ಬೆಂಗಳೂರು: ಬರೋಬ್ಬರಿ 400 ಎಕೆರೆ ಪ್ರದೇಶದಲ್ಲಿ ಬಿಜೆಪಿ ಸಮಾವೇಶಕ್ಕೆ (BJP) ಸಿದ್ಧತೆ ಕೈಗೊಳ್ಳಲಾಗಿದೆ. ಸುಮಾರು 10 ಲಕ್ಷ ಜನ ಸಮಾವೇಶಕ್ಕೆ ಆಗಮಿಸುವ ನಿರೀಕ್ಷೆ ಇದ್ದು, ಕಾರ್ಯಕ್ರಮಕ್ಕಾಗಿ ಬೃಹತ್ ವೇದಿಕೆ (Huge Platform) ಸಿದ್ಧವಾಗಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ಪ್ರಧಾನಿ ಮೋದಿ (PM Modi) ಅವರು ಪೆಂಡಲ್ ಒಳಗಡೆಯೇ ರೋಡ್ ಶೋ (Road Show) ನಡೆಸಲಿದ್ದಾರೆ. ಹೌದು, ದಾವಣಗೆರೆಯಲ್ಲಿ (Davanagere) ಇಂದು ನಡೆಯುವ ಬಿಜೆಪಿ ಮಹಾ ಸಂಗಮ ಸಮಾವೇಶದ (BJP Conference) ಭರ್ಜರಿ ಸಿದ್ಧತೆ ನಡೆಸಲಾಗಿದೆ.
ರಾಜ್ಯಕ್ಕೆ 7ನೇ ಸಲ ದಂಡೆತ್ತಿ ಮೋದಿ ಆಗಮನ
ಜನವರಿ 12 ಹುಬ್ಬಳ್ಳಿಯ ಯುವಜನೋತ್ಸವ ಸಮಾವೇಶಕ್ಕೆ ಬಂದಿದ್ದ ಪ್ರಧಾನಿ ಮೋದಿ ಭರ್ಜರಿ ರೋಡ್ಶೋ ಮಾಡಿದ್ದರು. ಜನವರಿ 19ರಂದು ಯಾದಗಿರಿ-ಕಲಬುರಗಿಯಲ್ಲಿ ಮೋದಿ ಲಂಬಾಣಿ ಸಮಾವೇಶ ಹಕ್ಕುಪತ್ರ ವಿತರಣೆಯಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ: Bengaluru Fest: ನಾಳೆಯಿಂದಲೇ ಆರಂಭವಾಗಲಿದೆ ಬೆಂಗಳೂರು ಹಬ್ಬ; ಇಲ್ಲಿದೆ ಹೆಚ್ಚಿನ ಮಾಹಿತಿ
ಫೆಬ್ರವರಿ 06ರಂದು ಬೆಂಗಳೂರಲ್ಲಿ ಉದ್ಯಮಿಗಳ ಸಮಾವೇಶ ಅದೇ ದಿನ ತುಮಕೂರು HAL ಘಟಕ ಉದ್ಘಾಟನೆ ಮಾಡಿದ್ದರು. ಫೆಬ್ರವರಿ 12ರಂದು ಸ್ಟಾರ್ಸ್-ಕ್ರಿಕೆಟರ್ಸ್-ಉದ್ಯಮಿಗಳ ಜೊತೆ ಡಿನ್ನರ್ ನಡೆಸಿದ್ದ ಮೋದಿ ಮರುದಿನ ಅಂದರೆ ಜನವರಿ 13ರಂದು ಬೆಂಗಳೂರು ಅಂತಾರಾಷ್ಟ್ರೀಯ ಏರೋ ಶೋ ಉದ್ಘಾಟಿಸಿದ್ದರು. ಬಳಿಕ ಜನವರಿ 27ರಂದು ಯಡಿಯೂರಪ್ಪ ಹುಟ್ಟುಹಬ್ಬದ ಜೊತೆ ಶಿವಮೊಗ್ಗ ಏರ್ಪೋರ್ಟ್ ಉದ್ಘಾಟಿಸಿ ಪ್ರಚಾರ ಮಾಡಿದ್ದರು. ಅದೇ ದಿನ ಬೆಳಗಾವಿಯಲ್ಲಿ ರೋಡ್ ಶೋ, ಸಮಾವೇಶ, ಅಭಿವೃದ್ಧಿ ಯೋಜನೆಗೆ ಅಡಿಗಲ್ಲಿಟ್ಟಿದ್ದರು. ಮಾರ್ಚ್ 13ರಂದು ಬೆಂಗಳೂರು ಮೈಸೂರು ಹೆದ್ದಾರಿ ಉದ್ಘಾಟಿಸಿದ್ದರು. ಅದೇ ದಿನ ಧಾರವಾಡ ಐಐಟಿ ಉದ್ಘಾಟನೆ ಮಾಡಿದ್ದರು.
ಇಂದು ಮತ್ತೆ ರಾಜ್ಯಕ್ಕೆ ಮೋದಿ ಆಗಮಿಸುತ್ತಿದ್ದಾರೆ. ಬೆಂಗಳೂರಲ್ಲಿ ನಮ್ಮ ಮೆಟ್ರೋ ಉದ್ಘಾಟನೆ ಮಾಡಿ ಅಭಿವೃದ್ಧಿ ಮಂತ್ರ ಪಠಿಸುವ ಜೊತೆಜೊತೆಗೆ ದಾವಣಗೆರೆಯಲ್ಲಿ ನಡೆಯಲಿರುವ ಬಿಜೆಪಿ ವಿಜಯ ಸಂಕಲ್ಪಯಾತ್ರೆಯ ಮಹಾ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.
ಕರುನಾಡಲ್ಲಿ ಕಮಲ ಅರಳಿಸೋ ಮಹಾಶಪಥ
ಬೆಳಗ್ಗೆ 10:25ಕ್ಕೆ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಮೋದಿ ಅಲ್ಲಿಂದ ಚಿಕ್ಕಬಳ್ಳಾಪುರಕ್ಕೆ ಪ್ರಯಾಣ ಬೆಳೆಸಲಿದ್ದಾರೆ. 10:50ಕ್ಕೆ ಚಿಕ್ಕಬಳ್ಳಾಪುರಕ್ಕೆ ತಲುಪಲಿರುವ ಮೋದಿ, 11:15ಕ್ಕೆ ಮಧುಸೂದನ್ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಉದ್ಘಾಟನೆ ಮಾಡಲಿದ್ದಾರೆ. ಮಧ್ಯಾಹ್ನ 1:45ಕ್ಕೆ ವೈಟ್ ಫೀಲ್ಡ್ ಮೆಟ್ರೋ ಸ್ಟೇಷನ್ಗೆ ಆಗಮಿಸ್ತಾರೆ. ಮಧ್ಯಾಹ್ನ 1:50 ಗಂಟೆಗೆ ವೈಟ್ ಫೀಲ್ಡ್ ಮೆಟ್ರೋ ಮಾರ್ಗ ಉದ್ಘಾಟನೆ ಮಾಡಲಿದ್ದಾರೆ.
ಮಧ್ಯಾಹ್ನ 2 ಗಂಟೆಗೆ ವೈಟ್ಫೀಲ್ಡ್ –ಕೆ. ಆರ್ ಪುರ ಮೆಟ್ರೋ ಮಾರ್ಗಕ್ಕೆ ಚಾಲನೆ ನೀಡಿದ ಬಳಿಕ ಮೆಟ್ರೋದಲ್ಲಿ ಪ್ರಯಾಣ ಮಾಡಲಿದ್ದಾರೆ. ಮಧ್ಯಾಹ್ನ 3.20ಕ್ಕೆ ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ದಾವಣಗೆರೆಗೆ ಪ್ರಯಾಣ ಬೆಳೆಸಲಿದ್ದು, ಸಂಜೆ 4:10 ನಿಮಿಷಕ್ಕೆ ದಾವಣಗೆರೆಯಲ್ಲಿ ನಡೆಯಲಿರುವ ಬಿಜೆಪಿ ವಿಜಯಸಂಕಲ್ಪ ಸಮಾರೋಪ ಸಮಾವೇಶದಲ್ಲಿ ಮೋದಿ ಭಾಗಿಯಾಗಲಿದ್ದಾರೆ. ಸಂಜೆ 5:15ಕ್ಕೆ ದಾವಣಗೆರೆಯಿಂದ ಹೆಲಿಕಾಪ್ಟರ್ ಮೂಲಕ ಶಿವಮೊಗ್ಗಕ್ಕೆ ತೆರಳಿ ಅಲ್ಲಿಂದ ಸಂಜೆ 5:55ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣದಿಂದ ದೆಹಲಿಗೆ ನಿರ್ಗಮಿಸಲಿದ್ದಾರೆ.
ದಾವಣಗೆರೆಯಲ್ಲಿ 2023 ಅಶ್ವಮೇಧಯಾಗ
ರಾಜ್ಯದ ನಾಲ್ಕೂ ದಿಕ್ಕುಗಳಲ್ಲಿ ಬಿಜೆಪಿ ವಿಜಯ ಸಂಕಲ್ಪಯಾತ್ರೆ ಶುರು ಮಾಡಿತ್ತು. ರಾಜ್ಯ ನಾಲ್ಕು ದಿಕ್ಕುಗಳಿಂದಲೂ ದಾವಣಗೆರೆಗೆ ಬಿಜೆಪಿ ವಿಜಯಸಂಕಲ್ಪದ ಅಶ್ವಮೇಧಯಾಗ ಬಂದು ಸೇರುತ್ತಿದೆ. ಅದೇ ಮಹಾಸಂಗಮ ಸಮಾವೇಶದಲ್ಲಿ ಮೋದಿ ರಾಜಕೀಯವಾಗಿ ಭಾಷಣ ಮಾಡೋದು ಖಚಿತವಾಗಿದೆ.
ಜಿಎಂಐಟಿ ಕಾಲೇಜ್ ಬಳಿ ಸಮಾವೇಶ; 400 ಎಕರೆ ಪ್ರದೇಶದಲ್ಲಿ ಬೃಹತ್ ವೇದಿಕೆ
ಪ್ರಧಾನಿ ಸ್ವಾಗತಕ್ಕೆ ಇಡೀ ನಗರವೇ ಕೇಸರಿಮಯವಾಗಿದೆ. ದಾವಣಗೆರೆಗೆ ಪ್ರಧಾನಿ ಮೋದಿ ಆಗಮನ ಹಿನ್ನೆಲೆ ಜಿಎಂಐಟಿ ಕಾಲೇಜ್ ಪಕ್ಕ ಬೃಹತ್ ವೇದಿಕೆ ಸಿದ್ಧವಾಗಿದೆ. 400 ಎಕೆರೆ ಪ್ರದೇಶದಲ್ಲಿ ಸಮಾವೇಶ ನಡೆಯಲಿದ್ದು, ಬೃಹತ್ ವೇದಿಕೆ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಮಧ್ಯಾಹ್ನ 3 ಗಂಟೆಗೆ ಪ್ರಧಾನಿ ಆಗಮಿಸಲಿದ್ದು, ಸಮಾವೇಶ ನಡೆಯುವ ಜಾಗದಲ್ಲೇ ರೋಡ್ ಶೋ ನಡೆಸಲಿದ್ದಾರೆ.
ಕಾರ್ಯಕ್ರಮಕ್ಕೆ 8ರಿಂದ 10 ಲಕ್ಷ ಜನರು ಆಗಮಿಸುವ ನಿರೀಕ್ಷೆ ಇದೆ. ರಾಜ್ಯದ ಮೂಲೆ ಮೂಲೆಗಳಿಂದ ಬಿಜೆಪಿ ಮುಖಂಡರು, ಕಾರ್ಯಕರ್ತರು ಆಗಮಿಸಲಿದ್ದಾರೆ. ಮೊದಲು ನಗರದಲ್ಲಿ ರೋಡ್ ಶೋ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಭದ್ರತೆ ದೃಷ್ಟಿಯಿಂದ ಪೆಂಡಲ್ ಒಳಗಡೆಯೇ ರೋಡ್ ಶೋ ನಡೆಯಲಿದೆ.
ಪ್ರಧಾನಿ ಆಗಮನ ಹಿನ್ನೆಲೆ ದಾವಣಗೆರೆ, ಚಿಕ್ಕಬಳ್ಳಾಪುರ, ಬೆಂಗಳೂರಲ್ಲೂ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಪ್ರತಿ ಜಿಲ್ಲೆಯಲ್ಲೂ 3 ರಿಂದ 5 ಸಾವಿರ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಬೆಂಗಳೂರು ಹಾಗೂ ದಾವಣಗೆರೆಯಲ್ಲಿ ಬಹುತೇಕ ವಾಹನ ಸಂಚಾರ ನಿಷೇಧಿಸಿದ್ದು, ತಾತ್ಕಾಲಿಕವಾಗಿ ಹೊರವಲಯದಲ್ಲಿ ಬಸ್ ಹಾಗೂ ಖಾಸಗಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಸಮಸ್ಯೆ ಆಗದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ