ಬೆಂಗಳೂರು: ಕೇಂದ್ರ ಸರ್ಕಾರ ಹೊಸ ನೀತಿಯ ವಿರುದ್ಧ ದಿಢೀರ್ ಅಂತ ಹಾಲಿನ ಲಾರಿ (Milk Vehicles ) ವಾಹನ ಮಾಲೀಕರು ಮುಷ್ಕರಕ್ಕೆ ಕರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಹಾಲು, ಮೋಸರು ಸೇರಿದಂತೆ ಹಾಲಿನ ಉತ್ಪನ್ನಗಳ ಪೂರೈಕೆಯಲ್ಲಿ ವ್ಯತ್ಯಾಸ (Milk Supply) ಉಂಟಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) (Karnataka Milk Federation) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಲು ಸಾಗಣೆ ಗುತ್ತಿಗೆದಾರರು ಶುಕ್ರವಾರದಿಂದ ಆರಂಭ ಮಾಡಿರುವ ಮುಷ್ಕರ ಮುಂದುವರೆದಿದ್ದು, ಈ ಹಿನ್ನೆಲೆಯಲ್ಲಿ ನಗರದ ಹಲವು ಭಾಗಗಳಲ್ಲಿ ನಂದಿನಿ ಹಾಲು (Nandini Milk) ಪೂರೈಕೆಯಲ್ಲಿ ವ್ಯತ್ಯಾಸವಾಗಿದೆ. ಪರಿಣಾಮ ಹಲವು ನಾಗರಿಕರು ಬೆಳಗ್ಗೆ ಹಾಲು ಸಿಗುವ ದೂರದ ಹಾಲಿನ ಬೂತ್ಗಳನ್ನು ಹುಡುಕಿಕೊಂಡು ಹೋಗಿ ಹಾಲು ಖರೀದಿ ಮಾಡುವ ಸ್ಥಿತಿ ಎದುರಾಗಿದೆ.
ಅಂದಹಾಗೇ, ಲಾರಿ ವಾಹನ ಮಾಲೀಕರು ಕೇಂದ್ರ ಸರ್ಕಾರದ ನೀತಿಯ ವಿರುದ್ಧ ಮುಷ್ಕರಕ್ಕೆ ಇಳಿದಿದ್ದು, 15 ವರ್ಷಕ್ಕಿಂತ ಹಳೆಯದಾದ ವಾಹನಗಳ ನೋಂದಣಿ ರದ್ದುಪಡಿಸುವ ಕೇಂದ್ರ ಸರ್ಕಾರದ ಹೊಸ ನಿಯಮವನ್ನು ಕೈಬಿಡಬೇಕೆಂದು ಹಾಲು ಸರಬರಾಜು ಗುತ್ತಿಗೆದಾರರು ಒತ್ತಾಯ ಮಾಡಿದ್ದಾರೆ. ಅಲ್ಲದೇ ಹಾಲು ಸಾಗಣೆ ವೆಚ್ಚವನ್ನು ಪರಿಷ್ಕರಿಸಲು ಬಮೂಲ್ಗೆ ಬೇಡಿಕೆ ಇಟ್ಟಿದ್ದಾರೆ. ಪೆಟ್ರೋಲ್ ಬೆಲೆ ಹೆಚ್ಚಳವಾಗದ ದರ ಪರಿಷ್ಕರಣೆ ಮಾಡಲು ಮನವಿ ಮಾಡಲಾಗಿತ್ತು. ಆದರೂ ಬಮೂಲ್ ಆಡಳಿತ ವರ್ಗ ಈ ಬಗ್ಗೆ ಕ್ರಮಕೈಗೊಳ್ಳದ ಕಾರಣ ಮುಸ್ಕರಕ್ಕೆ ಕರೆ ನೀಡಿದ್ದರಂತೆ.
ಶುಕ್ರವಾರ ಸಂಜೆಯಿಂದಲೇ ಮುಷ್ಕರ ಆರಂಭ
ಶುಕ್ರವಾರ ಸಂಜೆಯಿಂದ ಏಕಾಏಕಿ ಆರಂಭವಾದ ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿದೆ. ಬೆಂಗಳೂರಿನ ಮಿಲ್ಕ್ ಯೂನಿಯನ್ ಲಿಮಿಟೆಡ್ (ಬಮೂಲ್)ಗೆ ಸೇರಿದ ಸುಮಾರು 250 ಗುತ್ತಿಗೆದಾರರು ಮುಷ್ಕರವನ್ನು ಆರಂಭಿಸಿದ್ದಾರೆ. ಪರಿಣಾಮ ಹಾಲು ಸರಬರಾಜು ಪ್ರಕ್ರಿಯೆ ನಿಂತಿದೆ. ಆದರೆ ಮುಷ್ಕರ ಪ್ರಭಾವ ಜನರ ಮೇಲೆ ಪರಿಣಾಮ ಉಂಟು ಮಾಡದ್ದಂತೆ ಪರ್ಯಾಯ ವ್ಯವಸ್ಥೆಯನ್ನು ಕೈಗೊಂಡಿದ್ದಾಗಿ ಕೆಎಂಎಫ್ ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ, ಬೆಂಗಳೂರು ಮಿಲ್ಕ್ ಯೂನಿಯನ್ನ ಗುತ್ತಿಗೆದಾರರು ಮುಷ್ಕರವನ್ನು ಮುಂದುವರಿಸಿದ್ದು, ಅಧಿಕಾರಿಗಳೊಂದಿಗೆ ನಡೆದ ಮಾತುಕತೆ ವಿಫಲವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಪರಿಣಾಮ ನಿತ್ಯ ನಗರಕ್ಕೆ ಪೂರೈಕೆ ಆಗುತ್ತಿದ್ದ 6 ಲಕ್ಷ ಲೀಟರ್ ಹಾಲಿನ ಬದಲು 5.7 ಲಕ್ಷ ಲೀಟರ್ ಹಾಲು ಮಾತ್ರ ಪೂರೈಕೆಯಾಗುತ್ತಿದೆಯಂತೆ. ಇದರಿಂದ ಹಾಲಿನ ಪೂರೈಕೆಯಲ್ಲಿ ವ್ಯತ್ಯಾಸ ಕಂಡು ಬಂದಿದೆ.
ಕೆಎಂಎಫ್ ಮತ್ತು ಗುತ್ತಿಗೆದಾರರ ನಡುವಿನ ಜಟಾಪಟಿ
ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರಿನ ಜೆ.ಪಿ.ನಗರದ ನಿವಾಸಿ ಸುದರ್ಶನ್ ಯಾದವ್ ಅವರು, ತಮ್ಮ ಮನೆ ಬಳಿ ಇದ್ದ ಹಾಲಿನ ಕೇಂದ್ರದಲ್ಲಿ ಪ್ಯಾಕೇಟ್ಗಳನ್ನು ಭಾನುವಾರ ವಿತರಣೆ ಮಾಡದ ಕಾರಣ ಸುಮಾರು ಒಂದು ಕಿಲೋಮೀಟರ್ ದೂರ ನಡೆದುಕೊಂಡು ಹೋಗಿ ಮತ್ತೊಂದು ಹಾಲಿನ್ ಬೂತ್ನಿಂದ ಹಾಲು ಖರೀದಿ ಮಾಡಬೇಕಾಯ್ತು.
ಈ ಬಗ್ಗೆ ಪ್ರಶ್ನೆ ಮಾಡಲು ಹಾಲು ವಿತರಕರನ್ನು ಸಂಪರ್ಕಿಸಿದಾಗ, ಹಾಲಿನ ಉತ್ಪನ್ನವನ್ನು ಅವರು ಪಡೆದುಕೊಳ್ಳಲಿಲ್ಲವಂತೆ. ಡೈರಿ ಸರ್ಕಲ್ನಲ್ಲಿರುವ ಕೇಂದ್ರದಿಂದ ಹಾಲನ್ನು ಪಡೆದುಕೊಳ್ಳುವಂತೆ ಅವರಿಗೆ ಕೆಎಂಎಫ್ ಹೇಳಿತ್ತಂತೆ. ಆದರೆ ಕೆಎಂಎಫ್ ಮತ್ತು ಗುತ್ತಿಗೆದಾರರ ನಡುವಿನ ಜಟಾಪಟಿಯಿಂದ ಜನರು ತೊಂದರೆ ಅನುಭವಿಸುವಂತಾಗಿದೆ ಎಂದಿದ್ದಾರೆ.
ಇನ್ನು ಎಷ್ಟು ದಿನ ನಡೆಯುತ್ತೆ ಲಾರಿ ಮಾಲೀಕರ ಮುಷ್ಕರ
ಜೆಪಿ ನಗರದ ಸುಮಾರು 30ಕ್ಕೂ ಹೆಚ್ಚು ಮನೆಗಳಿಗೆ ಹಾಲು ಪೂರೈಕೆ ಆಗಿಲ್ಲ. ಇದರಿಂದ ಸ್ಥಳೀರು ಹತ್ತಿರ ಸೂಪರ್ ಮಾರ್ಕೆಟ್ಗಳಿಗೆ ತೆರಳಿ ಹಾಲು ಖರೀದಿ ಮಾಡಿದ್ದಾರೆ. ಬೆಳಗ್ಗೆ ಮಕ್ಕಳು ಶಾಲೆಗೆ ಕಳುಹಿಸುವ ತಯಾರಿಯಲ್ಲಿ ಇರುತ್ತೇವೆ. ಇಂತಹ ಸಮಯದಲ್ಲಿ 2-3 ಕಿಮೀ ಹೋಗಿ ಹಾಲು ತರುವುದು ಕಷ್ಟ ಕೆಲಸ ಎಂದು ಮಹಿಳೆಯೊಬ್ಬರು ಹೇಳಿದ್ದಾರೆ.
ಇನ್ನು, ಲಾರಿ ಮಾಲೀಕರ ಮುಷ್ಕರ ಎಷ್ಟು ದಿನಗಳ ಕಾಲ ಮುಂದುವರಿಯಲಿದೆ ಎಂಬ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. 200 ಹೆಚ್ಚು ಟ್ರಕ್ಗಳು ತಮ್ಮ ಕಾರ್ಯಾಚರಣೆಯನ್ನು ನಿಲ್ಲಿಸಿದ್ದು, ಉಳಿದಂತೆ 250 ಲಾರಿಗಳು ಮಾತ್ರ ಕಾರ್ಯನಿರ್ವಹಿಸಿದೆ. ಇನ್ನು, ಬೆಳಗ್ಗೆ 10 ಗಂಟೆವರೆಗೂ ಕಾದು ಕುಳಿತಿದ್ದ ಕೆಲ ನಾಗರೀಕರು ಹತ್ತಿರ ಹಾಲಿನ ಬೂತ್ಗಳಿಗೆ ತೆರಳಿ ಹೆಚ್ಚುವರಿ ಹಾಲಿನ ಪ್ಯಾಕೇಟ್ ಖರೀದಿ ಮಾಡಿ ಮುಂದಿನ ದಿನಕ್ಕೆ ಸ್ಟೋರ್ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ