PSI Exam Scam: ಪಿಎಸ್ಐ ಪರೀಕ್ಷೆ ಅಕ್ರಮದಲ್ಲಿ ಭಾಗಿಯಾದ್ರಾ ಬಸವರಾಜ ದಡೇಸಗೂರು? ಸ್ಫೋಟಕ ಆಡಿಯೋದಲ್ಲಿರೋದು ಶಾಸಕರ ದನಿನಾ?

ಕುಷ್ಟಗಿ ತಾಲೂಕಿನ ಸಿರಗುಪ್ಪಿಯ ಪರಸಪ್ಪ ಮೇಗೂರು ಎಂಬುವರ ಮಗನ ನೇಮಕಾತಿಗೆ ಹಣ ಪಡೆದಿರುವ ಕುರಿತು ಆಡಿಯೋದಲ್ಲಿ ಮಾತನಾಡಲಾಗಿದೆ. ಹಣವನ್ನು ಸರ್ಕಾರಕ್ಕೆ ಮುಟ್ಟಿಸಿರೋದಾಗಿ ಹೇಳಿದ್ದಾರೆ. ಹಣ ವಾಪಾಸ್ ಕೇಳಿದ್ದಕ್ಕೆ ಪರಸಪ್ಪ ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಶಾಸಕ ಬಸವರಾಜ ದಡೇಸುಗೂರು

ಶಾಸಕ ಬಸವರಾಜ ದಡೇಸುಗೂರು

  • Share this:
ಕೊಪ್ಪಳ: ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ (PSI Recruitment Exam) ಅಕ್ರಮಗಳು ನಡೆದಿದ್ದು, ಇಡೀ ದೇಶವೇ ಬೆಚ್ಚಿ ಬಿದ್ದಿತ್ತು. ಈ ಅಕ್ರಮದಲ್ಲಿ ಈಗ ಬಿಜೆಪಿ ಶಾಸಕರೊಬ್ಬರ (BJP MLA) ಹೆಸರು ಥಳುಕು ಹಾಕಿಕೊಂಡಿದೆ. ಕೊಪ್ಪಳ (Koppal) ಜಿಲ್ಲೆಯ ಕನಕಗಿರಿ ವಿಧಾನಸಭಾ ಕ್ಷೇತ್ರದ (Kanakagiri Assembly) ಶಾಸಕ ಬಸವರಾಜ ದಡೇಸಗೂರು (MLA Basavaraj Dhadesugur) ಹೆಸರು ಥಳಕು ಹಾಕಿಕೊಂಡಿದೆ. 15 ಲಕ್ಷ ರೂಪಾಯಿ ನೀಡಿದ್ದಾರೆ ಎನ್ನಲಾದ ಆಡಿಯೋ (Audio) ಈಗ ಫುಲ್ ವೈರಲ್ (Viral) ಆಗಿದೆ. ಇನ್ನು ಇದೇ ಆರೋಪ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ. ಈ ಅಕ್ರಮದಲ್ಲಿ ನನ್ನ ತಪ್ಪು ಇಲ್ಲ ಅಂತ ಶಾಸಕ ಬಸವರಾಜ ದಡೇಸಗೂರು ಹೇಳಿದ್ದಾರೆ. ಆದರೆ ಶಾಸಕರನ್ನು ಬಂಧಿಸಬೇಕು ಅಂತ ಕಾಂಗ್ರೆಸ್ (Congress) ಆಗ್ರಹಿಸಿದೆ.

ಹಣ ಪಡೆದಿದ್ದರಾ ಶಾಸಕರು?

ಪಿಎಸ್ಐ ನೇಮಕಾತಿ ಹಗರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ಈ ಹಗರಣಕ್ಕೆ ಸಂಬಂಧಿಸಿದಂತೆ ಆಡಿಯೋ ಒಂದು ವೈರಲ್ ಆಗಿದೆ. ನೇಮಕಾತಿಗಾಗಿ ಹಣ ಪಡೆದಿದ್ದನ್ನು ಆಡಳಿತ ಪಕ್ಷದ  ಶಾಸಕ ಬಸವರಾಜ ದಡೇಸಗೂರು ಒಪ್ಪಿಕೊಂಡಿರೋ ಆಡಿಯೋ ಬಹಿರಂಗವಾಗಿದೆ.

ವೈರಲ್ ಆದ ಆಡಿಯೋದಲ್ಲಿ ಏನಿದೆ?

ಕುಷ್ಟಗಿ ತಾಲೂಕಿನ ಸಿರಗುಪ್ಪಿಯ ಪರಸಪ್ಪ ಮೇಗೂರು ಎಂಬುವರ ಮಗನ ನೇಮಕಾತಿಗೆ ಹಣ ಪಡೆದಿರುವ ಕುರಿತು ಆಡಿಯೋದಲ್ಲಿ ಮಾತನಾಡಲಾಗಿದೆ. ಹಣವನ್ನು ಸರ್ಕಾರಕ್ಕೆ ಮುಟ್ಟಿಸಿರೋದಾಗಿ ಹೇಳಿದ್ದಾರೆ. ಹಣ ವಾಪಾಸ್ ಕೇಳಿದ್ದಕ್ಕೆ ಪರಸಪ್ಪ ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: Explained: ಏನಿದು PSI Exam Scam? ಇದರ ಆಳ, ಅಗಲ ಏನು? ಈವರೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ

 ಸೂಕ್ತ ತನಿಖೆಗೆ ಎಂಬಿ ಪಾಟೀಲ್ ಆಗ್ರಹ

ಆಡಳಿತ ಪಕ್ಷದ ಶಾಸಕ ಬಸವರಾಜ ದಡೇಸಗೂರರದ್ದು ಎನ್ನಲಾದ ಆಡಿಯೋ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಚಿವ ಎಂಬಿ ಪಾಟೀಲ್ ಈ ಪ್ರಕರಣದ ಬಗ್ಗೆ ರಾಜ್ಯ ಸರಕಾರ ಉತ್ತರಿಸಬೇಕು. ಅಕ್ರಮ ಹಣವನ್ನು ಸರಕಾರಕ್ಕೆ ಕೊಟ್ಟಿದ್ದಾಗಿ ಆಡಿಯೋದಲ್ಲಿ ಹೇಳಿದ್ದಾರೆ. ಹೀಗಾಗಿ ಕನಕಗಿರಿ ಶಾಸಕರನ್ನು ಬಂಧಿಸಬೇಕು. ಈ ಪ್ರಕರಣದಲ್ಲಿ ಯಾರಾರು ಇದ್ದಾರೆ ಅವರ ಮೇಲೆ ಕ್ರಮ ಕೈಗೊಳ್ಳಬೇಕು. ಈ ಹಿಂದೆ ಕೆಂಪಣ್ಣ ಸಹ 40 ಪರ್ಸೆಂಟ್ ಸರಕಾರ ಎಂದು ಆರೋಪ ಮಾಡಿದ್ದಾರೆ. ಈ ಕುರಿತ ತನಿಖೆಯಾಗಬೇಕು ಅಂತ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂಬಿ ಪಾಟೀಲ್ ಹೇಳಿದ್ದಾರೆ.

ಶಾಸಕರನ್ನು ಬಂಧಿಸದಿದ್ದರೆ ಕಾಂಗ್ರೆಸ್‌ನಿಂದ ಹೋರಾಟ

ಆಡಿಯೋ ಪ್ರಕರಣದ ಹಿನ್ನಲೆಯಲ್ಲಿ ಶಾಸಕ ಬಸವರಾಜ ದಡೇಸಗೂರ ಅವರನ್ನು ಬಂಧಿಸಬೇಕು ಎಂದು  ಮಾಜಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ. ನೇರವಾಗಿ ಸರಕಾರಕ್ಕೆ ಹಣ ನೀಡಿದ್ದಾಗಿ ಆಡಿಯೋದಲ್ಲಿ ಹೇಳಿದ್ದಾರೆ. ಈ ಪ್ರಕರಣದಲ್ಲಿ ಅವರನ್ನು ಬಂಧಿಸದಿದ್ದರೆ ಕಾಂಗ್ರೆಸ್ ಪಕ್ಷದಿಂದ ಹೋರಾಟ ಮಾಡಲಾಗುವುದು ಎಂದು ಶಿವರಾಜ ತಂಗಡಗಿ ಎಚ್ಚರಿಸಿದ್ದಾರೆ.

ಆರೋಪದ ಬಗ್ಗೆ ಶಾಸಕರು ಹೇಳಿದ್ದೇನು?

ಕುರಿತು ಪ್ರತಿಕ್ರಿಯಿಸಿದ ಶಾಸಕ ಬಸವರಾಜ ದಡೇಸಗೂರು ಆಡಿಯೋದಲ್ಲಿರುವ ಧ್ವನಿ ನನ್ನದೆ. ಪ್ರಕರಣದ ಕುರಿತು ಮಧ್ಯಸ್ಥಿಕೆ ವಹಿಸಲು ನನ್ನೊಂದಿಗೆ ಮಾತನಾಡಿದ್ದರು. ನಾನು ಈ ಕುರಿತು ಸಮಸ್ಯೆ ಬಗೆಹರಿಸುತ್ತೇನೆ. ನಾನು ಹಿರಿಯನಾಗಿ ಮಾತನಾಡಿದ್ದೇನೆ, ಇದರಲ್ಲಿ ನಾನು ದುಡ್ಡು ತೆಗೆದುಕೊಂಡಿಲ್ಲ. ಚುನಾವಣೆ ಹಿನ್ನೆಲೆಯಲ್ಲಿ ಯಾರೋ ರೆಕಾರ್ಡ್ ಮಾಡಿ ಬಿಟ್ಟಿದ್ದಾರೆ. ನಾನು ಸರಕಾರಕ್ಕೆ ಹಣ ಕೊಟ್ಟಿದ್ದೇನೆ ಎಂದು ಹೇಳಿಲ್ಲ ಅಂತ ಹೇಳಿದ್ದಾರೆ.

ಈ ಬಗ್ಗೆ ಸಚಿವರು ಹೇಳಿದ್ದೇನು?

ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಆನಂದಸಿಂಗ್  ಈ ಬಗ್ಗೆ ವಿರೋಧ ಪಕ್ಷದವರು ಅಪಪ್ರಚಾರ ಮಾಡಿದ್ದಾರೆ. ಈ ಆಡಿಯೋ ಕೇಳಿಲ್ಲ. ಅವರು ತಪ್ಪು ಮಾಡಿದ್ದರೆ ಇಂದು ಮಾಧ್ಯಮದ ಮುಂದೆ ಬರುತ್ತಿರಲಿಲ್ಲ. ಈ ಬಗ್ಗೆ ತನಿಖೆಯಾಗಲಿ. ತಪ್ಪು ಆಗಿದ್ದರೆ ಕ್ರಮ ವಹಿಸಲಿ ಎಂದರು.

ಇದನ್ನೂ ಓದಿ: Explained: ಪಿಎಸ್ಐ Exam Scamನ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಯಾರು? ಇಲ್ಲಿದೆ ಓದಿ 'ದಿವ್ಯ' ಇತಿಹಾಸ!

ಈ ಪ್ರಕರಣವು ಈಗ ಹೊಸ ಆಯಾಮ ಪಡೆದಿದ್ದು, ಇಲ್ಲಿಯವರೆಗೂ ಅಧಿಕಾರಿಗಳು ಹಾಗು ಸಂಘಟನೆಯವರ ಹೆಸರು ಕೇಳಿ ಬಂದಿತ್ತು. ಆದರೆ ಈಗ ನೇರವಾಗಿ ಶಾಸಕರ ಹೆಸರು ಥಳಕು ಹಾಕಿಕೊಂಡಿದ್ದು ಬಿಜೆಪಿ ಸರಕಾರಕ್ಕೆ ಮುಜಗರ ಉಂಟು ಮಾಡುತ್ತಿದೆ. ಈ ಕುರಿತು ಸರಕಾರ ಏನು ನಿರ್ಧಾರ ತೆಗೆದುಕೊಳ್ಳುತ್ತೊ ಕಾದು ನೋಡಬೇಕು.
Published by:Annappa Achari
First published: