ಬೆಂಗಳೂರು(ಜ.29): ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. ಇದೇ ಜನವರಿ 31ರಿಂದ ಎರಡು ದಿನಗಳ ಕಾಲ ದೇಶಾದ್ಯಂತ ಬ್ಯಾಂಕ್ ನೌಕರರು ಮುಷ್ಕರ ಹೂಡಲಿದ್ದಾರೆ. ಸದ್ಯ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಮುಷ್ಕರ ಕರೆಗೆ ಬೆಂಬಲ ನೀಡಿರುವ ವಿವಿಧ ಬ್ಯಾಂಕ್ಗಳ ನೌಕರರ ಒಕ್ಕೂಟದ ಸದಸ್ಯರು ಬೀದಿಗಿಳಿದು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲಿದ್ದಾರೆ.
ವಾರದಲ್ಲಿ ಐದು ದಿನ ಬ್ಯಾಂಕ್ ಕಾರ್ಯ ನಿರ್ವಹಣೆ ಮತ್ತು ಶೇ.20ರಷ್ಟು ವೇತನ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಷ್ಟ್ರವ್ಯಾಪಿ ಮುಷ್ಕರ ಹಮ್ಮಿಕೊಳ್ಳಲಾಗಿದೆ. ಹಾಗೆಯೇ ನೌಕರರ ಪಿಂಚಣಿ ಪರಿಷ್ಕರಣೆ; ಕುಟುಂಬ ಪಿಂಚಣಿ ಉತ್ತೇಜನೆ; ಸಿಬ್ಬಂದಿ ಕಲ್ಯಾಣ ವೇತನ ಏರಿಕೆ; ಎಲ್ಲರಿಗೂ ಒಂದೇ ಸಮಯ ನಿಗದಿಪಡಿಸಬೇಕು ಎಂಬುದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಮನವಿಯಾಗಿದೆ.
ಈ ಹಿಂದೆಯೂ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ 2 ದಿನಗಳ ಬ್ಯಾಂಕ್ ಮುಷ್ಕರ ಹೂಡಿತ್ತು. ಆಗ ತಮ್ಮ ಸಮಸ್ಯೆಗಳ ಬಗೆಹರಿಸುವುದಾಗಿ ಕೇಂದ್ರ ಹಣಕಾಸು ಕಾರ್ಯದರ್ಶಿ ಭರವಸೆ ನೀಡಿದ್ದರು. ಆದರೆ, ಇಲ್ಲಿಯವರೆಗೂ ಕೇಂದ್ರ ಸರ್ಕಾರ ನೀಡಿದ ಭರವಸೆ ಇನ್ನೂ ಈಡೇರಿಸಿಲ್ಲ. ನಮ್ಮ ಬೇಡಿಕೆಗಳನ್ನು ಈಡೇರಿಕೆಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಜ.31ರಿಂದ ಫೆ.1ರವರೆಗೆ ಎರಡು ದಿನಗಳ ಕಾಲ ಮುಷ್ಕರ ನಡೆಸಲಾಗುವುದು ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಸದಸ್ಯರು ತಿಳಿಸಿದ್ದಾರೆ.
ಇದನ್ನೂ ಓದಿ: ದೆಹಲಿ ವಿಧಾನಸಭಾ ಚುನಾವಣೆ: ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಅನುರಾಗ್ ಠಾಕೂರ್, ಪರ್ವೇಶ್ ವರ್ಮಾಗೆ ಬಿಜೆಪಿ ಕೋಕ್
ಇನ್ನು, ಜ.31ರಿಂದ ಫೆ.1ರವರೆಗೆ ಎರಡು ದಿನಗಳ ಕಾಲ ಸಾಂಕೇತಿಕವಾಗಿ ಮುಷ್ಕರ ನಡೆಯಲಿದೆ. ಒಂದು ವೇಳೆ ಆಗಲೂ ಕೇಂದ್ರ ಸರ್ಕಾರ ನಮ್ಮ ಬೇಡಿಕೆಗಳು ಈಡೇರಿಸದಿದ್ದರೆ ಪುನಃ ಫೆ.11, 12, 13ರಂದು ಮುಷ್ಕರ ನಡೆಸಲಾಗುವುದು ಎನ್ನುತ್ತಾರೆ ಸಂಘಟಕರು.
ವೇತನ ಸಮಸ್ಯೆ ಪರಿಷ್ಕಾರ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದೇಶದ ನಾಲ್ಕು ಪ್ರಮುಖ ಬ್ಯಾಂಕಿಂಗ್ ಸಿಬ್ಬಂದಿಗಳ ಒಕ್ಕೂಟಗಳು ಬೀದಿಗಿಳಿಯಲಿವೆ. ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘ (ಎಐಬಿಒಎ), ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ (ಎಐಬಿಒಸಿ), ಬ್ಯಾಂಕ್ ಅಧಿಕಾರಿಗಳ ರಾಷ್ಟ್ರೀಯ ಸಂಸ್ಥೆ (ನೊಬೊ), ಮತ್ತು ಭಾರತೀಯ ರಾಷ್ಟ್ರೀಯ ಬ್ಯಾಂಕ್ ಅಧಿಕಾರಿಗಳ ಕಾಂಗ್ರೆಸ್ (ಐಎನ್ಬಿಒಸಿ) ಈ ಮುಷ್ಕರ ಹೋರಾಟದಲ್ಲಿ ಭಾಗಿಯಾಗಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ