HOME » NEWS » State » AMAZON PROMISES E SALE OF SELF HELP GROUPS PRODUCTS HK

Amazon: ಸ್ವಸಹಾಯ ಗುಂಪುಗಳ ಉತ್ಪನ್ನಗಳ ಇ-ಮಾರಾಟಕ್ಕೆ ಅಮೆಜಾನ್ ಭರವಸೆ

ನಾವೀನ್ಯತೆಯನ್ನು ಪೋಷಿಸುವ, ಉದ್ಯೋಗಗಳನ್ನು ಸೃಷ್ಟಿಸುವ ಹಾಗೂ ಭಾರತದ ವ್ಯಾಪಾರಗಳನ್ನು ಜಾಗತಿಕ ಮಾರುಕಟ್ಟೆಗೆ ತಲುಪಿಸುವ ಗುರಿಯನ್ನು ಅಮೆಜಾನ್ ಕಂಪನಿ ಹೊಂದಿದೆ. 10 ಲಕ್ಷ ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ದಿಮೆಗಳನ್ನು ಡಿಜಿಟಲೀಕರಣಗೊಳಿಸುವ ಗುರಿಯನ್ನೂ ಹೊಂದಲಾಗಿದೆ

news18-kannada
Updated:October 8, 2020, 7:12 AM IST
Amazon: ಸ್ವಸಹಾಯ ಗುಂಪುಗಳ ಉತ್ಪನ್ನಗಳ ಇ-ಮಾರಾಟಕ್ಕೆ ಅಮೆಜಾನ್ ಭರವಸೆ
ಡಿಸಿಎಂ ಅಶ್ವತ್ಥನಾರಾಯಣ ಜೊತೆ ಚರ್ಚೆ ನಡೆಸುತ್ತಿರುವ ಅಮೆಜಾನ್ ಕಂಪನಿ ಉಪಾಧ್ಯಕ್ಷ ಚೇತನ್ ಕೃಷ್ಣಸ್ವಾಮಿ
  • Share this:
ಬೆಂಗಳೂರು(ಅಕ್ಟೋಬರ್​. 08): ರಾಜ್ಯದಲ್ಲಿ ಸ್ವಸಹಾಯ ಗುಂಪುಗಳು ಉತ್ಪಾದಿಸುತ್ತಿರುವ ಉತ್ಪನ್ನಗಳ ಇ-ಮಾರಾಟಕ್ಕೆ ಅನುಕೂಲ ಮಾಡಿಕೊಡಲಾಗುತ್ತದೆ ಎಂದು ಅಮೆಜಾನ್ ಕಂಪನಿ ಭರವಸೆ ನೀಡಿದೆ. ಅಮೆಜಾನ್ ಕಂಪನಿ ಉಪಾಧ್ಯಕ್ಷ (ಸಾರ್ವಜನಿಕ ಕಾರ್ಯನೀತಿ ವಿಭಾಗ) ಚೇತನ್ ಕೃಷ್ಣಸ್ವಾಮಿ ಅವರು ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರೊಂದಿಗೆ ನಡೆಸಿದ ಸಭೆಯಲ್ಲಿ ಈ ಕುರಿತು ಪ್ರಸ್ತಾಪಿಸಲಾಯಿತು. ಉಪ ಮುಖ್ಯಮಂತ್ರಿಯವರ ಮನವಿಗೆ ಪ್ರತಿಕ್ರಿಯಿಸಿದ ಚೇತನ್ ಕೃಷ್ಣಸ್ವಾಮಿ ಅವರು, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಸ್ವಸಹಾಯ ಗುಂಪುಗಳಿಗೆ ಅಮೆಜಾನ್, ಇ- ಮಾರುಕಟ್ಟೆ ವೇದಿಕೆಯನ್ನು ಒದಗಿಸಲಿದೆ. ಈ ಕುರಿತು ಸರ್ಕಾರದ ಜತೆ ಮಾತುಕತೆ ನಡೆಸಲಾಗುವುದು ಎಂದರು. ರಾಜ್ಯದಲ್ಲಿ ಸುಮಾರು 1.5 ಲಕ್ಷ ಸ್ವಸಹಾಯ ಗುಂಪುಗಳು ಇವೆ. ಇವುಗಳು ವಿವಿಧ ಉತ್ಪನ್ನಗಳ ತಯಾರಿಕೆ, ಸಿದ್ಧಪಡಿಸುವಿಕೆ ಹಾಗೂ ಉತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿವೆ. ಈ ಉತ್ಪನ್ನಗಳಿಗೆ ಎಲೆಕ್ಟ್ರಾನಿಕ್ ವ್ಯಾಪಾರ ವೇದಿಕೆಗಳ ಮೂಲಕ ಮಾರಾಟಕ್ಕೆ ಅನುವು ಮಾಡಿಕೊಡುವುದು ಸೂಕ್ತ ಎಂದು ಅಶ್ವತ್ಥ ನಾರಾಯಣ ಅವರು ಅಭಿಪ್ರಾಯಪಟ್ಟರು.

ಇದೇ ವೇಳೆ ಚೇತನ್ ಕೃಷ್ಣಸ್ವಾಮಿ ಅವರು ಮಾತನಾಡಿ, ಅಮೆಜಾನ್ ಕಂಪನಿಯು ಭಾರತದಲ್ಲಿ ತನ್ನ ಕಾರ್ಯಚಟುವಟಿಕೆಯನ್ನು ವಿಸ್ತರಿಸುವ ಯೋಜನೆಗಳನ್ನು ಹೊಂದಿರುವುದಾಗಿ ತಿಳಿಸಿದರು.

ಪೂರೈಕೆ ಸರಪಳಿ, ದಾಸ್ತಾನು ಘಟಕ ಮತ್ತಿತರ ವಿಭಾಗಗಳಲ್ಲಿ ಗ್ರಾಮೀಣ ಹಾಗೂ ಸ್ಥಳೀಯ ಯುವ ಜನತೆಗೆ ಹೆಚ್ಚಿನ ಉದ್ಯೋಗ ನೀಡುವ ಉದ್ದೇಶ ಹೊಂದಿದೆ. ಜೊತೆಗೆ ಸಂಸ್ಥೆಯ ಸಿಬ್ಬಂದಿಗೆ ಕಾಲಕಾಲಕ್ಕೆ ಕೌಶಲಾಭಿವೃದ್ಧಿ ತರಬೇತಿ ನೀಡಲು ಒತ್ತು ಕೊಡಲಾಗುತ್ತದೆ ಎಂದರು.

ನಾವೀನ್ಯತೆಯನ್ನು ಪೋಷಿಸುವ, ಉದ್ಯೋಗಗಳನ್ನು ಸೃಷ್ಟಿಸುವ ಹಾಗೂ ಭಾರತದ ವ್ಯಾಪಾರಗಳನ್ನು ಜಾಗತಿಕ ಮಾರುಕಟ್ಟೆಗೆ ತಲುಪಿಸುವ ಗುರಿಯನ್ನು ಅಮೆಜಾನ್ ಕಂಪನಿ ಹೊಂದಿದೆ. 10 ಲಕ್ಷ ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ದಿಮೆಗಳನ್ನು ಡಿಜಿಟಲೀಕರಣಗೊಳಿಸುವ ಗುರಿಯನ್ನೂ ಹೊಂದಲಾಗಿದೆ. ಇದರಿಂದ 10 ಲಕ್ಷ ಉದ್ಯೋಗಗಳು ಸೃಷ್ಟಿಯಾಗುತ್ತವೆ. ಜೊತೆಗೆ, ಭಾರತದ ಇ-ವಾಣಿಜ್ಯ ರಫ್ತು ಮೊತ್ತವು 2025 ರ ವೇಳೆಗೆ ಸುಮಾರು 75 ಸಾವಿರ ಕೋಟಿ ರೂಪಾಯಿಗಳಾಗಲಿದೆ ಎಂದು ತಿಳಿಸಿದರು..

ಮುಂದಿನ ಹಂತದಲ್ಲಿ ಆನ್ ಲೈನ್ ಮೂಲಕ ಉಪ ಮುಖ್ಯಮಂತ್ರಿಯವರ ಜೊತೆ ಬೇರೆ ಬೇರೆ ರಾಷ್ಟ್ರಗಳಲ್ಲಿ ಇರುವ ಅಮೆಜಾನ್ ಕಂಪನಿಯ ಪ್ರಮುಖ ಅಧಿಕಾರಿಗಳ ಸಭೆ ನಡೆಸುವ ಉದ್ದೇಶ ಹೊಂದಿರುವುದಾಗಿಯೂ ಚೇತನ್ ಕೃಷ್ಣಸ್ವಾಮಿ ತಿಳಿಸಿದರು.

15 ಪ್ರಶಸ್ತಿಗಳೊಂದಿಗೆ ಕರ್ನಾಟಕಕ್ಕೆ ಅಗ್ರಸ್ಥಾನ :ಅಶ್ವತ್ಥ ನಾರಾಯಣ

ರಾಷ್ಟ್ರೀಯ ನವೋದ್ಯಮ ಪ್ರಶಸ್ತಿಗಳಿಗಾಗಿ ನವೋದ್ಯಮ ಭಾರತ ವತಿಯಿಂದ ಇತ್ತೀಚೆಗೆ ನಡೆಸಲಾಗಿದ್ದ ಸ್ಪರ್ಧೆಗೆ ಕರ್ನಾಟಕ ರಾಜ್ಯದಿಂದ ಅತ್ಯಧಿಕ ಅರ್ಜಿಗಳು ಸಲ್ಲಿಕೆಯಾಗುವ ಜೊತೆಗೆ ಇಲ್ಲಿನ ಹಲವಾರು ನವೋದ್ಯಮಗಳು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿವೆ ಎಂದು ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರೂ ಆದ ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಆವರು ತಿಳಿಸಿದ್ದಾರೆ.ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳಿಗೆ ಪಾತ್ರವಾಗಿರುವ 36 ನವೋದ್ಯಮಗಳ ಪೈಕಿ ಕರ್ನಾಟಕ ರಾಜ್ಯದ 14 ನವೋದ್ಯಮಗಳು ಹಾಗೂ 1 ವೇಗವರ್ಧಕ (ಆಕ್ಸಲರೇಟರ್) ಕರ್ನಾಟಕ ರಾಜ್ಯಕ್ಕೆ ಸೇರಿದ್ದಾಗಿವೆ. ಈ ಸ್ಪರ್ಧೆಗೆ ದೇಶದಾದ್ಯಂತ ಇರುವ ನವೋದ್ಯಮಗಳಿಂದ ಸಲ್ಲಿಕೆಯಾಗಿದ್ದ 1641 ಅರ್ಜಿಗಳ ಪೈಕಿ 418 ಅರ್ಜಿಗಳು ಕರ್ನಾಟಕ ರಾಜ್ಯದಿಂದ ಸಲ್ಲಿಕೆಯಾಗಿದ್ದವು. ಇದು ಒಟ್ಟಾರೆ ಸಲ್ಲಿಕೆಯಾದ ಅರ್ಜಿಗಳ ಪೈಕಿ ಶೇ 26ರಷ್ಟಿರುವುದು ಗಮನಾರ್ಹ ಅಂಶ ಎಂದು ಉಪ ಮುಖ್ಯಮಂತ್ರಿ ಹೇಳಿದ್ದಾರೆ.

ಇದನ್ನೂ ಓದಿ : ಅಂತರರಾಷ್ಟ್ರೀಯ ಮೆಗಾ ಏರ್ ಶೋ ಕಾರ್ಯಕ್ರಮಕ್ಕೆ 13ನೇ ಬಾರಿಗೆ ಒಲಿದು ಬಂದ ಆತಿಥ್ಯ- ನಮ್ಮ ರಾಜ್ಯಕ್ಕೊಂದು ಹೆಮ್ಮೆ: ಸಿಎಂ ಯಡಿಯೂರಪ್ಪ

ಕೃಷಿ, ಶಿಕ್ಷಣ, ಇಂಧನ, ಉದ್ದಿಮೆ ತಾಂತ್ರಿಕತೆಗಳು, ಆರೋಗ್ಯ, ಉದ್ಯಮ 4.0, ಬಾಹ್ಯಾಕಾಶ, ಪ್ರವಾಸೋದ್ಯಮ, ನಗರ ಸೇವೆಗಳು ಸೇರಿದಂತೆ ಇತ್ಯಾದಿ ವಲಯಗಳಲ್ಲಿ ಹೆಚ್ಚಿನ ಸಂಖ್ಯೆಯ ಅರ್ಜಿಗಳು ಸಲ್ಲಿಕೆಯಾಗಿದ್ದವು. ಈಗ ರಾಷ್ಟ್ರೀಯ ಮಟ್ಟದಲ್ಲಿ ವಿಜೇತಗೊಂಡಿರುವ 14 ಉದ್ಯಮಗಳ ಪೈಕಿ 11 ನವೋದ್ಯಮಗಳು ಕರ್ನಾಟಕ ನವೋದ್ಯಮ ಕೋಶದಿಂದ ನಡೆಸಲಾಗಿದ್ದ ಎಲಿವೇಟ್/ ಐಡಿಯಾ 2ಪಿಒಸಿ ಅನುದಾನ ಕಾರ್ಯಕ್ರಮಗಳಲ್ಲಿ ಗಮನ ಸೆಳೆದು ಜಯಗಳಿಸಿದ್ದವು ಎಂದು ಅವರು ವಿವರಿಸಿದ್ದಾರೆ.

ರಾಷ್ಟ್ರೀಯ ಆಹ್ವಾನಕ್ಕೆ ಸ್ಪಂದಿಸಿ ಕರ್ನಾಟಕ ಸರ್ಕಾರದ ಪರಿಪೋಷಕಗಳು (ಇನ್ ಕ್ಯುಬೇಟರ್ಸ್), ಹೊಸ ತಲೆಮಾರಿನ ಪರಿಪೋಷಣಾ ಜಾಲ (ನೈನ್) ಸಂಸ್ಥೆಗಳು, ಉತ್ಕೃಷ್ಠತಾ ಕೇಂದ್ರಗಳು ಮತ್ತು ತಾಂತ್ರಿಕ ವ್ಯಾಪಾರೋದ್ಯಮ ಪರಿಪೋಷಕಗಳ (ಟಿಬಿಐ) ಮೂಲಕ ವೆಬಿನಾರ್ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು ರಾಜ್ಯದಿಂದ ಹೆಚ್ಚಿನ ಪ್ರಮಾಣದಲ್ಲಿ ಅರ್ಜಿ ಸಲ್ಲಿಸಲು ಕಾರಣವಾಯಿತು ಎಂದು ಅಶ್ವತ್ಥ ನಾರಾಯಣ ಅಭಿಪ್ರಾಯಪಟ್ಟಿದ್ದಾರೆ. ರಾಜ್ಯದ ನವೋದ್ಯಮಗಳ ಸಾಧನೆಗಾಗಿ ಅವರು ಇದೇ ಸಂದರ್ಭದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ
Published by: G Hareeshkumar
First published: October 8, 2020, 7:12 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories