ಈ ಬಜೆಟ್​ ಲೋಕಸಭಾ ಚುನಾವಣೆಯ ಸುಳ್ಳು ಭರವಸೆ​; ಮೈತ್ರಿ ನಾಯಕರ ವ್ಯಂಗ್ಯ

ಚುನಾವಣೆಯಲ್ಲಿ ನೇರವಾಗಿ ಹಣ ಕೊಡೋಕೆ ಆಗಲ್ಲ. ಚುನಾವಣಾ ಆಯೋಗದವರು ಹಿಡಿತಾರೆ. ಆ ಕಾರಣಕ್ಕೆ ವರ್ಷಕ್ಕೆ 6 ಸಾವಿರ ಹಣ ಕೊಟ್ಟಿದ್ದಾರೆ. ರೈತರಿಗೆ ಹಣ ಕೊಟ್ಟಿರುವುದು ಇದೇ ಕಾರಣಕ್ಕೆ- ಸಚಿವ ಎಚ್​.ಡಿ.ರೇವಣ್ಣ

Latha CG | news18
Updated:February 1, 2019, 6:30 PM IST
ಈ ಬಜೆಟ್​ ಲೋಕಸಭಾ ಚುನಾವಣೆಯ ಸುಳ್ಳು ಭರವಸೆ​; ಮೈತ್ರಿ ನಾಯಕರ ವ್ಯಂಗ್ಯ
ಡಿಸಿಎಂ ಪರಮೇಶ್ವರ್​- ಸಿದ್ದರಾಮಯ್ಯ
Latha CG | news18
Updated: February 1, 2019, 6:30 PM IST
ಕೇಂದ್ರ ಬಜೆಟ್​ಗೆ ಕಾಂಗ್ರೆಸ್ ಮತ್ತು ಜೆಡಿಎಸ್​​ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಮೋದಿ ಬಜೆಟ್​ ಕೇವಲ ಸುಳ್ಳು ಆಶ್ವಾಸನೆಯ ಬಜೆಟ್, ರೈತರಿಗೆ ಮತ್ತು ಯುವಜನರಿಗೆ ಯಾವುದೇ ಉಪಯೋಗವಿಲ್ಲ ಎಂದು ತೀವ್ರ ಟೀಕೆ ಮಾಡಿದ್ಧಾರೆ.

ಮಾಜಿ ಸಿಎಂ ಸಿದ್ದರಾಮಯ್ಯನವರು, 2019-20ರ ಕೇಂದ್ರದ ಮಧ್ಯಂತರ ಬಜೆಟ್ ಸಂಪೂರ್ಣವಾಗಿ 'ರೈತ ವಿರೋಧಿ' ಮತ್ತು 'ಯುವಜನ ವಿರೋಧಿ' ಆಗಿದೆ. ತೀರಾ ಸಂಕಷ್ಟದಲ್ಲಿರುವ ಈ ಎರಡೂ ವರ್ಗಗಳಿಗೆ ಸಮಾಧಾನ ನೀಡಬಲ್ಲ, ಬಲವಾದ ಯಾವ ಯೋಜನೆಗಳೂ ಬಜೆಟ್ ನಲ್ಲಿ ಇಲ್ಲ. ಎರಡೂ ವರ್ಗಕ್ಕೂ ಪ್ರಧಾನಿ ನರೇಂದ್ರ ಮೋದಿ ದ್ರೋಹ ಎಸಗಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


Loading...

ಜನರ‌ ಖಾತೆಗೆ ದುಡ್ಡು ಹಾಕಿದ್ದು, ಆದಾಯ ತೆರಿಗೆ ಮಿತಿ ಹೆಚ್ಚಿಸಿದ್ದು.. ಇದೆಲ್ಲ ಕೇವಲ ಚುನಾವಣೆಗಾಗಿ ಮೋದಿ ಮಾಡಿರುವ ಪ್ಲಾನ್. ಈ ಬಜೆಟ್ ಬಿಜೆಪಿ ಪ್ರಣಾಳಿಕೆ ಬಜೆಟ್​ನಂತೆ. ಈ ಬಜೆಟ್ ಗೆ ಅರ್ಥವಿಲ್ಲ. ಇದು‌ ಮಧ್ಯಂತರ ಬಜೆಟ್ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ರಾಯಚೂರಿನಲ್ಲಿ ಹೇಳಿದ್ದಾರೆ.

ಮೋದಿ ಸರ್ಕಾರದ ಬಜೆಟ್​ ಜನರ ಸಾಲದ ಹೊರೆ ಹೆಚ್ಚಿಸಿದೆ. ಇದೇನಾ ಮೋದಿಯವರ ಅಚ್ಚೇ ದಿನ್  ಎಂದು ಐಎನ್​ಸಿ ಕರ್ನಾಟಕ ಟ್ವೀಟ್​ ಮಾಡಿ ವ್ಯಂಗ್ಯ ಮಾಡಿದೆ.ಅತ್ಯಂತ ನಿರಾಶದಾಯಕ ಬಜೆಟ್​: ಡಿ.ಕೆ. ಸುರೇಶ್​

ಕೇಂದ್ರ  ಬಜೆಟ್ ಬಗ್ಗೆ ಸಂಸದ ಡಿ.ಕೆ‌. ಸುರೇಶ್ ಪ್ರತಿಕ್ರಿಯಿಸಿದ್ದು, ಇದು ಚುನಾವಣಾ ಬಜೆಟ್. ಮೋದಿ‌ ಧೃತಿಗೆಟ್ಟು ಕೆಲವು ಯೋಜನೆ ರೂಪಿಸಿದ್ದಾರೆ. ಚುನಾವಣೆಗಾಗಿಯೇ ಈ ಬಜೆಟ್ ರೂಪಿಸಿದ್ದಾರೆ. 15 ಲಕ್ಷ ಕೊಡುತ್ತೇನೆ ಎಂದಿದ್ದರು, ರೈತರಿಗೆ 6 ಸಾವಿರ ಕೊಟ್ಟಿದ್ದಾರೆ. ಇದು ಅತ್ಯಂತ ನಿರಾಶದಾಯಕ ಬಜೆಟ್ ಆಗಿದೆ ಎಂದು ಟೀಕಿಸಿದರು.

ಕೇವಲ ಕಾಗದದಲ್ಲಿ ಇರುವ ಬಜೆಟ್​: ವೀರಪ್ಪ ಮೊಯ್ಲಿ

ಇದು ಕೇವಲ ಕಾಗದದಲ್ಲಿ ಇರುವ ಬಜೆಟ್​ ಎಂದು ಮಾಜಿ‌ ಕೇಂದ್ರ ಸಚಿವ ಹಾಗೂ ‌ಮಾಜಿ ಮುಖ್ಯಮಂತ್ರಿ ವೀರಪ್ಪ ಮೋಯ್ಲಿ ಟೀಕಿಸಿದ್ಧಾರೆ. ಈ ಬಜೆಟ್ ಕೇವಲ ಕಾಗದದಲ್ಲಿ ಇರುವ ಬಜೆಟ್. ಕಳೆದ ಐದು ವರ್ಷಗಳಿಂದ ಕೇಂದ್ರ ಸರ್ಕಾರ ಏನು ಮಾಡಿದೆ ಅಂತ ಜನರಿಗೆ ಗೊತ್ತಿದೆ. ಉದ್ಯೊಗ ಸೃಷ್ಟಿಯಲ್ಲಿ ವಿಫಲವಾಗಿದೆ. ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಅವಶ್ಯಕತೆ ಇರಲಿಲ್ಲ. ಇದು ಚುನಾವಣಾ ತಂತ್ರವು ಇಲ್ಲ, ಎನೂ ಇಲ್ಲ. ಇದು ಅತಂತ್ರ ಬಜೆಟ್. ಯುವಕರಿಗಂತೂ ಈ ಬಜೆಟ್ ಸಂಪೂರ್ಣ ನಿರಾಸೆ ತಂದಿದೆ ಎಂದು ವ್ಯಂಗ್ಯ ಮಾಡಿದರು.

ಸುಳ್ಳು ಆಶ್ವಾಸನೆಗಳ ಬಜೆಟ್​: ಸಂಸದ ಮುದ್ದಹನುಮೇಗೌಡ

ಬಿಜೆಪಿಗೆ ಬದ್ದತೆ ಇದ್ದಿದ್ದರೆ ಮೊದಲೇ ಈ ಘೋಷಣೆ ಮಾಡಬೇಕಿತ್ತು. ಈಗ ಅವಧಿ ಮುಗಿದ ಮೇಲೆ ಘೋಷಣೆ ಮಾಡಿದ್ದಾರೆ. ಈ ಘೋಷಣೆಗಳು ಏಪ್ರಿಲ್​ 1 ರಂದು ಅನುಷ್ಠಾನಕ್ಕೆ ಬರುತ್ತವೆ. ಮಧ್ಯಂತರ ಬಜೆಟ್​ನಲ್ಲಿ ಈ ರೀತಿಯ ಘೋಷಣೆ ಅಗತ್ಯ ಇರಲಿಲ್ಲ. ಈ ಬಜೆಟ್​ ಸುಳ್ಳು ಆಶ್ವಾಸನೆಗಳಿಂದ ಕೂಡಿದೆ ಎಂದು ಸಂಸದ ಮುದ್ದಹನುಮೇಗೌಡ ಟೀಕಿಸಿದ್ದಾರೆ.

ಕರ್ನಾಟಕಕ್ಕೆ ಏನನ್ನೂ ಕೊಟ್ಟಿಲ್ಲ : ಸಂಸದ ಬಿ.ಕೆ. ಹರಿಪ್ರಸಾದ್  

ಮಧ್ಯಂತರ ಬಜೆಟ್ ಹೆಸರಿನಲ್ಲಿ ಬಿಜೆಪಿ ಪ್ರಣಾಳಿಕೆ ಮಂಡಿಸಿದ್ದಾರೆ. ಎಮ್ಸ್ ಆಸ್ಪತ್ರೆಯನ್ನು ಹರಿಯಾಣಕ್ಕೆ ಕೊಟ್ಟಿದ್ದಾರೆ. ದೊಡ್ಡ ರಾಜ್ಯವಾಗಿರುವ ಕರ್ನಾಟಕಕ್ಕೆ ಕೊಟ್ಟಿಲ್ಲ. ಕರ್ನಾಟಕಕ್ಕೆ ಈ ಬಜೆಟ್ ನಲ್ಲಿ ಏನೇನೂ ಕೊಟ್ಟಿಲ್ಲ. ಕಾರ್ಪೊರೇಟ್ ಸೆಕ್ಟರ್ ಗೆ ತೆರಿಗೆ ವಿಧಿಸಿಲ್ಲ. ಸಂಪೂರ್ಣವಾಗಿ ಜಿಎಸ್ ಟಿ ಮೂಲಕವೇ ಆದಾಯ ಸಂಗ್ರಹಿಸಲು ಹೊರಟಿದ್ದಾರೆ. ಮಹಿಳಾ ರಕ್ಷಣೆ ಬಗ್ಗೆ ಯೋಜನೆ ಏನಿಲ್ಲ ಎಂದು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ನಿರೀಕ್ಷೆ ಹುಸಿಯಾಗಿದೆ: ಎಚ್​.ಡಿ.ರೇವಣ್ಣ

ಚುನಾವಣೆಯಲ್ಲಿ ನೇರವಾಗಿ ಹಣ ಕೊಡೋಕೆ ಆಗಲ್ಲ. ಚುನಾವಣಾ ಆಯೋಗದವರು ಹಿಡಿತಾರೆ. ಆ ಕಾರಣಕ್ಕೆ ವರ್ಷಕ್ಕೆ 6 ಸಾವಿರ ಹಣ ಕೊಟ್ಟಿದ್ದಾರೆ. ರೈತರಿಗೆ ಹಣ ಕೊಟ್ಟಿರುವುದು ಇದೇ ಕಾರಣಕ್ಕೆ. ರೈತರ ಸಾಲಮನ್ನಾ ಮಾಡ್ತಾರೆ ಅಂದ್ಕೊಂಡಿದ್ವಿ. ಎಲ್ಲರ ಅಕೌಂಟ್ ಗೆ 10-20 ಸಾವಿರ ರೂ. ಹಾಕ್ತಾರೆ ಅಂದ್ಕೊಂಡಿದ್ವಿ. ಆದರೆ ನಿರೀಕ್ಷೆ ಹುಸಿಯಾಗಿದೆ ಎಂದು ಸಚಿವ ಎಚ್.ಡಿ. ರೇವಣ್ಣ ವ್ಯಂಗ್ಯ ಮಾಡಿದ್ಧಾರೆ.

ಇದು ಕೇವಲ ಘೋಷಣೆ ಅಷ್ಟೇ: ಕಾಂಗ್ರೆಸ್ ‌ಶಾಸಕ ಸುಧಾಕರ್  

ನರೇಂದ್ರ ಮೋದಿ ರೈತರ ಖಾತೆಗೆ 6 ಸಾವಿರ ಹಣ ಹಾಕುವುದಾಗಿ ಬಜೆಟ್ ನಲ್ಲಿ ಘೋಷಣೆ ಮಾಡಿರುವುದು ಸ್ವಾಗತ. ಆದರೆ ರೈತರ ಖಾತೆಗೆ ಆ ಹಣ ಬರಬೇಕಲ್ಲ ಎಂದು ಕಾಂಗ್ರೆಸ್​ ಶಾಸಕ ಸುಧಾಕರ್​ ಹೇಳಿದ್ದಾರೆ. ಇದು ಕೇವಲ ಘೋಷಣೆ ಆಗುತ್ತದೆ ಅಷ್ಟೇ. ಲೋಕಸಭಾ ಚುನಾವಣೆಗೆ ಕೆಲವೇ ವಾರಗಳು ಬಾಕಿಯಿದೆ. ಮುಂದೆ ಹೊಸ ಸರ್ಕಾರ ಕೇಂದ್ರದಲ್ಲಿ ಬರಲಿದೆ. ಜಾಗತಿಕ ಮಟ್ಟದಲ್ಲಿ ಭಾರತ ಕಳೆದ 5 ವರ್ಷದಲ್ಲಿ ಪ್ರಕಾಶಿಸುತ್ತಿದೆ ಎಂದು ಬಿಜೆಪಿಯವರು ಹೇಳಿದ್ದಾರೆ. ವಾಜಪೇಯಿ ಅವರ ಕಾಲದಲ್ಲಿ ಹೀಗೆ ಹೇಳಿ ಯುಪಿಎ ಸರ್ಕಾರ ಬಂತು. ಈಗಲೂ ಅದೇರೀತಿ ಆಗುತ್ತದೆ. ಕೇಂದ್ರ ಸರ್ಕಾರ ಕೃಷಿಗೆ ಹೆಚ್ಚು ಒತ್ತು ನೀಡಲಿದೆ ಎಂಬ ತಮ್ಮ ನೀರಿಕ್ಷೆ ಹುಸಿಯಾಗಿದೆ ಎಂದು ಟೀಕಿಸಿದರು.

ಹಳೆ ಗಾಡಿಗೆ ಆಯುಧ ಪೂಜೆ ಮಾಡಿದಂತಿದೆ: ಡಿಸಿಎಂ ಪರಮೇಶ್ವರ್ 

ಇದು ಸಂಪೂರ್ಣವಾದ ಬಜೆಟ್ ಅಲ್ಲ. ಲೇಖಾನುದಾನ ಬಜೆಟ್ ಇದು. ಮೇ ತಿಂಗಳವರೆಗೆ ಖರ್ಚು ವೆಚ್ಚ ಮಾಡುವುದಕ್ಕಾಗಿ ಅನುಮೋದನೆ ಅಷ್ಟೆ. ಲೋಕಸಭಾ ಚುನಾವಣಾ ದೃಷ್ಟಿಯಿಂದ ಮಾಡಿರುವ ಬಜೆಟ್. ಸಾಧನೆಗಳನ್ನು ಪ್ರಸ್ತಾಪಿಸಿದ್ದಾರೆ. ಆದರೆ ಸತ್ಯಕ್ಕೆ ದೂರವಾದ ವಿಚಾರ ಪ್ರಸ್ತಾಪಿಸಿದ್ದಾರೆ. ರಾಷ್ಟ್ರದ ಜನತೆಯನ್ನು ದಾರಿತಪ್ಪಿಸುವಂತ ಹೇಳಿಕೆ. ಯಾವುದೇ ಹೊಸ ವಿಚಾರ ಇಲ್ಲ. ಹಳೆ ಗಾಡಿಗೆ ಆಯುಧ ಪೂಜೆ ಮಾಡಿದಂತಿದೆ. ರೈತರ ಸಮಸ್ಯೆಗಳಿಗೆ ಪರಿಹಾರ ನಿರೀಕ್ಷಿಸಿದ್ದೆವು. ಸಾಲಮನ್ನಾ ಮಾಡ್ತಾರೆ ಅಂತಾ ಎಂದುಕೊಂಡಿದ್ದೆವು. ರೈತರ ಸಂಕಷ್ಟಕ್ಕೆ ಶಾಶ್ವತ ಪರಿಹಾರ ಮಾಡಿಲ್ಲ. ರೈತರಿಗೆ 6 ಸಾವಿರ ರೂ. ಅಕೌಂಟ್ ಗೆ ಹಾಕ್ತಾರೆ. 2 ಸಾವಿರ ರೂ. ಗೆ ರೈತ ಕಾಯ್ದು ಕುಳಿತುಕೊಳ್ಳಬೇಕು.  ನೀರಾವರಿ ಯೋಜನೆ ಬಗ್ಗೆ ಮಾತಾಡಿಲ್ಲ. ದೊಡ್ಡಮಟ್ಟದ ನೀರಾವರಿ ಯೋಜನೆ ಇಲ್ಲ. ಮೇಕ್ ಇನ್ ಇಂಡಿಯಾ ಹೇಳಿಕೆಗೆ ಸೀಮಿತವಾಗಿದೆ. ಕೈಗಾರಿಕೆಗೆ ಉತ್ತೇಜನ ನೀಡಿಲ್ಲ. ರೈತರಿಗೆ ಲಾಲಿಪಪ್ ಕೊಡಬಹುದಿತ್ತು. ರಾಜ್ಯಸರ್ಕಾರದ ಸಾಲಮನ್ನಾವನ್ನು ಮೋದಿ ಲಾಲಿಪಪ್ ಎಂದು ಕರೆದಿದ್ರು. ಕೇಂದ್ರ ಸರ್ಕಾರ ಕೂಡ ಲಾಲಿಪಪ್ ಕೊಡಬಹುದಿತ್ತು ಎಂದು ವ್ಯಂಗ್ಯ ಮಾಡಿದರು.

ಕಣ್ಣೊರೆಸುವ ತಂತ್ರ; ವೈದ್ಯಕೀಯ ಸಚಿವ ಇ. ತುಕಾರಾಂ 

ಇಂದಿನ ಆಯವ್ಯಯ ಚುನಾವಣಾ ಗಿಮಿಕ್ ಅಷ್ಟೆ, ಯುಪಿಎ ಸರಕಾರ ಇದ್ದಾಗ ಸಾಕಷ್ಟು ಅನುಕೂಲ ಮಾಡಿಕೊಟ್ಟಿದೆ. ಇದು ಕಣ್ಣೊರೆಸುವ ತಂತ್ರ. ರೈತರು ಹಾಗೂ ಜನಸಾಮಾನ್ಯರಿಗೆ ನಿರಾಶದಾಯಕ ಬಜೆಟ್.

ಪಾಪ್​ಕಾರ್ನ್​ ಬಜೆಟ್​: ಸಚಿವ ಡಿಕೆ ಶಿವಕುಮಾರ್ 

ಕೇಂದ್ರ ಬಜೆಟ್ ರೈತರಿಗೂ ಅನುಕೂಲವಾಗೋದಿಲ್ಲ. ಬಿಜೆಪಿ ಅವರಿಗೆ ರಾಜಕೀಯಕ್ಕೂ ಈ ಬಜೆಟ್ ಅನುಕೂಲ ಆಗೊಲ್ಲ. ಜೆಡಿಎಸ್, ಕಾಂಗ್ರೆಸ್ ಪ್ರಣಾಳಿಕೆಯಲ್ಲೆ ಒಣಭೂಮಿ ಬೇಸಾಯ ಮಾಡೋರಿಗೆ 10 ಸಾವಿರ ನಾವು ಘೋಷಣೆ ಮಾಡಿದ್ವಿ. ವ್ಯವಸಾಯ ಮಾಡೋರಿಗೆ 6 ಸಾವಿರ ಕೊಡ್ತೀನಿ ಅಂತ ಹೇಳ್ತಿದ್ದಾರೆ ಅಷ್ಟೆ. ಇದ್ರಲ್ಲಿ ಯಾವುದೇ ಲಾಭವಿಲ್ಲ.  ಏನಾದ್ರು ಕೊಟ್ಟರೆ ಹೊಟ್ಟೆ ತುಂಬ ಕೊಡಬೇಕು. ಇದು ಬಿಜೆಪಿ ಅವ್ರಿಗೂ ಅನುಕೂಲ ಆಗೊಲ್ಲ. ಇದು ಚುನಾವಣೆ ಬಜೆಟ್ ಅಷ್ಟೆ. ಮೋದಿ ಅವರು ರಾಜ್ಯ ಸರ್ಕಾರದ ಸಾಲಮನ್ನಾವನ್ನು ಲಾಲಿಪಪ್ ಅಂತ ಹೇಳಿದ್ರು. ಈಗ ಮೋದಿಯ ಬಜೆಟ್ ನ್ನು ನಾವು ಪಾಪ್ ಕಾರ್ನ್ ಬಜೆಟ್ ಅಂತಾ ಕರೀಬೇಕಾ..? ರೈತನಿಗೆ ನಮ್ಮ ರಾಜ್ಯದಲ್ಲಿ 50 ಸಾವಿರದಷ್ಟು ಉಚಿತ ವಿದ್ಯುತ್ ನೀಡುತ್ತಿದ್ದೇವೆ. ನಮ್ಮ ಸರ್ಕಾರ ಮೋದಿ ಸರ್ಕಾರಕ್ಕಿಂತ ಉತ್ತಮ ಯೋಜನೆಗಳನ್ನ ನೀಡಿದೆ. ಇದೊಂದು ಫೇಲ್ಯೂರ್ ಬಜೆಟ್. ಈ ಬಜೆಟ್ ಇಂದ ಯಾವುದೇ ಲಾಭ ಇಲ್ಲ. ಉದ್ಯೋಗ ಸೃಷ್ಟಿಯಲ್ಲೂ ಯಾವುದೇ ಆಶಾಭಾವನೆ ಈ ಬಜೆಟ್ ನಲ್ಲಿ ಇಲ್ಲ ಎಂದು ವ್ಯಂಗ್ಯ ಮಾಡಿದರು.

ಈ ಬಜೆಟ್​ ಚುನಾವಣಾ ಘೋಷಣೆ: ಸಚಿವ ಕೆ.ಜೆ.ಜಾರ್ಜ್  

ಇದೊಂದು ಚುನಾವಣೆಯ ಘೋಷಣೆ ಅಷ್ಟೇ. ರೈತರಿಗೆ ಅಥವಾ ದೇಶದ ಜನರಿಗೆ ಯಾವುದಾದರೂ ಕೊಡುಗೆ ಕೊಡಬೇಕಾಗಿದ್ರೆ, ಎರಡು ವರ್ಷದ ಹಿಂದೆಯೇ ಕೊಡಬೇಕಾಗಿತ್ತು. ಚುನಾವಣೆ ಸಮಿಪದಲ್ಲಿ ಬಜೆಟ್ ಘೋಷಣೆ ಮಾಡಿದ್ದಾರೆ. ಇದು ಯಾವುದು ಅನುಷ್ಠಾನಕ್ಕೆ ಬರುವುದಿಲ್ಲ. ಪ್ರಧಾನಿಗಳು 15 ಲಕ್ಷ ವನ್ನು ಸಾರ್ವಜನಿಕರ ಖಾತೆಗೆ ಜಮಾ ಮಾಡುವುದಾಗಿ ಹೇಳಿದ್ರು. ಈಗ ರೈತರ ಅಕೌಂಟ್ ಗೆ 6 ಸಾವಿರ ಹಾಕ್ತಿವಿ ಅಂತ ಹೇಳ್ತಿದ್ದಾರೆ. ಈ ಮೂಲಕ ರೈತರ ಓಲೈಸಿ ಚುನಾಣೆಯ ಲಾಭ ಪಡೆದುಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

First published:February 1, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ