ಬೆಂಗಳೂರು: ಕೋವಿಡ್ ಎರಡನೇ ಅಲೆಯಿಂದಾಗಿ ಹೈಕೋರ್ಟ್ ಸೇರಿದಂತೆ ರಾಜ್ಯದ ನ್ಯಾಯಾಲಯಗಳಲ್ಲಿ ಸ್ಥಗಿತಗೊಂಡಿದ್ದ ಭೌತಿಕ ಕಲಾಪಗಳು ಇಂದಿನಿಂದ (ಸೋಮವಾರ) ಮತ್ತೆ ಆರಂಭವಾಗಲಿವೆ. ಈ ಕುರಿತಂತೆ ಉಚ್ಚ ನ್ಯಾಯಾಲಯ ತನ್ನ ವಿವಿಧ ಪೀಠಗಳು ಹಾಗೂ ಮೈಸೂರು ಜಿಲ್ಲೆಯ ಎಲ್ಲಾ ನ್ಯಾಯಾಲಯಗಳನ್ನು ಹೊರತುಪಡಿಸಿ ಜಿಲ್ಲಾ ನ್ಯಾಯಾಲಯಗಳು ಮತ್ತು ವಿಚಾರಣಾ ನ್ಯಾಯಾಲಯಗಳಿಗೆ ಇದೇ 25ರಂದು ಪ್ರತ್ಯೇಕವಾಗಿ ನೂತನ ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು (ಎಸ್‌ಒಪಿ) ಬಿಡುಗಡೆಗೊಳಿಸಿದೆ.
ಪ್ರತಿ ನ್ಯಾಯಾಲಯ ಪ್ರತ್ಯೇಕ ದಾವೆ ಪಟ್ಟಿ ತಯಾರಿಸಿ ದಿನವೊಂದಕ್ಕೆ 30 ಪ್ರಕರಣಗಳನ್ನು ವಿಚಾರಣೆ ನಡೆಸಬೇಕು. ಬೆಳಗ್ಗೆ ಹಾಗೂ ಮಧ್ಯಾಹ್ನ ತಲಾ 15 ಪ್ರಕರಣಗಳನ್ನು ಕೈಗೆತ್ತಿಕೊಳ್ಳಬೇಕು. ವಕೀಲರ ಅನುಪಸ್ಥಿತಿಯಲ್ಲಿ ಪ್ರಕರಣಗಳನ್ನು ನಿರ್ಧರಿಸುವುದನ್ನು ಆದಷ್ಟೂ ನ್ಯಾಯಾಲಯಗಳು ತಡೆಯಬೇಕು. ಪ್ರತಿದಿನ ನ್ಯಾಯಾಲಯಗಳಿಗೆ ಐವರು ಸಾಕ್ಷಿಗಳ ಸಾಕ್ಷ್ಯ ದಾಖಲಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಸಾಕ್ಷಿಗಳನ್ನು ಭೌತಿಕವಾಗಿ ನ್ಯಾಯಾಲಯಕ್ಕೆ ಕರೆದು ಸಾಕ್ಷ್ಯ ದಾಖಲಿಸಿಕೊಳ್ಳಬಹುದು. ಆರೋಪಿಗಳು ಜೈಲಿನಲ್ಲಿದ್ದರೆ 1973ರ ಸಿಆರ್‌ಪಿಸಿ ಸೆಕ್ಷನ್ 313ರ ಅಡಿ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಮಾತ್ರ ಹೇಳಿಕೆಗಳನ್ನು ಪಡೆಯಬೇಕು ಎಂದು ಎಸ್‌ಒಪಿಯಲ್ಲಿ ಉಲ್ಲೇಖಿಸಲಾಗಿದೆ.
ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿರುವ ಸಮನ್ಸ್ ಅಥವಾ ಆದೇಶದ ಪ್ರತಿ ಇಲ್ಲದೆ ಯಾವುದೇ ಸಾಕ್ಷಿಗಳು ನ್ಯಾಯಾಲಯ ಸಂಕೀರ್ಣ ಪ್ರವೇಶಿಸಲು ಅನುಮತಿ ಇಲ್ಲ. ಈ ಕುರಿತಂತೆ ಸಂಬಂಧಪಟ್ಟ ನ್ಯಾಯಾಲಯಗಳು ಆದೇಶ ಹೊರಡಿಸಲಿದ್ದು ಸಂಪೂರ್ಣ ಅವಶ್ಯಕತೆ ಹೊರತುಪಡಿಸಿ ನ್ಯಾಯಾಲಯಗಳು ಪಕ್ಷಗಳ ವೈಯಕ್ತಿಕ ಉಪಸ್ಥಿತಿಗೆ ಒತ್ತಾಯಿಸುವುದಿಲ್ಲ ಎಂದು ಎಸ್‌ಒಪಿ ತಿಳಿಸಿದೆ. ಪ್ರತಿ ನ್ಯಾಯಾಲಯ ಸಂಕೀರ್ಣಗಳಲ್ಲಿ ಸಾಕ್ಷಿಗಳು ಕುಳಿತುಕೊಳ್ಳಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಬೇಕು. ಪ್ರವೇಶದ್ವಾರದಲ್ಲಿ ಸಮನ್ಸ್/ ಆದೇಶ ಪ್ರತಿಯನ್ನು ಸಾಕ್ಷಿಗಳು ಒದಗಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಪ್ರವೇಶದ್ವಾರದಲ್ಲಿ ಭದ್ರತಾ ಸಿಬ್ಬಂದಿ ನೇಮಿಸಬೇಕು. ನ್ಯಾಯಾಂಗ ಅಧಿಕಾರಿಗಳು ಸೇರಿದಂತೆ ನ್ಯಾಯಾಲಯ ಆವರಣ ಪ್ರವೇಶಿಸುವ ಎಲ್ಲರಿಗೂ ದೇಹದ ಉಷ್ಣತಾ ಪರೀಕ್ಷೆ ಕಡ್ಡಾಯ. ಪ್ರಕರಣಗಳ ನೇರ ಮತ್ತು ಇ ಫೈಲಿಂಗ್‌ಗೆ ಮೇ 21ರಂದು ನೀಡಲಾಗಿದ್ದ ಅನುಮತಿ ಮುಂದುವರೆಯಲಿದೆ. ವಕೀಲರ ಸಂಘದ ಆವರಣ, ಕ್ಯಾಂಟೀನ್, ಆಹಾರ ಪೂರೈಕೆ ಘಟಕಗಳನ್ನು ಮುಂದಿನ ಆದೇಶದವರೆಗೆ ಮುಚ್ಚಿರತಕ್ಕದ್ದು. ವಕೀಲರ ಸಂಘ ಕಟ್ಟಡಗಳ ಸಮೀಪ ಮಾತ್ರ ಕಾಫಿ, ಟೀ, ಬಿಸ್ಕೆಟ್ ಮಾರಲು ಅವಕಾಶವಿದೆ. ಟೈಪಿಸ್ಟ್‌ಗಳು, ಜೆರಾಕ್ಸ್ ನಿರ್ವಾಹಕರ ಪ್ರವೇಶಕ್ಕೆ ಶೇ 50ರಷ್ಟು ನಿರ್ಬಂಧವಿದೆ ಇತ್ಯಾದಿ ಸೀಮಿತ ಅವಕಾಶಗಳೊಡನೆ ನ್ಯಾಯಾಲಯ ಕಾರ್ಯಾರಂಭವಾಗಲಿದೆ.
ಆದರೆ ಈ ಯಾವ ನಿಬಂಧನೆಗಳು ಮೈಸೂರು ಜಿಲ್ಲೆಯ ನ್ಯಾಯಾಲಯಗಳಿಗೆ ಅನ್ವಯವಾಗುವುದಿಲ್ಲ. ಅಲ್ಲಿ ಮೇ 21ರಂದು ಹೊರಡಿಸಲಾದ ಎಸ್‌ಒಪಿ ಮುಂದುವರೆಯಲಿದೆ ಎಂದು ಹೈಕೋರ್ಟ್ ಅಧಿಸೂಚನೆ ತಿಳಿಸಿದೆ.
ಇದನ್ನು ಓದಿ: ಕೊರೋನಾ ಲಾಕ್ಡೌನ್ಗೆ ರಾಜ್ಯದ ಛೋಟಾ ಮುಂಬೈ ವಾಣಿಜ್ಯೋದ್ಯಮ ತತ್ತರ; 4800 ಕೋಟಿ ರೂಪಾಯಿ ಹಾನಿ!
ಹೈಕೋರ್ಟ್ ಪೀಠಗಳಿಗೆ ಪ್ರತ್ಯೇಕ ಎಸ್‌ಒಪಿ
ಹೈಕೋರ್ಟ್‌ನ ಪ್ರಧಾನ ಪೀಠ (ಬೆಂಗಳೂರು), ಧಾರವಾಡ ಪೀಠ ಹಾಗೂ ಗುಲ್ಬರ್ಗ ಪೀಠಗಳಿಗೆ ಪ್ರತ್ಯೇಕವಾದ ಎಸ್‌ಒಪಿ ಜಾರಿ ಮಾಡಲಾಗಿದೆ. ಎಲ್ಲಾ ಬಗೆಯ ಪ್ರಕರಣಗಳನ್ನು ಹೈಕೋರ್ಟ್‌ನ ಎಲ್ಲಾ ಪೀಠಗಳು ಹೈಬ್ರಿಡ್ ವಿಧಾನದಲ್ಲಿ ವಿಚಾರಣೆ ನಡೆಸಬೇಕು. ಆದರೆ ಪಾರ್ಟೀಸ್ ಇನ್- ಪರ್ಸನ್ ಆನ್‌ಲೈನ್ ಮೂಲಕವೇ ಹಾಜರಾಗಬೇಕಿದ್ದು ಅವರ ಭೌತಿಕ ಉಪಸ್ಥಿತಿಗೆ ಅನುಮತಿ ನೀಡಿಲ್ಲ. ವಕೀಲ ಸಮುದಾಯ ಆನ್‌ಲೈನ್ ವಿಧಾನವನ್ನೇ ಅನುಸರಿಸಲಿ ಎಂದು ತಿಳಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ