HOME » NEWS » State » ALTERNATIVE REPUBLIC DAY PARADE BY FARMERS IN BANGALORE ON JAN 26 SAYS KURUBURU SHANTHAKUMAR SESR NCHM

ಜ.26 ರಂದು ಬೆಂಗಳೂರಿನಲ್ಲೂ ರೈತರಿಂದ ಪರ್ಯಾಯ ಗಣರಾಜ್ಯೋತ್ಸವ ಪೆರೇಡ್; ಕುರುಬೂರು ಶಾಂತಕುಮಾರ್​

ಬೆಂಗಳೂರಿನಲ್ಲೂ ರೈತ, ದಲಿತ, ಕಾರ್ಮಿಕ ಐಕ್ಯ ಹೋರಾಟ ಸಮಿತಿಯಿಂದ  ಬೃಹತ್ ಟ್ರ್ಯಾಕ್ಟರ್ ಹಾಗೂ ಮೋಟಾರ್ ಬೈಕ್ ಮೆರವಣಿಗೆ ನಡೆಸುವ ಮೂಲಕ ಪರ್ಯಾಯ ಗಣ ರಾಜ್ಯೋತ್ಸವ ಪೆರೇಡ್ ನಡೆಸಲಾಗುವುದು

news18-kannada
Updated:January 13, 2021, 8:49 PM IST
ಜ.26 ರಂದು ಬೆಂಗಳೂರಿನಲ್ಲೂ ರೈತರಿಂದ ಪರ್ಯಾಯ ಗಣರಾಜ್ಯೋತ್ಸವ ಪೆರೇಡ್; ಕುರುಬೂರು ಶಾಂತಕುಮಾರ್​
ಕುರುಬೂರು ಶಾಂತಕುಮಾರ್​
  • Share this:
ಚಾಮರಾಜನಗರ (ಜ. 14) :  ವಿವಾದಿತ  ಕೃಷಿ ಕಾಯ್ದೆಗಳ ಜಾರಿ ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು  ದೆಹಲಿಯಲ್ಲಿ ಜನವರಿ 26 ರಂದು ಪರ್ಯಾಯ ಗಣ ರಾಜ್ಯೋತ್ಸವ ಪೆರೇಡ್ ನಡೆಸಲಿದ್ದು, ಇದನ್ನು ಬೆಂಬಲಿಸಿ ಅಂದು ಬೆಂಗಳೂರಿನಲ್ಲೂ ರೈತ, ದಲಿತ, ಕಾರ್ಮಿಕ ಐಕ್ಯ ಹೋರಾಟ ಸಮಿತಿಯಿಂದ  ಬೃಹತ್ ಟ್ರ್ಯಾಕ್ಟರ್ ಹಾಗೂ ಮೋಟಾರ್ ಬೈಕ್ ಮೆರವಣಿಗೆ ನಡೆಸುವ ಮೂಲಕ ಪರ್ಯಾಯ ಗಣ ರಾಜ್ಯೋತ್ಸವ ಪೆರೇಡ್ ನಡೆಸಲಾಗುವುದು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.  ಈ ಕುರಿತು ನಗರದಲ್ಲಿ ಮಾತನಾಡಿದ ಅವರು,  ವಿವಾದಿತ ಕೃಷಿ ಕಾಯ್ದೆಗಳ ಜಾರಿಗೆ ಸುಪ್ರೀಂ ಕೋರ್ಟ್ ತಡೆ ನೀಡಿರುವುದು ಸ್ವಾಗತಾರ್ಹ. ಇದು ರೈತರ ಹೋರಾಟಕ್ಕೆ ಸಿಕ್ಕ ಜಯವಾಗಿದೆ. ಆದರೆ  ಈ ಕೃಷಿ ಕಾಯ್ದೆ  ಕುರಿತು ಎದ್ದಿರುವ ವಿವಾದ ಇತ್ಯರ್ಥಪಡಿಸಲು ನಾಲ್ವರು ಸದಸ್ಯರ ಸಮಿತಿಯನ್ನು ರಚಿಸಿರುವುದು ಮಾತ್ರ ಕುರಿ ಕಾಯಲು ತೋಳವನ್ನು ಕಾವಲಿಗೆ ಇಟ್ಟಂತಾಗಿದೆ.  ಈ ಸಮಿತಿಯಲ್ಲಿರುವ ಸದಸ್ಯರೆಲ್ಲ ಸರ್ಕಾರದ ಪರವಾಗಿಯೇ ಇದ್ದು ಈ ಕೃಷಿ ಕಾಯ್ದೆಗಳನ್ನು ರಚಿಸುವಲ್ಲಿ ಹಾಗೂ ಜಾರಿಗೊಳಿಸುವಲ್ಲಿ ಪ್ರಮುಖ ಪಾತ್ರಧಾರಿಗಳಾಗಿದ್ದಾರೆ. ಸರ್ಕಾರದ ನಿರ್ಧಾರದ ಮೇಲೆ ಒಲವು ಹೊಂದಿದ್ದಾರೆ. ಅಲ್ಲದೆ ಈ ಕಾಯ್ದೆಗಳನ್ನು  ಮೊದಲೇ ಸ್ವಾಗತಿಸಿದ್ದಾರೆ. ಇವರಿಂದ ರೈತಸಂಘಟನೆಗಳ ಒತ್ತಾಯದ ಬಗ್ಗೆ ಪ್ರಾಮಾಣಿಕ ವರದಿ ತಯಾರಾಗುವುದು ಖಂಡಿತ ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಸುಪ್ರೀಂ ಕೋರ್ಟ್ ಈ ಸಮಿತಿಯನ್ನು ರದ್ದುಗೊಳಿಸಿ ವಿಶ್ವಾಸರ್ಹ ಪರಿಣಿತರು ಹಾಗು  ಹೋರಾಟ ನಿರತ ರೈತ ಮುಖಂಡರನ್ನು ಒಳಗೊಂಡ ಸಮಿತಿ ರಚಿಸಿ ಈ ಸಮಿತಿಯಿಂದ ವರದಿ ಪಡೆಯಬೇಕು ಆ ಮೂಲಕ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಬೇಕು ಎಂದು ಕುರುಬೂರು ಶಾಂತಕುಮಾರ್ ಹೇಳಿದರು.

ರೈತ, ದಲಿತ, ಕಾರ್ಮಿಕ ಐಕ್ಯ ಹೋರಾಟ ಸಮಿತಿಯಿಂದ ಸುಪ್ರೀಂ ಕೋರ್ಟ್ ತೀರ್ಪು, ದೇಶದ ರೈತ ಸಂಘಟನೆಗಳ ಮುಂದಿನ ಹೋರಾಟದ ರೂಪು ರೇಷೆಗಳು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ಕಾಯ್ದೆಗಳ ಬಗ್ಗೆ  ಜನವರಿ 16 ರಂದು ಬೆಂಗಳೂರಿನಲ್ಲಿ ಮುಕ್ತ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ. ಬೆಂಗಳೂರಿನ ಕೊಂಡೋಜಿ ಬಸಪ್ಪ ಸಭಾಂಗಣದಲ್ಲಿ  ಈ ಕಾರ್ಯಕ್ರಮ ನಡೆಯಲಿದ್ದು ರಾಷ್ಟ್ರ ಮಟ್ಟದ ಹೋರಾಟನಿರತ ರೈತ ಮುಖಂಡರಾದ ಯೋಗೇಂದ್ರ ಯಾದವ್, ಯಧುವೀರ್​ ಸಿಂಗ್,  ಕೇರಳದ ಕೆ.ವಿ.ಬಿಜು, ತಮಿಳುನಾಡಿನ ಐಯ್ಯ ಕಣ್ಣನ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ ಭೂ ಸುಧಾರಣಾ ಕಾಯ್ದೆ ಜಾರಿ ತಡೆಯುವ ಬಗ್ಗೆ ರೈತ ಮುಖಂಡರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲು ಸರ್ಕಾರಕ್ಕೆ ಸೂಚನೆ ನೀಡುವುದಾಗಿ ರೈತ,ದಲಿತ, ಕಾರ್ಮಿಕ  ಐಕ್ಯ ಹೋರಾಟ ಸಮಿತಿಯ ಮುಖಂಡರಿಗೆ ರಾಜ್ಯಪಾಲರು ಭರವಸೆ ನೀಡಿದ್ದರು. ಆದರೆ ಅವರು ನೀಡಿದ್ದ ಭರವಸೆ ಹುಸಿಯಾಗಿದ್ದು, ರಾಜ್ಯಪಾಲರು ತಮ್ಮ ಹುದ್ದೆಯ ಘನತೆಗೆ ಅಪಮಾನ ಮಾಡಿದ್ದಾರೆ. ಅಲ್ಲದೆ ರಾಜ್ಯದ ರೈತರಿಗೆ ದ್ರೋಹ ಬಗೆದಿದ್ದಾರೆ ಎಂದು ಕುರುಬೂರು ಶಾಂತಕುಮಾರ್ ಕಿಡಿಕಾರಿದರು.

(ವರದಿ: ಎಸ್.ಎಂ.ನಂದೀಶ್ )
Published by: Seema R
First published: January 13, 2021, 8:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading