ಕೊಡಗು(ಸೆ.26): ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ತಂದಿರುವುದನ್ನು ವಿರೋಧಿಸಿ ಸೋಮವಾರ ನಡೆಯುವ ರಾಜ್ಯ ಬಂದ್ ಅಂಗವಾಗಿ ಮಡಿಕೇರಿಯಲ್ಲಿ ರೈತ ಸಂಘಟನೆಗಳು, ವಿವಿಧ ರಾಜಕೀಯ ಪಕ್ಷಗಳನ್ನು ಒಳಗೊಂಡ ಐಕ್ಯ ಹೋರಾಟ ಸಮಿತಿ ನೇತೃತ್ವದಲ್ಲಿ ಸಕಲ ಸಿದ್ಧತೆ ಮಾಡಿಕೊಂಡಿದೆ. ಸೋಮವಾರ ನಡೆಸುವ ಪ್ರತಿಭಟನೆಗೆ ಪೂರಕವಾಗಿ ಶನಿವಾರವೇ ಸಾಂಕೇತಿಕ ಪ್ರತಿಭಟನೆ ನಡೆಸಿದವು. ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಭೂ ಹಕ್ಕು ಕಾಯ್ದೆ ತಿದ್ದುಪಡಿ ಮಾಡದಂತೆ ಆಗ್ರಹಿಸಿದರು. ಇದಕ್ಕೂ ಮುನ್ನಾ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ಪ್ರತಿಕೃತಿ ದಹಿಸಲು ಮುಂದಾದರು. ಆದರೆ ಪೊಲೀಸರು ಅದಕ್ಕೆ ಅವಕಾಶ ನೀಡದೆ, ಪ್ರತಿಕೃತಿಯನ್ನು ಪ್ರತಿಭಟನಾಕಾರರಿಂದ ಕಸಿದು ಪೊಲೀಸ್ ವಾಹನಕ್ಕೆ ತುಂಬಿಕೊಂಡರು.
ಪ್ರತಿಭಟನೆಗೂ ಮುನ್ನಾ ಗಾಂಧಿ ಮೈದಾನದಲ್ಲಿ ಸಭೆ ನಡೆಸಿ ದೀರ್ಘ ಚರ್ಚೆ ನಡೆಸಿದ ಪ್ರತಿಭಟನಾಕಾರರು ಸೋಮವಾರ ಯಶಸ್ವಿ ಬಂದ್ ಮಾಡುವ ಕುರಿತು ಯೋಜನೆ ರೂಪಿಸಿದರು. ಬಿಜೆಪಿಯೇತರ ವಿವಿಧ ರಾಜಕೀಯ ಮುಖಂಡರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಸೋಮವಾರ ನಡೆಯುವ ಬಂದ್ ಯಶಸ್ವಿಗೊಳಿಸಲು ಯೋಜನೆ ರೂಪಿಸಿರುವ ಐಕ್ಯ ಹೋರಾಟ ಸಮಿತಿಯು ಅಂತರ್ ಜಿಲ್ಲೆಗಳ ನಡುವಿನ ಚೆಕ್ಪೋಸ್ಟ್ಗಳಲ್ಲಿ ಪ್ರತಿಭಟನೆ ಮಾಡಿ ರಾಜ್ಯ ಬಂದ್ ಅಂಗವಾಗಿ ಕೊಡಗು ಜಿಲ್ಲೆಯನ್ನು ಸಂಪೂರ್ಣ ಬಂದ್ ಮಾಡಲು ಯೋಚಿಸಿದೆ. ಅಲ್ಲದೆ ಕೊಡಗಿನ ಪ್ರಮುಖ ಪಟ್ಟಣಗಳಾದ ಮಡಿಕೇರಿ, ವಿರಾಜಪೇಟೆ ಕುಶಾಲನಗರಗಳಲ್ಲಿ ಸಂಪೂರ್ಣ ಬಂದ್ ಮಾಡಲು ಚಿಂತಿಸಿವೆ.
ಅದಕ್ಕಾಗಿ ಕಾಂಗ್ರೆಸ್, ಜೆಡಿಎಸ್, ಸಿಪಿಎಂ, ಸಿಪಿಐ, ಎಸ್ಡಿಪಿಐ ಸೇರಿದಂತೆ ಬಿಜೆಪಿಯೇತರ ರಾಜಕೀಯ ಪಕ್ಷಗಳು ಒಗ್ಗೂಡಿವೆ. ಜೊತೆಗೆ ರಾಜ್ಯ ರೈತ ಸಂಘ, ದಲಿತ ಹಿಂದುಳಿದ ಅಲ್ಪಸಂಖ್ಯಾತರ ಸಂಘಟನೆಗಳು ಒಂದುಗೂಡಿವೆ. ಒಟ್ಟಿನಲ್ಲಿ ಸೋಮವಾರದ ಬಂದ್ ಯಶಸ್ವಿಗೊಳಿಸಲು ಎಲ್ಲಾ ಪ್ಲಾನ್ಗಳನ್ನು ಮಾಡಿಕೊಂಡಿದ್ದು ಬಂದ್ ನಿಜವಾಗಿಯೂ ಯಶಸ್ವಿಯಾಗುತ್ತಾ ಕಾದು ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ