ಹೌಸಿಂಗ್ ಪ್ರಾಜೆಕ್ಟ್ ಜಮೀನು ವಂಚನೆ: ಬಿಎಸ್​ವೈ, ನಿರಾಣಿ ರಾಜೀನಾಮೆಗೆ ಅಲಂ ಪಾಷಾ ಆಗ್ರಹ

2010-11ರಲ್ಲಿ ದೇವನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ವಸತಿ ಯೋಜನೆಗೆ 26 ಎಕರೆ ಭೂಮಿ ಅಲಾಟ್ ಮಾಡಿ ನಂತರ ಹಿಂಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ಅಲಂ ಪಾಷಾ ಅವರು ಪ್ರಕರಣದ ಆರೋಪಿ ಯಡಿಯೂರಪ್ಪ ಮತ್ತು ಮುರುಗೇಶ್ ನಿರಾಣಿ ರಾಜೀನಾಮೆಗೆ ಒತ್ತಾಯಿಸಿದ್ಧಾರೆ.

ಮುರುಗೇಶ್​ ನಿರಾಣಿ.

ಮುರುಗೇಶ್​ ನಿರಾಣಿ.

  • Share this:
ಬೆಂಗಳೂರು(ಜ. 15): ಡೀನೋಟಿಫಿಕೇಶನ್ ಪ್ರಕರಣದಲ್ಲಿ ತನಿಖೆ ಎದುರಿಸುತ್ತಿರುವ ಯಡಿಯೂರಪ್ಪಗೆ ಹತ್ತು ವರ್ಷಗಳ ಹಿಂದಿನ ಹೌಸಿಂಗ್ ಪ್ರಾಜೆಕ್ಟ್ ಭೂತವೂ ಕಾಡುತ್ತಿದೆ. ಯಡಿಯೂರಪ್ಪ ಮತ್ತು ನೂತನ ಸಚಿವ ಮುರುಗೇಶ್ ನಿರಾಣಿ ಮತ್ತಿತರರ ವಿರುದ್ಧ ಹೌಸಿಂಗ್ ಪ್ರಾಜೆಕ್ಟ್ ಜಮೀನು ಅವ್ಯವಹಾರ ಪ್ರಕಣದ ತನಿಖೆ ಮುಂದುವರಿಸಲು ಇತ್ತೀಚೆಗಷ್ಟೇ ರಾಜ್ಯ ಹೈಕೋರ್ಟ್ ಅನುಮತಿ ನೀಡಿದೆ. ಆ ಪ್ರಕರಣದಲ್ಲಿ ದೂರುದಾರ ಅಲಂ ಪಾಷಾ ಅವರು ಯಡಿಯೂರಪ್ಪ ಮತ್ತು ಮುರುಗೇಶ್ ನಿರಾಣಿ ರಾಜೀನಾಮೆಗೆ ಒತ್ತಾಯ ಮಾಡಿದ್ದಾರೆ. ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಪಾಷಾ, ಪ್ರಕರಣದ ಪ್ರಮುಖ ಆರೋಪಿಗಳಾದ ಯಡಿಯೂರಪ್ಪ ಮತ್ತು ಮುರುಗೇಶ್ ನಿರಾಣಿ ಅವರು ಅಧಿಕಾರದಲ್ಲಿರುವಾಗ ನ್ಯಾಯಯುತ ತನಿಖೆ ಸಾಧ್ಯವಿಲ್ಲ. ಹೀಗಾಗಿ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಹಾಗೆಯೇ, ಪೊಲೀಸ್ ಅಥವಾ ಎಸಿಬಿ ತನಿಖೆ ಬದಲು ಕೋರ್ಟ್ ಉಸ್ತುವಾರಿಯಲ್ಲೇ ಪ್ರಕರಣದ ತನಿಖೆ ಆಗಬೇಕು ಎಂದು ವಿನಂತಿಸಿದ್ದಾರೆ.

ಪ್ರಕರಣದ ಹಿನ್ನೆಲೆ ಏನು?: 2010-11ರಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದ ಸಂದರ್ಭದಲ್ಲಿ ಮುರುಗೇಶ್ ನಿರಾಣಿ ಕೈಗಾರಿಕಾ ಸಚಿವರಾಗಿದ್ದರು. ಆ ವರ್ಷ ಗ್ಲೋಬಲ್ ಇನ್ವೆಸ್ಟ್​ಮೆಂಟ್ ಸಮಾವೇಶ ಆಯೋಜಿಸಲಾಗಿತ್ತು. ಅಲಂ ಪಾಷಾ ಎಂಡಿಯಾಗಿರುವ ಪಾಷ್ ಸ್ಪೇಸ್ ಇಂಟರ್​ನ್ಯಾಷನಲ್ ಎಂಬ ಕಂಪನಿ 600 ಕೋಟಿ ಮೊತ್ತದ ಹೌಸಿಂಗ್ ಪ್ರಾಜೆಕ್ಟ್ ಪ್ರೊಪೋಸಲ್ ನೀಡಿದ್ದರು. ಇದಕ್ಕೆ ಅನುಮೋದನೆಯೂ ಸಿಕ್ಕು ದೇವನಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿ 26 ಎಕರೆ ಜಮೀನು ಮಂಜೂರು ಮಾಡಲಾಗಿತ್ತು. ಆದರೆ, 2011ರಲ್ಲಿ ಮಂಜೂರಾತಿ ಆದೇಶವನ್ನು ಹಿಂಪಡೆದಿತ್ತು.

ತಮ್ಮ ಸಂಸ್ಥೆಯ ಹೆಸರಿನಲ್ಲಿ ಸುಳ್ಳು ದಾಖಲಾತಿ ಸೃಷ್ಟಿಸಿ ಮಂಜೂರಾತಿ ಹಿಂಪಡೆಯಲಾಗಿದೆ ಎಂದು ಯಡಿಯೂರಪ್ಪ ಮತ್ತು ಮುರುಗೇಶ್ ನಿರಾಣಿ ವಿರುದ್ಧ ಪಾಷಾ ಅವರು 2012ರಲ್ಲಿ ಲೋಕಾಯುಕ್ತ ಪೊಲೀಸರಲ್ಲಿ ಖಾಸಗಿ ದೂರು ದಾಖಲಿಸಿದ್ದರು. 2013ರಲ್ಲಿ ಪ್ರಕರಣದಲ್ಲಿ ಚಾರ್ಜ್​ಶೀಟ್ ಸಲ್ಲಿಕೆಯಾಯಿತು. ಮುಖ್ಯಮಂತ್ರಿಯಾದ ತಮ್ಮ ವಿರುದ್ಧ ತನಿಖೆ ನಡೆಸಲು ಪೊಲೀಸರಿಗೆ ರಾಜ್ಯಪಾಲರ ಅನುಮತಿ ಇಲ್ಲ ಎಂದು ವಾದಿಸಿ ಯಡಿಯೂರಪ್ಪ ಅವರು ಹೈಕೋರ್ಟ್ ಮೊರೆ ಹೋದರು. ಅಲ್ಲಿ ಪ್ರಕರಣ ವಜಾ ಆಯಿತು.

ಇದನ್ನೂ ಓದಿ: CD Politics: ಸಿಡಿ ರಾಜಕೀಯ ಸತ್ಯಕ್ಕೆ ದೂರವಾದ ಮಾತು; ಯತ್ನಾಳ್ ಆರೋಪವನ್ನು ಅಲ್ಲಗೆಳೆದ ಸಚಿವ ಮುರುಗೇಶ್ ನಿರಾಣಿ

ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಮತ್ತೆ ಹೊಸದಾಗಿ ದೂರು ನೀಡಲಾಯಿತು. ಯಡಿಯೂರಪ್ಪ ಈಗ ಸಿಎಂ ಆಗಿಲ್ಲದಿರುವುದರಿಂದ ಪ್ರಕರಣದಲ್ಲಿ ಅವರ ವಿಚಾರಣೆ ನಡೆಸಬಹುದು ಎಂದು ಕೋರಲಾಯಿತು. ಆದರೆ, 2016ರಲ್ಲಿ ಸೆಷೆನ್ಸ್ ನ್ಯಾಯಾಲಯವು ಹಿಂದಿನ ಹೈಕೋರ್ಟ್ ತೀರ್ಪನ್ನ ಆಧರಿಸಿ ಮತ್ತೊಮ್ಮೆ ದೂರನ್ನು ವಜಾಗೊಳಿಸಿತು. ಇದನ್ನು ಪ್ರಶ್ನಿಸಿ ಅಲಂ ಪಾಷಾ ಅವರು ಹೈಕೋರ್ಟ್​ನಲ್ಲಿ ಮತ್ತೆ ದೂರು ಹೊತ್ತೊಯ್ದರು. ಇದೇ 2021, ಜನವರಿ 5ರಂದು ನ್ಯಾ| ಮೈಕೇಲ್ ಕುನ್ಹ ಅವರಿದ್ದ ಹೈಕೋರ್ಟ್ ನ್ಯಾಯಪೀಟವು ಈ ಪ್ರಕರಣದ ತನಿಖೆಗೆ ಅನುವು ಮಾಡಿಕೊಟ್ಟು ಆದೇಶ ನೀಡಿದೆ.

ಪ್ರಕರಣದ ಮೇಲೆ ಪ್ರಭಾವ ಬೀರಬಹುದು: ಪಾಷಾ

ಇವತ್ತು ನಡೆದ ಸುದ್ದಿಗೋಷ್ಠಿಯಲ್ಲಿ ದೂರುದಾರ ಅಲಂ ಪಾಷಾ ಅವರು ಈ ಪ್ರಕರಣದ ವಿವರ ಬಿಚ್ಚಿಟ್ಟರು. ನಿನ್ನೆ ಮುರುಗೇಶ್ ನಿರಾಣಿ ಅವರು ಸಂಪುಟ ಸೇರ್ಪಡೆಯಾಗಿದ್ದಕ್ಕೆ ಪಾಷಾ ಬಲವಾಗಿ ಆಕ್ಷೇಪ ವ್ಯಕ್ತಪಡಿಸಿದರು. ಪ್ರಕರಣದ ಮೊದಲ ಆರೋಪಿಯಾಗಿರುವ ಮುರುಗೇಶ್ ನಿರಾಣಿ ಅವರನ್ನ ಈಗ ಸಂಪುಟಕ್ಕೆ ಸೇರಿಸಿಕೊಂಡಿದ್ಧಾರೆ. ಮುಂದೆ ಅವರು ಗೃಹ ಮಂತ್ರಿ ಆಗಬಹುದು. ಹಾಗೇನಾದರು ಆದರೆ ಪ್ರಕರಣದ ತನಿಖೆ ಮೇಲೆ ಪ್ರಭಾವ ಬೀರಬಹುದು. ಅವರಿಗೆ ನರೇಂದ್ರ ಮೋದಿ ಮತ್ತು ಅಮಿತ್ ಶಾ ಸಂಪರ್ಕವೂ ಇದೆ. ತನಿಖೆಯ ದಿಕ್ಜು ತಪ್ಪಿಸಬಹುದು. ಪೊಲೀಸ್ ಬದಲು ಕೋರ್ಟ್ ಕಣ್ಗಾವಲಿನಲ್ಲಿ ತನಿಖೆ ಆಗಬೇಕು ಮೊದಲ ಆರೋಪಿ ಮುರುಗೇಶ್ ನಿರಾಣಿ ಅವರನ್ನು ಕೂಡಲೇ ಕಸ್ಟಡಿಗೆ ಪಡೆಯಬೇಕು. ಎರಡನೇ ಆರೋಪಿ ಯಡಿಯೂರಪ್ಪ ಅವರು ಅಧಿಕಾರದಲ್ಲಿ ಮುಂದುವರಿಯಲು ನೈತಿಕತೆ ಹೊಂದಿಲ್ಲ. ಅವರೂ ರಾಜೀನಾಮೆ ನೀಡಬೇಕು. ಎಂದು ಒತ್ತಾಯಿಸಿದರು.

ಈ ಪ್ರಕರಣದಲ್ಲಿ ನನ್ನನ್ನ ಬೆದರಿಸಲು ಹಲವು ಪ್ರಯತ್ನಗಳಾಗಿವೆ. ಮುರುಗೇಶ್ ನಿರಾಣಿ ನನ್ನನ್ನ ಜೈಲಿಗೂ ಹಾಕಿಸಬಹುದು. ನಾನು ಜೈಲಿಗೆ ಹೋದರೂ ತೊಂದರೆ ಇಲ್ಲ. ಎಷ್ಟು ವರ್ಷ ಬೇಕಾದರೂ ಜೈಲಿನಲ್ಲಿರುತ್ತೇನೆ. ಆದರೆ, ನ್ಯಾಯಾಲಯದಿಂದ ನನಗೆ ನ್ಯಾಯ ಸಿಗುವ ವಿಶ್ವಾಸ ಇದೆ ಎಂದು ಅಲಂ ಪಾಷಾ ಹೇಳಿದ್ದಾರೆ.

ಇದನ್ನೂ ಓದಿ: ಸಾಲ ಮಾಡಿ ನಮ್ಮನ್ನು ಒಗ್ಗೂಡಿಸುವುದು ಏನಿತ್ತು? ಸಿಪಿವೈ ಪರ ರಮೇಶ್ ಜಾರಕಿಹೊಳಿ ಸಮರ್ಥನೆ

ನಿರಾಣಿ ಶುಗರ್ಸ್ ಅಕ್ರಮ:

ಬಾಗಲಕೋಟೆಯ ಮುಧೋಳದಲ್ಲಿ ಮುರುಗೇಶ್ ನಿರಾಣಿ ಮಾಲಕತ್ವದ ನಿರಾಣಿ ಶುಗರ್ಸ್ ಕಾರ್ಖಾನೆ ಇದೆ. ನಗರದೊಳಗೆಯೇ ಅನುಮತಿ ಇಲ್ಲದಿದ್ದರೂ 120 ಎಕರೆ ವ್ಯಾಪ್ತಿಯಲ್ಲಿ ಫ್ಯಾಕ್ಟರಿ ತೆರೆಯಲಾಗಿದೆ. ಮುಧೋಳದಲ್ಲಿ ಕಂಡಸಾರಿಗೆ ಮಾತ್ರ ಕಾರ್ಖಾನೆ ಅನುಮತಿ ಪಡೆದಿದೆ. ಅಲ್ಲಿ ಬೆಲ್ಲ ತಯಾರಿಕೆ ಮಾತ್ರ ಮಾಡಬಹುದು. ಸಕ್ಕರೆ ತಯಾರಿಕೆಗೆ ಅವಕಾಶ ಇಲ್ಲ. ಆದರೆ, ಅಕ್ರಮವಾಗಿ ಸಕ್ಕರೆ ಉತ್ಪಾದನೆ ಮಾಡಲಾಗುತ್ತಿದೆ ಎಂದು ಅಲಂ ಪಾಷಾ ಆರೋಪಿಸಿದರು.

ಪಾಷಾ ಒಬ್ಬ ವಂಚಕ ಎಂದ ಮುರುಗೇಶ್ ನಿರಾಣಿ:

ಇದೇ ವೇಳೆ, ಹೌಸಿಂಗ್ ಪ್ರಾಜೆಕ್ಟ್ ಬಗ್ಗೆ ಅಲಂ ಪಾಷಾ ಮಾಡಿರುವ ಆರೋಪವನ್ನು ನೂತನ ಸಚಿವ ಮುರುಗೇಶ್ ನಿರಾಣಿ ತಳ್ಳಿಹಾಕಿದ್ದಾರೆ. ಅಲಂ ಪಾಷಾ ಒಬ್ಬ ವಂಚಕ. ಆತನ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ನಿರಾಣಿ ಸ್ಪಷ್ಟಪಡಿಸಿದ್ದಾರೆ.

ನಾನು ಹಿಂದೆ ಕೈಗಾರಿಕಾ ಸಚಿವನಾಗಿದ್ದೆ. ಕೈಗಾರಿಕೋದ್ಯಮಕ್ಕಾಗಿ ಬಹಳಷ್ಟು ಮಂದಿಗೆ ಭೂಮಿ ಅಲಾಟ್ ಮಾಡಿದ್ದೆವು. ಅದೇ ರೀತಿ ಅಲಂ ಪಾಷಾಗೂ ಭೂಮಿ ನೀಡಿದೆವು. ಆ ಭೂಮಿಗೆ ಹಣ ಕಟ್ಟುವಂತೆ ಸೂಚನೆ ಕೂಡ ನೀಡಿದ್ದೆವು. ಆದರೆ, ಅವರು ಹಣ ಕಟ್ಟದೇ ಹೋದಾಗ ಅವರಿಗೆ ನೋಟಿಸ್ ನೀಡಿದೆವು. ಅದಕ್ಕೆ ಅವರಿಂದ ಉತ್ತರವೇ ಬರಲಿಲ್ಲ. ಹೀಗಾಗಿ, ಅಲಾಟ್ಮೆಂಟ್ ಹಿಂಪಡೆದವು. ಅವರು ದೂರು ಕೊಟ್ಟ ಬಳಿಕ ಮತ್ತೆ ರೀ ಅಲಾಟ್ಮೆಂಟ್ ಮಾಡಿದೆವು. ಆ ಬಳಿಕ ಹತ್ತು ವರ್ಷ ಆದರೂ ಅವರು ದುಡ್ಡು ತುಂಬಿಲ್ಲ. ಹೀಗೆ ಹಣ ಕೊಡದೇ ವಿಳಂಬ ಮಾಡುತ್ತಾ ಹೋದರೆ ಮುಂಬರುವ ಕೈಗಾರಿಕೆಗಳಿಗೆ ಭೂಮಿ ಎಲ್ಲಿಂದ ತರುವುದು? ಆ ಭೂಮಿ ಇವತ್ತಿಗೂ ಅಲಂ ಪಾಷಾ ಹೆಸರಲ್ಲೇ ಅಲಾಟ್ ಆಗಿದೆ. ಕೆಐಡಿಬಿಯಲ್ಲೇ ಇದೆ ಎಂದು ಮುರುಗೇಶ್ ನಿರಾಣಿ ಮಾಹಿತಿ ನೀಡಿದರು.

ವರದಿ: ಸಂಜಯ್ ಎಂ ಹುಣಸನಹಳ್ಳಿ / ಕೃಷ್ಣ ಜಿ.ವಿ.
Published by:Vijayasarthy SN
First published: