ದಾವಣಗೆರೆ: ಪಕ್ಷ ಬಲಪಡಿಸಲು ಕಾರ್ಯಕಾರಣಿ ಸಭೆ (BJP Core Committee Meeting) ನಡೆಸಲಾಗುತ್ತಿದೆ. ರಾಜ್ಯದಲ್ಲಿ ನಾನಾಗಲೀ, ಪಕ್ಷದ ಅಧ್ಯಕ್ಷರಾಗಲಿ ಪ್ರವಾಸ ಮಾಡುತ್ತಿದ್ದಾರೆ. ಈಗಾಗಲೇ ನಮ್ಮ ಪ್ರವಾಸ ಆರಂಭವಾಗಿದೆ. ಮುಂಬರುವ ಚುನಾವಣೆಯಲ್ಲಿ ನಿಶ್ಚಿತವಾಗಿ ನಮಗೆ ಗೆಲವು ಸಿಗಲಿದೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (BS Yediyurappa) ಅವರು ವಿಶ್ವಾಸ ವ್ಯಕ್ತಪಡಿಸಿದರು. ದಾವಣಗೆರೆಯಲ್ಲಿ ಮಾತನಾಡಿದ ಅವರು, ಕೋಡ್ ಕಮಿಟಿ ಸಭೆಯಲ್ಲಿ ಪಕ್ಷದ ಸಂಘಟನೆ ಕುರಿತು ಚರ್ಚಿಸಲಿದ್ದೇವೆ. ಮುಂದೆ ಪಕ್ಷವನ್ನು ಅಧಿಕಾರಕ್ಕೆ ತರುವ ದೃಷ್ಟಯಿಂದ ಚರ್ಚೆ ನಡೆಸಲಾಗುತ್ತದೆ. ಮುಂದಿನ ಚುನಾವಣೆಯಲ್ಲಿ 135 ರಿಂದ 140 ಸೀಟು ಗೆಲ್ಲುವ ಸಂಕಲ್ಪದೊಂದಿಗೆ ಕಾರ್ಯಕಾರಿಣಿ ಸಭೆ ಮಾಡಲಾಗುತ್ತಿದೆ ಎಂದು ಹೇಳಿದರು.
ನಾನು ಈಗಾಗಲೇ ಪ್ರವಾಸ ಮಾಡುತ್ತಿದ್ದೇನೆ. ಮೈಸೂರು ಇನ್ನೀತರ ಕಡೆ ನಾನು ಪ್ರವಾಸ ಮಾಡುತ್ತಿದ್ದೇನೆ. ನಾನಾಗಾಲೀ, ಅಧ್ಯಕ್ಷರಾಗಲೀ ಪ್ರವಾಸ ಮಾಡುತ್ತಿದ್ದಾರೆ. ರಾಷ್ಟ್ರೀಯ ನಾಯಕರೆಲ್ಲರೂ ಕೂಡ ಬಂದಿದ್ದಾರೆ. ಅವರ ಸಲಹೆ, ಸೂಚನೆಯಂತೆ ಮುಂದಿನ ಸಂಘಟನೆ ಮಾಡಲಿದ್ದೇವೆ. ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಶ್ರಮಿಸುತ್ತೇವೆಹ ಎಂದು ಹೇಳಿದರು. ಇದೇ ವೇಳೆ ಬೆಲೆ ಏರಿಕೆ ಬಗ್ಗೆ ಯಾವ ರೀತಿ ಸಮರ್ಥನೆ ನಿಡುತ್ತೀರಿ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸದೆ ತೆರಳಿದರು.
ದಾವಣಗೆರೆಯ ಖಾಸಗಿ ಹೋಟೆಲ್ನಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯುತ್ತಿದೆ. ಈ ಸಭೆಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ
ಅರುಣ್ ಸಿಂಗ್, ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ, ಸಂಸದ ಪ್ರತಾಪ್ ಸಿಂಹ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸೇರಿ 17 ನಾಯಕರು ಪಾಲ್ಗೊಂಡಿದ್ದಾರೆ. ಇದೇ ಮೊದಲ ಬಾರಿಗೆ ಕೋರ್ ಕಮಿಟಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಭಾಗಿಯಾಗಿದ್ದಾರೆ. ಪಕ್ಷ ಸಂಘಟನೆ ಕುರಿತಂತೆ ಪದಾಧಿಕಾರಿಗಳಿಗೆ ಕೆಲವು ನಿರ್ದೇಶನಗಳನ್ನು ಅರುಣ್ ಸಿಂಗ್ ಹಾಗೂ ನಳಿನ್ ಕುಮಾರ್ ಕಟೀಲ್ ಅವರು ನೀಡಲಿದ್ದಾರೆ.
ವಿಧಾನ ಪರಿಷತ್ ನಲ್ಲಿ ಪ್ರಾಬಲ್ಯ ಹೆಚ್ಚಿಸಿಕೊಳ್ಳುವ ಸಂಬಂಧ ಕೋರ್ ಕಮಿಟಿಯಲ್ಲಿ ಮಹತ್ವದ ಚರ್ಚೆ ನಡೆಯುವ ಸಾಧ್ಯತೆ ಇದೆ. ಜನವರಿ ತಿಂಗಳಲ್ಲಿ 25 ವಿಧಾನ ಪರಿಷತ್ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗಳಿಸುವ ಸಂಬಂಧ ಪಕ್ಷ ಸಂಘಟನೆಗೆ ಒತ್ತು ನೀಡುವ ಸಂಬಂಧ ಚರ್ಚೆ ನಡೆಯಲಿದೆ. ಹಾಗೆಯೇ ರಾಜ್ಯ ನಾಯಕರ ಪ್ರವಾಸದ ಕುರಿತು ಪ್ರಮುಖ ನಿರ್ಧಾರಗಳನ್ನು ಕೋರ್ ಕಮಿಟಿ ತೆಗೆದುಕೊಳ್ಳಲಿದೆ.
ಸಭೆಯಲ್ಲಿ ಯಡಿಯೂರಪ್ಪ ರಾಜ್ಯ ಪ್ರವಾಸ ಪ್ರಸ್ತಾಪವಾಗುವ ಸಾಧ್ಯತೆ ದಟ್ಟವಾಗಿದೆ. ಯಡಿಯೂರಪ್ಪ ಪ್ರವಾಸಕ್ಕಾಗಿ ಯಾವ ರೀತಿ ಟೈಂ ಟೇಬಲ್ ನಿಗದಿಪಡಿಸಬೇಕು ಎಂಬ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ. ಯಡಿಯೂರಪ್ಪ ಪ್ರತ್ಯೇಕ ಪ್ರವಾಸದ ಬಗ್ಗೆ ಪ್ರಸ್ತಾಪ ಮಾಡುವ ಸಾಧ್ಯತೆ ಕಡಿಮೆ ಇದೆ. ಆದರೆ ಯಡಿಯೂರಪ್ಪ ಅವರನ್ನು ಪಕ್ಷ ಸಂಘಟನೆಗೆ ಯಾವ ರೀತಿ ತೊಡಗಿಸಿಕೊಳ್ಳಬೇಕು ಎಂಬ ಬಗ್ಗೆ ಬಹುತೇಕ ನಿರ್ಧಾರ ಆಗಲಿದೆ.
ಇದನ್ನು ಓದಿ: BSY: ಯಡಿಯೂರಪ್ಪ ರಾಜ್ಯ ಪ್ರವಾಸ ಆರಂಭಿಸಲು ಗ್ರೀನ್ ಸಿಗ್ನಲ್ ನೀಡುವ ಪ್ರಶ್ನೆಯೇ ಇಲ್ಲ; ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್
ಪಂಚಾಯತ್ ಸೀಮಾ ವಿಂಗಡಣೆ ಆಯೋಗ ರಚನೆ ವಿಧೇಯಕವನ್ನು ಸರ್ಕಾರ ನೆನ್ನೆ ಸದನದಲ್ಲಿ ಮಂಡಿಸಿದೆ. ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಚುನಾವಣೆ ಮುಂದೂಡುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಆರೋಪ ಮಾಡಿದ್ದಾರೆ. ಆ ಮೂಲಕ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ ಸಾಧ್ಯತೆಯ ದೃಷ್ಟಿಯಿಂದಲೂ ಚರ್ಚೆ ನಡೆಯಲಿದೆ. ಹಾಗೂ ಪಕ್ಷ ಸಂಘಟನೆಗೆ ನಾಯಕರಿಗೆ ವಿಭಾಗಾವಾರು ಪ್ರವಾಸ ಜವಾಬ್ದಾರಿ ಹಂಚಿಕೆ ಮಾಡುವ ಸಾಧ್ಯತೆ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ