ಸರ್ಕಾರ ಉಳಿಸಿಕೊಳ್ಳುವ ಮೈತ್ರಿ ನಾಯಕರ ಎಲ್ಲಾ ಅಸ್ತ್ರಗಳು ಫೇಲ್; ಇಂದೇ ರಾಜೀನಾಮೆ ಕೊಡಲಿದ್ದಾರೆ ಸಿಎಂ ಹೆಚ್​ಡಿಕೆ?

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯಮಂತ್ರಿ ಕುಮಾರಸ್ವಾಮಿ, ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್ ಇವರೆಲ್ಲರ ಮೇಲೆ ಮಾಜಿ ಪ್ರಧಾನಿ ರಾಜಕೀಯ ಚಾಣಾಕ್ಯ ಖ್ಯಾತಿಯ ಹೆಚ್.ಡಿ. ಡೇವೇಗೌಡ ಇದ್ದರೂ, ಸರ್ಕಾರ ಉಳಿಸಿಕೊಳ್ಳಲು ಅನೇಕ ಕಸರತ್ತು ಅಸ್ತ್ರಗಳನ್ನು ಕಾರ್ಯರೂಪಕ್ಕೆ ತಂದರೂ ಸಹ ಯಾವ ತಂತ್ರವೂ ಫಲ ಕೊಡಲಿಲ್ಲ. ಎಲ್ಲವೂ ಫೇಲ್ ಆಗಿದೆ. ಹಾಗಾದರೆ, ಫೇಲ್ ಆದ ಆಡಳಿತ ಪಕ್ಷದ ಅಸ್ತ್ರಗಳು ಯಾವುದು?

MAshok Kumar | news18
Updated:July 23, 2019, 2:12 PM IST
ಸರ್ಕಾರ ಉಳಿಸಿಕೊಳ್ಳುವ ಮೈತ್ರಿ ನಾಯಕರ ಎಲ್ಲಾ ಅಸ್ತ್ರಗಳು ಫೇಲ್; ಇಂದೇ ರಾಜೀನಾಮೆ ಕೊಡಲಿದ್ದಾರೆ ಸಿಎಂ ಹೆಚ್​ಡಿಕೆ?
ಹೆಚ್​.ಡಿ. ಕುಮಾರಸ್ವಾಮಿ
  • News18
  • Last Updated: July 23, 2019, 2:12 PM IST
  • Share this:
ಬೆಂಗಳೂರು (ಜುಲೈ.23); ಕಳೆದ ಒಂದು ತಿಂಗಳಿನಿಂದ ಸರ್ಕಾರ ತ್ರಿಶಂಕು ಸ್ಥಿತಿಯಲ್ಲಿದೆ. ಸರ್ಕಾರ ಇಂದು ಬೀಳುತ್ತೆ, ನಾಳೆ ಬೀಳುತ್ತೆ ಎಂದು ವಿರೋಧ ಪಕ್ಷದ ನಾಯಕರು ಸಹ ಕಾದು ಕುಳಿತಿದ್ದಾರೆ. ಈ ನಡುವೆ ಅತೃಪ್ತರ ಮನವೊಲಿಸಿ ಸರ್ಕಾರವನ್ನು ಉಳಿಸಿಕೊಳ್ಳಲು ಮೈತ್ರಿ ನಾಯಕರು ಅನೇಕ ಬಾರಿ ಪ್ರಯತ್ನಿಸಿದರಾದರೂ ಎದುರಾದದ್ದು ಮಾತ್ರ ಸೋಲು.

ಅಸಲಿಗೆ ಈ ಸರ್ಕಾರ ಉರುಳಿಸಲು ಅತೃಪ್ತ ಶಾಸಕರು ಜುಲೈ.6 ರಂದೇ ಮುಹೂರ್ತ ಫಿಕ್ಸ್ ಮಾಡಿದ್ದರು. ಸಾಮಾಹಿಕ ರಾಜೀನಾಮೆ ನೀಡುವ ಮೂಲಕ ಮೈತ್ರಿ ಸರ್ಕಾರದ ಶವ ಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆಯಲು ಮುಂದಾಗಿದ್ದರು. ಆದರೂ, ಈ ಸರ್ಕಾರವನ್ನು ಉಳಿಸಕೊಳ್ಳುವ ನಿಟ್ಟಿನಲ್ಲಿ ಕಳೆದ ಮೂರು ವಾರಗಳಿಂದ ಮೈತ್ರಿ ನಾಯಕರು ಅನೇಕ ಕಸರತ್ತುಗಳನ್ನು ನಡೆಸಿದ್ದಾರೆ. ಅನೇಕಾನೇಕ ಅಸ್ತ್ರಗಳನ್ನು ಪ್ರಯೋಗಿಸಿದ್ದಾರೆ ಆದರೆ ಈ ಎಲ್ಲಾ ಅಸ್ತ್ರವೂ ಇದೀಗ ಫೇಲ್ ಆಗಿದೆ.

ಈ ಹಿನ್ನೆಲೆಯಲ್ಲಿ ಇಂದೇ ಸಿಎಂ ಕುಮಾರಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡ್ತಾರ? ಅಥವಾ ಕೇಂದ್ರ ಸರ್ಕಾರವೇ ಮಧ್ಯಪ್ರವೇಶಿಸಿ ಕುಮಾರಸ್ವಾಮಿ ಸರ್ಕಾರವನ್ನು ವಜಾ ಮಾಡುತ್ತಾ? ಎಂಬ ವಿಚಾರ ಇದೀಗ ಕುತೂಹಲಕ್ಕೆ ಕಾರಣವಾಗಿದೆ. ಹಾಗಾದರೆ ಮೈತ್ರಿ ಸರ್ಕಾರದ ಯಾವೆಲ್ಲಾ ಅಸ್ತ್ರಗಳು ಹೇಗೆಲ್ಲಾ ಫೇಲ್ ಆದವು ಇಲ್ಲಿದೆ ಡೀಟೈಲ್ಸ್.

ಇದನ್ನೂ ಓದಿ : ಸ್ಪೀಕರ್ ಆದೇಶ ಉಲ್ಲಂಘಿಸಿದ ರೆಬೆಲ್ಸ್; ವಿಚಾರಣೆಗೆ ಹಾಜರಾಗಲು ಒಂದು ತಿಂಗಳ ಕಾಲಾವಕಾಶ ಕೋರಿಕೆ; ಮುಂದೇನಾಗಬಹುದು?

ಫೇಲ್ ಆಯ್ತು ಸಾಲು ಸಾಲು ಮೈತ್ರಿ ಅಸ್ತ್ರಗಳು;

ಕಳೆದ ಒಂದು ತಿಂಗಳಿನಿಂದ ಆಡಳಿತ ಪಕ್ಷವನ್ನು ವಿರೋಧ ಪಕ್ಷ ಸತತ ಇಕ್ಕಟ್ಟಿಗೆ ಸಿಲುಕಿಸುವಲ್ಲಿ ಯಶಸ್ವಿಯಾಗಿದೆ. ಮೈತ್ರಿ ಸರ್ಕಾರವನ್ನು ಬೀಳಿಸುವ ನಿಟ್ಟಿನಲ್ಲಿ ಎಲ್ಲಾ ಕಸರತ್ತುಗಳನ್ನು ನಡೆಸಿದೆ. ಆದರೆ, ಈ ಸರ್ಕಾರವನ್ನು ಉಳಿಸಿಕೊಳ್ಳಲು ಮೈತ್ರಿ ನಾಯಕರೂ ಅಷ್ಟೇ ಪ್ರಯತ್ನ ನಡೆಸಿದರೂ ಎಂಬುದು ಸತ್ಯ.

ಆದರೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯಮಂತ್ರಿ ಕುಮಾರಸ್ವಾಮಿ, ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್ ಇವರೆಲ್ಲರ ಮೇಲೆ ಮಾಜಿ ಪ್ರಧಾನಿ ರಾಜಕೀಯ ಚಾಣಾಕ್ಯ ಖ್ಯಾತಿಯ ಹೆಚ್.ಡಿ. ಡೇವೇಗೌಡ ಇದ್ದರೂ, ಸರ್ಕಾರ ಉಳಿಸಿಕೊಳ್ಳಲು ಅನೇಕ ಕಸರತ್ತು ಅಸ್ತ್ರಗಳನ್ನು ಕಾರ್ಯರೂಪಕ್ಕೆ ತಂದರೂ ಸಹ ಯಾವ ತಂತ್ರವೂ ಫಲ ಕೊಡಲಿಲ್ಲ. ಎಲ್ಲವೂ ಫೇಲ್ ಆಗಿದೆ. ಹಾಗಾದರೆ, ಫೇಲ್ ಆದ ಆಡಳಿತ ಪಕ್ಷದ ಅಸ್ತ್ರಗಳು ಯಾವುದು?1.ಅತೃಪ್ತರ ಮನವೊಲಿಸಲು ಪ್ಲಾನ್ ಫೇಲ್;

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷದ ಸುಮಾರು 17 ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಆಡಳಿತ ಪಕ್ಷಕ್ಕೆ ಬಹುಮತದ ಕೊರತೆ ಎದುರಾಗಿದೆ. ಹೀಗಾಗಿ ಮತ್ತೆ ಎಲ್ಲಾ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಸಲುವಾಗಿ ಮೈತ್ರಿ ನಾಯಕರು ಇವರ ಮನವೊಲಿಕೆಗೆ ಸತತ ಪ್ರಯತ್ನ ನಡೆಸಿದರು. ಸಚಿವ ಸ್ಥಾನ ನೀಡುವ ಆಶ್ವಾಸನೆಯನ್ನೂ ನೀಡಿದರು. ಆದರೆ, ಕಳೆದ ಮೂರು ವಾರದಿಂದ ಎಷ್ಟೇ ಪ್ರಯತ್ನಿಸಿದರೂ ಸಹ ಅತೃಪ್ತರ ಮನವೊಲಿಸುವುದು ಸಾಧ್ಯವಾಗಿಲ್ಲ. ಹೀಗಾಗಿ ಮೈತ್ರಿ ನಾಯಕರ ಮೊದಲ ಅಸ್ತ್ರವೇ ವಿಫಲವಾಗಿದೆ.

2.ಸಿದ್ದರಾಮಯ್ಯ ಅವರಿಗೆ ಸಿಎಂ ಸ್ಥಾನ ಪ್ಲಾನ್ ಫೇನ್

ಅತೃಪ್ತ ಶಾಸಕರು ಪೈಕಿ ಬಹುತೇಕ ಶಾಸಕರು ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತರು. ಈ ಪೈಕಿ ಭೈರತಿ ಬಸವರಾಜು, ಎಂ. ಮುನಿರತ್ನ, ಎಸ್.ಟಿ. ಸೋಮಶೇಖರ್ ಹಾಗೂ ಬಿ.ಸಿ. ಪಾಟೀಲ್ ಕಳೆದ ಒಂದು ವರ್ಷದಿಂದ ಸಿದ್ದರಾಮಯ್ಯ ಸಿಎಂ ಆಗಬೇಕು ಅವರು ಸಿಎಂ ಆದರೆ ಮಾತ್ರ ಮೈತ್ರಿ ಸರ್ಕಾರ ಉಳಿಯುವುದು ಸಾಧ್ಯ ಎಂದು ಹೋದಲ್ಲಿ ಬಂದಲೆಲ್ಲಾ ಹೇಳಿಕೆ ನೀಡಿ ಸಂಚಲನ ಮೂಡಿಸುತ್ತಿದ್ದರು.

ಹೀಗಾಗಿ ಸಿದ್ದರಾಮಯ್ಯ ಅವರಿಗೆ ಮತ್ತೆ ಸಿಎಂ ಸ್ಥಾನ ನೀಡಿದರೆ ಅತೃಪ್ತರು ಬೆಂಗಳೂರಿಗೆ ಹಿಂದಿರುಗುತ್ತಾರೆ. ಸರ್ಕಾರವನ್ನು ಉಳಿಸಿಕೊಳ್ಳಬಹುದು ಎಂಬುದು ಮೈತ್ರಿ ನಾಯಕರ ಊಹೆಯಾಗಿತ್ತು. ಆದರೆ, ಇದಕ್ಕೂ ಸಹ ಅತೃಪ್ತರು ಮಣಿಯಲಿಲ್ಲ.

ಇದನ್ನೂ ಓದಿ : ದೋಸ್ತಿಗಳ ಹಗ್ಗಜಗ್ಗಾಟ; ಬಿಎಸ್​ವೈಗೆ ಪ್ರಾಣ ಸಂಕಟ; ಇಂದಾದರೂ ಮುಗಿಯುತ್ತಾ ಬಹುಮತದ ಆಟ?; ‘ನೀ ಕೊಡೆ ನಾ ಬಿಡೆ’!

3. ವಿಳಂಬ ನೀತಿ ಅನುಸರಿಸುವ ಪ್ಲಾನ್ ಪೇಲ್;

ಕಳೆದ ಸೋಮವಾರ ಸದನದಲ್ಲಿ ಮಾತನಾಡಿದ್ದ ಸಿಎಂ ಕುಮಾರಸ್ವಾಮಿ ಬಹುಮತ ಸಾಬೀತುಪಡಿಸಲು ಸ್ಪೀಕರ್ ತಮಗೆ ಸಮಯ ನೀಡಬೇಕು ಎಂದು ಮನವಿ ಮಾಡಿದ್ದರು. ಅವರ ಮನವಿಯಂತೆ ಗುರುವಾರ ಸಮಯ ನಿಗದಿ ಮಾಡಲಾಗಿತ್ತು. ಆದರೆ, ಗುರುವಾರ, ಶುಕ್ರವಾರ ಹಾಗೂ ಸೋಮವಾರ ಬಹುಮತ ನಿರ್ಣಯದ ಮೇಲೆ ಸತತ ಚರ್ಚೆ ನಡೆಯಿತೇ ವಿನಃ ಬಹುಮತವನ್ನು ಮತಕ್ಕೆ ಹಾಕುವ ಪ್ರಕ್ರಿಯೆ ನಡೆಯಲೇ ಇಲ್ಲ.

ಸಾಧ್ಯವಾದಷ್ಟು ಸಮಯ ವಿಳಂಬ ಮಾಡುವ ನಿಟ್ಟಿನಲ್ಲಿ ಮೈತ್ರಿ ನಾಯಕರು ಸಾಕಷ್ಟು ಪ್ರಯತ್ನ ನಡೆಸಿದರು. ಆದರೆ, ಮಂಗಳವಾರ ಬಹುಮತ ಸಾಬೀತುಪಡಿಸಲೇಬೇಕು ಎಂದು ಹೇಳುವ ಮೂಲಕ ಸ್ಪೀಕರ್ ಆಡಳಿತ ಪಕ್ಷಕ್ಕೆ ಡೆಡ್​ಲೈನ್ ನೀಡಿದ್ದಾರೆ. ಈ ಮೂಲಕ ವಿಳಂಬ ಮಾಡುವ ಅಸ್ತ್ರವೂ ಠುಸ್ ಆಗಿದೆ.

4. ಬಿಜೆಪಿಗರನ್ನು ಕೆರಳಿಸುವ ಅಸ್ತ್ರವೂ ಠುಸ್ ಆಯ್ತು;

ಪ್ರಶ್ನೆಗಳು, ತಕರಾರುಗಳು ಹಾಗೂ ಆಪರೇಷನ್ ಕಮಲದ ಬಗ್ಗೆ ಬಿಜೆಪಿಗರನ್ನು ದೂರುವ ಮೂಲಕ ಸದನದಲ್ಲಿ ಬಿಜೆಪಿ ನಾಯಕರನ್ನು ಕೆರಳಿಸುವುದು ಆ ಮೂಲಕ ಸದನವನ್ನೇ ಮುಂದೂಡುವಂತೆ ಮಾಡುವುದು ಮೈತ್ರಿ ನಾಯಕರ ಪ್ರಮುಖ ಅಸ್ತ್ರಗಳಲ್ಲೊಂದಾಗಿತ್ತು.
ಆದರೆ, ಇದನ್ನು ಮುಂಚೆಯೇ ತಿಳಿದವರಂತೆ ಬಿಜೆಪಿ ನಾಯಕರು ಚರ್ಚೆಯ ವೇಳೆ ಮೈತ್ರಿ ನಾಯಕರಿಗೆ ಸಂಪೂರ್ಣವಾಗಿ ಸಹಕರಿಸುತ್ತಲೇ ಅವರ ಯೋಜನೆಗೆ ಮಣ್ಣು ಮುಕ್ಕಿಸಿದ್ದಾರೆ. ಹೀಗಾಗಿ ಈ ಅಸ್ತ್ರವೂ ಫೇಲ್ ಆದಂತಾಗಿದೆ.

5. ಅತೃಪ್ತರನ್ನು ಅನೂರ್ಜಿತಗೊಳಿಸುವ ಅಸ್ತ್ರವೂ ಕೆಲಸಕ್ಕೆ ಬರಲಿಲ್ಲ;

ಅತೃಪ್ತರನ್ನು ಸದನಕ್ಕೆ ಬಂದು ಆಡಳಿತ ಪಕ್ಷದ ಪರ ಮತ ಹಾಕಬೇಕು ಎಂದು ಮೈತ್ರಿ ಪಕ್ಷಗಳು ವಿಪ್ ಜಾರಿ ಮಾಡಿದ್ದವು. ಇದನ್ನು ಉಲ್ಲಂಘಿಸಿದರೆ 10 ಶೆಡ್ಯೂಲ್ ಪಕ್ಷಾಂತರ ನಿಷೇಧ ಕಾಯ್ದೆಯ ಅನ್ವಯ ಶಾಸಕ ಸ್ಥಾನದಿಂದಲೇ ಅನೂರ್ಜಿತಗೊಳಿಸಲಾಗುವುದು ಎಂದು ಬೆದರಿಕೆ ಒಡ್ಡಿದ್ದರು.

ಆದರೆ, ರೆಬೆಲ್ ಶಾಸಕರ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಯಾವ ಶಾಸಕರನ್ನೂ ಸದನಕ್ಕೆ ಬರಬೇಕು ಎಂದು ಯಾರೂ ಒತ್ತಾಯ ಮಾಡುವ ಹಾಗಿಲ್ಲ ಎಂದು ಹೇಳುವ ಮೂಲಕ ಶಾಸಕಾಂಗ ಪಕ್ಷದ ನಾಯಕನ ವಿಪ್ ಪರಮಾಧಿಕಾರವನ್ನು ಕಸಿದುಕೊಂಡಿದೆ. ಈ ಮೂಲಕ ರೆಬೆಲ್ ಶಾಸಕರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ. ಈ ಮೂಲಕ ಮೈತ್ರಿ ನಾಯಕರ ಕೊನೆಯ ಅಸ್ತ್ರವನ್ನೂ ಸುಪ್ರೀಂ ಫೇಲ್ ಮಾಡಿದೆ.

ಇದನ್ನೂ ಓದಿ : ಸದನಕ್ಕೆ ಬಾರದ ಸಿಎಂ; ಹೊಸ ಯೋಜನೆ ರೂಪಿಸುತ್ತಿದೆಯಾ ಮೈತ್ರಿ ಸರ್ಕಾರ?

ಇದೀಗ ವಿಪ್ ಹಾಗೂ ಪಕ್ಷಾಂತರ ನಿಷೇಧ ಕಾಯ್ದೆ ಕುರಿತು ಸ್ಪಷ್ಟ ವಿವರಣೆ ಕೇಳಿ ಮೈತ್ರಿ ನಾಯಕರು ಸಲ್ಲಿಸಿದ್ದ ಅರ್ಜಿಯನ್ನು ಸಹ ಸುಪ್ರೀಂ ಕೋರ್ಟ್ ಬುಧವಾರಕ್ಕೆ ಮುಂದೂಡಿದೆ. ಹೀಗಾಗಿ ಕಾಂಗ್ರೆಸ್-ಜೆಡಿಎಸ್ ನಾಯಕರ ಎದುರು ಬೇರೆ ಯಾವುದೇ ಆಯ್ಕೆ ಇಲ್ಲ. ಇದೇ ಕಾರಣಕ್ಕೆ ಇಂದೇ ಸಿಎಂ ಕುಮಾರಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡ್ತಾರ? ಎಂಬ ಅನುಮಾನ ಗಟ್ಟಿಯಾಗಿದೆ. ಅಕಸ್ಮಾರ್ ರಾಜೀನಾಮೆ ನೀಡದಿದ್ದರೆ ಕೇಂದ್ರ ಸರ್ಕಾರವೇ ಮಧ್ಯ ಪ್ರವೇಶಿಸಿ ರಾಜ್ಯ ಸರ್ಕಾರವನ್ನು ಬೀಳಿಸಲಿದೆ ಎಂದೂ ಸಹ ಹೇಳಲಾಗುತ್ತಿದೆ.

First published: July 23, 2019, 1:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading