Padma Shri: ಸುರಂಗ ನೀರು ಹರಿಸಿ ಕೃಷಿ: ದ.ಕ ಜಿಲ್ಲೆಯ ಪದ್ಮಶ್ರೀ ಪುರಸ್ಕೃತ ಕೃಷಿಕನ ಸಾಧನೆಗಾಥೆ

ಶಾಲಾ ಕಾಲೇಜುಗಳ ಮೆಟ್ಟಿಲು ಹತ್ತದ ಛಲಗಾರ ಮಹಾಲಿಂಗ ನಾಯ್ಕರಿಗೆ ದುಡಿಮೆ ಎಲ್ಲವನ್ನು ನೀಡಿದೆ. ಮಹಾಲಿಂಗ ನಾಯ್ಕರ ಏಕಾಂಗಿ ಸಾಧನೆಯನ್ನು ದೂರದರ್ಶನ ತನ್ನ ವಾಟರ್ ವಾರಿಯರ್ ಧಾರಾವಾಹಿಯಲ್ಲಿ ಬಿತ್ತರಿಸಿದೆ.

ಅಮೈ ಮಹಾಲಿಂಗ ನಾಯ್ಕ

ಅಮೈ ಮಹಾಲಿಂಗ ನಾಯ್ಕ

  • Share this:
ಏಕಾಂಗಿಯಾಗಿ ಅಪೂರ್ವ ಮತ್ತು ಅಪಾಯಕಾರಿಯಾದ ಕೆಲಸದ ಮೂಲಕ ಜೀವಜಲವನ್ನು ತರಿಸಿ ಬೋಳು ಗುಡ್ಡೆಯನ್ನು ನಂದನವನ ಮಾಡಿದ ಪ್ರಯತ್ನಶೀಲ, ಪ್ರಗತಿಪರ ಕೃಷಿಕ ಬಂಟ್ವಾಳ(Bantwal)ದ ಅಮೈ ಮಹಾಲಿಂಗ ನಾಯ್ಕ (Amai Mahalinga Naika) ಅವರು ಕೇಂದ್ರ ಸರ್ಕಾರದ ಪದ್ಮ ಶ್ರೀ (Padma Shri) ಗೌರವಕ್ಕೆ ಪಾತ್ರರಾಗಿದ್ದಾರೆ. ಬಂಟ್ವಾಳ ತಾಲೂಕಿನ ಅಡ್ಯನಡ್ಕ ಸಮೀಪದ ಅಮೈ ನಿವಾಸಿ 73ರ ಹರೆಯದ ಮಹಾಲಿಂಗ ನಾಯ್ಕ ಕರಾವಳಿ ಜಿಲ್ಲೆಗಳಲ್ಲಿ ಕೃಷಿ (Agriculture) ನಿಧಾನವಾಗಿ ಹಿನ್ನೆಲೆಗೆ ಸರಿಯುತ್ತಿರುವ ಸಂದರ್ಭದಲ್ಲಿ ಕೃಷಿಯೇ ಬದುಕಿಗೆ ಮೂಲಾಧಾರವೆಂಬ ಕಲ್ಪನೆಯನ್ನು ಬಿತ್ತುತ್ತಿರುವ ಸಾಧಕರಾಗಿದ್ದಾರೆ, ಕೃಷಿ ಕಾಯಕದ ಮೂಲಕ ಸ್ವಾವಲಂಬಿ ಜೀವನ ಸಾಧ್ಯ ಎಂಬುದನ್ನು ಆಧುನಿಕ ತಲೆಮಾರಿಗೆ ತೋರಿಸಿಕೊಟ್ಟಿದ್ದಾರೆ.

ಕೃಷಿಗೆ ನೀರು ಹಾಯಿಸಲು ಪಂಪ್‌ ಸೆಟ್‌ಗಳ ಸೌಲಭ್ಯಗಳೇ ಇಲ್ಲದ ಕಾಲದಲ್ಲಿ ಹಿಂದಿನ ತಲೆಮಾರಿನವರು ಅವಲಂಭಿಸಿದ್ದ ಸುರಂಗ ನೀರಿನ ವ್ಯವಸ್ಥೆಯಲ್ಲಿ ನಂಬಿಕೆ ಇರಿಸಿದ್ದರು. ಇದೇ ವ್ಯವಸ್ಥೆಯಲ್ಲಿ ವಿದ್ಯುತ್‌ ರಹಿತವಾಗಿ ಗ್ರಾವಿಟಿ ನೆರವಿನಲ್ಲಿ ಕೃಷಿಗೆ ತುಂತುರು ನೀರಾವರಿ, ಸ್ಟ್ರಿಂಕ್ಲರ್‌ ನೀರಾವರಿ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ಯಶಸ್ವಿಯಾಗಿರುವ ಮಾಹಾಲಿಂಗ ನಾಯ್ಕ ಏಕಾಂಗಿಯಾಗಿ ಏಳು ಸುರಂಗಗಳನ್ನು ಕೊರೆದ ಕೀರ್ತಿಗೆ ಪಾತ್ರರಾಗಿದ್ದಾರೆ.

ಮಹಾಲಿಂಗ ನಾಯ್ಕರ ಬದುಕಿನ ಯಶೋಗಾಥೆ

ಅಡಿಕೆ, ತೆಂಗಿನ ಮರ ಏರುವುದರಲ್ಲಿ ಪರಿಣತಿ ಹೊಂದಿದ್ದ ಕೃಷಿಕೂಲಿ ಕಾರ್ಮಿಕ ಮಹಾಲಿಂಗ ನಾಯ್ಕ 40 ವರ್ಷಗಳ ಹಿಂದೆ ಊರಿನ ಕೃಷಿಕರ ತೋಟಗಳಲ್ಲಿ ದುಡಿಯುವಾಗ ಸ್ವಂತ ತೋಟ ಮಾಡುವ ಸ್ವಾವಲಂಬಿ ಜೀವನದ ಕನಸು ಕಂಡಿದ್ದರು. ಆದರೆ ಅದಕ್ಕೆ ಅವರಲ್ಲಿ ಜಮೀನು ಇರಲಿಲ್ಲ.

Amai Mahalinga Naik Padma Shri award from Karnataka
ಅಮೈ ಮಹಾಲಿಂಗ ನಾಯ್ಕ


ಇದನ್ನೂ ಓದಿ:  Republic Day: ಗೂಗಲ್ ಸಿಇಓ ಸುಂದರ್ ಪಿಚೈ, ಮೈಕ್ರೋಸಾಫ್ಟ್ ಸಿಇಓ ಸತ್ಯ ನಾಡೆಲ್ಲಾಗೆ ಪದ್ಮಭೂಷಣ ಪ್ರಶಸ್ತಿ

ಭೂ ಮಾಲಕ ಅಮೈ ಮಹಾಬಲ ಭಟ್ಟರ ತೋಟಕ್ಕೆ ದಿನಾಲು ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಈ ಆದಾಯದಲ್ಲಿ ಅವರ ಸಂಸಾರದ ರಥ ಸಾಗುತ್ತಿತ್ತು. 1978ರಲ್ಲಿ ಮಹಾಬಲ ಭಟ್ಟರ ಸಹಕಾರದಿಂದ 2 ಎಕರೆ ಗುಡ್ಡ ದರ್ಖಾಸ್ತು ರೂಪದಲ್ಲಿ ಮಹಾಲಿಂಗ ನಾಯ್ಕರಿಗೆ ಪ್ರಾಪ್ತವಾಯಿತು.

ಮನೆ ಕಟ್ಟಲು ಅಸಾಧ್ಯವಾದ, ನೀರಿಲ್ಲದ ಇಳಿಜಾರು ಬೋಳುಗುಡ್ಡದಲ್ಲಿ ಕೃಷಿ ತೋಟ ಮಾಡುವುದು ಮಹಾಲಿಂಗ ನಾಯ್ಕರಿಗೆ ಸವಾಲಾಗಿ ಕಂಡು ಬಂದರೂ ಅವರು ತನ್ನ ಪ್ರಯತ್ನವನ್ನು ಬಿಡಲಿಲ್ಲ. ಅಲ್ಲೇ ಭವಿಷ್ಯ ರೂಪಿಸುವ ಉದ್ದೇಶದಿಂದ ಸ್ವಲ್ಪ ಜಾಗವನ್ನು ಸಮತಟ್ಟು ಮಾಡಿ ಸಣ್ಣದೊಂದು ಗುಡಿಸಲು ಕಟ್ಟಿದರು.

Amai Mahalinga Naik Padma Shri award from Karnataka
ಅಮೈ ಮಹಾಲಿಂಗ ನಾಯ್ಕ


ಅರ್ಧ ದಿನ ಕೂಲಿ ಕೆಲಸ, ಉಳಿದಾರ್ಧ ದಿನ ಸುರಂಗ ಕೊರೆತ

ಕುಡಿಯುವ ನೀರಿಗಾಗಿ ಪಕ್ಕದ ಮನೆಯವರನ್ನು ಆಶ್ರಯಿಸಿದ್ದ ಮಹಾಲಿಂಗ ನಾಯ್ಕರಿಗೆ ಬಾವಿ ತೋಡಿಸಲು ಕೈಯಲ್ಲಿ ದುಡ್ಡಿರಲಿಲ್ಲ. ಬಾವಿ ತೋಡಿದರೆ ನೀರು ದೊರೆಯುವ ಸಾಧ್ಯತೆಯೂ ಇರಲಿಲ್ಲ. ಏಕಾಂಗಿಯಾಗಿ ಬಾವಿ ತೋಡುವುದು ಅಸಾಧ್ಯ ಮಾತು. ಆಗ ಅವರಿಗೆ ಹೊಳೆದುದು ಸುರಂಗ ಕೊರೆತ. ಅರ್ಧ ದಿನ ಕೂಲಿ ಕೆಲಸ, ಉಳಿದಾರ್ಧ ದಿನ ಮತ್ತು ರಾತ್ರಿ ಹೊತ್ತು ಸುರಂಗ ಕೊರೆಯುವ ಮೂಲಕ ಜೀವಜಲ ಹುಡುಕುವ ಪ್ರಯತ್ನ ಮಾಡಿದರು.

ಮಹಾಲಿಂಗ ನಾಯ್ಕ ಮೊದಲು 30 ಮೀ. ಉದ್ದದ ಸುರಂಗ ಕೊರೆದರೂ ನೀರು ಸಿಗಲಿಲ್ಲ. ಯಾರು ಏನು ಹೇಳಿದರೂ ತನ್ನ ಭಗೀರಥ ಪ್ರಯತ್ನವನ್ನು ನಿಲ್ಲಿಸದೆ ಮುಂದುವರಿಸಿದ ಮಹಾಲಿಂಗ ನಾಯ್ಕರಿಗೆ ಆರನೇ ಪ್ರಯತ್ನ ಫಲ ನೀಡಿತು.

Amai Mahalinga Naik Padma Shri award from Karnataka
ಅಮೈ ಮಹಾಲಿಂಗ ನಾಯ್ಕ


ಫಲ ನೀಡಿದ ಆರನೇ ಪ್ರಯತ್ನ

ಈ ಪ್ರಯತ್ನದಲ್ಲಿ ನೀರು ಕಾಣಿಸಿತು. 25 ಮೀ. ಉದ್ದದ ಸುರಂಗದಲ್ಲಿ ಸಿಕ್ಕಿದ ನೀರಿನಲ್ಲಿ ಕೃಷಿ ಸಾಧ್ಯವಿಲ್ಲ ಎನ್ನುವುದು ಅವರಿಗೆ ಅರಿವಾಯಿತು. ಆರನೇ ಸುರಂಗದ ಪಕ್ಕದಲ್ಲಿ ಇನ್ನೊಂದು ಸುರಂಗ ಕೊರೆದರು. 25 ಮೀ. ತಲುಪುವಾಗ ನೀರು ಕಾಣಿಸಿಕೊಂಡಿತು. ಮತ್ತೆ ಮುಂದುವರಿಸಿ 75 ಮೀ. ಉದ್ದದ ಸುರಂಗವಾಗುವ ಹೊತ್ತಿಗೆ ಯಥೇಚ್ಛ ನೀರು ಸಿಕ್ಕಿತು. ಆಗ ಅವರ ತೋಟದ ಕನಸು ಮತ್ತೆ ಗರಿಗೆದರಿತು.

ಇದನ್ನೂ ಓದಿ:  Republic Day 2022: ದೆಹಲಿಯ ಗಣರಾಜ್ಯೋತ್ಸವದಲ್ಲಿ ಏನೇನೆಲ್ಲಾ ಉಂಟು-ಇಲ್ಲಿದೆ ಸಂಪೂರ್ಣ ವಿವರ

ಸುರಂಗದ ನೀರನ್ನು ಸಂಗ್ರಹಿಸಲು ಮಣ್ಣಿನ ಟ್ಯಾಂಕ್ ನಿರ್ಮಿಸಿದರು. ನೀರಿನ ಸಂಪನ್ನತೆಯಿಂದಾಗಿ ತೋಟ ಮಾಡುವ ಕನಸು ನನಸಾಯಿತು. ಗುಡ್ಡವನ್ನು ಸಮತಟ್ಟು ಮಾಡಿ ಭತ್ತ, ಅಡಿಕೆ, ತೆಂಗು, ಬಾಳೆ ಕೃಷಿ ಕೈಗೊಂಡರು. ಮಡದಿ ಲಲಿತ ಮೂವರು ಮಕ್ಕಳು ಪ್ರಯತ್ನಕ್ಕೆ ಕೈ ಜೋಡಿಸಿದರು.

Amai Mahalinga Naik Padma Shri award from Karnataka
ಅಮೈ ಮಹಾಲಿಂಗ ನಾಯ್ಕ


ಬದುಕಿನಲ್ಲಿ ಎದುರಾದ ದುರಂತ

ಕೃಷಿಯಿಂದ ಆದಾಯ ಬರುತ್ತಿದ್ದರೂ ಅವರು ಹಿಂದಿನ ದುಡಿಮೆಯ ಕಾಯಕವನ್ನು ನಿಲ್ಲಿಸಿರಲಿಲ್ಲ. ಹದಿನಾಲ್ಕು ವರ್ಷಗಳ ಹಿಂದೆ ನೆಗಳಗುಳಿ ಎಂಬಲ್ಲಿ ಕೃಷಿಕರೊಬ್ಬರ ತೋಟದಲ್ಲಿ ತೆಂಗಿನ ಮರ ಹತ್ತುತ್ತಿದ್ದಾಗ ಮಹಾಲಿಂಗ ನಾಯ್ಕ ಆಕಸ್ಮಿಕವಾಗಿ ಜಾರಿ ಬಿದ್ದು ಗಾಯಗೊಂಡರು.

ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆ ಸೇರಿದ ಮಹಾಲಿಂಗ ನಾಯ್ಕ ಮೂರು ತಿಂಗಳು ಆಸ್ಪತ್ರೆಯಲ್ಲಿದ್ದರು. ಬಳಿಕ ಮನೆಗೆ ಮರಳಿದ್ದರೂ ಚೇತರಿಸಿಕೊಳ್ಳುವ ಹೊತ್ತಿಗೆ ಒಂದು ವರ್ಷ ಕಳೆದಿತ್ತು. ದುಡಿದು ಉಳಿಸಿದ ಹಣ ಕರಗಿ ಹೋಯಿತು. ಈ ಘಟನೆಯ ಬಳಿಕ ಅಡಿಕೆ, ತೆಂಗಿನಮರ ಹತ್ತುವ ಕಾಯಕದಿಂದ ನಿವೃತ್ತರಾದರು. ಆದರೆ ಕೃಷಿಯನ್ನು ಮುಂದುವರಿಸಿದರು.

ಒಂದು ಎಕರೆಯಲ್ಲಿ ಕೃಷಿ

ಮಹಾಲಿಂಗ ನಾಯ್ಕ ಒಂದು ಎಕರೆಯಲ್ಲಿ ಅಡಿಕೆ, ತೆಂಗು, ಬಾಳೆ, ಕಾಳುಮೆಣಸಿನ ಕೃಷಿ ಕೈಗೊಂಡಿದ್ದಾರೆ. ಇನ್ನೊಂದು ಎಕರೆಯಲ್ಲಿ ಕಾಡು ಬೆಳೆಸಿದ್ದಾರೆ. ಗೇರು ಕೃಷಿಯೂ ಇದೆ. ಮಣ್ಣಿನ ಟ್ಯಾಂಕಿಯಿಂದ ವಿದ್ಯುತ್‌ನ ಖರ್ಚಿಲ್ಲದೆ ಗ್ರಾವಿಟಿ ಮೂಲಕ ಅಡಿಕೆ, ತೆಂಗು ಮತ್ತು ಬಾಳೆಗಿಡಗಳಿಗೆ ನೀರು ಉಣಿಸುತ್ತಾರೆ.

Amai Mahalinga Naik Padma Shri award from Karnataka
ಅಮೈ ಮಹಾಲಿಂಗ ನಾಯ್ಕ


ಅವರ ತೋಟದಲ್ಲಿ 300 ಅಡಿಕೆ, 75 ತೆಂಗು, 200 ಬಾಳೆಗಿಡಗಳಿವೆ. ಹಟ್ಟಿಗೊಬ್ಬರ, ಕಾಂಪೋಸ್ಟ್ ಹೊರತು ಬೇರೆ ಯಾವುದೇ ಗೊಬ್ಬರದ ಬಗ್ಗೆ ಮಾಹಾಲಿಂಗ ನಾಯ್ಕರಿಗೆ ಗೊತ್ತಿಲ್ಲ. ಜಮೀನಿನಲ್ಲಿ ಇಂಗುಗುಂಡಿಗಳ ಮೂಲಕ ಜಲಕೊಯ್ಲು ಮಾಡುತ್ತಾರೆ. ನಾಲ್ಕು ವರ್ಷಗಳ ಹಿಂದೆ 2 ಬೋರ್‌ವೆಲ್ ತೆಗೆಸಿದ್ದಾರೆ.

ಮೊದಲ ಬೋರ್‌ವೆಲ್ 400 ಅಡಿ ಸಾಗಿದ್ದರೂ ನೀರು ದೊರೆಯಲಿಲ್ಲ. 2ನೇ ಬೋರ್‌ನಲ್ಲಿ 370 ಅಡಿ ತಲುಪುವ ಹೊತ್ತಿಗೆ 1 ಇಂಚು ನೀರು ಸಿಕ್ಕಿದೆ. ಇದೀಗ ಬೋರ್‌ವೆಲ್‌ಗೆ ಪಂಪ್‌ಸೆಟ್ ಇದೀಗ ಅಳವಡಿಸಿದ್ದಾರೆ.

ಸಾಲಕ್ಕಾಗಿ ಯಾವುದೇ ಬ್ಯಾಂಕ್ ಮೊರೆ ಹೋಗಿಲ್ಲ. ಕೃಷಿಯಲ್ಲಿ ದೊರೆತ ಆದಾಯದಿಂದ ಸ್ವಂತ ಮನೆ ಕಟ್ಟಿದ್ದಾರೆ. ಮನೆಗೆ ವಿದ್ಯುತ್ ಸೇರಿದಂತೆ ಮೂಲ ಸೌಕರ್ಯಗಳು ಬಂದಿವೆ.

ಶಾಲಾ ಕಾಲೇಜುಗಳ ಮೆಟ್ಟಿಲು ಹತ್ತದ ಛಲಗಾರ ಮಹಾಲಿಂಗ ನಾಯ್ಕರಿಗೆ ದುಡಿಮೆ ಎಲ್ಲವನ್ನು ನೀಡಿದೆ. ಮಹಾಲಿಂಗ ನಾಯ್ಕರ ಏಕಾಂಗಿ ಸಾಧನೆಯನ್ನು ದೂರದರ್ಶನ ತನ್ನ ವಾಟರ್ ವಾರಿಯರ್ ಧಾರಾವಾಹಿಯಲ್ಲಿ ಬಿತ್ತರಿಸಿದೆ.
Published by:Mahmadrafik K
First published: