪಂಡಿತರ ಇಂದಿನ ಸ್ಥಿತಿಗತಿಗಳನ್ನು ಕಣ್ಣಾರೆ ಕಂಡ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಶಿಕ್ಷಣ ಸಂಸ್ಥೆಯೊಂದು ನಿರಾಶ್ರಿತ ಕಾಶ್ಮೀರ ಪಂಡಿತರ ಮಕ್ಕಳಿಗೆ ಉಚಿತ ವಸತಿ ಸೇರಿದಂತೆ ಶಿಕ್ಷಣ ನೀಡಲು (Free education) ಮುಂದಾಗಿದೆ.

1990 ರಿಂದ 2000 ಇಸವಿ ತನಕ ಕಾಶ್ಮೀರದಲ್ಲಿ ಪಂಡಿತರ ಮೇಲಾದ ದೌರ್ಜನ್ಯದ ಎಳೆ ಎಳೆಯನ್ನೂ ಬಿಚ್ಚಿಟ್ಟ ದಿ ಕಾಶ್ಮೀರ್ ಫೈಸ್ ಚಿತ್ರ ಬಿಡುಗಡೆಯಾದ ಬಳಿಕ ಕಾಶ್ಮೀರ ಪಂಡಿತರ ಕುರಿತ ಚರ್ಚೆ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ನಡೆದಿದೆ.

ದೇಶ ಹಾಗೂ ವಿದೇಶಗಳಲ್ಲಿರುವ ಕಾಶ್ಮೀರೀ ಪಂಡಿತರು ತಮ್ಮ ಮೇಲಾದ ದೌರ್ಜನ್ಯಗಳನ್ನು ದೇಶದ ಜನರ ಮುಂದಿಡುವ ಪ್ರಯತ್ನವೂ ಈ ಚಿತ್ರದ ಬಳಿಕ ನಡೆದಿದೆ. ಲಕ್ಷಾಂತರ ಮಂದಿ ಕಾಶ್ಮೀರಿ ಪಂಡಿತರನ್ನು ರಾತ್ರೋರಾತ್ರಿ ಕಾಶ್ಮೀರದಿಂದ ಹೊರ ಹಾಕುವ ಮೂಲಕ ಕಾಶ್ಮೀರ ಪಂಡಿತರನ್ನು ನಿರ್ಗತಿಕರನ್ನಾಗಿ ಮಾಡಲಾಗಿತ್ತು.

ಅಂಬಿಕಾ ಮಹಾವಿದ್ಯಾಲಯದಲ್ಲಿ ಉಚಿತ ಶಿಕ್ಷಣ

ಹೀಗೆ ತಮ್ಮ ನೆಲ,ಜಲವನ್ನು ಬಿಟ್ಟು ಜಮ್ಮು ಹಾಗೂ ದೇಶದ ಇತರ ಭಾಗದಲ್ಲಿ ನಿರಾಶ್ರಿತ ಶಿಬಿರಗಳಲ್ಲಿ ಬದುಕು ಸಾಗಿಸುತ್ತಿರುವ ಕಾಶ್ಮೀರಿ ಪಂಡಿತರ ಸದ್ಯದ ಪರಿಸ್ಥಿತಿಯನ್ನು ಮನಗಾಣಲು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಪ್ರತಿಷ್ಟಿತ ವಿದ್ಯಾಸಂಸ್ಥೆಯಾದ ಅಂಬಿಕಾ ಮಹಾವಿದ್ಯಾಲಯದ ಸಂಚಾಲಕ ಇತ್ತೀಚಿಗೆ ಜಮ್ಮುವಿಗೆ ಭೇಟಿ ನೀಡಿದ್ದರು.

ನಿರಾಶ್ರಿತ ಶಿಬಿರದಲ್ಲೇ ಘೋಷಣೆ

ಈ ಸಂದರ್ಭದಲ್ಲಿ ಕಾಶ್ಮೀರಿ ಪಂಡಿತರ ನೋವನ್ನು ಕಣ್ಣಾರೆ ಕಂಡಿದ್ದ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ಜಮ್ಮುವಿನಲ್ಲಿರುವ ಕಾಶ್ಮೀರಿ ಪಂಡಿತರ ನಿರಾಶ್ರಿತ ಶಿಬಿರದಲ್ಲೇ ಘೋಷಣೆಯೊಂದನ್ನು ಮಾಡಿದ್ದಾರೆ. ದೇಶದ ಎಲ್ಲೆಡೆ ಇರುವ ಕಾಶ್ಮೀರಿ ಪಂಡಿತರ ಮಕ್ಕಳಿಗೆ 6 ತರಗತಿಯಿಂದ ಪದವಿವರೆಗೆ ಉಚಿತ ಶಿಕ್ಷಣವನ್ನು ನೀಡುವ ಜೊತೆಗೆ ಮಕ್ಕಳಿಗೆ ಉಚಿತ ಆರೋಗ್ಯ ಹಾಗೂ ಇತರ ವ್ಯವಸ್ಥೆಗಳನ್ನೂ ಮಾಡುವ ಭರವಸೆ ನೀಡಿದ್ದಾರೆ. ಈ ಸಂಬಂಧ ಈಗಾಗಲೇ ಕಾಶ್ಮೀರಿ ಪಂಡಿತ ಮುಖಂಡರ ಜೊತೆ ಮಾತುಕತೆ ನಡೆಸಲಾಗಿದ್ದು, ಈಗಾಗಲೇ ನಾಲ್ಕೈದು ಕುಟುಂಬಗಳು ತಮ್ಮ ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ಪುತ್ತೂರಿನಲ್ಲಿರುವ ಅಂಬಿಕಾ ವಿದ್ಯಾಲಯಕ್ಕೆ ಸೇರಿಸಲು ಮುಂದಾಗಿದೆ.

ಕಾಡಿನಲ್ಲೊಂದು ವಿಶೇಷ ಬೇಸಿಗೆ ಶಿಬಿರ; ಕೋಟೆ-ಬೆಟ್ಟ ಏರಿ, ಕಾಡು ಹಣ್ಣು ತಿಂದು ಪುಟಾಣಿಗಳ ಸಂಭ್ರಮ

ದಿ ಕಾಶ್ಮೀರಿ ಫೈಲ್ ಚಿತ್ರ ವೀಕ್ಷಿಸಿದ ಬಳಿಕ ಕಾಶ್ಮೀರ ಪಂಡಿತರ ಈಗಿನ ಸ್ಥಿತಿಗತಿಯನ್ನು ಕಣ್ಣಾರೆ ನೋಡಿರುವ ಸುಬ್ರಹ್ಮಣ್ಯ ನಟ್ಟೋಜ ತನ್ನಿಂದಾಗುವ ಯಾವುದಾದರೂ ಸಹಾಯವನ್ನು ಮಾಡಬೇಕೆಂದು ಅಂದುಕೊಂಡಿದ್ದರು. ಕಳೆದ ಹಲವು ವರ್ಷಗಳಿಂದ ಶಿಕ್ಷಣ ಸಂಸ್ಥೆಯನ್ನು ನಡೆಸಿಕೊಂಡು ಬರುತ್ತಿರುವ ನಟ್ಟೋಜ ಕುಟುಂಬ ಶಿಕ್ಷಣವನ್ನೇ ಈ ನಿರಾಶ್ರಿತ ಪಂಡಿತರಿಗೆ ನೀಡಲು ಮುಂದೆ ಬಂದಿದೆ.

ಒಬ್ಬ ವಿದ್ಯಾರ್ಥಿಯ ವೆಚ್ಚ

ಸಾಮಾನ್ಯವಾಗಿ ಅಂಬಿಕಾ ಮಹಾವಿದ್ಯಾಲಯದ ವಸತಿ ಶಾಲೆಯಲ್ಲಿ ಕಲಿಸುವ ವಿದ್ಯಾರ್ಥಿಯೋರ್ವನಿಗೆ  ವಾರ್ಷಿಕ 80 ಸಾವಿರ ರೂಪಾಯಿಗಳನ್ನು ಭರಿಸಲಾಗುತ್ತಿದ್ದು, ಉಳಿದ ಫ್ರೀಸ್, ಉಡುಪು, ಆರೋಗ್ಯ ಸೇರಿದಂತೆ ಉಳಿದ ವ್ಯವಸ್ಥೆಗಳಿಗೆ 40 ಸಾವಿರ ರೂಪಾಯಿಗಳ ವೆಚ್ಚ ತಗಲುತ್ತದೆ. ಒಟ್ಟಾರೆ ಒಬ್ಬ ವಿದ್ಯಾರ್ಥಿಗೆ ಅಂಬಿಕಾ ವಸತಿ ಶಾಲೆಯಲ್ಲಿ ಕಲಿಯಲು 1.20 ಲಕ್ಷ ವೆಚ್ಚ ತಗಲುತ್ತಿದ್ದು, ಕಾಶ್ಮೀರಿ ಪಂಡಿತರ ಮಕ್ಕಳ ಈ ಎಲ್ಲಾ ಖರ್ಚನ್ನು ವಿದ್ಯಾಲಯವೇ ಭರಿಸಲಿದೆ.

ಇದನ್ನೂ ಓದಿ: ಗಡಿಭಾಗದಲ್ಲಿ ಗಾಂಜಾ ಘಾಟು! ದಂಧೆಕೋರರಿಗೆ ಬಿಸಿ ಮುಟ್ಟಿಸುತ್ತಿರುವ ಪೊಲೀಸ್

ರಾಷ್ಟ್ರ ಪ್ರೇಮವನ್ನು ಮಕ್ಕಳಲ್ಲಿ ಬೆಳೆಸುವ ಅಂಬಿಕಾ ವಿದ್ಯಾಲಯ ಗಡಿಯಲ್ಲಿರುವ ಸೈನಿಕರಿಗೆ ಬೇಕಾದ ಅವಶ್ಯಕತೆಗಳನ್ನು ಪೂರೈಸುವ ಕೆಲಸವನ್ನೂ ಮಾಡಿದೆ. ಅಲ್ಲದೆ ದೇಶದ ಸೈನಿಕರಿಗೆ ಶ್ರದ್ಧಾಂಜಲಿ ಸೂಚಿಸುವ ನಿಟ್ಟಿನಲ್ಲಿ ಪುತ್ತೂರಿನಲ್ಲಿ ಅಮರ್ ಜವಾನ್ ಜ್ಯೋತಿಯನ್ನೂ ಸ್ಥಾಪಿಸಲಾಗಿದ್ದು, ವರ್ಷಪೂರ್ತಿ ,ದಿನದ ಇಪ್ಪತ್ತನಾಲ್ಕು ಗಂಟೆಯೂ ಇಲ್ಲಿ ಜ್ಯೋತಿ ಉರಿಯುವಂತೆ ವ್ಯವಸ್ಥೆಯನ್ನೂ ಅಂಬಿಕಾ ಮಹಾವಿದ್ಯಾಲಯ ಮಾಡಿದೆ.
Published by:Divya D
First published: