ನಿಷ್ಪಕ್ಷಪಾತವಾಗಿ ತನಿಖೆಯಾಗುತ್ತಿಲ್ಲ: ಜನಾರ್ದನ ರೆಡ್ಡಿ ವಕೀಲರ ಆತಂಕ

ಜನಾರ್ದನ ರೆಡ್ಡಿಯವರಿಗೆ ಕಳಂಕ ತರುವ ಷಡ್ಯಂತ್ರ ಇದಾಗಿದೆ. ತನಿಖೆಯ ದಾಖಲೆಗಳನ್ನು ಗೌಪ್ಯವಾಗಿ ಇಟ್ಟುಕೊಳ್ಳುವ ಬದಲು ಪಬ್ಲಿಕ್ ಡೊಮೈನ್​ಗೆ ಯಾಕೆ ಅದನ್ನು ಲೀಕ್ ಮಾಡುತ್ತಿದ್ಧಾರೆ ಎಂದು ಅವರ ವಕೀಲ ಚಂದ್ರಶೇಖರ್ ರೆಡ್ಡಿ ಪ್ರಶ್ನಿಸಿದ್ದಾರೆ | Ambidant irregularities case Janardan Reddy's lawyer says its false case

Vijayasarthy SN
Updated:November 8, 2018, 4:46 PM IST
ನಿಷ್ಪಕ್ಷಪಾತವಾಗಿ ತನಿಖೆಯಾಗುತ್ತಿಲ್ಲ: ಜನಾರ್ದನ ರೆಡ್ಡಿ ವಕೀಲರ ಆತಂಕ
ಜನಾರ್ದನ ರೆಡ್ಡಿ ಅವರ ಬಳ್ಳಾರಿ ನಿವಾಸದ ಮುಂಭಾಗ
Vijayasarthy SN
Updated: November 8, 2018, 4:46 PM IST
- ನ್ಯೂಸ್18 ಕನ್ನಡ

ಬೆಂಗಳೂರು(ನ. 08): ಆಂಬಿಡೆಂಟ್ ಅವ್ಯವಹಾರ ಪ್ರಕರಣದಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ವಿರುದ್ಧ ಪಿತೂರಿ ನಡೆಯುತ್ತಿದೆ ಎಂದು ಅವರ ಪರ ವಕೀಲರು ಆತಂಕ ತೋಡಿಕೊಂಡಿದ್ದಾರೆ. ಪ್ರಕರಣದಲ್ಲಿ ನಡೆಯುತ್ತಿರುವ ಸಿಸಿಬಿ ತನಿಖೆ ಸಮರ್ಪಕವಾಗಿಲ್ಲ. ಯಾರದ್ದೋ ಚಿತಾವಣೆಯು ಈ ತನಿಖೆಯ ಮೇಲೆ ಪ್ರಭಾವ ಬೀರುತ್ತಿದೆ ಎಂದು ವಕೀಲ ಚಂದ್ರಶೇಖರ್ ರೆಡ್ಡಿ ಆಪಾದಿಸಿದ್ದಾರೆ. ತನಿಖಾಧಿಕಾರಿಗಳು ಈ ಪ್ರಕರಣದ ಆಳಕ್ಕೆ ಹೋಗಿ, ಜನಾರ್ದನ ರೆಡ್ಡಿ ಪಾತ್ರ ಇದೆಯೋ ಇಲ್ಲವೋ ಎಂಬ ಸತ್ಯವನ್ನು ತಿಳಿಯಲು ಯತ್ನಿಸುವ ಬದಲು ಬಾಹ್ಯ ಶಕ್ತಿಗಳ ಒತ್ತಡ ಹಾಗೂ ಸಹೋದ್ಯೋಗಿಗಳ ಪ್ರಭಾವದಿಂದ ತನಿಖೆ ನಡೆಸುತ್ತಿದ್ದಾರೆ ಎಂದು ಜನಾರ್ದನ ರೆಡ್ಡಿ ಪರ ವಕೀಲರು ಹೇಳಿದ್ದಾರೆ.

ನ್ಯೂಸ್18 ಕನ್ನಡದ ಜೊತೆ ಮಾತನಾಡಿದ ವಕೀಲರು, ಜನಾರ್ದನ ರೆಡ್ಡಿಯವರಿಗೆ ಕಳಂಕ ತರುವ ಷಡ್ಯಂತ್ರ ಇದಾಗಿದೆ. ತನಿಖೆಯ ದಾಖಲೆಗಳನ್ನು ಗೌಪ್ಯವಾಗಿ ಇಟ್ಟುಕೊಳ್ಳುವ ಬದಲು ಪಬ್ಲಿಕ್ ಡೊಮೈನ್​ಗೆ ಯಾಕೆ ಅದನ್ನು ಲೀಕ್ ಮಾಡುತ್ತಿದ್ಧಾರೆ ಎಂದು ಪ್ರಶ್ನಿಸಿದ್ದಾರೆ.

“ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಭಾಗಿಯಾಗಿದ್ದಾರೆಂದು ತನಿಖೆಯ ಮೊದಲೇ ಬಿಂಬಿಸುವ ಪ್ರಯತ್ನವಾಗುತ್ತಿದೆ. ಸಾಕ್ಷ್ಯಗಳಿವೆ ಎಂದು ಹೇಳುತ್ತಾರೆ. ಜನಾರ್ದನ ರೆಡ್ಡಿಯ ಸಹಿ ಇದೆ, ಡಾಕ್ಯುಮೆಂಟ್ ಇದೆ ಎಂದೆಲ್ಲಾ ಸುಳ್ಳು ಹೇಳುತ್ತಾರೆ. ಮಾಧ್ಯಮಗಳಲ್ಲಿ ಸುದ್ದಿ ಬರುವಂತೆ ಮಾಡುತ್ತಾರೆ. ತನಿಖೆಯ ದಾಖಲೆಗಳನ್ನು ರಹಸ್ಯವಾಗಿ ಕಾಪಾಡಿಕೊಳ್ಳುವುದು ಬಿಟ್ಟು ಪಬ್ಲಿಕ್ ಡೊಮೈನ್​ಗೆ ತರುತ್ತಿದ್ದಾರೆ. ಒಟ್ಟಿನಲ್ಲಿ, ಸಾರ್ವಜನಿಕವಾಗಿ ಜನಾರ್ದನ ರೆಡ್ಡಿ ಮೇಲೆ ಕಳಂಕ ಬರುವಂತೆ ಮಾಡುವ ಷಡ್ಯಂತ್ರ ನಡೆದಿದೆ,” ಎಂದು ಗಾಲಿ ಜನಾರ್ದನ ರೆಡ್ಡಿ ಪರ ವಕೀಲ ಚಂದ್ರಶೇಖರ್ ರೆಡ್ಡಿ ಹೇಳಿದ್ದಾರೆ.

ಜನಾರ್ದನ ರೆಡ್ಡಿ ಪರಾರಿಯಾಗಿದ್ದಾರೆಂಬ ಸುದ್ದಿಯನ್ನು ಅಲ್ಲಗಳೆದ ಅವರು, ಲಾಯರ್ ಮೂಲಕ ಕೋರ್ಟ್​ಗೆ ಹಾಜರಾತಿ ಹಾಕಿದ್ದರೂ ಅಬ್​ಸ್ಕಾಂಡಿಂಗ್ ಎಂದು ಹೇಳುವುದು ತಪ್ಪು. ಜನಾರ್ದನ ರೆಡ್ಡಿ ಎಲ್ಲಿಯೂ ತಪ್ಪಿಸಿಕೊಂಡು ಹೋಗಿಲ್ಲ. ಅವರ ವಿರುದ್ಧದ ಆರೋಪ ಹಸಿ ಸುಳ್ಳು. ಅವರು ನಿರೀಕ್ಷಣಾ ಜಾಮೀನು ಸಲ್ಲಿಸುತ್ತಾರೆ. ಇದು ಸುಳ್ಳು ಕೇಸ್ ಆದ್ದರಿಂದ ಅವರಿಗೆ ಜಾಮೀನು ಸಿಗುವುದಕ್ಕೆ ತಡೆಯಿಲ್ಲ ಎಂದು ಆಶಿಸಿದ್ದಾರೆ.

ಅಲೋಕ್ ಕುಮಾರ್ ಗರಂ:

ತನಿಖೆಯ ದಾಖಲೆಗಳನ್ನು ಸಾರ್ವಜನಿಕವಾಗಿ ಲೀಕ್ ಮಾಡಲಾಗುತ್ತಿದೆ ಎಂಬ ವಕೀಲರ ಆರೋಪಕ್ಕೆ ಪೂರಕವಾಗಿ ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಕೂಡ ಈ ವಿಚಾರದ ಬಗ್ಗೆ ಕಿಡಿಕಾರಿದ್ದಾರೆ. ಸಿಸಿಬಿ ಪೊಲೀಸರು ಮಹಜರು ನಡೆಸುವ ವಿಡಿಯೋ ಮಾಧ್ಯಮಗಳಲ್ಲಿ ಬಿತ್ತರಗೊಂಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಅಲೋಕ್ ಕುಮಾರ್ ಅವರು ಸಿಸಿಬಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. “ಇಂಥ ಕಣ್ಣಾ ಮುಚ್ಚಾಲೆ ಆಟ ಆಡೋದನ್ನ ಬಿಟ್ಟಿಡಿ. ಮಾಡೋ ಕೆಲಸ ಶ್ರದ್ಧೆಯಿಂದ ಮಾಡಿ. ಇಲ್ಲದಿದ್ದರೆ ಪರಿಣಾಮ ನೆಟ್ಟಗಿರಲ್ಲ. ನಮ್ಮರಲ್ಲದೇ ಬೇರೆ ಯಾರು ಈ ವಿಡಿಯೋ ಲೀಕ್ ಮಾಡಲು ಸಾಧ್ಯ? ತನಿಖೆಯ ಒಂದೇ ಒಂದು ವಿಡಿಯೋ ತುಣುಕು ಮಾಧ್ಯಮಗಳಿಗೆ ಹೋದ್ರೂ ಪರಿಣಾಮ ಬೇರೆಯದೇ ಆಗುತ್ತೆ. ರಾತ್ರಿ ಹಗಲು ಎನ್ನದೇ ಕೆಲಸ ಮಾಡಿ ಮುಗಿಸಲು ನಾವು ಪ್ರಯತ್ನ ಮಾಡುತ್ತಿದ್ದರೆ ನೀವು ಆಟ ಆಡ್ತಿದ್ದೀರಾ? ಮಹಜರು ವಿಡಿಯೋಗಳು ಲೀಕ್ ಆಗಿರುವ ಬಗ್ಗೆ ತನಿಖೆಗೆ ಆದೇಶಿಸಿದ್ದೇನೆ. ಉತ್ತರ ಕೊಡಿ,” ಎಂದು ಸಿಸಿಬಿ ಕಚೇರಿಯಲ್ಲಿ ಅಲೋಕ್ ಕುಮಾರ್ ಎಚ್ಚರಿಕೆ ಕೊಟ್ಟಿದ್ದಾರೆ.
Loading...

ಜನಾರ್ದನ ರೆಡ್ಡಿ ವಿರುದ್ಧದ ಆರೋಪವೇನು?

ಅಂಬಿಡೆಂಟ್ ಸಂಸ್ಥೆಯು ಚಿಟ್​ಫಂಡ್ ಮೂಲಕ ಸಾವಿರಾರು ಜನರಿಗೆ ಸಾವಿರಾರು ಕೋಟಿ ರೂ ಪಂಗನಾಮ ಹಾಕಿದೆ ಎನ್ನಲಾಗಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ತಂಡವು ಅಂಬಿಡೆಂಟ್ ಸಂಸ್ಥೆಯ ಮುಖ್ಯಸ್ಥ ಫರೀದ್​ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದೆ. ಅಂಬಿಡೆಂಟ್ ಸಂಸ್ಥೆ ವಿರುದ್ಧ ನಡೆಯುತ್ತಿದ್ದ ಇ..ಡಿ. ತನಿಖೆಯನ್ನು ನಿಲ್ಲಿಸುವಂತೆ ಮಾಡಲು ತನಗೆ ಸಹಾಯ ಮಾಡುವುದಾಗಿ ಹೇಳಿ ಜನಾರ್ದನ ರೆಡ್ಡಿ 20 ಕೋಟಿಗೆ ಡೀಲ್ ಮಾಡಿದರು ಎಂದು ಫರೀದ್ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ. ಹೀಗಾಗಿ, ಈ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಹೆಸರು ತಳುಕು ಹಾಕಿಕೊಂಡಿದೆ ಎನ್ನಲಾಗಿದೆ. ಪ್ರಕರಣ ಬೆಳಕಿಗೆ ಬಂದಾಗಿನಿಂದಲೂ ಜನಾರ್ದನ ರೆಡ್ಡಿ ಎಲ್ಲಿಯೂ ಕಾಣಿಸುತ್ತಿಲ್ಲ. ಬಳ್ಳಾರಿ, ಹೈದರಾಬಾದ್ ಇತ್ಯಾದಿ ಕಡೆಯಲ್ಲೆಲ್ಲಾ ರೆಡ್ಡಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
First published:November 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ