ಬೆಂಗಳೂರು: ಕಾಂಗ್ರೆಸ್ ಪಕ್ಷ ಮುಂದೆ ಅಧಿಕಾರಕ್ಕೆ ಬರುವುದು ಖಚಿತ. ಸಿಎಂ ಆಯ್ಕೆ ಮಾಡುವುದು ಶಾಸಕರು ಮತ್ತು ಹೈಕಮಾಂಡ್. ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಕೂಡಿ ಕೆಲಸ ಮಾಡಬೇಕು. ಕಳೆದ ವರ್ಷ ಇಬ್ಬರಿಗೂ ಸಲಹೆ ನೀಡಿದ್ದೆ. ಕೆಪಿಸಿಸಿ ಅಧ್ಯಕ್ಷರು ಮತ್ತು ವಿಪಕ್ಷ ನಾಯಕ ಸೇರಿ ಕೆಲಸ ಮಾಡಬೇಕು ಎಂದು ಹೇಳಿದ್ದೆ. ಪಕ್ಷ ಅಧಿಕಾರಕ್ಕೆ ತರುವುದು ನಮ್ಮ ಕೆಲಸ. ಪಕ್ಷ ಕಟ್ಟುವ ಕೆಲಸವನ್ನು ಡಿ.ಕೆ. ಶಿವಕುಮಾರ್ ಅವರಿಗೆ ನೀಡಿದ್ದಾರೆ. ಪಕ್ಷ ದೊಡ್ಡದು, ವ್ಯಕ್ತಿ ದೊಡ್ಡವರಲ್ಲ ಎಂದು ಮಾಜಿ ಸಂಸದರ ಕೆ.ಎಚ್ ಮುನಿಯಪ್ಪ ಹೇಳಿದರು.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎಚ್. ಮುನಿಯಪ್ಪ ಅವರು, ಕೋವಿಡ್ ನಿರ್ವಹಣೆಯಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೋವಿಡ್ ನಿರ್ವಹಣೆಯಲ್ಲಿ ವಿಫಲವಾಗಿವೆ. ಯಡಿಯೂರಪ್ಪ ಬದಲಾವಣೆ ಮಾಡುವ ಕೆಲಸ ಬಿಜೆಪಿಯಲ್ಲಿ ನಡೆಯುತ್ತಿದೆ. ಕೋವಿಡ್ ನಿರ್ವಹಣೆ ಬಿಟ್ಟು ಸಿಎಂ ಬದಲಾವಣೆಗೆ ಬಿಜೆಪಿ ಮುಂದಾಗಿದೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಕೆಲಸವನ್ನು ಎಲ್ಲರೂ ಜೊತೆಗೂಡಿ ಮಾಡಬೇಕು. ಸಿದ್ದರಾಮಯ್ಯ ಕಾಲದಲ್ಲಿ ಕೊಟ್ಟ ಆಡಳಿತವನ್ನು ನಾವು ಮತ್ತೆ ಕೊಡಬೇಕು. ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಸುರ್ಜೇವಾಲಾ ಅವರು ಈಗಾಗಲೇ ಸ್ಪಷ್ಟವಾಗಿ ಹೇಳಿದ್ದಾರೆ. ಅವರ ಆದೇಶ ಪಾಲಿಸುವುದು ನಮ್ಮ ಕೆಲಸ. ಸುರ್ಜೇವಾಲಾ ಎಚ್ಚರಿಕೆ ಭೀಮನಾಯ್ಕ್ ಗೆ ಗೊತ್ತಿಲ್ಲ. ಅವರಿಗೆ ತಿಳಿಸುವ ಕೆಲಸ ಮಾಡುತ್ತೇವೆ ಎಂದು ಕೆ.ಎಚ್ ಮುನಿಯಪ್ಪ ಹೇಳಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಈಗಾಗಲೇ ಸರಿಯಾಗಿ ಸೂಚನೆ ಕೊಟ್ಟಿದ್ದಾರೆ. ಮುಖ್ಯಮಂತ್ರಿ ಪ್ರಶ್ನೆ ಈಗ ಅಪ್ರಸ್ತುತ. ಹೈಕಮಾಂಡ್ ಸೂಚನೆಯನ್ನು ಭೀಮಾ ನಾಯಕ್ ಹಾಗೂ ಗಣೇಶ್ ಉಲ್ಲಂಘಿಸಿದ್ದಾರೆ. ಈ ಸೂಚನೆ ಅವರ ಗಮನಕ್ಕೆ ಬಂದಿಲ್ಲ ಅನಿಸುತ್ತದೆ. ಅವರಿಗೆ ಕರೆದು ಈ ಬಗ್ಗೆ ಹೇಳುತ್ತೇವೆ. ನಾಳೆಯಿಂದ ಅವರು ಈ ರೀತಿ ಮಾತನಾಡೋಲ್ಲ ಎಂದು ಭಾವಿಸಿದ್ದೇನೆ. ಸಿದ್ದರಾಮಯ್ಯ ಈ ಹೇಳಿಕೆಗಳನ್ನು ನೀಡಿಲ್ಲ. ಉಳಿದವರು ಹೇಳುತ್ತಿದ್ದಾರೆ. ಈ ಬೆಳವಣಿಗೆ ಪಕ್ಷಕ್ಕೆ ಒಳ್ಳೆಯದಲ್ಲ. ಡಿ ಕೆ ಶಿವಕುಮಾರ್ ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗ್ತಾರೆ ಎಂದು ಭಾವಿಸಿದ್ದೇನೆ. ಅದೇ ರೀತಿ ಮುಂದುವರಿಸುವುದು ಒಳ್ಳೆಯದು ಎಂದು ಸಲಹೆ ನೀಡಿದರು.
ಇದನ್ನು ಓದಿ: ಯೋಗ ಆರಂಭವಾಗಿದ್ದು ಭಾರತದಲ್ಲಿ ಅಲ್ಲ, ನೇಪಾಳದಲ್ಲಿ; ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ವಿವಾದಾತ್ಮಕ ಹೇಳಿಕೆ!
ಪಕ್ಷದಲ್ಲಿ ಚುನಾವಣಾ ಸಮಿತಿ ಇದೆ. ಕೇಂದ್ರ ಚುನಾವಣಾ ಸಮಿತಿ ಎಐಸಿಸಿ ಅಧ್ಯಕ್ಷರ ನೇತೃತ್ವದಲ್ಲಿ ಕೆಲಸ ಮಾಡ್ತಾರೆ. ಹೀಗಾಗಿ ಯಾರು ಏನು ಮಾತನಾಡ್ತಾರೆ. ಆಶ್ವಾಸನೆ ಕೊಡ್ತಾರೆ ಅದಕ್ಕೆ ಮಹತ್ವ ಕೊಡಬೇಕಿಲ್ಲ. ಪಕ್ಷದ ನಾಯಕರು ಅನಗತ್ಯವಾಗಿ ಆಶ್ವಾಸನೆ ನೀಡಬಾರದು ಎಂದು ಸಲಹೆ ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ