ಬೆಂಗಳೂರು; ಏಳು ತಿಂಗಳುಗಳ ಬಳಿಕ ಕಾಲೇಜುಗಳು ನಾಳೆಯಿಂದ ಆರಂಭವಾಗಲಿವೆ. ಕೋವಿಡ್ -19 ಹಿನ್ನೆಲೆಯಲ್ಲಿ ಕಾಲೇಜುಗಳು ಆರಂಭವಾಗಿರಲಿಲ್ಲ. ಕಾಲೇಜುಗಳ ಆರಂಭಕ್ಕೆ ರಾಜ್ಯ ಸರ್ಕಾರ ಸಕಲ ಸಿದ್ಧತೆ ಮಾಡಿಕೊಂಡಿದೆ. ಈ ಬಗ್ಗೆ ಮಾತನಾಡಿದ ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರೂ ಆದ ಡಾ. ಅಶ್ವತ್ಥನಾರಾಯಣ ಅವರು, ಕೋವಿಡ್ ನಿಯಮಗಳನ್ನು ಎಲ್ಲ ಕಾಲೇಜುಗಳು ಪಾಲಿಸಬೇಕು ಎಂದು ಹೇಳಿದ್ದಾರೆ.
ಕಾಲೇಜು ಆವರಣ ಹಾಗೂ ತರಗತಿ ಒಳಗೆ ಕೋವಿಡ್ ನಿಯಮಗಳಾದ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಪ್ರತಿ ವಿದ್ಯಾರ್ಥಿ ಸ್ಯಾನಿಟೈಸ್ ಮಾಡುವುದು ಹಾಗೂ ಕಾಲೇಜಿಗೆ ಬರುವ ಪ್ರತಿ ವಿದ್ಯಾರ್ಥಿಗೂ ಕೋವಿಡ್ ಟೆಸ್ಟ್ ಕಡ್ಡಾಯವಾಗಿ ಮಾಡಲೇಬೇಕು ಜೊತೆಗೆ ವರದಿ ನೆಗೆಟಿವ್ ಇರಬೇಕು ಎಂದು ಹೇಳಿದರು.
ಇದನ್ನು ಓದಿ: ಕುತೂಹಲ ಮೂಡಿಸಿದ ಮಂಡ್ಯ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ; ಗದ್ದುಗೆಗಾಗಿ ಕಾಂಗ್ರೆಸ್ ಕಸರತ್ತು
ಇದೇ ವೇಳೆ, ಪೋಷಕರ ಅಭಿಪ್ರಾಯ ಕೂಡ ಪಡೆದಿದ್ದೇವೆ. ಪೋಷಕರೂ ಧೈರ್ಯವಾಗಿರಲಿ ಎಲ್ಲ ಮುಂಜಾಗ್ರತಾ ಕ್ರಮ ಕೈಗೊಂಡೇ ಕಾಲೇಜುಗಳನ್ನು ಆರಂಭಿಸಲಾಗುತ್ತಿದೆ. ಕೋವಿಡ್ ನಿಯಮಗಳನ್ನು ಪಾಲಿಸದ ಕಾಲೇಜುಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಅಶ್ವತ್ಥನಾರಾಯಣ ಇದೇ ವೇಳೆ ಎಚ್ಚರಿಕೆ ನೀಡಿದ್ದಾರೆ.
ಕೊರೋನಾ ವೈರಸ್ ವ್ಯಾಪಕವಾಗಿ ಹೆಚ್ಚುತ್ತಿದ್ದರಿಂದ ಕಳೆದ ಮಾರ್ಚ್ನಿಂದ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಮಾರಕ ಸೋಂಕು ಇನ್ನು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಇದೀಗ ಸಾಕಷ್ಟು ಮುಂಜಾಗ್ರತೆಯೊಂದಿಗೆ ಸರ್ಕಾರ ಕೇವಲ ಪದವಿ ಕಾಲೇಜುಗಳನ್ನು ನಾಳೆಯಿಂದ ಆರಂಭಿಸುತ್ತಿದೆ. ಶಾಲೆಗಳ ಆರಂಭ ವಿಚಾರವಾಗಿ ಸರ್ಕಾರದ ಹಂತದಲ್ಲಿ ಮಾತುಕತೆ ನಡೆಯುತ್ತಿದೆ. ಇದೀಗ ನಾಳೆಯಿಂದ ಸತತ ಏಳು ತಿಂಗಳುಗಳ ಬಳಿಕ ಪದವಿ ಕಾಲೇಜುಗಳು ಆರಂಭವಾಗಲಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ